Video

ಆಕ್ಷನ್ಸ್ ಪ್ಯಾಕ್ಡ್ ‘ಮಫ್ತಿ ಪೊಲೀಸ್’ ಟೀಸರ್ ನಲ್ಲಿ ಅರ್ಜುನ್‌ ಸರ್ಜಾ ಎಂಟ್ರಿ!

ಹೊರಬಂತು ‘ಮಫ್ತಿ‌ ಪೊಲೀಸ್’ ಚಿತ್ರದ ಮೊದಲ ಟೀಸರ್‌

ಅರ್ಜುನ್-ಐಶ್ವರ್ಯ ರಾಜೇಶ್ ಅಭಿನಯದ ಆಕ್ಷನ್‌-ಥ್ರಿಲ್ಲರ್‌ ಚಿತ್ರ ‘ಮಫ್ತಿ ಪೊಲೀಸ್’ ರಿಲೀಸ್‌ಗೆ ರೆಡಿ

ಬಹುಭಾಷೆಗಳಲ್ಲಿ ಏಕಕಾಲಕ್ಕೆ ತೆರೆಗೆ ಬರುತ್ತಿದೆ ‘ಮಫ್ತಿ‌ ಪೊಲೀಸ್’ 

ಬಹುಭಾಷಾ ನಟ ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ಬಹುಕಾಲದ ನಂತರ ಮತ್ತೊಂದು ಆಕ್ಷನ್‌-ಥ್ರಿಲ್ಲರ್‌ ಸಿನೆಮಾ ಮೂಲಕ ಪ್ರೇಕ್ಷಕರ ಮುಂದೆ ಬರಲು ತಯಾರಾಗುತ್ತಿದ್ದಾರೆ. ಹೌದು, ಅರ್ಜುನ್‌ ಸರ್ಜಾ ಸದ್ಯ ‘ಮಫ್ತಿ‌ ಪೊಲೀಸ್’ ಎಂಬ ಆಕ್ಷನ್‌-ಥ್ರಿಲ್ಲರ್‌ ಸಿನೆಮಾದಲ್ಲಿ ಅಭಿನಯಿಸುತ್ತಿದ್ದು, ಈ ಚಿತ್ರ ತೆರೆಗೆ ಬರಲು ಸಿದ್ಧವಾಗಿದೆ. ಸದ್ಯ ‘ಮಫ್ತಿ‌ ಪೊಲೀಸ್’ ಸಿನೆಮಾದ ಪ್ರಚಾರ ಕಾರ್ಯಗಳಿಗೆ ಚಾಲನೆ ನೀಡಿರುವ ಚಿತ್ರತಂಡ, ಇತ್ತೀಚೆಗೆ ‘ಮಫ್ತಿ‌ ಪೊಲೀಸ್’ ಸಿನೆಮಾದ ಟೀಸರ್‌ ಅನ್ನು ಬಿಡುಗಡೆ ಮಾಡಿದೆ. ಕನ್ನಡ, ತಮಿಳು, ತೆಲುಗು, ಮಲೆಯಾಳಂ ಸೇರಿದಂತೆ ನಾಲ್ಕು ಭಾಷೆಗಳಲ್ಲಿ ‘ಮಫ್ತಿ‌ ಪೊಲೀಸ್’ ಸಿನೆಮಾದ ಟೀಸರ್‌ ಏಕಕಾಲದಲ್ಲಿ ಬಿಡುಗಡೆಯಾಗಿ ಹೊರಬಂದಿದೆ. ‘ಜೀ ಮ್ಯೂಸಿಕ್‌ ಕಂಪೆನಿ’ಯ ಯು-ಟ್ಯೂಬ್‌ ಚಾನೆಲ್‌ನಲ್ಲಿ ‘ಮಫ್ತಿ‌ ಪೊಲೀಸ್’ ಸಿನೆಮಾದ ಟೀಸರ್‌ ಬಿಡುಗಡೆಯಾಗಿದೆ.

ಬಹು ತಾರಾಗಣದ ಆಕ್ಷನ್‌-ಥ್ರಿಲ್ಲರ್‌ ಚಿತ್ರ

‘ಮಫ್ತಿ‌ ಪೊಲೀಸ್’ ಬಹು ಸಮಯದ ನಂತರ ನಟ ಅರ್ಜುನ್‌ ಸರ್ಜಾ ಅಭಿನಯಿಸುತ್ತಿರುವ ಮತ್ತೊಂದು ಆಕ್ಷನ್‌-ಥ್ರಿಲ್ಲರ್‌ ಕಥಾಹಂದರದ ಸಿನೆಮಾವಾಗಿದ್ದು, ಈ ಸಿನೆಮಾದಲ್ಲಿ ಅರ್ಜುನ್‌ ಸರ್ಜಾ ಅವರೊಂದಿಗೆ ಐಶ್ವರ್ಯ ರಾಜೇಶ್ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಚಿತ್ರದಲ್ಲಿ ‘ಬಿಗ್ ಬಾಸ್’ ಖ್ಯಾತಿಯ ಅಭಿರಾಮಿ, ರಾಮ್‌ಕುಮಾರ್, ಜಿ. ಕೆ. ರೆಡ್ಡಿ, ಪಿ. ಎಲ್. ತೇನಪ್ಪನ್, ಲೋಗು, ಬರಹಗಾರ-ನಟ ವೇಲಾ ರಾಮಮೂರ್ತಿ, ತಂಗದುರೈ, ಪ್ರಾಂಕ್‌ಸ್ಟರ್ ರಾಹುಲ್, ಒ.ಎ.ಕೆ. ಸುಂದರ್ ಸೇರಿದಂತೆ ಹಲವರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

ಹೇಗಿದೆ ‘ಮಫ್ತಿ‌ ಪೊಲೀಸ್’ ಸಿನೆಮಾ ಟೀಸರ್‌..?

‘ಜಿ. ಎಸ್. ಆರ್ಟ್ಸ್’ ಬ್ಯಾನರಿನಲ್ಲಿ ನಿರ್ಮಾಪಕ ಜಿ. ಅರುಲ್ ಕುಮಾರ್ ‘ಮಫ್ತಿ‌ ಪೊಲೀಸ್’ ಸಿನೆಮಾವನ್ನು ನಿರ್ಮಿಸಿದ್ದಾರೆ. ತಮಿಳಿನ ನಿರ್ದೇಶಕ ದಿನೇಶ್ ಲೆಟ್ಚುಮನನ್ ನಿರ್ದೇಶನದ ಚೊಚ್ಚಲ ಚಿತ್ರ ಇದಾಗಿದೆ. ಔಟ್‌ ಅಂಡ್‌ ಔಟ್‌ ಕ್ರೈಂ-ಥ್ರಿಲ್ಲರ್‌ ಶೈಲಿಯಲ್ಲಿ ‘ಮಫ್ತಿ‌ ಪೊಲೀಸ್’ ಸಿನೆಮಾ ಮೂಡಿಬಂದಿದೆ. ಕಾನೂನನ್ನು ನ್ಯಾಯದಿಂದ ಮೀರಿಸಬಹುದು, ನ್ಯಾಯವನ್ನು ನೀತಿಯಿಂದ ಮೀರಿಸಬಹುದು. ಆದರೆ ಅಂತಿಮ ಲೆಕ್ಕಾಚಾರದಲ್ಲಿ ನೀತಿ ಮಾತ್ರ ಗೆಲ್ಲುತ್ತದೆ ಎಂಬ ಎಳೆ ಇಟ್ಕೊಂಡು ಸಿನೆಮಾ ಮಾಡಲಾಗಿದೆ‌ ಎಂಬುದನ್ನು ‘ಮಫ್ತಿ‌ ಪೊಲೀಸ್’ ಸಿನೆಮಾದ ಟೀಸರ್‌ನಲ್ಲಿ ಹೇಳಲಾಗಿದೆ. ನಟ ಅರ್ಜುನ್‌ ಸರ್ಜಾ ಪವರ್ ಪ್ಯಾಕ್ಡ್ ಟೀಸರ್ ನಲ್ಲಿ ಭರ್ಜರಿಯಾಗಿ ಆಕ್ಷನ್ಸ್ ಮೂಲಕ ಅಬ್ಬರಿಸಿದ್ದಾರೆ. ‘ಮಫ್ತಿ‌ ಪೊಲೀಸ್’  ಸಿನೆಮಾಕ್ಕೆ ಸರವಣನ್ ಅಭಿಮನ್ಯು ಛಾಯಾಗ್ರಹಣ, ಲಾರೆನ್ಸ್‌ ಕಿಶೋರ್‌ ಸಂಕಲನ ಕಾರ್ಯ ನಿರ್ವಹಿಸಿದ್ದಾರೆ. ಚಿತ್ರದ ಹಾಡುಗಳಿಗೆ ಆಶಿವಗನ್ ಸಂಗೀತ ಸಂಯೋಜಿಸಿದ್ದಾರೆ.

‘ಮಫ್ತಿ‌ ಪೊಲೀಸ್’ ಸಿನೆಮಾದ ಟೀಸರ್‌ ವಿಡಿಯೋವನ್ನು ವೀಕ್ಷಿಸಲು ಈ ಕೆಳಗಿನ ಲಿಂಕ್‌ ಅನ್ನು ಕ್ಲಿಕ್‌ ಮಾಡಬಹುದು…

ಶೀಘ್ರದಲ್ಲಿಯೇ ‘ಮಫ್ತಿ‌ ಪೊಲೀಸ್’ ತೆರೆಗೆ…

ಸದ್ಯ ‘ಮಫ್ತಿ‌ ಪೊಲೀಸ್’ ಸಿನೆಮಾದ ಟೀಸರ್‌ ಬಿಡುಗಡೆ ಮಾಡಿರುವ ಚಿತ್ರತಂಡ,  ಶೀಘ್ರದಲ್ಲಿಯೇ ಚಿತ್ರದ ಆಡಿಯೋ, ಟ್ರೇಲರ್ ಮತ್ತು ಸಿನೆಮಾ ಬಿಡುಗಡೆ ದಿನಾಂಕವನ್ನು ಘೋಷಿಸುವ ಯೋಚನೆಯಲ್ಲಿದೆ. ಅಂದಹಾಗೆ ‘ಮಫ್ತಿ ಪೊಲೀಸ್’ ಚಿತ್ರವು ತಮಿಳು, ತೆಲುಗು, ಮಲಯಾಳಂ ಮತ್ತು ಕನ್ನಡದಲ್ಲಿ ಏಕಕಾಲದಲ್ಲಿ ಬಿಡುಗಡೆಯಾಗಲಿದೆ.

Related Posts

error: Content is protected !!