ಸೆನ್ಸಾರ್ ಪರೀಕ್ಷೆಯಲ್ಲಿ ‘ಚೌಕಿದಾರ್’ ಪಾಸ್!
‘ಚೌಕಿದಾರ್’ಗೆ ಸೆನ್ಸಾರ್ ನಿಂದ ‘ಯು/ಎ’ ಸರ್ಟಿಫಿಕೇಟ್
ಸೆನ್ಸಾರ್ ಮಂಡಳಿಯಿಂದ ಪಾಸಾದ ಪೃಥ್ವಿ-ಧನ್ಯಾ ಸಿನೆಮಾ ‘ಚೌಕಿದಾರ್’
ಶೀಘ್ರದಲ್ಲಿಯೇ ತೆರೆಗೆ ಬರುವ ತಯಾರಿಯಲ್ಲಿ ‘ಚೌಕಿದಾರ್’ ಚಿತ್ರ
ನಟ ಪೃಥ್ವಿ ಅಂಬಾರ್ ಹಾಗೂ ಧನ್ಯಾ ರಾಮಕುಮಾರ್ ಜೋಡಿಯಾಗಿ ಅಭಿನಯಿಸುತ್ತಿರುವ ‘ಚೌಕಿದಾರ್’ ಸಿನೆಮಾದ ಬಹುತೇಕ ಕೆಲಸಗಳು ಪೂರ್ಣಗೊಂಡಿದ್ದು, ಇದೀಗ ಈ ಚಿತ್ರ ಪ್ರಾದೇಶಿಕ ಸೆನ್ಸಾರ್ ಮಂಡಳಿಯಿಂದಲೂ ಬಿಡುಗಡೆಗೆ ಗ್ರೀನ್ ಸಿಗ್ನಲ್ ಪಡೆದುಕೊಂಡಿದೆ. ಇತ್ತೀಚೆಗೆ ‘ಚೌಕಿದಾರ್’ ಸಿನೆಮಾವನ್ನು ವೀಕ್ಷಿಸಿದ ಪ್ರಾದೇಶಿಕ ಸೆನ್ಸಾರ್ ಮಂಡಳಿ ಚಿತ್ರಕ್ಕೆ ‘ಯು/ಎ’ ಪ್ರಮಾಣಪತ್ರವನ್ನು ನೀಡಿ ಬಿಡುಗಡೆಗೆ ಅಸ್ತು ಎಂದಿದೆ.
ಇನ್ನು ‘ಚೌಕಿದಾರ್’ ಚಿತ್ರಕ್ಕೆ ಸೆನ್ಸಾರ್‌ನಿಂದ ಪ್ರಮಾಣಪತ್ರ ಸಿಕ್ಕಿರುವ ಬಗ್ಗೆ ಮಾತನಾಡಿರುವ ಚಿತ್ರತಂಡ, ‘ಫ್ಯಾಮಿಲಿ ಡ್ರಾಮಾ ಕಥಾಹಂದರ ಹೊಂದಿರುವ ಈ ಚಿತ್ರವನ್ನು ಸೆನ್ಸಾರ್ ಮಂಡಳಿ ಸದಸ್ಯರು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಅದರಲ್ಲಿಯೂ ಹಿರಿಯ ನಟ ಸಾಯಿ ಕುಮಾರ್ ಅವರ ಅಭಿನಯವನ್ನು ಕೊಂಡಾಡಿದ್ದಾರೆ. ಮನಸ್ಸಿಗೆ ಹತ್ತಿರ ಎನಿಸುವ ಪಾತ್ರದಲ್ಲಿ ಸಾಯಿ ಕುಮಾರ್ ಅಮೋಘವಾಗಿ ನಟಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ’ ಎಂದಿದೆ. 
ಈ ಹಿಂದೆ ‘ರಥಾವರ’ ಸಿನೆಮಾವನ್ನು ನಿರ್ದೇಶಿಸಿದ್ದ ನಿರ್ದೇಶಕ ಚಂದ್ರಶೇಖರ್ ಬಂಡಿಯಪ್ಪ ನಿರ್ದೇಶನದಲ್ಲಿ ‘ಚೌಕಿದಾರ್’ ಚಿತ್ರ ಮೂಡಿ ಬಂದಿದೆ. ಈ ಚಿತ್ರಕ್ಕೆ ಕಲ್ಲಹಳ್ಳಿ ಚಂದ್ರಶೇಖರ್ ಹಣ ಹಾಕಿದ್ದು, ವಿದ್ಯಾದೇವಿ ನಿರ್ಮಾಣದಲ್ಲಿ ಸಾಥ್ ಕೊಟ್ಟಿದ್ದಾರೆ. ಈಗಾಗಲೇ ಹಾಡು, ಟೀಸರ್ ಮೂಲಕ ಕುತೂಹಲ ಹೆಚ್ಚಿಸಿರುವ ಸಿನೆಮಾದಲ್ಲಿ ದೊಡ್ಡ ತಾರಾಬಳಗವಿದೆ.
ಶೀಘ್ರದಲ್ಲೇ ‘ಚೌಕಿದಾರ್’ನ ಬಿಡುಗಡೆ ದಿನಾಂಕ ಘೋಷಣೆ
ಪೃಥ್ವಿ ನಾಯಕನಾಗಿ ಹಾಗೂ ಧನ್ಯ ನಾಯಕಿಯಾಗಿ ನಟಿಸಿರುವ ‘ಚೌಕಿದಾರ್’ ಸಿನೆಮಾದಲ್ಲಿ ಚಿತ್ರರಂಗದಲ್ಲಿ 50 ವರ್ಷ ಪೂರೈಸಿರುವ ಹಿರಿಯ ನಟ ಸಾಯಿ ಕುಮಾರ್ ಅವರು ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ. ‘ಚೈತ್ರದ ಪ್ರೇಮಾಂಜಲಿ’ ಚಿತ್ರದ ನಾಯಕಿ ಶ್ವೇತಾ, ಸುಧಾರಾಣಿ ಪ್ರಮುಖ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಸಚಿನ್ ಬಸ್ರೂರು ಸಂಗೀತ ಸಂಯೋಜನೆಯ ಹಾಡುಗಳಿಗೆ ವಿ. ನಾಗೇಂದ್ರ ಪ್ರಸಾದ್, ಪ್ರಮೋದ್ ಮರವಂತೆ, ಸಂತೋಷ್ ನಾಯಕ್ ಹಾಡುಗಳಿಗೆ ಸಾಹಿತ್ಯ ಒದಗಿಸಿದ್ದು, ಮುರುಳಿ ಮಾಸ್ಟರ್ ಕೊರಿಯೋಗ್ರಫಿ ಮಾಡಿದ್ದಾರೆ. ಚಿತ್ರಕ್ಕೆ ಸಿದ್ದು ಕಂಚನಹಳ್ಳಿ ಛಾಯಾಗ್ರಹಣವಿದ್ದು, ಜ್ಞಾನೇಶ್ ಮಠದ್ ಸಂಕಲನ ಕಾರ್ಯ ನಿರ್ವಹಿಸಿದ್ದಾರೆ. ಜೈ ಸುಬ್ರಹ್ಮಣ್ಯ ಸಾಹಸ ಸಂಯೋಜನೆ ಈ ಚಿತ್ರಕ್ಕಿದೆ. ಅಂದಹಾಗೆ, ಕನ್ನಡದ ಜೊತೆಗೆ ‘ಚೌಕಿದಾರ್’ ಬಹು ಭಾಷೆಗಳಲ್ಲಿ ಮೂಡಿ ಬರುತ್ತಿದೆ. ಶೀಘ್ರದಲ್ಲೇ ಚಿತ್ರತಂಡ ಬಿಡುಗಡೆ ದಿನಾಂಕ ಘೋಷಣೆ ಮಾಡುವ ಯೋಚನೆಯಲ್ಲಿದೆ.















