Quick ಸುದ್ದಿಗೆ ಒಂದು click

ವೈವಾಹಿಕ ಜೀವನಕ್ಕೆ ಅದ್ಧೂರಿಯಾಗಿ ಕಾಲಿಟ್ಟ ರಶ್ಮಿಕಾ ಮಂದಣ್ಣ-ವಿಜಯ್ ದೇವರಕೊಂಡ ಜೋಡಿ

ಹಸೆಮಣೆ ಏರಿದ ರಶ್ಮಿಕಾ-ವಿಜಯ್‌ ಜೋಡಿ

ರಾಜಸ್ಥಾನದ ಉದಯಪುರದಲ್ಲಿ ಅದ್ಧೂರಿಯಾಗಿ ನಡೆದ ಗೀತಾ ಗೋವಿಂದ ವಿವಾಹ…!

ಕುಟುಂಬಸ್ಥರು, ಅತ್ಯಾಪ್ತರು ಸಮ್ಮುಖದಲ್ಲಿ ಸತಿ-ಪತಿಗಳಾದ ತಾರಾ ಜೋಡಿ

ಫೆಬ್ರವರಿ 26, ಉದಯಪುರ : ನಟಿ ರಶ್ಮಿಕಾ ಮಂದಣ್ಣ ಮತ್ತು ನಟ ವಿಜಯ್ ದೇವರಕೊಂಡ ಅವರ ವಿವಾಹ ಇಂದು (ಫೆಬ್ರವರಿ 26) ಅದ್ಧೂರಿಯಾಗಿ ನೆರವೇರಿದೆ. ರಾಜಸ್ಥಾನದ ಉದಯಪುರದ ಐಶಾರಾಮಿ ರೆಸಾರ್ಟ್​​ನಲ್ಲಿ ಇಂದು (ಫೆಬ್ರವರಿ 26) ಬೆಳಿಗ್ಗೆ ಶುಭ ಮುಹೂರ್ತದಲ್ಲಿ ತೆಲುಗು ಸಂಪ್ರದಾಯದಂತೆ ರಶ್ಮಿಕಾ – ವಿಜಯ್‌ ಜೋಡಿ ಮದುವೆ ಆಗಿದ್ದಾರೆ. ಎರಡೂ ಕುಟುಂಬದ ಸದಸ್ಯರು, ಹಿರಿಯರು ಮತ್ತು ಅತ್ಯಾಪ್ತರ ಸಮ್ಮುಖದಲ್ಲಿ ವಿಜಯ್ ದೇವರಕೊಂಡ, ರಶ್ಮಿಕಾ ಅವರಿಗೆ ತಾಳಿ ಕಟ್ಟುವ ಮೂಲಕ ವೈವಾಹಿಕ ಜೀವನಕ್ಕೆ ಅಡಿಯಿಟ್ಟರು.

ರಶ್ಮಿಕಾ-ವಿಜಯ್‌ ಸಂಬಂಧಕ್ಕೆ ವಿವಾಹ ಮುದ್ರೆ!

ಕಳೆದ ಕೆಲ ವರ್ಷಗಳಿಂದ ನಟಿ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಜೋಡಿ ಪರಸ್ಪರ ಪ್ರೀತಿಸುತ್ತಿದ್ದಿದ್ದು ಗುಟ್ಟೇನೂ ಆಗಿರಲಿಲ್ಲ. ಕಳೆದ ವರ್ಷ ಅಕ್ಟೋಬರ್ ತಿಂಗಳಲ್ಲಿ ಈ ಜೋಡಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು, ಇದೀಗ ತಮ್ಮ ಪ್ರೀತಿಯನ್ನು ದಾಂಪತ್ಯವನ್ನಾಗಿ ಬದಲಾಯಿಸಿಕೊಂಡಿದ್ದಾರೆ. ಈ ಮೂಲಕ ಇಲ್ಲಿಯವರೆಗೆ ರಶ್ಮಿಕಾ ಮಂದಣ್ಣ ಮತ್ತು ವಿಜಯ್‌ ದೇವರಕೊಂಡ ಅವರ ಸಂಬಂಧದ ಬಗ್ಗೆ ಹರಿದಾಡುತ್ತಿದ್ದ ಅಂತೆ-ಕಂತೆ ಸುದ್ದಿಗಳಿಗೆ ಇದೀಗ ಬ್ರೇಕ್‌ ಬಿದ್ದಿದ್ದು, ರಶ್ಮಿಕಾ-ವಿಜಯ್‌ ತಾರಾ ಜೋಡಿಯ ಸಂಬಂಧಕ್ಕೆ ಅಧಿಕೃತವಾಗಿ ವಿವಾಹ ಮುದ್ರೆ ಬಿದ್ದಂತಾಗಿದೆ.

ಎರಡು ದಿನಗಳ ಕಾಲ ನಡೆದ ಅದ್ಧೂರಿ ವಿವಾಹ…

ಇನ್ನು ನಟಿ ರಶ್ಮಿಕಾ ಮಂದಣ್ಣ ಮತ್ತು ನಟ ವಿಜಯ್‌ ದೇವರಕೊಂಡ ಶಾಸ್ತ್ರೋಕ್ತವಾಗಿ ಮತ್ತು ಸಾಂಪ್ರದಾಯಿಕವಾಗಿ ವೈವಾಹಿಕ ಜೀವನಕ್ಕೆ ಅಡಿಯಿಟ್ಟಿದ್ದಾರೆ. ಸುಮಾರು ಹದಿನೈದು ದಿನಗಳಿಂದ ರಶ್ಮಿಕಾ ಮಂದಣ್ಣ ಮತ್ತು ವಿಜಯ್‌ ದೇವರಕೊಂಡ ವಿವಾಹಕ್ಕೆ ರಾಜಸ್ಥಾನದ ಉದಯಪುರದ ಖಾಸಗಿ ರೆಸಾರ್ಟ್‌ನಲ್ಲಿ  ತಯಾರಿ ನಡೆದಿತ್ತು. ಮದುವೆಯ ಮುಂಚಿನ ದಿನ ಹಳದಿ ಶಾಸ್ತ್ರ ಮತ್ತು ಸಂಗೀತ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಎರಡು ದಿನಗಳ ಹಿಂದೆ ತೆಲಂಗಾಣದಿಂದ ಪುರೋಹಿತರ ತಂಡವೊಂದು ಇವರ ಮದುವೆ ಕಾರ್ಯಕ್ರಮಕ್ಕೆಂದು ಉದಯಪುರಕ್ಕೆ ಬಂದಿತ್ತು. ಪುರೋಹಿತರುಗಳು ತೆಲುಗು ಸಂಪ್ರದಾಯದಂತೆ ಈ ಜೋಡಿಯ ಮದುವೆ ಮಾಡಿಸಿದ್ದಾರೆ.

ಕೊಡವ ಸಂಪ್ರದಾಯದಂತೆಯೂ ಮದುವೆ…

ಇದೇ ದಿನ ಸಂಜೆ ವೇಳೆಗೆ ಕೊಡವ ಸಂಪ್ರದಾಯದಂತೆ ರಶ್ಮಿಕಾ ಮತ್ತು ವಿಜಯ್ ದೇವರಕೊಂಡ ಅವರ ಮದುವೆ ಮತ್ತೊಮ್ಮೆ ನಡೆಯಲಿದೆ. ಇಬ್ಬರೂ ಸಹ ಭಿನ್ನ ಭಿನ್ನ ಸಂಪ್ರದಾಯಕ್ಕೆ ಸೇರಿದ ಕುಟುಂಬದವರಾಗಿರುವ ಕಾರಣ ಎರಡೂ ಕುಟುಂಬಗಳ ಸಂಪ್ರದಾಯ, ಆಚರಣೆಗೆ ಚ್ಯುತಿ ಬಾರದಂತೆ ಎರಡು ಭಿನ್ನ ರೀತಿಯಲ್ಲಿ ಈ ಜೋಡಿಯ ವಿವಾಹ ನಡೆಯುತ್ತಿದೆ. ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಈಗ ಅಧಿಕೃತವಾಗಿ ಸತಿ-ಪತಿಗಳಾಗಿದ್ದಾರೆ. ಇನ್ನು ರಶ್ಮಿಕಾ ಮತ್ತು ವಿಜಯ್‌ ದೇವರಕೊಂಡ ಜೋಡಿಯ ಮದುವೆಯ ಅಧಿಕೃತ ಪೋಟೊಗಳು ಬಿಡುಗಡೆಯಾಗಿದ್ದು, ಸೋಶಿಯಲ್‌ ಮೀಡಿಯಾಗಳಲ್ಲಿ ಪೋಟೋಗಳು ವೈರಲ್‌ ಆಗಿ ಹರಿದಾಡುತ್ತಿದೆ.

ಮಾರ್ಚ್‌ 04ರಂದು ಆರತಕ್ಷತೆ

ರಾಜಸ್ಥಾನದ ಉದಯಪುರದಲ್ಲಿ ನಡೆದ ರಶ್ಮಿಕಾ ಮತ್ತು ವಿಜಯ್ ಅವರು ಮದುವೆಗೆ ಕೇವಲ ಆಪ್ತೇಷ್ಟರಿಗಷ್ಟೆ ಆಹ್ವಾನ ನೀಡಲಾಗಿತ್ತು. ಮಾರ್ಚ್ 04 ರಂದು ಈ ತಾರಾ ಜೋಡಿಯ ಆರತಕ್ಷತೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಹೈದರಾಬಾದ್​​ನ ತಾಜ್ ಕೃಷ್ಣನಲ್ಲಿ ರಶ್ಮಿಕಾ-ವಿಜಯ್‌ ಅವರ ವಿವಾಹ ಆರತಕ್ಷತೆ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯಲಿದೆ. ಆ ಕಾರ್ಯಕ್ರಮದಲ್ಲಿ ಹಿಂದಿ, ತೆಲುಗು, ತಮಿಳು ಮತ್ತು ಕನ್ನಡ ಚಿತ್ರರಂಗದ ಆಹ್ವಾನಿತ ಗಣ್ಯರು, ಹಾಗೂ ಆಂಧ್ರ ಪ್ರದೇಶ, ತೆಲಂಗಾಣ ರಾಜ್ಯಗಳ ಪ್ರಮುಖ ರಾಜಕೀಯ ಮುಖಂಡರುಗಳು ಜೊತೆಗೆ ಕೆಲವು ಕೇಂದ್ರ ಸಚಿವರು, ಸಂಸದರು ಸಹ ಭಾಗಿ ಆಗಲಿದ್ದಾರೆ ಎಂದು ಹೇಳಲಾಗುತ್ತಿದೆ.

Related Posts

error: Content is protected !!