ಆರ್ಯನ್ ಸಂತೋಷ್ ನಟನೆಯ ‘ಚೆಂಕೋಲ್’ ಟೀಸರ್ ಔಟ್
ಹೊರಬಂತು ‘ಚೆಂಕೋಲ್’ ಚಿತ್ರದ ಟೀಸರ್
ನಟ ಆರ್ಯನ್ ಸಂತೋಷ್ ಚೊಚ್ಚಲ ನಿರ್ದೇಶನದ ‘ಚೆಂಕೋಲ್’ ಚಿತ್ರ
‘ಚೆಂಕೋಲ್’ ಟೀಸರಿಗೆ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಸಾಥ್
ಕನ್ನಡ ಚಿತ್ರರಂಗದಲ್ಲಿ ‘ಡಿಯರ್ ಸತ್ಯ’ ಹಾಗೂ ‘ನೂರು ಜನ್ಮಕೂ…’ ಮೊದಲಾದ ಸಿನೆಮಾಗಳಲ್ಲಿ ನಾಯಕ ನಟನಾಗಿ ಗುರುತಿಸಿಕೊಂಡಿದ್ದ ನಟ ಆರ್ಯನ್ ಸಂತೋಷ್ ಈಗ ನಿರ್ದೇಶಕನಾಗಿ ಬಡ್ತಿ ಪಡೆದುಕೊಂಡಿದ್ದಾರೆ. ಹೌದು, ನಟ ಆರ್ಯನ್ ಸಂತೋಷ್ ಇದೀಗ ‘ಚೆಂಕೋಲ್’ ಎಂಬ ಹೆಸರಿನ ಸಿನೆಮಾದಲ್ಲಿ ಅಭಿನಯಿಸುವುದರ ಜೊತೆಗೆ ನಿರ್ದೇಶನವನ್ನೂ ಮಾಡಿದ್ದಾರೆ. ಈಗಾಗಲೇ ಈ ಸಿನೆಮಾದ ಬಹುತೇಕ ಕೆಲಸಗಳು ಸದ್ದಿಲ್ಲದೆ ಪೂರ್ಣಗೊಂಡಿದ್ದು, ‘ಚೆಂಕೋಲ್’ ಸಿನೆಮಾದ ಮೊದಲ ಟೀಸರ್ ಇದೀಗ ಬಿಡುಗಡೆಯಾಗಿದೆ. ಕನ್ನಡ ಚಿತ್ರರಂಗದ ‘ಡೈನಾಮಿಕ್ ಪ್ರಿನ್ಸ್’ ಖ್ಯಾತಿಯ ಪ್ರಜ್ವಲ್ ದೇವರಾಜ್ ‘ಚೆಂಕೋಲ್’ ಸಿನೆಮಾದ ಟೀಸರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದರು.
ಹೇಗಿದೆ ‘ಚೆಂಕೋಲ್’ ಟೀಸರ್…?
‘ಚೆಂಕೋಲ್’ ಸಿನೆಮಾದ ಟೀಸರ್ ನೋಡಿದವರಿಗೆ ಇದೊಂದು ಫ್ಯಾಂಟಸಿ ಡ್ರಾಮಾ ಕಥಾಹಂದರ ಹೊಂದಿರುವ ಸಿನೆಮಾ ಎಂಬುದು ಮೇಲ್ನೋಟಕ್ಕೆ ಕಾಣುತ್ತದೆ. ‘ಚೆಂಕೋಲ್’ ಸಿನೆಮಾ ಎರಡು ಭಾಗಗಳಲ್ಲಿ ತೆರೆಗೆ ಬರುತ್ತಿದ್ದು, ಸದ್ಯ ‘ಚೆಂಕೋಲ್’ ಮೊದಲ ಭಾಗ ಈ ವರ್ಷ ತೆರೆಗೆ ಬರುತ್ತಿದೆ. ಇದೀಗ ‘ಚೆಂಕೋಲ್’ ಸಿನೆಮಾದ ಮೊದಲ ಭಾಗದ ಟೀಸರ್ ಬಿಡುಗಡೆಯಾಗಿದ್ದು, ಮೊದಲ ಭಾಗದಲ್ಲಿ ಡಿಜೆ ಸಂತು ‘ಚೆಂಕೋಲ್’ ಬೆಟ್ಟಕ್ಕೆ ಹೋಗುವ ಜರ್ನಿ ಕಟ್ಟಿಕೊಡಲಾಗಿದ್ದು, ಎರಡನೇ ಭಾಗದಲ್ಲಿ ಅಗಸ್ತ್ಯ ರಾಜನ ಕಥೆಯನ್ನು ಹೇಳಲಾಗಿದೆ. ಪಿರಿಯಾಡಿಕ್ ಕಥೆಯ ನಂಟಿದೊಂದಿಗೆ ಸಸ್ಪೆನ್ಸ್-ಥ್ರಿಲ್ಲರ್ ಅಂಶಗಳ ಜೊತೆಗೆ ‘ಚೆಂಕೋಲ್’ ಚಿತ್ರವನ್ನು ಪ್ರೇಕ್ಷಕರ ಮುಂದೆ ತರಲಾಗುತ್ತಿದೆ.
‘ಚೆಂಕೋಲ್’ ಸಿನೆಮಾದ ಟೀಸರ್ ವಿಡಿಯೋವನ್ನು ವೀಕ್ಷಿಸಲು ಈ ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಬಹುದು…
‘ಚೆಂಕೋಲ್’ ಅಂದ್ರೇನು..?
ಅಂದಹಾಗೇ ‘ಚೆಂಕೋಲ್’ ಎಂದರೆ ರಾಜದಂಡ ಎಂದರ್ಥವಿದೆ. ಈ ಚಿತ್ರ ಕನ್ನಡ ಮತ್ತು ಮಲೆಯಾಳಂ ಭಾಷೆಗಳಲ್ಲಿ ಏಕಕಾಲಕ್ಕೆ ನಿರ್ಮಾಣವಾಗುತ್ತಿದೆ. ‘ವಿಂಟರ್ ಬ್ರಿಡ್ಜ್ ಸ್ಟುಡಿಯೋಸ್’ ಮತ್ತು ‘ಪಿಕ್ಸಲ್ ಒರಿಜಿನಲ್ಸ್’ ನಿರ್ಮಿಸಿರುವ ‘ಚೆಂಕೋಲ್’ ಚಿತ್ರದಲ್ಲಿ ಆರ್ಯನ್ ಸಂತೋಷ್ ನಾಯಕನಾಗಿ ಅಭಿನಯಿಸುತ್ತಿದ್ದಾರೆ. ಉಳಿದಂತೆ ಮಾನಸ್ವಿ ಮತ್ತು ಶರಣ್ಯಾ ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ.
ಉಳಿದಂತೆ ಅಕ್ಷಿತಾ ಬೋಪಯ್ಯ, ಪೂಜಾ ಶೆಟ್ಟಿ, ರೇಷ್ಮಾ, ಅರುಣಾ ಬಾಲರಾಜ್, ಸುಂದರ್ ವೀಣಾ, ಅರವಿಂದ್ ರಾವ್, ಮೈಸೂರು ನಂದ, ರಘು, ಸಚಿನ್, ವಿಜಯ್, ವಂಶಿ ಉದಯ್, ಮಹಾಂತೇಶ್ ಹಿರೇಮಠ ಮೊದಲಾದವರು ಚಿತ್ರದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
‘ಚೆಂಕೋಲ್’ ಚಿತ್ರಕ್ಕೆ ವಿಪಿನ್ ಡಿ ರಾಜ್ ಛಾಯಾಗ್ರಹಣ , ಉಮೇಶ್ ಸಂಕಲನ, ಮಣಿಕಾಂತ್ ಕದ್ರಿ ಹಿನ್ನೆಲೆ ಸಂಗೀತ ನೀಡುತ್ತಿದ್ದಾರೆ. ಹಾಡುಗಳಿಗೆ ಆಲ್ ಓಕೆ, ಜೋ ಕೋಸ್ಟಾ ಮತ್ತು ಗೌತಮ್ ದಾಸ್ ಸಂಗೀತ ಒದಗಿಸಿದ್ದು, ಪ್ರಮೋದ್ ಮರವಂತೆ ಸಾಹಿತ್ಯ ಬರೆದಿದ್ದಾರೆ. ‘ಚೆಂಕೋಲ್’ ಸಿನಿಮಾ ಎರಡು ಭಾಗಗಳಲ್ಲಿ ಮೂಡಿ ಬರ್ತಿದೆ. ಈಗಾಗಲೇ ಮೊದಲ ಭಾಗದ ಚಿತ್ರೀಕರಣ ಮುಕ್ತಾಯಗೊಂಡಿದ್ದು, ಬಿಡುಗಡೆಗೆ ಸಿದ್ಧವಾಗಿದೆ. ಕೇರಳ, ಚಿಕ್ಕಮಗಳೂರು, ಬೆಂಗಳೂರು, ತಮಿಳುನಾಡು ಸುತ್ತಮುತ್ತ ಚಿತ್ರೀಕರಣ ಮಾಡಲಾಗಿದೆ.















