ʻಕನ್ನಡ ಚಲನಚಿತ್ರ ನಿರ್ಮಾಪಕರ ಸಂಘʼದ ನೂತನ ಕಟ್ಟಡ ಉದ್ಘಾಟನೆ
ಹೊಸ ಕಟ್ಟಡ ಉದ್ಘಾಟಿಸಿದ ಸಿ. ಎಂ ಸಿದ್ಧರಾಮಯ್ಯ
ಕೊನೆಗೂ ಈಡೇರಿದ ʻಕನ್ನಡ ಚಲನಚಿತ್ರ ನಿರ್ಮಾಪಕರ ಸಂಘʼದ ಬಹುದಿನಗಳ ಕನಸು
ಬೆಂಗಳೂರು: ʻಕನ್ನಡ ಚಲನಚಿತ್ರ ನಿರ್ಮಾಪಕರ ಸಂಘʼಕ್ಕೆ ತನ್ನದೇ ಆದ ಸ್ವಂತ ಕಟ್ಟಡ ಇರಬೇಕು ಎಂಬ ನಿರ್ಮಾಪಕರ ಬಹುದಿನಗಳ ಕನಸು ಕೊನೆಗೂ ಈಡೇರಿದೆ. ಸುಮಾರು ಎರಡು ವರ್ಷಗಳಿಂದ ನಡೆಯುತ್ತಿದ್ದ, ʻಕನ್ನಡ ಚಲನಚಿತ್ರ ನಿರ್ಮಾಪಕರ ಸಂಘʼದ ನೂತನ ಕಟ್ಟದ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿದ್ದು, ಬೆಂಗಳೂರಿನ ಹೃದಯಭಾಗವಾದ ಕುಮಾರ ಪಾರ್ಕ್‌ನ ಶಿವಾನಂದ ವೃತ್ತದ ಸಮೀಪದಲ್ಲಿ ನಿರ್ಮಾಣವಾಗಿರುವ ಈ ಕಟ್ಟಡವನ್ನು ಇದೇ (2024ರ ಜೂನ್ 30ರ) ಭಾನುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಿದರು.
ಕನ್ನಡಕ್ಕೆ ಪ್ರತ್ಯೇಕ ಒಟಿಟಿ ತರಲು ಸರ್ಕಾರದ ಚಿಂತನೆ; ಸಿ. ಎಂ ಸಿದ್ಧರಾಮಯ್ಯ
ʻಕನ್ನಡ ಚಲನಚಿತ್ರ ನಿರ್ಮಾಪಕರ ಸಂಘʼದ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿದ ಸಿದ್ದರಾಮಯ್ಯ, ʻನಿನ್ನೆ ದೆಹಲಿಗೆ ಹೋಗಿದ್ದೆ.. ಇವತ್ತು ಈ ಕಾರ್ಯಕ್ರಮಕ್ಕೆ ಬರುವ ಸಾಧ್ಯತೆ ಕಡಿಮೆ ಇತ್ತು. ಕನ್ನಡ ಚಿತ್ರರಂಗದ ಮೇಲೆ ನನಗೆ ಅಪಾರ ಗೌರವ ಇದೆ. ಮಿಸ್ ಮಾಡದೇ ಬರಬೇಕು ಎಂದು ಬಂದೆ. ಕನ್ನಡ ಚಿತ್ರರಂಗದ ಬೆಳವಣಿಗೆಗೆ ಎಷ್ಟು ಸಾಧ್ಯವೋ ಅಷ್ಟು ಸಹಕಾರ ನಮ್ಮಿಂದ ಇರುತ್ತದೆ. ಚಿತ್ರಮಂದಿರಗಳು, ಸಬ್ಸಿಡಿ ಬಗ್ಗೆ ಗಮನ ಹರಿಸಿ ಆರ್ಥಿಕ ನೆರವು ನೀಡುತ್ತೇವೆ.
ಜತೆಗೆ ಕನ್ನಡದಲ್ಲಿ ಒಟಿಟಿ ವೇದಿಕೆ ತರಲು, ಸಂಬಂಧ ಪಟ್ಟವರ ಜತೆ ಮಾತನಾಡುತ್ತೇವೆ. ಡಾ.ರಾಜ್‍ಕುಮಾರ್ ಕನಸಿನಂತೆ ಖಂಡಿತಾ ಒಂದು ಫಿಲ್ಮ್ ಸಿಟಿ ನಿರ್ಮಾಣ ಮಾಡುತ್ತೇವೆ. ಕನ್ನಡ ಭಾಷೆಯ ಚಿತ್ರಗಳಿಗೆ ಸರ್ಕಾರ ಸಹಾಯ ಮಾಡುತ್ತದೆ. ಫಿಲ್ಮಿ ಸಿಟಿಗೆ ಜಾಗ ಕೊಟ್ಟಿದ್ದೆ ನಮ್ಮ ಸರ್ಕಾರ. ನೂರು ಎಕೆರೆಗೂ ಹೆಚ್ಚು ಜಮೀನು ಕೊಟ್ಟಿದ್ದೇವೆʼ ಎಂದರು.














