Video

‘ಪ್ರೇಮದ ಊರಲಿ’ ಚಿತ್ರದಿಂದ ಅಪ್ಪನಿಗೊಂದು ಹೊಸ ಹಾಡು!

‘ಪ್ರೇಮದ ಊರಲಿ’ ಹೊರಬಂದ ‘ಅವ್ವನಂತ ಅಪ್ಪನಿವನು…’ 

ಅಪ್ಪನ‌ ಕುರಿತಾದ ಅಂದದ ಹಾಡು ಹೊರತಂದ ‘ಪ್ರೇಮದ ಊರಲಿ’ ಚಿತ್ರತಂಡ

ನಿಧಾನವಾಗಿ ಕೇಳುಗರನ್ನು ಸೆಳೆಯುತ್ತಿರುವ ಮೆಲೋಡಿ ಹಾಡು

ಕನ್ನಡ‌ ಚಿತ್ರರಂಗದಲ್ಲಿ ಅಮ್ಮನ ಕುರಿತು ಸಾಕಷ್ಟು ಹಾಡುಗಳು ಬಂದಿವೆ. ಈ ಹಾಡುಗಳ ಪೈಕಿ ಅನೇಕ ಹಾಡುಗಳು ಸೂಪರ್‌ ಹಿಟ್‌ ಆಗಿ, ಇಂದಿಗೂ ಸಿನಿಪ್ರಿಯರ ಬಾಯಲ್ಲಿ ಆಗಾಗ್ಗೆ ಗುನುಗುಡತ್ತಲೇ ಇರುತ್ತದೆ. ಆದ್ರೆ ಅಮ್ಮನ ಕುರಿತಾದ ಹಾಡುಗಳಿಗೆ ಹೋಲಿಸಿದರೆ, ಕನ್ನಡ ಚಿತ್ರರಂಗದಲ್ಲಿ ಅಪ್ಪನ ಕುರಿತಾಗಿ ಮೂಡಿಬಂದಿರುವ ಹಾಡುಗಳು ತುಂಬಾ ಕಡಿಮೆಯೇ ಎಂದು ಹೇಳಬಹುದು. ಇದೀಗ ‘ಪ್ರೇಮದ ಊರಲಿ’ ಚಿತ್ರತಂಡ ಅಪ್ಪನ ಪ್ರೀತಿಯನ್ನು ಸಂಭ್ರಮಿಸುವ ಹೊಸ ಹಾಡೊಂದನ್ನು ಬಿಡುಗಡೆ ಮಾಡಿದ್ದು, ಈ ಹಾಡು ನಿಧಾನವಾಗಿ ಸಿನಿಮಾ ಪ್ರೇಮಿಗಳನ್ನು ಸೆಳೆಯುತ್ತಿದೆ. ಯು-ಟ್ಯೂಬ್‌ನಲ್ಲಿ ಬಿಡುಗಡೆಯಾಗಿರುವ ಈ ಹಾಡು ಕೇಳುಗರನ್ನು ತನ್ನತ್ತ ಸೆಳೆಯುತ್ತಿದೆ. ಹಾಡಿನ ಸಂಗೀತ ಸಂಯೋಜನೆ, ಅರ್ಥಪೂರ್ಣ ಸಾಹಿತ್ಯ ಮತ್ತು ಮೆಲೋಡಿ ಗಾಯನಕ್ಕೆ ಎಲ್ಲಡೆಯಿಂದ ಪ್ರಶಂಸೆ, ಮೆಚ್ಚುಗೆ ವ್ಯಕ್ತವಾಗುತ್ತಿದೆ.

‘ಪ್ರೇಮದ ಊರಲಿ’ ಚಿತ್ರದ ‘ಅವ್ವನಂತ ಅಪ್ಪನಿವನು…’ ವಿಡಿಯೋ ಹಾಡನ್ನು ವೀಕ್ಷಿಸಲು ಈ ಕೆಳಗಿನ ಲಿಂಕ್‌ ಅನ್ನು ಕ್ಲಿಕ್‌ ಮಾಡಬಹುದು…

ಮನ ಮುಟ್ಟುವಂತಿದೆ ‘ಅವ್ವನಂತ ಅಪ್ಪನಿವನು…’ ಗೀತೆ…

ಮ್ಯೂಸಿಕಲ್ ಲವ್ ಸ್ಟೋರಿ ಕಥಾಹಂದರ ಹೊಂದಿರುವ ‘ಪ್ರೇಮದ ಊರಲಿ’ ಚಿತ್ರತಂಡ ಈಗ ಅಪ್ಪನ ಕುರಿತಾದದ ಚೆಂದದ ಹಾಡನ್ನು ಬಿಡುಗಡೆ ಮಾಡಿದೆ. ‘ಅವ್ವನಂತ ಅಪ್ಪನಿವನು…’ ಎಂಬ ಸಾಲುಗಳಿಂದ ಶುರುವಾಗುವ ‘ಪ್ರೇಮದ ಊರಲಿ’ ಚಿತ್ರದ ಈ ಮೆಲೋಡಿ ಗೀತೆಗೆ ಚಿತ್ರದ ನಿರ್ದೇಶಕ ಮನೋಜ್ ಕುಮಾರ್ ಕ್ಯಾಚಿ ಮ್ಯಾಚಿ ಪದ ಪೊಣಿಸಿ ಅಪ್ಪನ ಶ್ರಮವನ್ನು ವರ್ಣಿಸಿದ್ದಾರೆ. ಸಿದ್ದಾರ್ಥ್ ಸುಂದರ್ ಈ ಸುಂದರ ಮೆಲೋಡಿ ಹಾಡಿಗೆ ಧ್ವನಿಯಾಗಿದ್ದು, ಸುನಾದ್ ಗೌತಮ್ ಸಂಗೀತ ಸಂಯೋಜನೆಯಲ್ಲಿ ಈ ಗೀತೆ ಮೂಡಿಬಂದಿದೆ. ‘ಅವ್ವನಂತ ಅಪ್ಪನಿವನು…’ ಗೀತೆಯಲ್ಲಿ ಅಪ್ಪನಾಗಿ ನಟ ರಂಗಾಯಣ ರಘು ಹಾಗೂ ಮಗನಾಗಿ ನಾಯಕ ನಟ ಶ್ರೀರಾಮ್ ಜೋಡಿಯಾಗಿ ನಟಿಸಿದ್ದಾರೆ. ಹಿರಿಯ ನಟ ರಂಗಾಯಣ ರಘು ಕೂಡ ಹಾಡಿಗೆ ಹೆಜ್ಜೆ ಹಾಕಿರುವುದು ಮತ್ತೊಂದು ವಿಶೇಷ. ಸದ್ಯ ಯು-ಟ್ಯೂಬ್‌ನಲ್ಲಿ ಬಿಡುಗಡೆಯಾಗಿರುವ ‘ಪ್ರೇಮದ ಊರಲಿ’ ಚಿತ್ರದ ‘ಅವ್ವನಂತ ಅಪ್ಪನಿವನು…’ ಚಿತ್ರದ ಹಾಡು ಸೋಶಿಯಲ್‌ ಮೀಡಿಯಾಗಳಲ್ಲಿ ನಿಧಾನವಾಗಿ ನೋಡುಗರ ಗಮನ ಸೆಳೆಯುತ್ತಿದೆ.

ಶೀಘ್ರದಲ್ಲಿಯೇ ‘ಪ್ರೇಮದ ಊರಲಿ’ ತೆರೆಗೆ…

‘ಪ್ರೇಮದ ಊರಲಿ’ ಸಿನೆಮಾದಲ್ಲಿ ಶ್ರೀರಾಮ್‌ ನಾಯಕನಾಗಿ ನಟಿಸಿದ್ದು, ನಟಿಯರಾದ ತಪಸ್ವಿನಿ ಪೂಣಚ್ಚ ಹಾಗೂ ರಮಿಕಾ ಶಿವು ಜೊತೆಯಾಗಿದ್ದಾರೆ. ರಂಗಾಯಣ ರಘು ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಕನ್ನಡದಲ್ಲಿ ಈ ಹಿಂದೆ ‘ಅಕ್ಷಿ’ ಎಂಬ ಸಿನೆಮಾವನ್ನು ನಿರ್ದೇಶಿಸಿದ್ದ ಯುವ ನಿರ್ದೇಶಕ ಮನೋಜ್‌ ಕುಮಾರ್‌ ‘ಪ್ರೇಮದ ಊರಲಿ’ ಚಿತ್ರಕ್ಕೆ ಆಕ್ಷನ್-ಕಟ್ ಹೇಳಿದ್ದಾರೆ.

‘ಪ್ರೇಮದ ಊರಲಿ’ ಸಿನೆಮಾವನ್ನು ‘ವೆನಿಲ್ಲಾ ಎಂಟರ್‌ಟೈನ್ಮೆಂಟ್’ ಮತ್ತು ‘ಜಾನಕಮ್ಮ ಪ್ರೊಡಕ್ಷನ್‌’ನಡಿ ಮಮತಾ ದೇವೇಂದ್ರ, ಪ್ರಶಾಂತ್ ಹಾಗೂ ರಮೇಶ್ ನಿರ್ಮಾಣ ಮಾಡಿದ್ದಾರೆ. ಸುನಾದ ಗೌತಮ್ ಸಂಗೀತ ನಿರ್ದೇಶನ, ರಾಜ್ಕಾಂತ್ ಎಸ್.ಕೆ. ಛಾಯಾಚಿತ್ರಗ್ರಹಣ, ಹರ್ಷಿತ್ ಪ್ರಭು ಸಂಕಲನ ಚಿತ್ರಕ್ಕಿದೆ. ಇದೇ ವರ್ಷಾಂತ್ಯದೊಳಗೆ ‘ಪ್ರೇಮದ ಊರಲಿ’ ಚಿತ್ರವನ್ನು ಪ್ರೇಕ್ಷಕರ ಮುಂದೆ ತರುವ ಯೋಚನೆಯಲ್ಲಿದೆ ಚಿತ್ರತಂಡ.

Related Posts

error: Content is protected !!