Eye Plex

ಹೀರೋ ಆಗೋದಕ್ಕೆ ಹೊರಟ ‘ದೊಡ್ಮನ್ಸ’ನ ಕಥೆ!

ದುಡ್ಡಿರೋರು ಮಾತ್ರ ಹೀರೋ ಆಗ್ಬೇಕಾ? ಅಂತಿದ್ದಾನೆ ‘ದೊಡ್ಮನ್ಸ’

ಮಧ್ಯಮ ವರ್ಗದ ಹುಡುಗನೊಬ್ಬನ ಬಣ್ಣದ ಕನಸಿನ ಕಹಾನಿ…

ಮಾಸ್‌ ಎಲಿಮೆಂಟ್‌, ಕಮರ್ಷಿಯಲ್‌ ಎಂಟರ್ಟೈನ್ಮೆಂಟ್‌

ಚಿತ್ರ:ದೊಡ್ಮನ್ಸ’
ನಿರ್ಮಾಣ: ಶರತ್‍ ಕೃಷ್ಣ,
ನಿರ್ದೇಶನ: ಶರತ್ ಕೃಷ್ಣ,
ತಾರಾಗಣ: ಶರತ್‍ ಕೃಷ್ಣ, ರೇಷ್ಮಾ ಲಿಂಗರಾಜಪ್ಪ, ಶಿಲ್ಪಾ ಶಿವಕುಮಾರ್, ಹುಲಿ ಕಾರ್ತಿಕ್‍, ಬಲ ರಾಜ್‍ ವಾಡಿ ಮತ್ತಿತರರು.            ‌                                                                                                   ಬಿಡುಗಡೆ: 19 ಜೂನ್ 2026,                                                                                                   ರೇಟಿಂಗ್‌: 3/5

————————–

‘ನೆಪೋಟಿಸಂ’ ಬಗ್ಗೆ ರಾಜಕೀಯ, ಕ್ರೀಡೆ ಮತ್ತು ಚಿತ್ರರಂಗದಲ್ಲಿ ಆಗಾಗ್ಗೆ ಚರ್ಚೆಗಳು, ವಾದ-ವಿವಾದಗಳು ನಡೆಯುವುದನ್ನು ನೀವೆಲ್ಲರೂ ನೋಡಿರುತ್ತೀರಿ. ಅದರಲ್ಲೂ ಚಿತ್ರರಂಗದಲ್ಲಿ ‘ನೆಪೋಟಿಸಂ’ ಬಗ್ಗೆ ಸ್ವಲ್ಪ ಅತಿಯಾಗಿಯೇ ಚರ್ಚೆಗಳು ಆಗುತ್ತಿರುವುದಂತೂ ಸುಳ್ಳಲ್ಲ. ‘ಹೀರೋಗಳ ಮಕ್ಕಳು ಮಾತ್ರ ಹೀರೋಗಳು ಆಗಬೇಕಾ..? ಪ್ರತಿಭೆ ಇದ್ದೋರು ಹೀರೋ ಆಗಬಾರದಾ..?’ ಎಂದು ಕೇಳುವವರ ಸಂಖ್ಯೆಗೇನೂ ಕಡಿಮೆಯಿಲ್ಲ. ಇಂಥದ್ದೊಂದು ಚರ್ಚೆ ಕಳೆದ ಹಲವು ವರ್ಷಗಳಿಂದ ಚಿತ್ರರಂಗದಲ್ಲಿ ನಡೆಯುತ್ತಿದೆ. ಅಂಥದ್ದೊಂದು ವಿಷಯವನ್ನೇ ಪ್ರಮುಖವಾಗಿಟ್ಟುಕೊಂಡು ತೆರೆಗೆ ಬಂದಿರುವ ಚಿತ್ರ ‘ದೊಡ್ಮನ್ಸ’. ಯುವ ಪ್ರತಿಭೆ ಶರತ್‍ ಕೃಷ್ಣ ಇಂಥದ್ದೊಂದು ಪ್ರಸ್ತುತ ವಿಷಯವನ್ನು ಇಟ್ಟುಕೊಂಡು ಅದನ್ನು ಸಿನೆಮಾ ರೂದಲ್ಲಿ ತೆರೆಮೇಲೆ ತರುವ ಪ್ರಯತ್ನ ಮಾಡಿದ್ದಾರೆ.

ಏನಿದು ‘ದೊಡ್ಮನ್ಸ’ನ ಕಥಾನಕ..?

ಶಿವು ಎಂಬ ಹುಡುಗ ಕನ್ನಡ ಚಿತ್ರರಂಗದಲ್ಲಿ ಹೀರೋ ಆಗಬೇಕು ಎಂದು ಕನಸನ್ನು ಇಟ್ಟುಕೊಂಡು  ಬೆಂಗಳೂರಿಗೆ ಬರುತ್ತಾನೆ. ತನ್ನ ಸ್ನೇಹಿತರಿಂದ ಅಪ್ಪಟ ಪ್ರತಿಭಾವಂತ, ಅದ್ಭುತ ನಟ ಎಂದು ಹೊಗಳಿಸಿಕೊಂಡ ಶಿವುಗೆ ಚಿತ್ರರಂಗದಲ್ಲಿ ಮಾತ್ರ ಅಂದುಕೊಂಡಂತೆ ಅವಕಾಶಗಳು ಸಿಗುವುದಿಲ್ಲ. ಚಿತ್ರರಂಗದಲ್ಲಿ ನಟನಾಗಬೇಕು ಎಂದು ಬಂದವನು ಅವಕಾಶಗಳಿಗಾಗಿ ಇನ್ನಿಲ್ಲದಂತೆ ಬೆವರು ಸುರಿಸುತ್ತಾನೆ. ಆದರೆ, ತನ್ನ ಪ್ರಯತ್ನಕ್ಕೆ ಇಲ್ಲಿ ಬೆಲೆ ಇಲ್ಲ ಎಂದು ಗೊತ್ತಾದಾಗ, ಆಟೋ ಓಡಿಸಿಕೊಂಡು ಸುಮ್ಮನಾಗುವ ನಿರ್ಧಾರಕ್ಕೆ ಬರುತ್ತಾನೆ. ಹೀಗಿರುವಾಗಲೇ, ಮತ್ತೆ ಶಿವುಗೆ ಹೀರೋ ಆಗುವ ಅವಕಾಶ ತನ್ನಿಂತಾನೇ ಒಲಿದು ಬರುತ್ತದೆ. ಇನ್ನೇನು ಶಿವು ಹೀರೋ ಆಗಿ ನಟಿಸುತ್ತಿರುವ ಚಿತ್ರ ಶುರುವಾಗಬೇಕು ಎನ್ನುವಷ್ಟರಲ್ಲಿ ಮತ್ತೊಂದು ದೊಡ್ಡ ತಿರುವು ಎದುರಾಗುತ್ತದೆ. ಹಾಗಾದರೆ, ಅಂದುಕೊಂಡಂತೆ ಶಿವು ಹೀರೋ ಆಗುವುದಕ್ಕೆ ಆಗುವುದಿಲ್ಲವಾ? ದುಡ್ಡು ಇಲ್ಲದವರು ಮತ್ತು ಪ್ರತಿಭೆ ಇರುವವರು ಹೀರೋ ಆಗಬಾರದಾ? ಎಂಬ ಎದುರಾಗುವ ಪ್ರಶ್ನೆಗಳಿಗೆ ಕೊನೆಯಲ್ಲಿ ‘ದೊಡ್ಮನ್ಸ’ ಉತ್ತರ ಕೊಡುವ ಪ್ರಯತ್ನ ಮಾಡುತ್ತಾನೆ.

ಹೇಗಿದೆ ‘ದೊಡ್ಮನ್ಸ’ನ ಹವಾ..?

ಮೊದಲೇ ಹೇಳಿರುವಂತೆ, ‘ದೊಡ್ಮನ್ಸ’ ಚಿತ್ರರಂಗದ ಕಥೆಯನ್ನು ಹಿನ್ನೆಲೆಯಾಗಿ ಇಟ್ಟುಕೊಂಡು ಬಂದಿರುವಂಥ ಒಂದು ಚಿತ್ರ. ಆದರೆ, ಮೊದಲು ಆಟೋ ಓಡಿಸುವ ನಾಯಕನ ವರ್ಣನೆಯಲ್ಲೇ ಇಡೀ ಚಿತ್ರದ ಬಹುತೇಕ ಮೊದಲಾರ್ಧ ಮುಗಿದು ಹೋಗುತ್ತದೆ. ಇನ್ನು ಚಿತ್ರದ ಕಥಾಹಂದರ ಮುನ್ನಲೆಗೆ ಬರುವುದು ಚಿತ್ರ ದ್ವಿತೀಯಾರ್ಧದಲ್ಲಿ.  ಅಲ್ಲೂ ಕೂಡ ಕಥೆಯ ಜೊತೆಗೆ ಒಂದಷ್ಟು ಹಾಡು, ಫೈಟು, ಕಾಮಿಡಿ … ಅಂಥ ಎಂಟರ್ಟೈನ್ಮೆಂಟ್‌ ಅಂಶಗಳನ್ನು ಸೇರಿಸುತ್ತಾ ಹೋಗುತ್ತಾರೆ ನಾಯಕ ನಟ ಕಂ ನಿರ್ದೇಶಕ ಶರತ್‍ ಕೃಷ್ಣ. ಜೊತೆಗೆ ಒಂದು ದೊಡ್ಡ ತಿರುವನ್ನು ಕೊಟ್ಟು, ಚಿತ್ರವನ್ನು ಇನ್ನೊಂದು ಹಂತಕ್ಕೆ ತೆಗೆದುಕೊಂಡು ಹೋಗುತ್ತಾರೆ ನಿರ್ದೇಶಕರು.

ಹೇಗಿದೆ ಹೊಸ ಪ್ರತಿಭೆಗಳ ಪ್ರಯತ್ನ?

ಆರಂಭದಲ್ಲಿಯೇ ಹೇಲಿರುವಂತೆ, ‘ದೊಡ್ಮನ್ಸ’ ಬಹುತೇಕ ಹೊಸ ಪ್ರತಿಭೆಗಳೇ ಸೇರಿ ನಿರ್ಮಿಸಿರುವ ಚಿತ್ರ. ಇನ್ನು ಮೊದಲ ಚಿತ್ರದಲ್ಲೇ ಯುವ ನಟ ಕಂ ನಿರ್ದೇಶಕ ಶರತ್‍ ಕೃಷ್ಣ ನಟನೆ, ನಿರ್ಮಾಣ, ನಿರ್ದೇಶನದ ಎಲ್ಲಾ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಆಕ್ಷನ್‌ ಮತ್ತು ಡ್ಯಾನ್ಸ್‌ ಸೀನ್‌ಗಳಲ್ಲಿ ಚೆನ್ನಾಗಿ ಕಾಣುವ ಶರತ್‌ ಕೃಷ್ಣ ಡೈಲಾಗ್ಸ್‌ ಡೆಲಿವರಿಯಲ್ಲಿ ತೆರೆಮೇಲೆ ಹಿಂದುಳಿದಿದ್ದಾರೆ. ಈ ಹಿಂದೆ ‘ಲವ್‍ ಯೂ ಮುದ್ದು’ ಚಿತ್ರದಲ್ಲಿ ಅಭಿನಯದಲ್ಲಿ ಗಮನ ಸೆಳೆದಿದ್ದ ನಾಯಕಿ ರೇಷ್ಮಾಗೆ ಈ ಚಿತ್ರದಲ್ಲಿ ಅಭಿನಯಕ್ಕೆ ಹೆಚ್ಚು ಕೆಲಸವಿಲ್ಲ. ಉಳಿದಂತೆ ‘ಹುಲಿ’ ಕಾರ್ತಿಕ್‍, ಬಲರಾಜ್‍ ವಾಡಿ ತಮ್ಮ ಪಾತ್ರಗಳಿಗೆ ನ್ಯಾಯ ಸಲ್ಲಿಸಿದ್ದಾರೆ. ಹಾಡು ಮತ್ತು ಛಾಯಾಗ್ರಹಣಕ್ಕಿಂತ ಸಾಹಸ ನಿರ್ದೇಶಕರಾದ ಜಾಗ್ವಾರ್ ಸಣ್ಣಪ್ಪ ಮತ್ತು ಅಲ್ಟಿಮೇಟ್‍ ಶಿವು ಅವರ ಕೆಲಸ ಗಮನ ಸೆಳೆಯುತ್ತದೆ. ಅಲ್ಲಲ್ಲಿ ಚಿತ್ರದ ಕೆಲವು ಸಂಭಾಷಣೆಗಳು ಗಮನ ಸೆಳೆಯುತ್ತವೆ.

ಕೊನೆಯ ಮಾತು…

ತೆರೆಮೇಲೆ ಹೀರೋವನ್ನು ಅತಿಯಾಗಿ ಬಿಂಬಿಸುವುದು, ವೈಭವೀಕರಿಸುವುದು, ವಿಜೃಂಭಿಸುವುದು ಕನ್ನಡ ಚಿತ್ರರಂಗದಲ್ಲಿ ಹೊಸದೇನಲ್ಲ. ಈಗಾಗಲೇ ಇಂಥ ನೂರಾರು ಸಿನೆಮಾಗಳನ್ನು ನೋಡಿರುವ ಅನುಭವಿ ಪ್ರೇಕ್ಷಕರು ‘ದೊಡ್ಮನ್ಸ’ ಚಿತ್ರವನ್ನು ನೂರರ ಜೊತೆ ಮತ್ತೊಂದು ಎಂದು ಸೇರಿಸುವ ಸಾಧ್ಯತೆಯೇ ದಟ್ಟವಾಗಿದೆ. ಮೇಲ್ನೋಟಕ್ಕೆ ಕನ್ನಡದಲ್ಲಿ ಈಗಾಗಲೇ ಬಂದು ಹೋಗಿರುವ ಅದೇ ಸಾಲಿಗೆ ಸೇರುವ ಸಾಮಾನ್ಯ ಕಥೆಯನ್ನು ಕಮರ್ಷಿಯಲ್‍ ಚೌಕಟ್ಟಿನಲ್ಲಿ ಹೇಳುವ ಪ್ರಯತ್ನ ಮಾಡಿದ್ದಾರೆ ಶರತ್‍ ಕೃಷ್ಣ. ಒಟ್ಟಾರೆ ಬಹುತೇಕ ಹೊಸಪ್ರತಿಭೆಗಳ ಪ್ರಯತ್ನ ಎಂಬ ಕಾರಣಕ್ಕೆ ‘ದೊಡ್ಮನ್ಸ’ ಚಿತ್ರವನ್ನು ಒಮ್ಮೆ ನೋಡಿ ಬರಬಹುದು ಅಷ್ಟೇ.

Related Posts

error: Content is protected !!