ಕಿಚ್ಚ ಮೆಚ್ಚಿದ ‘ಮಾರ್ನಮಿ’ ಟ್ರೇಲರ್
‘ಮಾರ್ನಮಿ’ ಟ್ರೇಲರ್ ಬಿಡುಗಡೆ ಮಾಡಿದ ಸುದೀಪ್
ರಿತ್ವಿಕ್ ಮಠದ್-ಚೈತ್ರಾ ಆಚಾರ್ ಜೋಡಿಯ ‘ಮಾರ್ನಮಿ’ ಟ್ರೇಲರಿಗೆ ಕಿಚ್ಚನ ಧ್ವನಿ…
ಹೊರಬಂತು ‘ಮಾರ್ನಮಿ’ ಟ್ರೇಲರ್
ಆಕರ್ಷಕ ಶೀರ್ಷಿಕೆ ಜೊತೆಗೆ ವಿಭಿನ್ನ ಕಥೆ ಹೊಂದಿರುವ ‘ಮಾರ್ನಮಿ’ ಚಿತ್ರ ಇದೇ ನವೆಂಬರ್ ಅಂತ್ಯದಲ್ಲಿ ತೆರೆಗೆ ಬರುವ ಯೋಜನೆ ಹಾಕಿಕೊಂಡಿದೆ. ಸದ್ಯ ‘ಮಾರ್ನಮಿ’ ಚಿತ್ರದ ಪ್ರಚಾರ ಕಾರ್ಯಗಳನ್ನು ಆರಂಭಿಸಿರುವ ಚಿತ್ರತಂಡ, ಚಿತ್ರದ ಟ್ರೇಲರ್ ಅನ್ನು ಬಿಡುಗಡೆ ಮಾಡಿದೆ. ಇತ್ತೀಚೆಗೆ ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ನಡೆದ ‘ಮಾರ್ನಮಿ’ ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ನಟ ಕಿಚ್ಚ ಸುದೀಪ್ ಹಾಜರಿದ್ದು, ಚಿತ್ರದ ಟ್ರೇಲರ್ ಅನಾವರಣ ಮಾಡಿ ಇಡೀ ತಂಡಕ್ಕೆ ಶುಭ ಹಾರೈಸಿದರು. 
‘ಮಾರ್ನಮಿ’ ಬಗ್ಗೆ ಕಿಚ್ಚನ ಮೆಚ್ಚುಗೆ ಮಾತು…
‘ಮಾರ್ನಮಿ’ ಚಿತ್ರದ ಟ್ರೇಲರ್ ಬಿಡುಗಡೆ ಬಳಿಕ ಮಾತನಾಡಿದ ನಟ ಕಿಚ್ಚ ಸುದೀಪ್, ‘ಈ ಸಿನೆಮಾದ ಟ್ರೇಲರ್ ಅದ್ಭುತವಾಗಿದೆ. ಕಂಟೆಂಟ್ ಕೂಡ ಇಂಟ್ರೆಸ್ಟಿಂಗ್ ಆಗಿದೆ. ಈ ರೀತಿ ಹಾರ್ಡ್ ವರ್ಕ್, ಈ ರೀತಿ ಇನ್ವಾಲ್ಮೆಂಟ್, ಎಮೋಷನ್ ಇಲ್ಲದೆ ಇಂತಹ ಕಥೆಗಳನ್ನು ಪರದೆ ಮೇಲೆ ತರುವುದು ಚಾಲೆಂಜ್. ಆ ವಿಷಯದಲ್ಲಿ ಈ ತಂಡ ಗೆದ್ದಿದೆ, ನಿರ್ದೇಶಕರು ತುಂಬಾ ಎಫರ್ಟ್ ಹಾಕಿದ್ದಾರೆ. ಅವರದ್ದೇ ಊರಿನ ಕಥೆಯನ್ನು ಪರದೆ ಮೇಲೆ ತರುವುದು ಸುಲಭವಲ್ಲ ಆದರೆ ನಿರ್ದೇಶಕರು ಅದನ್ನು ಸಾಧಿಸಿದ್ದಾರೆ. ಚರಣ್ ರಾಜ್ ಸಂಗೀತ ಚೆನ್ನಾಗಿದೆ. ಈ ಚಿತ್ರ ದೊಡ್ಡ ರೀತಿ ಯಶಸ್ಸು ಕಾಣಲಿ’ ಎಂದು ಶುಭ ಹಾರೈಸಿದರು.
ಕರಾವಳಿ ಸೊಗಡಿನ ‘ಮಾರ್ನಮಿ’ ಚಿತ್ರ
‘ಮಾರ್ನಮಿ’ ಚಿತ್ರದ ಟ್ರೇಲರ್ ಬಿಡುಗಡೆಯ ಬಳಿಕ ಮಾತನಾಡಿದ ನಾಯಕ ನಟ ರಿತ್ವಿಕ್ ಮಠದ್, ‘ನನ್ನ ಜೀವನದಲ್ಲಿ ಒಬ್ಬ ಸ್ಟಾರ್ ನ ಹತ್ತಿರದಿಂದ ನೋಡಿದ್ದು ಅಂದರೆ ಅದು ಸುದೀಪ್ ಸರ್. ಅವರು ತುಂಬಾ ಸ್ವೀಟ್. ಅವರು ಸಿನೆಮಾ ಅಂದರೆ ಪ್ರೋತ್ಸಾಹ ಕೊಟ್ಟೇ ಕೊಡುತ್ತಾರೆ. ಕರಾವಳಿ ಭಾಗದಲ್ಲಿ ನಡೆದ ಕಥೆಯನ್ನು ‘ಮಾರ್ನಮಿ’ ಸಿನೆಮಾ ಮೂಲಕ ಹೇಳಲು ಹೊರಟಿದ್ದೇವೆ. ನಮ್ಮ ಸಿನೆಮಾಕ್ಕೆ ನಿಮ್ಮ ಬೆಂಬಲ ಇರಲಿ’ ಎಂದರು.
‘ಮಾರ್ನಮಿ’ಗೆ ರಿಶಿತ್ ಶೆಟ್ಟಿ ನಿರ್ದೇಶನ
‘ಮಾರ್ನಮಿ’ ಚಿತ್ರಕ್ಕೆ ಯುವ ನಿರ್ದೇಶಕ ರಿಶಿತ್ ಶೆಟ್ಟಿ ನಿರ್ದೇಶನ ಮಾಡುತ್ತಿದ್ದಾರೆ. ಕನ್ನಡದ ಕೆಲ ಸಿನೆಮಾಗಳಲ್ಲಿ ಸಹ ನಿರ್ದೇಶಕ, ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿರುವ ರಿಶಿತ್ ಶೆಟ್ಟಿ ‘ಮಾರ್ನಮಿ’ ಸಿನೆಮಾ ಮೂಲಕ ನಿರ್ದೇಶಕರಾಗಿದ್ದಾರೆ.
ಟ್ರೇಲರ್ ಬಿಡುಗಡೆ ಬಳಿಕ ‘ಮಾರ್ನಮಿ’ ಬಗ್ಗೆ ಮಾತನಾಡಿದ ನಿರ್ದೇಶಕ ರಿಶಿತ್ ಶೆಟ್ಟಿ, ‘ನಾನು ನಟ ಕಿಚ್ಚ ಸುದೀಪ್ ಅವರ ಅಭಿಮಾನಿ, ಕಿಚ್ಚನ ಹಾಡುಗಳಿಗೆ ನಾನು ಸ್ಕೂಲ್ ಹಾಗೂ ಗಣೇಶೋತ್ಸವ ಸಮಯದಲ್ಲಿ ಡ್ಯಾನ್ಸ್ ಮಾಡಿದ್ದೆ. ಈಗ ಅವರು ನಮ್ಮ ಚಿತ್ರದ ಟ್ರೇಲರ್ ಲಾಂಚ್ ಮಾಡಿದ್ದಾರೆ. ಇದು ಕನಸೋ? ನನಸೋ? ಎನಿಸುತ್ತಿದೆ. ಡೈರೆಕ್ಟರ್ ಆಗಬೇಕು ಎನ್ನುವುದು ನನ್ನ ಕನಸು, ಅದು ನನಸಾಗಿದೆ. ನನ್ನ ಚಿತ್ರಕ್ಕೆ ಬೇಕಾದ ನಾವಂದುಕೊಂಡ ಎಲ್ಲಾ ಕಲಾವಿದರು, ಟೆಕ್ನಿಷಿಯನ್ ಸಿಕ್ಕಿದಾರೆ. ಈಗ ಸಿನೆಮಾ ನವೆಂಬರ್ 28ಕ್ಕೆ ಬಿಡುಗಡೆ ಆಗುತ್ತಿದೆ. ಈ ಚಿತ್ರಕ್ಕೆ ಕಿಚ್ಚ ಹಾರೈಸಿದ್ದಾರೆ. ಇದು ದೇವರು, ದೊಡ್ಡವರು, ಹೆತ್ತವರ ಆಶೀರ್ವಾದ’ ಎಂದರು.
ಇದೇ ನ. 28ಕ್ಕೆ ‘ಮಾರ್ನಮಿ’ ತೆರೆಗೆ
‘ಮಾರ್ನಮಿ’ ಚಿತ್ರದಲ್ಲಿ ರಿತ್ವಿಕ್ ಹಾಗೂ ಚೈತ್ರಾ ಜೆ. ಆಚಾರ್ ಜೊಡಿಯಾಗಿ ಅಭಿನಯಿಸಿದ್ದಾರೆ. ಉಳಿದಂತೆ ಸುಮನ್ ತಲ್ವಾರ್, ಪ್ರಕಾಶ್ ತುಮಿನಾಡು, ಸೋನು ಗೌಡ , ಜ್ಯೋತೀಶ್ ಶೆಟ್ಟಿ, ರೋಚಿತ್, ಸ್ವರಾಜ್ ಶೆಟ್ಟಿ, ಮೈಮ್ ರಾಮದಾಸ್ ಹಾಗೂ ಚೈತ್ರಾ ಶೆಟ್ಟಿ ಸೇರಿದಂತೆ ಮುಂತಾದ ಕಲಾವಿದರು ಚಿತ್ರದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
‘ಸಲಗ’, ‘ಭೀಮ’ ಖ್ಯಾತಿಯ ಶಿವಸೇನ ಛಾಯಾಗ್ರಹಣ ಈ ಚಿತ್ರಕ್ಕಿದೆ. ವರದರಾಜ್ ಕಾಮತ್ ಆರ್ಟ್ ವರ್ಕ್ ಚಿತ್ರದಲ್ಲಿದೆ, ‘ಟಗರು’, ‘ಸಲಗ’, ‘ಭೀಮ’, ‘ಸಪ್ತ ಸಾಗರದಾಚೆ ಎಲ್ಲೋ’ ಸಿನೆಮಾಗಳ ಖ್ಯಾತಿಯ ಸಂಗೀತ ನಿರ್ದೇಶಕ ಚರಣ್ ರಾಜ್ ‘ಮಾರ್ನಮಿ’ಗೆ ಮ್ಯೂಸಿಕ್ ನೀಡಿದ್ದಾರೆ. ಅರ್ಜುನ್ ರಾಜ್ ಸಾಹಸ ನಿರ್ದೇಶನ, ಪ್ರತೀಕ್ ಶೆಟ್ಟಿ ಸಂಕಲನ, ವರ್ಷ ಆಚಾರ್ ಕಾಸ್ಟೂಮ್ ಡಿಸೈನ್ ಮಾಡಿದ್ದಾರೆ, ಸುಧಿ ಆರ್ಯನ್ ಕಥೆ ಬರೆದಿರುವ ‘ಮಾರ್ನಮಿ’ ಸಿನೆಮಾವನ್ನು ‘ಗುನಾಧ್ಯ’ ಬ್ಯಾನರ್ ಅಡಿಯಲ್ಲಿ ಶಿಲ್ಪಾ ನಿಶಾಂತ್ ಹಾಗೂ ನಿಶಾಂತ್ ಎನ್. ಎನ್ ನಿರ್ಮಾಣ ಮಾಡಿದ್ದಾರೆ. ಇದೇ ನವೆಂಬರ್ ತಿಂಗಳ 28ಕ್ಕೆ ‘ಮಾರ್ನಮಿ’ ಸಿನೆಮಾ ತೆರೆಗೆ ಬರ್ತಿದೆ















