‘ದೇವಿ ಮಹಾತ್ಮೆ’ ಟೀಸರ್ ಔಟ್…
ಕರಾವಳಿ ಸೊಗಡಿನಲ್ಲಿ ಮೂಡಿಬಂದ ‘ದೇವಿ ಮಹಾತ್ಮೆ’ ಟೀಸರ್
‘ದೇವಿ ಮಹಾತ್ಮೆ’ ಪ್ರಪಂಚ ಪರಿಚಯಿಸಿದ ನಾಗರಾಜ್ ಸೋಮಯಾಜಿ
ಪ್ರಾಮಿಸಿಂಗ್ ಆಗಿ ಮೂಡಿಬಂದ ‘ದೇವಿ ಮಹಾತ್ಮೆ’ ಟೀಸರ್
ಕನ್ನಡ ಚಿತ್ರರಂಗದಲ್ಲಿ ಎಲ್ಲಾ ಥರದ ಪಾತ್ರಗಳನ್ನೂ ಲೀಲಾಜಾಲವಾಗಿ ಅಭಿನಯಿಸಬಲ್ಲ ಕಲಾವಿದ, ಅತ್ಯದ್ಭುತ ನಟ ರಂಗಾಯಣ ರಘು. ಪ್ರತಿ ವರ್ಷ ಹತ್ತಾರು ಸಿನೆಮಾಗಳಲ್ಲಿ ಭಿನ್ನ-ವಿಭಿನ್ನ ಪಾತ್ರಗಳ ಮೂಲಕ ಕನ್ನನಡದ ಸಿನಿ ಪ್ರಿಯರ ಮುಂದೆ ಬರುವ ರಂಗಾಯಣ ರಘು ಈ ಬಾರಿ ‘ದೇವಿ ಮಹಾತ್ಮೆ’ ಚಿತ್ರದ ಮೂಲಕ ಮತ್ತೊಂದು ಹೊಸತರದ ಪಾತ್ರದ ಮೂಲಕ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ.
ಹೌದು, ರಂಗಾಯಣ ರಘು ಮುಖ್ಯ ಭೂಮಿಕೆಯಲ್ಲಿ ಅಭಿನಯಿಸುತ್ತಿರುವ ‘ದೇವಿ ಮಹಾತ್ಮೆ’ ಚಿತ್ರದ ಬಹುತೇಕ ಪ್ರೀ-ಪ್ರೊಡಕ್ಷನ್ಸ್ ಕೆಲಸಗಳು ಪೂರ್ಣಗೊಂಡಿದ್ದು, ಇದೀಗ ಚಿತ್ರತಂಡ ‘ದೇವಿ ಮಹಾತ್ಮೆ’ ಚಿತ್ರದ ಮೊದಲ ಝಲಕ್ ಅನ್ನು ಪ್ರೇಕ್ಷಕರ ಮುಂದೆ ತಂದಿದೆ.
ಯು-ಟ್ಯೂಬ್‌ನಲ್ಲಿ ‘ದೇವಿ ಮಹಾತ್ಮೆ’ ಟೀಸರ್…
ಆರಂಭದಿಂದಲೂ ತನ್ನ ಟೈಟಲ್ ಮತ್ತು ಸಬ್ಜೆಕ್ಟ್ ಮೂಲಕ ಒಂದಷ್ಟು ಮಂದಿಯ ಗಮನ ಸೆಳೆಯಲು ಯಶಸ್ವಿಯಾಗಿರುವ ‘ದೇವಿ ಮಹಾತ್ಮೆ’ ಸಿನೆಮಾದ ಚಿತ್ರೀಕರಣ ಪೂರ್ಣಗೊಂಡಿದ್ದು, ಸದ್ಯ ಈ ಚಿತ್ರದ ಪೋಸ್ಟ್ ಪ್ರೊಡಕ್ಷನ್ಸ್ ಕೆಲಸಗಳು ಭರದಿಂದ ನಡೆಯುತ್ತಿದೆ. ಇವುಗಳ ನಡುವೆಯೇ ಚಿತ್ರತಂಡ ನಿಧಾನವಾಗಿ ‘ದೇವಿ ಮಹಾತ್ಮೆ’ ಚಿತ್ರದ ಪ್ರಚಾರ ಕಾರ್ಯಗಳಿಗೂ ಸದ್ದಿಲ್ಲದೆ ಚಾಲನೆ ನೀಡಿದೆ. ಸದ್ಯ ‘ದೇವಿ ಮಹಾತ್ಮೆ’ ಚಿತ್ರದ ಕುತೂಹಲಕಾರಿ ಟೀಸರ್ ಅನ್ನು ಚಿತ್ರತಂಡ ಬಿಡುಗಡೆ ಮಾಡಿದೆ. ‘ಹೊಂಬಾಳೆ ಮ್ಯೂಸಿಕ್’ ಯೂ-ಟ್ಯೂಬ್ ಚಾನೆಲ್ ನಲ್ಲಿ ‘ದೇವಿ ಮಹಾತ್ಮೆ’ ಚಿತ್ರದ ಮೊದಲ ಟೀಸರ್ ಬಿಡುಗಡೆಯಾಗಿದೆ. ಟೀಸರ್ ಮೂಲಕ ನಿರ್ದೇಶಕ ನಾಗರಾಜ್ ಸೋಮಯಾಜಿ ‘ದೇವಿ ಮಹಾತ್ಮೆ’ ಪಾತ್ರ ಪ್ರಪಂಚವನ್ನು ಪರಿಚಯಿಸುವ ಪ್ರಯತ್ನ ಮಾಡಿದ್ದಾರೆ.
ಕುತೂಹಲ, ರೋಚಕತೆ ಜೊತೆ ಸಾಗುವ ‘ದೇವಿ ಮಹಾತ್ಮೆ’ ಟೀಸರ್
ಆರಂಭದಲ್ಲಿಯೇ ಹೇಳಿದಂತೆ, ‘ದೇವಿ ಮಹಾತ್ಮೆ’ ಚಿತ್ರದಲ್ಲಿ ನಟ ರಂಗಾಯಣ ರಘು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ರಂಗಾಯಣ ರಘು ಅವರ ಪಾತ್ರವನ್ನು ಇಟ್ಟುಕೊಂಡು, ಸಮುದ್ರ ತೀರ, ಹುಲಿ ವೇಷ, ಕರಾವಳಿಯ ಸೊಗಡನ್ನು ಈ ಟೀಸರ್ ನಲ್ಲಿ ಕಟ್ಟಿಕೊಡಲಾಗಿದೆ. ಒಂದಷ್ಟು ಕೌತುಕತೆಯ ಜೊತೆ ರೋಚಕವಾಗಿ ಸಾಗುವ ಟೀಸರ್ ನಲ್ಲಿ ಲಿಕಿತ್ ಪ್ರಸಾದ್ ಶೆಟ್ಟಿ ಮ್ಯೂಸಿಕ್ ಗಮನ ಸೆಳೆಯುತ್ತಿದೆ.
ಸುಮಾರು 1 ನಿಮಿಷ 5 ಸೆಕೆಂಡ್ ಇರುವ ‘ದೇವಿ ಮಹಾತ್ಮೆ’ ಟೀಸರ್ ಥ್ರಿಲ್ಲಿಂಗ್ ಜೊತೆಗೆ ಸಸ್ಪೆನ್ಸ್ ಅಂಶಗಳಿಂದ ಕೂಡಿದೆ. ಈ ಟೀಸರ್ ಮೂಲಕ ಚಿತ್ರತಂಡ ಕರಾವಳಿ ಶೈಲಿಯ ಮತ್ತೊಂದು ಕಥೆಯೊಂದನ್ನು ಹೊತ್ತು ತರುತ್ತಿದೆ ಅನ್ನೋದು ಗೊತ್ತಾಗುತ್ತಿದೆ. ಇನ್ನು ‘ದೇವಿ ಮಹಾತ್ಮೆ’ ಚಿತ್ರದಲ್ಲಿ ರಂಗಾಯಣ ರಘು ಅವರೊಂದಿಗೆ ಪ್ರತಿಮಾ ನಾಯಕ್, ಸುಂದರ್ ವೀಣಾ, ಅರವಿಂದ್ ಕುಪ್ಳಿಕರ್, ಬಾಸುಮ ಕೊಡಗು, ನಾಗೇಂದ್ರ ಶಾ, ಪಿ. ಡಿ. ಸತೀಶ್ ಚಂದ್ರ, ಪ್ರಶಾಂತ್ ಹಿರೇಮಠ, ಆದಿತ್ಯ ರಾಜ್ ರಘು ಪಾಂಡೇಶ್ವರ, ಪಲ್ಲವಿ ಮಂಜುನಾಥ್, ಶೈಲಶ್ರೀ ಮೂಲ್ಕಿ, ಶ್ವೇತಾ ಶ್ರೀನಿವಾಸ, ಮಹಾದೇವ ಹಡಪದ್, ಆಸಿಫ್ ಕ್ಷತ್ರಿಯ ಮುಂತಾದ ಕಲಾವಿದರು ಇತರ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
‘ದೇವಿ ಮಹಾತ್ಮೆ’ ಚಿತ್ರದ ಟೀಸರ್ ವಿಡಿಯೋವನ್ನು ವೀಕ್ಷಿಸಲು ಈ ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಬಹುದು…
ಇದೇ ವರ್ಷಾಂತ್ಯದೊಳಗೆ ತೆರೆಮೇಲೆ ‘ದೇವಿ ಮಹಾತ್ಮೆ’ ದರ್ಶನ…
ಯುವ ಪ್ರತಿಭೆ ನಾಗರಾಜ್ ಸೋಮಯಾಜಿ ‘ದೇವಿ ಮಹಾತ್ಮೆ’ ಚಿತ್ರಕ್ಕೆ ಚಿತ್ರಕಥೆ ಬರೆದು ಆಕ್ಷನ್-ಕಟ್ ಹೇಳುತ್ತಿದ್ದಾರೆ. ಅರವಿಂದ್ ಕುಪ್ಳೀಕರ್, ಭಾಸ್ಕರ್ ಬಂಗೇರ ಹಾಗೂ ಗುರು ಆರ್ಯ ಹಾಗೂ ವಾದಿರಾಜ ಶೆಟ್ಟಿ ‘ದೇವಿ ಮಹಾತ್ಮೆ’ ಚಿತ್ರದ ಬರವಣಿಗೆಯಲ್ಲಿ ನಿರ್ದೇಶಕರಿಗೆ ಜೊತೆಯಾಗಿದ್ದಾರೆ.
‘ಯುವಿಜಿ ಸ್ಟುಡಿಯೋ’ ಬ್ಯಾನರ್‌ನಡಿ ವಿದ್ಯಾ ಗಾಂಧಿರಾಜನ್ ‘ದೇವಿ ಮಹಾತ್ಮೆ’ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಗಾಂಧಿರಾಜನ್ ನಿರ್ಮಾಣದಲ್ಲಿ ಕೈ ಜೋಡಿಸಿದ್ದಾರೆ. ‘ದೇವಿ ಮಹಾತ್ಮೆ’ ಚಿತ್ರಕ್ಕೆ ಎಸ್. ಕೆ. ರಾವ್ ಛಾಯಾಗ್ರಹಣ ಹಾಗೂ ಉಜ್ವಲ್ ಚಂದ್ರ ಸಂಕಲನ ಕಾರ್ಯ ನಿರ್ವಹಿಸಿದ್ದಾರೆ. ‘ದೇವಿ ಮಹಾತ್ಮೆ’ ಚಿತ್ರದ ಹಾಡುಗಳಿಗೆ ಲಿಕಿತ್ ಪ್ರಸಾದ್ ಕೆ ಶೆಟ್ಟಿ ಸಂಗೀತ ನಿರ್ದೇಶನ ಮಾಡಿದ್ದಾರೆ. ಒಟ್ಟಾರೆ ಸದ್ಯ ಬಿಡುಗಡೆಯಾಗಿರುವ ‘ದೇವಿ ಮಹಾತ್ಮೆ’ ಚಿತ್ರದ ಟೀಸರ್‌ಗೆ ಸೋಶಿಯಲ್ ಮೀಡಿಯಾಗಳಲ್ಲಿ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.














