Street Beat

‘ಲವ್ ಮಾಕ್ಟೇಲ್ 3’ ಚಿತ್ರಕ್ಕೆ ಕೃತಿಚೌರ್ಯದ ಆರೋಪ!

‘ಲವ್ ಮಾಕ್ಟೇಲ್ 3’ ಚಿತ್ರಕ್ಕೆ ಅಂಟಿದ ಕೃತಿಚೌರ್ಯ ಕಳಂಕ!

‘ಲವ್ ಮಾಕ್ಟೇಲ್ 3’ ಚಿತ್ರದ ಮೇಲೆ ಗುರು ದೇಶಪಾಂಡೆ ಮತ್ತು ರಾಘವೇಂದ್ರ ನಾಯಕ್ ಆರೋಪ 

ಕೃತಿಚೌರ್ಯ ಆರೋಪ ಅಲ್ಲಗಳೆದ ಡಾರ್ಲಿಂಗ್‌ ಕೃಷ್ಣ

ನಟ ಡಾರ್ಲಿಂಗ್ ಕೃಷ್ಣ ನಟಿಸಿ, ನಿರ್ದೇಶನ ಮಾಡಿರುವ ‘ಲವ್ ಮಾಕ್ಟೆಲ್ 3’ ಸಿನೆಮಾ ಇದೇ ಮಾರ್ಚ್ 19ರಂದು ಅದ್ಧೂರಿಯಾಗಿ ಬಿಡುಗಡೆ ಆಗಿ ತೆರೆಗೆ ಬಂದಿತ್ತು. ಹಿಂದಿಯ ‘ಧುರಂಧರ್ 2’ ಹಾಗೂ ‘ಉಸ್ತಾದ್ ಭಗತ್ ಸಿಂಗ್’ ಸಿನೆಮಾದ ಎದುರು ಬಿಡುಗಡೆಯಾಗಿದ್ದ ‘ಲವ್ ಮಾಕ್ಟೆಲ್ 3’ ಒಳ್ಳೆಯ ಪ್ರದರ್ಶನವನ್ನೇ ನೀಡುತ್ತಿದೆ. ನಿಧಾನವಾಗಿ ಚಿತ್ರಮಂದಿರದಲ್ಲಿ ಪ್ರೇಕ್ಷಕರನ್ನು ಸೆಳೆಯುತ್ತಿರುವ ‘ಲವ್‌ ಮಾಕ್ಟೆಲ್ 3’ ಚಿತ್ರಕ್ಕೆ ಇದೀಗ ಕೃತಿಚೌರ್ಯದ ಆರೋಪ ಎದುರಾಗಿದೆ. ಹೌದು, ಕೆಲ ವರ್ಷಗಳ ಹಿಂದೆ ತಾವು ಹೇಳಿದ್ದ ಕಥೆಯನ್ನು ಕದ್ದು ನಟ ಕಂ ನಿರ್ದೇಶಕ ಡಾರ್ಲಿಂಗ್ ಕೃಷ್ಣ ತಮ್ಮ ಅನುಮತಿ ಇಲ್ಲದೇ ‘ಲವ್ ಮಾಕ್ಟೆಲ್ 3’ ಸಿನೆಮಾನಲ್ಲಿ ಬಳಸಿಕೊಂಡಿದ್ದಾರೆ ಎಂದು ನಿರ್ದೇಶಕ ಗುರು ದೇಶಪಾಂಡೆ ಮತ್ತು ರಾಘವೇಂದ್ರ ನಾಯಕ್ ಆರೋಪ ಮಾಡಿದ್ದಾರೆ.

ಇನ್ನು ‘ಲವ್‌ ಮಾಕ್ಟೆಲ್ 3’ ಸಿನೆಮಾದಲ್ಲಿ ಕೃತಿಚೌರ್ಯ ಆಗಿರುವ ಬಗ್ಗೆ ನಿರ್ದೇಶಕ ರಾಘವೇಂದ್ರ ನಾಯ್ಕ್ ಅವರು ಸೋಶಿಯಲ್‌ ಮೀಡಿಯಾದಲ್ಲಿ ಸುದೀರ್ಘವಾಗಿ ಬರೆದುಕೊಂಡಿದ್ದು, ಈ ಕಥೆ ತಮ್ಮದು ಎಂದು ಹೇಳಿಕೊಂಡಿದ್ದಾರೆ. ಈ ಕಥೆಯನ್ನು2023ರಲ್ಲಿ ಡಾರ್ಲಿಂಗ್ ಕೃಷ್ಣ ಅವರಿಗೆ ಹೇಳಲಾಗಿತ್ತು. ಆದರೆ ಡಾರ್ಲಿಂಗ್ ಕೃಷ್ಣ ಅವರು ಆ ಕಥೆಯನ್ನು ಒಪ್ಪಿಕೊಂಡಿರಲಿಲ್ಲ. ಆದರೆ ಈಗ ‘ಲವ್ ಮಾಕ್ಟೇಲ್ 3’ ಸಿನೆಮಾದಲ್ಲಿ ಅದೇ ಕಥೆ ಇರುವುದು ನೋಡಿ ರಾಘವೇಂದ್ರ ನಾಯ್ಕ್ ಅವರಿಗೆ ಶಾಕ್ ಆಗಿದೆ. ‘ಈ ಸಿನಿಮಾದ ದ್ವಿತೀಯಾರ್ಧ ಸಂಪೂರ್ಣ ನಮ್ಮದೇ ಕಥೆಗೆ ಹತ್ತಿರವಾಗಿದೆ. ಅವರ ಹಿನ್ನೆಲೆ ಮತ್ತು ಪರಿಸರ ಬೇರೆ ಇದೆ. ಆದರೆ ಮುಖ್ಯ ವಿಚಾರ ಹಾಗೆಯೇ ಇದೆ. ಅದರಿಂದ ನನಗೆ ಬೇಜಾರು ಆಯಿತು. ಅದಕ್ಕಾಗಿ ಸೋಶಿಯಲ್ ಮೀಡಿಯಾದಲ್ಲಿ ಹೇಳಿಕೊಂಡೆ. ಈಗ ವಾಣಿಜ್ಯ ಮಂಡಳಿಗೆ ದೂರು ನೀಡಿದ್ದೇವೆ’ ಎಂದು ರಾಘವೇಂದ್ರ ನಾಯ್ಕ್ ಅವರು ಹೇಳಿದ್ದಾರೆ.

ಕೃತಿಚೌರ್ಯದ ಬಗ್ಗೆ ಡಾರ್ಲಿಂಗ್‌ ಕೃಷ್ಣ ಉತ್ತರವೇನು..?

ಇನ್ನು ‘ಲವ್ ಮಾಕ್ಟೇಲ್ 3’ ಸಿನೆಮಾ ಕಥೆ ಕದ್ದ ಆರೋಪವನ್ನು ನಟ ಕಂ ನಿರ್ದೇಶಕ ಡಾರ್ಲಿಂಗ್‌ ಕೃಷ್ಣ ಸಾರಸಗಟಾಗಿ ತಳ್ಳಿ ಹಾಕಿದ್ದಾರೆ. ಈ ಕಥೆ ತಮ್ಮದೆಂದು ಹೇಳಿಕೊಂಡಿರುವ ನಿರ್ದೇಶಕ ರಾಘವೇಂದ್ರ ನಾಯ್ಕ್, ಅವರ  ಆರೋಪಕ್ಕೆ ಕೃಷ್ಣ ಖಾರವಾಗಿ ಉತ್ತರಿಸಿದ್ದು, ‘ಕೋರ್ಟ್ ಪೇಟೆಂಟ್ ತೆಗೆದುಕೊಂಡಿದ್ದೀರಾ?’ ಎಂದು ಪ್ರಶ್ನಿಸಿದ್ದಾರೆ. ‘ನ್ಯೂಸೋ ನ್ಯೂಸು’ ಯೂ-ಟ್ಯೂಬ್ ಚಾನೆಲ್​​ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಕೃಷ್ಣ ಹಾಗೂ ಮಿಲನಾ, ‘ಅವರ ಆರೋಪವೇ ಒಂದು ಜೋಕ್. ನಿಮ್ಮ ಬಳಿ ಸ್ಕ್ರೀನ್​​ಪ್ಲೇ ಇದೆಯಾ? ಬರೆದಿಟ್ಟುಕೊಂಡ ಡೈಲಾಗ್ ಇದೆಯಾ? ಈ ಪ್ರಶ್ನೆಗಳಿಗೆ ಇಲ್ಲ ಎನ್ನುತ್ತಾರೆ. ಸೆಕೆಂಡ್ ಹಾಫ್ ಕೋರ್ಟ್ ಅಲ್ಲಿ ನಡೆಯುತ್ತದೆ, ಅದಕ್ಕೆ ಹೋಲಿಕೆ ಇದೆ ಎನ್ನುತ್ತಾರೆ. ಕೋರ್ಟ್​ ಪೇಟೆಂಟ್ ತೆಗೆದುಕೊಂಡಿದ್ದೀರಾ’ ಎಂದು ಪ್ರಶ್ನೆ ಮಾಡಿದ್ದಾರೆ.

‘ಸೋಶಿಯಲ್ ಮೀಡಿಯಾದಲ್ಲಿ ಒಂದು ಕಡೆ ‘ಕದ್ದು ಮಾಡಿದ ಸಿನೆಮಾ’ ಎಂದು ಕಮೆಂಟ್ ನೋಡಿದೆ. ಇದನ್ನು ನೋಡಿದ್ರೆ ಬೇಸರ ಆಗುತ್ತೆ. ಇದನ್ನು ಕದ್ದು ಮಾಡಿದ್ದಲ್ಲ. ನಾವು ಕುಳಿತು ಮಾಡಿದ್ದು’ ಎಂದಿದ್ದಾರೆ ನಟ ಕಂ ನಿರ್ದೇಶಕ ಡಾರ್ಲಿಂಗ್‌ ಕೃಷ್ಣ. ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ನಟಿ ಮಿಲನಾ, ‘ಇದು ಹಾಸ್ಯದ ರೀತಿ ಕಾಣಿಸುತ್ತದೆ’ ಎಂದಿದ್ದಾರೆ.

Related Posts

error: Content is protected !!