ಚಿತ್ರಮಂದಿರಗಳಿಗೆ ಅಡಿಯಿಟ್ಟ ‘ಡೆವಿಲ್’; ಅಭಿಮಾನಿಗಳ ಸಂಭ್ರಮ
ಅದ್ಧೂರಿಯಾಗಿ ತೆರೆಕಂಡ ‘ದಿ ಡೆವಿಲ್’ ಚಿತ್ರ
ರಾಜ್ಯದ ಬಹುತೇಕ ಎಲ್ಲಾ ಥಿಯೇಟರ್‌ಗಳಲ್ಲಿ ‘ದಿ ಡೆವಿಲ್’ ಹೌಸ್‌ಫುಲ್ ಶೋ..!
ಭರ್ಜರಿ ಓಪನಿಂಗ್ ಪಡೆದುಕೊಂಡ ‘ದಿ ಡೆವಿಲ್’
ಬೆಂಗಳೂರು, ಡಿ. 11; ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ ಅಭಿನಯದ ಈ ವರ್ಷದ ಬಹುನಿರೀಕ್ಷಿತ ‘ದಿ ಡೆವಿಲ್’ ಚಿತ್ರ ಇಂದು (ಡಿಸೆಂಬರ್ 11) ಬಿಡುಗಡೆಯಾಗಿ ತೆರೆಗೆ ಬಂದಿದೆ. ಇನ್ನು ಬಿಡುಗಡೆಗೂ ಮೊದಲೇ ಸಾಕಷ್ಟು ನಿರೀಕ್ಷೆ ಮೂಡಿಸಿದ್ದ ‘ದಿ ಡೆವಿಲ್’ ನಿರೀಕ್ಷೆಯಂತೆಯೇ ಅದ್ಧೂರಿಯಾಗಿಯೇ ತೆರೆಕಂಡಿದೆ.
ರಾಜ್ಯದಾದ್ಯಂತ ಸುಮಾರು 300ಕ್ಕೂ ಹೆಚ್ಚಿನ ಥಿಯೇಟರ್‌ಗಳಲ್ಲಿ ‘ದಿ ಡೆವಿಲ್’ ಸಿನೆಮಾ ಬಿಡುಗಡೆಯಾಗಿದ್ದು, ಬಹುತೇಕ ಕಡೆಗಳಲ್ಲಿ ಮುಂಜಾನೆ 6.30 ರಿಂದಲೇ ‘ದಿ ಡೆವಿಲ್’ ಸಿನೆಮಾದ ಮೊದಲ ಪ್ರದರ್ಶನ ಆರಂಭವಾಗಿದೆ. ಮುಂಜಾನೆಯ ಬಹುತೇಕ ಎಲ್ಲಾ ಮೊದಲ ಶೋಗಳು ಹೌಸ್‌ಫುಲ್ ಆಗಿದ್ದು, ಟಿಕೆಟ್‌ಗಾಗಿ ಥಿಯೇಟರ್‌ಗಳ ಮುಂದೆ ನೂಕುನುಗ್ಗಲು ಉಂಟಾಗಿರುವ ಬಗ್ಗೆಯೂ ಅನೇಕ ಕಡೆಗಳಲ್ಲಿ ವರದಿಯಾಗಿದೆ. ಆನ್‌ಲೈನ್‌ನಲ್ಲಿಯೂ ‘ದಿ ಡೆವಿಲ್’ ಸಿನೆಮಾದ ಬುಕ್ಕಿಂಗ್ ಜೋರಾಗಿ ನಡೆಯುತ್ತಿದ್ದು, ಬಾಕ್ಸಾಫೀಸ್‌ನಲ್ಲಿ ‘ದಿ ಡೆವಿಲ್’ ಸಿನೆಮಾದ ಅಬ್ಬರ ಸದ್ಯದ ಮಟ್ಟಿಗಂತೂ ಜೋರಾಗಿದೆ!
ಥಿಯೇಟರ್‌ಗಳ ಮುಂದೆ ‘ದಿ ಡೆವಿಲ್’ ಫ್ಯಾನ್ಸ್ ಸಂಭ್ರಮ!
‘ದಿ ಡೆವಿಲ್’ ಸಿನೆಮಾ ಬಿಡುಗಡೆಯನ್ನು ನಾಯಕ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳು ಹಬ್ಬದ ರೀತಿ ಆಚರಿಸುತ್ತಿದ್ದಾರೆ. ಐದು ದಿನಗಳ ಹಿಂದೆಯೇ ‘ದಿ ಡೆವಿಲ್’ ಸಿನೆಮಾದ ಮುಂಗಡ ಟಿಕೆಟ್ ಬುಕ್ಕಿಂಗ್ ಆರಂಭವಾಗಿದ್ದು, ಮೊದಲ ದಿನದ ಬಹುತೇಕ ಎಲ್ಲಾ ಪ್ರದರ್ಶನಗಳ ಟಿಕೆಟ್ ಸೋಲ್ಡ್ ಔಟ್ ಆಗಿದೆ.
ಬಹುತೇಕ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳಲ್ಲಿ ಮುಂಜಾನೆ 6.30ರಿಂದ ‘ದಿ ಡೆವಿಲ್’ ಸಿನೆಮಾದ ಪ್ರದರ್ಶನ ಆರಂಭವಾಗಿದ್ದು, ಥಿಯೇಟರ್‌ಗಳ ಮುಂದೆ ಅಭಿಮಾನಿಗಳು ಪಟಾಕಿ ಸಿಡಿಸಿ, ಸಿಹಿ ಹಂಚಿ ತಮ್ಮ ನೆಚ್ಚಿನ ನಟನ ಸಿನೆಮಾವನ್ನು ಸ್ವಾಗತಿಸಿ, ಸಂಭ್ರಮಿಸುತ್ತಿದ್ದಾರೆ. ಇನ್ನು ಮಲ್ಟಿಪ್ಲೆಕ್ಸ್ಗಳಲ್ಲಿಯೂ ‘ದಿ ಡೆವಿಲ್’ ಸಿನೆಮಾವನ್ನು ಪ್ರೇಕ್ಷಕರು ದೊಡ್ಡ ಸಂಖ್ಯೆಯಲ್ಲಿ ವೀಕ್ಷಣೆ ಮಾಡುತ್ತಿದ್ದಾರೆ.
ಮತ್ತೊಂದು ‘ಸಾರಥಿ’ ಆಗಲಿದೆಯಾ ‘ದಿ ಡೆವಿಲ್’..?
ನಟ ದರ್ಶನ್ ಅವರ ‘ಡೆವಿಲ್’ ಸಿನೆಮಾ ಅವರು ಜೈಲಿನಲ್ಲಿರುವಾಗಲೇ ತೆರೆಕಂಡಿದೆ. 2011ರಲ್ಲಿ ದರ್ಶನ್ ಜೈಲಿನಲ್ಲಿದ್ದಾಗಲೂ ‘ಸಾರಥಿ’ ಚಿತ್ರ ರಿಲೀಸ್ ಆಗಿ ಬ್ಲಾಕ್‌ಬಸ್ಟರ್ ಆಗಿತ್ತು. 2011ರಲ್ಲಿ ವಿಜಯಲಕ್ಷ್ಮೀ ಅವರ ಮೇಲೆ ದರ್ಶನ್ ಹಲ್ಲೆ ಮಾಡಿದ್ದರು.
ಆಗ ಸ್ವತಃ ವಿಜಯಲಕ್ಷ್ಮೀ ಅವರೇ ದರ್ಶನ್ ಅವರ ವಿರುದ್ದ ಕೇಸ್ ಹಾಕಿದರು. ಈ ಸಂಬಂಧ ದರ್ಶನ್ ಅವರನ್ನು ಬಂಧಿಸಲಾಗಿತ್ತು. ಅವರು ಆಗ ನ್ಯಾಯಾಂಗ ಬಂಧನದಲ್ಲಿ ಇದ್ದರು. ಅವರು ಜೈಲಿನಲ್ಲಿ ಇರುವಾಗಲೇ ‘ಸಾರಥಿ’ ಸಿನೆಮಾ ರಿಲೀಸ್ ಆಯಿತು. ಆ ಬಳಿಕ ಸಿನೆಮಾ ಸೂಪರ್ ಹಿಟ್ ಆಯಿತು. ಆ ವರ್ಷದ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಚಿತ್ರವಾಗಿ ‘ಸಾರಥಿ’ ಹೊರಹೊಮ್ಮಿತು. ಈಗ ‘ಡೆವಿಲ್’ ಸಿನೆಮಾ ಕೂಡ ನಟ ದರ್ಶನ್ ಅವರು ಜೈಲಿನಲ್ಲಿರುವಾಗಲೇ ಬಿಡುಗಡೆಯಾಗಿದ್ದು, ‘ಸಾರಥಿ’ ಸಿನೆಮಾದಂತೆಯೇ ‘ದಿ ಡೆವಿಲ್’ ಕೂಡ ಯಶಸ್ಸು ಕಾಣುತ್ತದೆಯೇ ಎಂಬ ಕುತೂಹಲ, ನಿರೀಕ್ಷೆ ದರ್ಶನ್ ಅಭಿಮಾನಿಗಳಲ್ಲಿ ಮತ್ತು ಚಿತ್ರರಂಗದಲ್ಲಿ ಮನೆ ಮಾಡಿದೆ.















