‘ದಿ ಡೆವಿಲ್’ ದರ್ಶನಕ್ಕೆ ಕ್ಷಣಗಣನೆ…
ಬಹುನಿರೀಕ್ಷಿತ ‘ದಿ ಡೆವಿಲ್’ ಡಿ. 11ಕ್ಕೆ ತೆರೆಗೆ
‘ದಿ ಡೆವಿಲ್’ ಅವತಾರದಲ್ಲಿ ನೆಚ್ಚಿನ ನಟನ ದರ್ಶನಕ್ಕಾಗಿ ‘ಸೆಲೆಬ್ರಿಟಿಸ್’ ರೆಡಿ
‘ದಿ ಡೆವಿಲ್’ ಮುಂಗಡ ಬುಕ್ಕಿಂಗ್‌ಗೆ ಭರ್ಜರಿ ರೆಸ್ಪಾನ್ಸ್
ಬೆಂಗಳೂರು, ಡಿ.10; ನಟ ‘ಚಾಲೆಂಜಿಂಗ್ ಸ್ಟಾರ್’ ದರ್ಶನ್ ಅಭಿನಯದ ಈ ವರ್ಷದ ಬಹುನಿರೀಕ್ಷಿತ ಚಿತ್ರ ‘ದಿ ಡೆವಿಲ್’ ಬಿಡುಗಡೆಗೆ ಕ್ಷಣಗಣನೆ ಶುರುವಾಗಿದೆ. ‘ದಿ ಡೆವಿಲ್’ ಚಿತ್ರ ನಾಳೆ (11 ಗುರುವಾರ, ಡಿಸೆಂಬರ್) ಬಿಡುಗಡೆ ಆಗುತ್ತಿದ್ದು, ತಮ್ಮ ನೆಚ್ಚಿನ ನಟನ ಚಿತ್ರವನ್ನು ಥಿಯೇಟರಿನಲ್ಲಿ ಕಣ್ತುಂಬಿಕೊಳ್ಳಲು ಚಾಲೆಂಜಿಂಗ್ ಸ್ಟಾರ್ ಅಭಿಮಾನಿಗಳು (ಸೆಲೆಬ್ರಿಟಿಸ್) ತುದಿಗಾಲಿನಲ್ಲಿ ನಿಂತಿದ್ದಾರೆ. 
ಇನ್ನು ‘ದಿ ಡೆವಿಲ್’ ಸಿನೆಮಾದ ಬಿಡುಗಡೆಗೂ ನಾಲ್ಕು ದಿನಗಳ ಮುಂಚೆಯೇ ಸಿನೆಮಾದ ಮುಂಗಡ ಬುಕ್ಕಿಂಗ್ ಆರಂಭವಾಗಿದ್ದು, ಈಗಾಗಲೇ ಲಕ್ಷಾಂತರ ಟಿಕೆಟ್ ಸೋಲ್ಡ್ ಔಟ್ ಆಗಿವೆ. ಗಾಂಧಿನಗರದ ಮೂಲಗಳ ಪ್ರಕಾರ ‘ದಿ ಡೆವಿಲ್’ ಸಿನೆಮಾದ ಮೊದಲ ದಿನದ ಟಿಕೆಟ್ ಬುಕಿಂಗ್ನಿಂದಲೇ 4 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಆಗಿದೆ ಎಂದು ಹೇಳಲಾಗುತ್ತಿದೆ.
ಥಿಯೇಟರ್ ಮುಂದೆ ‘ದಿ ಡೆವಿಲ್’ ಸಂಭ್ರಮ
ರಾಜ್ಯದಾದ್ಯಂತ ‘ದಿ ಡೆವಿಲ್’ ಸಿನೆಮಾ ಬಿಡುಗಡೆಯಾಗುತ್ತಿರುವ ಪ್ರಮುಖ ಚಿತ್ರಮಂದಿರಗಳ ಮುಂದೆ ಅಭಿಮಾನಿಗಳ ಸಂಭ್ರಮ ಜೋರಾಗುತ್ತಿದೆ. ಬೆಂಗಳೂರು ಸೇರಿದಂತೆ ‘ದಿ ಡೆವಿಲ್’ ಸಿನೆಮಾ ಬಿಡುಗಡೆಯಾಗುತ್ತಿರುವ ರಾಜ್ಯದ ಪ್ರಮುಖ ನಗರಗಳ ಮುಖ್ಯ ಚಿತ್ರಮಂದಿರಗಳ ಮುಂದೆ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಬೃಹತ್ ಕಟೌಟ್‌ಗಳನ್ನು ಅಭಿಮಾನಿಗಳು ಅಳವಡಿಸಿದ್ದಾರೆ.
‘ದಿ ಡೆವಿಲ್’ ಸಿನೆಮಾ ಶತದಿನೋತ್ಸವ ಪೂರೈಸಲಿ ಎಂದು ಅಭಿಮಾನಿಗಳು ಹಾರೈಸುತ್ತಿರುವ ನೂರಾರು ಬ್ಯಾನರ್‌ಗಳು, ಪೋಸ್ಟರ್‌ಗಳು ಚಿತ್ರಮಂದಿರಗಳ ಮುಂದೆ ರಾರಾಜಿಸುತ್ತಿವೆ. ಥಿಯೇಟರ್‌ಗಳ ಆವರಣವನ್ನು ಹೂಗಳು, ಬಂಟಿಂಗ್ಸ್‌ಗಳಿಂದ ಅಲಂಕರಿಸಲಾಗಿದ್ದು, ಸಂಭ್ರಮದ ವಾತಾವರಣ ಜೋರಾಗಿದೆ. ಬಿಡುಗಡೆಗೂ ಮೊದಲೇ ಅಭಿಮಾನಿಗಳು ಪಟಾಕಿ ಹೊಡೆದು ಸಂಭ್ರಮಿಸುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳ ಸಂಭ್ರಮ ಮುಗಿಲುಮುಟ್ಟಿದೆ. ಒಟ್ಟಾರೆ ಅಭಿಮಾನಿಗಳ ಪಾಲಿಗಂತೂ ‘ದಿ ಡೆವಿಲ್’ ಬಿಡುಗಡೆ ದಿನ ಒಂಥರಾ ಹಬ್ಬದ ವಾತಾವರಣವಾಗಿರುವುದಂತೂ ಸುಳ್ಳಲ್ಲ.
ದರ್ಶನ್ ಪತ್ನಿ ಮೂಲಕ ಅಭಿಮಾನಿಗಳಿಗೆ ಭಾವನಾತ್ಮಕ ಪತ್ರ!
‘ದಿ ಡೆವಿಲ್’ ಸಿನೆಮಾದ ಬಿಡುಗಡೆಗೂ ಎರಡು ದಿನಗಳ ಮುನ್ನ ಚಿತ್ರದ ನಾಯಕ ನಟ ದರ್ಶನ್ ತಮ್ಮ ಪತ್ನಿ ವಿಜಯಲಕ್ಷ್ಮೀ ಮೂಲಕ ಅಭಿಮಾನಿಗಳಿಗೆ ಭಾವನಾತ್ಮಕ ಪತ್ರ ಬರೆದಿದ್ದಾರೆ. ವದಂತಿಗಳನ್ನು ಕಡೆಗಣಿಸಿ, ಚಿತ್ರದ ಯಶಸ್ಸಿಗೆ ಶ್ರಮಿಸುವಂತೆ ಕೋರಿದ್ದಾರೆ. ಅಭಿಮಾನಿಗಳೇ ತನ್ನ ಶಕ್ತಿ ಮತ್ತು ಕುಟುಂಬ ಎಂದು ಹೇಳಿಕೊಂಡಿದ್ದಾರೆ. 
‘ದಿ ಡೆವಿಲ್’ ಸಿನೆಮಾ ಬಿಡುಗಡೆಗೂ ಮೊದಲು ದರ್ಶನ್ ತಮ್ಮ ಅಭಿಮಾನಿಗಳಿಗೆ ಬರೆದ ಪತ್ರವನ್ನು ದರ್ಶನ್ ಅವರ ಪತ್ನಿ ವಿಜಯಲಕ್ಷ್ಮೀ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
‘ನನ್ನ ಹೃದಯದಿಂದ ಈ ಸಂದೇಶ ನಿಮಗೆ ಕಳುಹಿಸುತ್ತಿದ್ದೇನೆ. ವಿಜಿ ನಿಮ್ಮೆಲ್ಲರಿಗೂ ಇದನ್ನು ತಲುಪಿಸುತ್ತಾಳೆ. ನಿಮ್ಮೆಲ್ಲರ ಪ್ರೀತಿ, ಕಾಳಜಿ, ಬೆಂಬಲ, ನನ್ನ ಸಿನಿಮಾ ಪ್ರಚಾರ ಬಗ್ಗೆ ಪ್ರತಿ ಬಾರಿಯೂ ವಿಜಿ ನನಗೆ ತಿಳಿಸುತ್ತಿದ್ದಾಳೆ. ದೂರ ಇದ್ದರೂ ಪ್ರತಿ ಕ್ಷಣವೂ ನಿಮ್ಮ ಉಪಸ್ಥಿತಿಯನ್ನು ನಾನು ಅನುಭವಿಸುತ್ತೇನೆ. ನಾನು ನಿಮಗೆ ಹೇಳಲು ಬಯಸುವುದೇನೆಂದರೆ ದಯವಿಟ್ಟು ಯಾರು ಏನು ಹೇಳಿದರೂ ಚಿಂತಿಸಬೇಡಿ. ಯಾವುದೇ ವದಂತಿ, ನೆಗೆಟಿವಿಟಿ ನಿಮ್ಮ ಹೃದಯವನ್ನು ಅಲುಗಾಡಿಸಲು ಬಿಡಬೇಡಿ’ ಎಂದು ದರ್ಶನ್ ಕೋರಿದ್ದಾರೆ. 
‘ನನ್ನ ಸಿನಿಮಾಗೆ ನೀವು ಮಾಡ್ತಿರೋ ಪ್ರಚಾರ, ಶ್ರಮ ಮತ್ತು ನಿಮ್ಮ ಒಗ್ಗಟ್ಟಿನ ಬಗ್ಗೆ ಕೇಳಿದಾಗ ನನಗೆ ಹೆಮ್ಮೆ ಮತ್ತು ಭಾವುಕನಗುತ್ತೇನೆ. ನಿಮ್ಮನ್ನೆಲ್ಲ ಮತ್ತೆ ಭೇಟಿಯಾಗುವ ದಿನಕ್ಕಾಗಿ ಕಾಯುತ್ತಿರೋದೇ ಖುಷಿ ಕೊಡ್ತಿದೆ. ನನ್ನ ಸುತ್ತಲೂ ಗೋಡೆಯಂತೆ ನಿಂತಿದ್ದಕ್ಕಾಗಿ ಧನ್ಯವಾದಗಳು. ನೀವು ನನ್ನನ್ನು ಎಷ್ಟು ನಂಬುತ್ತಿರೋ ನಾನು ನನ್ನ ಸೆಲೆಬ್ರಿಟಿಗಳನ್ನ ಅಷ್ಟೇ ನಂಬುತ್ತಿನಿ. ಕಾಲವೇ ಸತ್ಯ ಹೇಳುತ್ತದೆ. ಸಮಯವೇ ಎಲ್ಲವನ್ನೂ ಉತ್ತರಿಸುತ್ತದೆ. ಅಲ್ಲಿವರೆಗೂ ತಲೆಯನ್ನೆತ್ತಿ, ಹೃದಯ ಬಲವಾಗಿರಲಿ, ಪ್ರೀತಿ ಅಚಲವಾಗಿರಲಿ’ ಎಂದು ಜಾಲತಾಣದಲ್ಲಿ ಅಭಿಮಾನಿಗಳಿಗೆ ಪತ್ನಿ ಮೂಲಕ ದರ್ಶನ್ ತಮ್ಮ ಅಭಿಮಾನಿಗಳಿಗೆ ಸಂದೇಶ ರವಾನಿಸಿದ್ದಾರೆ.
ಎಲ್ಲರ ಚಿತ್ತ ‘ದಿ ಡೆವಿಲ್’ ಚಿತ್ರದತ್ತ…
ದರ್ಶನ್ ಅಭಿಮಾನಿಗಳು ಕೂಡ ತಮ್ಮ ನೆಚ್ಚಿನ ನಟನ ಸಿನೆಮಾವನ್ನು ಬಾಕ್ಸಾಫೀಸ್‌ನಲ್ಲಿ ಗೆಲ್ಲಿಸಲು ಇನ್ನಿಲ್ಲದಂತೆ ಪ್ರಯತ್ನಿಸುತ್ತಿದ್ದಾರೆ. ಒಟ್ಟಾರೆ ‘ದಿ ಡೆವಿಲ್’ ಭವಿಷ್ಯ ಏನಾಗಲಿದೆ ಎಂಬುದು ಚಿತ್ರ ಬಿಡುಗಡೆಯಾದ ಮೇಲಷ್ಟೇ ಗೊತ್ತಾಗಲಿದೆ. ‘ದಿ ಡೆವಿಲ್’ ಚಿತ್ರಕ್ಕೆ ಪ್ರಕಾಶ್ ವೀರ್ ನಿರ್ದೇಶನ ಮಾಡಿದ್ದಾರೆ. ದರ್ಶನ್ ಜೊತೆ ರಚನಾ ರೈ ನಾಯಕಿಯಾಗಿ ಅಭಿನಯಿಸಿದ್ದಾರೆ. ಉಳಿದಂತೆ ಶರ್ಮಿಳಾ ಮಾಂಡ್ರೆ, ಅಚ್ಯುತ್ ಕುಮಾರ್, ವಿನಯ್ ಗೌಡ ಮುಂತಾದ ಕಲಾವಿದರ ಬೃಹತ್ ತಾರಾಗಣ ಈ ಚಿತ್ರದಲ್ಲಿದೆ.














