Eye Plex

ಬಿಗ್‌ ಸ್ಕ್ರೀನ್‌ನಲ್ಲಿ ‘ಬ್ರ್ಯಾಟ್’ ಬೆಟ್ಟಿಂಗ್‌ ಆಟ!

ಬ್ಯಾಟ್‌ ಹಿಂದಿರುವ ‘ಬ್ರ್ಯಾಟ್‌’ ಹುಡುಗನ ಕಥೆ

ಕ್ರಿಕೆಟ್‌ ಲೋಕದ ಬೆಟ್ಟಿಂಗ್‌ ವ್ಯವಹಾರ ತೆರೆಮೇಲೆ ಅನಾವರಣ…

ಆಕ್ಷನ್‌-ಥ್ರಿಲ್ಲರ್‌ ಕಥೆಯಲ್ಲಿ ಅನಿರೀಕ್ಷಿತ ಕ್ಲೈಮ್ಯಾಕ್ಸ್‌!

ಚಿತ್ರ: ‘ಬ್ರ್ಯಾಟ್’                             ನಿರ್ಮಾಣ: ‘ಡಾಲ್ಫಿನ್‌ ಎಂಟರ್‌ಟೈನ್ಮೆಂಟ್ಸ್‌’     ನಿರ್ದೇಶನ: ಶಶಾಂಕ್‌                          ತಾರಾಗಣ: ಡಾರ್ಲಿಂಗ್ ಕೃಷ್ಣ, ಅಚ್ಯುತ ಕುಮಾರ್, ಮನಿಷಾ, ರಮೇಶ್ ಇಂದಿರಾ, ಡ್ರ್ಯಾಗನ್ ಮಂಜು, ಮಾನಸಿ ಸುಧೀರ್‌ ಮತ್ತಿತರರು                                      ಬಿಡುಗಡೆ: 31 ಅಕ್ಟೋಬರ್, 2025            ಅವಧಿ: 155 ನಿಮಿಷಗಳು                            ರೇಟಿಂಗ್‌: 3.5/5

————

ಬಿಡುಗಡೆಗೂ ಮೊದಲೇ ಒಂದಷ್ಟು ಕುತೂಹಲ ಮತ್ತು ನಿರೀಕ್ಷೆ ಮೂಡಿಸಿದ್ದ ಚಿತ್ರ ‘ಬ್ರ್ಯಾಟ್‌’ ಅಂತಿಮವಾಗಿ ಬಿಡುಗಡೆಯಾಗಿ ತೆರೆಗೆ ಬಂದಿದೆ. ಅಂದಹಾಗೆ, ‘ಬ್ರ್ಯಾಟ್‌’ ನಿರ್ದೇಶಕ ಶಶಾಂಕ್‌ ಮತ್ತು ನಾಯಕ ನಟ ಡಾರ್ಲಿಂಗ್‌ ಕೃಷ್ಣ ಜೋಡಿಯಲ್ಲಿ ಕಾಂಬಿನೇಶನ್‌ನಲ್ಲಿ ಮೂಡಿಬರುತ್ತಿರುವ ಎರಡನೇ ಸಿನೆಮಾ. ಈ ಹಿಂದೆ ಇವರಿಬ್ಬರ ಕಾಂಬಿನೇಶನ್‌ನಲ್ಲಿ ತೆರೆಗೆ ಬಂದಿದ್ದ ‘ಕೌಸಲ್ಯ ಸುಪ್ರಜಾ ರಾಮ’ ಚಿತ್ರ ಯಶಸ್ವಿಯಾದ ಬಳಿಕ ಮತ್ತೊಮ್ಮೆ ನಿರ್ದೇಶಕ ಶಶಾಂಕ್‌ ಮತ್ತು ನಟ ಡಾರ್ಲಿಂಗ್‌ ಕೃಷ್ಣ ಜೊತೆಯಾಟ ‘ಬ್ರ್ಯಾಟ್‌’ ಸಿನೆಮಾದಲ್ಲೂ ಮುಂದುವರೆದಿದೆ.

ಯಾರೀ ‘ಬ್ರ್ಯಾಟ್‌’..? ಹಾಗಂದರೇನು..? 

‘ಬ್ರ್ಯಾಟಿಸಂ’ ಎಂದರೆ ಅಡ್ಡ ದಾರಿಯಲ್ಲಿ ಬೇಗನೆ ಬೆಳೆಯುವುದು ಎಂದರ್ಥ. ಇಂಥ ಅಡ್ಡ ದಾರಿಯಲ್ಲಿ ಬೇಗನೆ ಬೆಳೆಯುವ ವ್ಯಕ್ತಿಗಳನ್ನು ‘ಬ್ರ್ಯಾಟ್‌’ ಎಂಬುದಾಗಿ ಕರೆಯುವುದುಂಟು. ಆಧುನಿಕ ಜಗತ್ತಿನಲ್ಲಿ ತಂತ್ರಜ್ಞಾನ ಮತ್ತು ಬುದ್ದಿವಂತಿಕೆಯಿಂದ ಅಡ್ಡದಾರಿಯಲ್ಲಿ ಬಹುಬೇಗನೇ ಶ್ರೀಮಂತರು, ಖ್ಯಾತರಾಗುವವರನ್ನು ಸಾಮಾನ್ಯವಾಗಿ ‘ಬ್ರ್ಯಾಟ್‌’ ಎಂದು ಕರೆಯುತ್ತಾರೆ. ಇಂಥದ್ದೇ ಅಡ್ಡ ದಾರಿಯಲ್ಲಿ ಬಹುಬೇಗನೆ ಬೆಳೆಯಲು ಹೊರಟ ಹುಡುಗನೊಬ್ಬನ ಕಥೆಯೇ ಈ ವಾರ (31 ಶುಕ್ರವಾರ, ಅ 2025) ತೆರೆಗೆ ಬಂದಿರುವ ‘ಬ್ರ್ಯಾಟ್‌’ ಸಿನೆಮಾ.

‘ಬ್ರ್ಯಾಟ್‌’ ಹಿಂದಿನ ವಿಷಯವೇನು..?

ಕಳೆದ ಕೆಲ ವರ್ಷಗಳಿಂದ ಆನ್ ಲೈನ್ ಬೆಟ್ಟಿಂಗ್ ಎಂಬುದು ಯಾರ ನಿಯಂತ್ರಣಕ್ಕೂ ಸಿಗದೇ ಬೆಳೆಯುತ್ತಿದೆ. ರೆಮ್ಮಿ, ಕ್ರಿಕೆಟ್‌ ಸೇರಿದಂತೆ ಅನೇಕ ಆಟಗಳನ್ನು ಆನ್‌ ಲೈನ್‌ ಮೂಲಕ ಆಡಿಸಿ, ಅತಿ ವೇಗವಾಗಿ ಹಣ ಗಳಿಸುವ ಆಸೆಯನ್ನು ಹುಟ್ಟಿಸಿ ಜನ ಸಾಮಾನ್ಯರನ್ನು ಮತ್ತಷ್ಟು ದಾರಿದ್ರ್ಯಕ್ಕೆ ತಳ್ಳುವ ಮಾರ್ಗಗಳು ಒಂದೆರಡಲ್ಲ. ಇತ್ತೀಚೆಗೆ ಐಪಿಎಲ್ ನಡೆದಾಗಲೂ ಕ್ರಿಕೆಟ್ ಬೆಟ್ಟಿಂಗ್ ದಂಧೆ ದೊಡ್ಡ ಸುದ್ದಿ ಮಾಡಿತ್ತು. ಇದೇ ವಿಷಯವನ್ನು ಇಟ್ಟುಕೊಂಡು ನಿರ್ದೇಶಕ ಶಶಾಂಕ್‌ ‘ಬ್ರ್ಯಾಟ್‌’ ಸಿನೆಮಾಕ್ಕೆ ಚಿತ್ರರೂಪ ಕೊಟ್ಟು ಅದನ್ನು ತೆರೆಗೆ ತಂದಿದ್ದಾರೆ. ಕ್ರಿಕೆಟ್ ಬೆಟ್ಟಿಂಗ್ ಹಿಂದೆ ನಡೆಯುವ ನಿಜವಾದ ‘ಆಟ’ವನ್ನು ಸರಳೀಕರಿಸಿ, ಅದಕ್ಕೊಂದು ಆಕ್ಷನ್‌ – ಥ್ರಿಲ್ಲಿಂಗ್ ಆಯಾಮ ನೀಡಿ ‘ಬ್ರ್ಯಾಟ್‌’ ಸಿನೆಮಾದಲ್ಲಿ ಹೇಳುವ ಪ್ರಯತ್ನ ಮಾಡಲಾಗಿದೆ.

ಹೇಗಿದೆ ‘ಬ್ರ್ಯಾಟ್‌’ ಕಥೆ..?

ಮೊದಲೇ ಹೇಳಿದಂತೆ, ‘ಬ್ರ್ಯಾಟ್‌’ ಸಿನೆಮಾ ಕ್ರಿಕೆಟ್‌ ಬೆಟ್ಟಿಂಗ್‌ ಅನ್ನು ಹಿನ್ನೆಲೆಯಾಗಿಟ್ಟುಕೊಂಡು ಮಾಡಿರುವ ಸಿನೆಮಾ. ‘ಏನಾದರೂ ಸರಿ, ಹೇಗಾದರೂ ಸರಿ… ಹಣ ಮಾಡಬೇಕು’ – ಎಂಬುದೇ ಈ ಸಿನೆಮಾದ ಕೋರ್‌ ಥೀಮ್. ಇದನ್ನೇ ಜೀವನದ ಪರಮ ಉದ್ದೇಶವನ್ನಾಗಿ ಮಾಡಿಕೊಂಡ ಹುಡುಗನೊಬ್ಬನ ಕಥೆಯೇ ‘ಬ್ರ್ಯಾಟ್‌’ ಸಿನೆಮಾ.

ಕಾನ್​ಸ್ಟೇಬಲ್ ಮಹದೇವಯ್ಯ (ಅಚ್ಯುತ್ ಕುಮಾರ್) ನ್ಯಾಯವೇ ತಂದೆ-ತಾಯಿ ಎಂದು ಬದುಕುತ್ತಿರುವ ವ್ಯಕ್ತಿ. ಇಂಥ ಪ್ರಮಾಣಿಕ ವ್ಯಕ್ತಿಯ ಮಗ ಕ್ರಿಸ್ಟಿ (ಕೃಷ್ಣ) ಪಕ್ಕಾ ‘ಬ್ರ್ಯಾಟ್’. ಚಿಕ್ಕ ವಯಸ್ಸಲ್ಲೇ ಜೂಜಾಡಿ ಹಣ ಮಾಡುವ ಚಟಕ್ಕೆ ಬೀಳುವ ಕ್ರಿಸ್ಟಿ ಬಳಿಕ ಕೆಲ ಕಾಲ, ತಂದೆಯ ಮಾತಿಗೆ ತಕ್ಕಂತೆ ತಾತ್ಕಾಲಿಕವಾಗಿ ಬದಲಾಗಿ ತನ್ನ ಕ್ರಿಮಿನಲ್‌ ಬುದ್ಧಿಯನ್ನು ಅದಮಿಟ್ಟುಕೊಳ್ಳುತ್ತಾನೆ. ವಿದ್ಯೆ ತಲೆಗೆ ಹತ್ತದೆ, ಕೊನೆಗೆ ಬೇರೆ ದಾರಿ ಕಾಣದೆ ಫುಡ್ ಡೆಲಿವರಿ ಕೆಲಸ ಮಾಡಲು ಶುರು ಮಾಡುವ ಕ್ರಿಸ್ಟಿ ಬದುಕಿಗೆ, ಒಂದು ದಿನ ಬೆಂಜ್ ಕಾರಲ್ಲಿ ಹೋಗುವ ನಾಯಿ ದೊಡ್ಡ ತಿರುವು ನೀಡುತ್ತದೆ. ಆ ಬಳಿಕ ಏನಾಗುತ್ತದೆ, ಅದೆಷ್ಟು ತಿರುವು-ಮುರುವುಗಳು ಕ್ರಿಸ್ಟಿ ಜೀವನದಲ್ಲಿ ಬರುತ್ತವೆ ಎಂಬುದೇ ‘ಬ್ರ್ಯಾಟ್‌’ ಸಿನೆಮಾ. ಅದು ಹೇಗಿರುತ್ತದೆ ಎಂಬ ಕುತೂಹಲವಿದ್ದರೆ, ಅದನ್ನು ನೀವು ತೆರೆಮೇಲೆ ನೋಡಿಯೇ ತಿಳಿದುಕೊಳ್ಳಬೇಕು.

ಸಸ್ಪೆನ್ಸ್‌-ಥ್ರಿಲ್ಲರ್‌ ಹಾದಿಯಲ್ಲಿ ‘ಬ್ರ್ಯಾಟ್‌’ ಜರ್ನಿ

ನಿರ್ದೇಶಕ ಶಶಾಂಕ್‌, ಕ್ರಿಕೆಟ್‌ ಬೆಟ್ಟಿಂಗ್ ದಂಧೆಯ ಕರಾಳ ಮುಖವನ್ನು ಒಂದಷ್ಟು ಪರಿಣಾಮಕಾರಿಯಾಗಿ ‘ಬ್ರ್ಯಾಟ್‌’ ಸಿನೆಮಾದಲ್ಲಿ ತೋರಿಸುವ ಪ್ರಯತ್ನ ಮಾಡಿದ್ದಾರೆ. ಕನ್ನಡದಲ್ಲಿ ‘ಗುಲ್ಟು’, ‘ಮಾಯಾ ಬಜಾರ್’ ಸೇರಿದಂತೆ ಇಂಥ ಶೈಲಿಯ ಒಂದಷ್ಟು ವಿರಳ ಸಿನೆಮಾಗಳು ಈಗಾಗಲೇ ಬಂದಿದ್ದು, ಇಂಥ ವಿರಳ ಸಿನೆಮಾಗಳ ಸಾಲಿಗೆ ‘ಬ್ರ್ಯಾಟ್‌’ ಕೂಡ ಸೇರಬಹುದಾದ ಸಿನೆಮಾ. ನಿರ್ದೇಶಕ ಶಶಾಂಕ್ ಸಾಕಷ್ಟು ಪರಿಶ್ರಮ ಹಾಕಿ ಕ್ರಿಕೆಟ್ ಬೆಟ್ಟಿಂಗ್​ನ ಆಳ-ಅಗಲವನ್ನು ಅರಿತು ಕಥೆ ಬರೆದು, ಅದನ್ನು ದೃಶ್ಯ ರೂಪಕ್ಕಿಳಿಸಿರುವುದು ಚಿತ್ರದ ಪ್ರತಿ ಹಂತದಲ್ಲೂ ಕಾಣುತ್ತದೆ. ಬೆಟ್ಟಿಂಗ್​ನಿಂದ ಆರಂಭ ಆಗುವ ‘ಬ್ರ್ಯಾಟ್‌’ ಕಥೆ ಕೊನೆಗೆ ಫಿಕ್ಸಿಂಗ್​ವರೆಗೆ ಸಾಗುತ್ತದೆ. ಬೆಟ್ಟಿಂಗ್ ಹೇಗೆ ನಡೆಯುತ್ತದೆ ಎಂಬುದನ್ನು ಸಿನೆಮಾದಲ್ಲಿ ಥ್ರಿಲ್ಲಿಂಗ್‌ ಆಗಿ ತೋರಿಸುವ ಪ್ರಯತ್ನ ನಡೆದಿದೆ. ಈ ಹಿಂದೆ ‘ಇನ್​ಸೈಡ್ ಎಡ್ಜ್’ ಹೆಸರಿನ ಹಿಂದಿ ವೆಬ್ ಸೀರಿಸ್ ನಲ್ಲಿ ಸಂಪೂರ್ಣವಾಗಿ ಬೆಟ್ಟಿಂಗ್ ಬಗ್ಗೆಯೇ ವಿವರವಾಗಿ ಹೇಳಲಾಗಿತ್ತು. ಆದರೆ ಕನ್ನಡದಲ್ಲಿ ಇದು ಮೊದಲ ಪ್ರಯತ್ನ ಎನ್ನಬಹುದು. ಒಂದಷ್ಟು ಆಕ್ಷನ್‌, ಥ್ರಿಲ್ಲಿಂಗ್‌ ನಡುವೆ ಹಾಸ್ಯ, ಮನರಂಜನೆ, ಸಂದೇಶವನ್ನು ಕೊಡುವ ಪ್ರಯತ್ನ ಕೂಡ ಸಿನೆಮಾದಲ್ಲಾಗಿದೆ. ಅನಿರೀಕ್ಷಿತ ತಿರುವುಗಳು, ಊಹಿಸದಿರುವ ಕ್ಲೈಮ್ಯಾಕ್ಸ್‌ ‘ಬ್ರ್ಯಾಟ್‌’ ನೋಡುವ ಆಡಿಯನ್ಸ್‌ಗೆ ಅಚ್ಚರಿ ಕೊಡುತ್ತವೆ.

ಕಲಾವಿದರ ಅಭಿನಯ, ತಾಂತ್ರಿಕ ಕೆಲಸ ಹೇಗಿದೆ..? 

ಇನ್ನು ‘ಬ್ರ್ಯಾಟ್‌’ ಸಿನೆಮಾದಲ್ಲಿ ಕ್ರಿಸ್ಟಿ ಪಾತ್ರದಲ್ಲಿ ನಾಯಕ ನಟ ಡಾರ್ಲಿಂಗ್‌ ಕೃಷ್ಣ ಗಮನ ಸೆಳೆಯುತ್ತಾರೆ. ಹಣದ ಆಸೆಗೆ ಬಿದ್ದ ವ್ಯಕ್ತಿ ಯಾವೆಲ್ಲ ಹಂತಕ್ಕೆ ಹೋಗಬಹುದು ಎಂಬುದನ್ನು ಕೃಷ್ಣ ತಮ್ಮ ಪಾತ್ರದ ಮೂಲಕ ಪರಿಣಾಮಕಾರಿಯಾಗಿ ತೋರಿಸಿದ್ದಾರೆ. ಜೊತೆಗೆ ಸಖತ್ ಸ್ಟೈಲಿಶ್ ಆಗಿ ಕಾಣಿಸಿಕೊಂಡು ಗಮನ ಸೆಳೆದಿದ್ದಾರೆ. ಆ್ಯಕ್ಷನ್ ಹಾಗೂ ಲವ್​ಗಿಂತ ಹೆಚ್ಚಾಗಿ ಕ್ರಿಸ್ಟಿ ತನ್ನ ಬುದ್ಧಿವಂತಿಕೆ ಮೂಲಕ ಹೆಚ್ಚು ಇಷ್ಟವಾಗುತ್ತಾನೆ. ಉಳಿದಂತೆ ಅಚ್ಯುತ್ ಕುಮಾರ್, ಮಗ ಹಾಳಾಗುವುದನ್ನು ನೋಡಿ ಒದ್ದಾಡುವ ಹಾಗೂ ಮಗನಿಗಿಂತ ಸಮಾಜದ ಸ್ವಾಸ್ಥ್ಯ, ನ್ಯಾಯ ಮುಖ್ಯ ಎಂದು ಪ್ರತಿಪಾದಿಸುವ ಪೊಲೀಸ್ ಕಾನ್​ಸ್ಟೇಬಲ್ ಆಗಿ ಹೆಚ್ಚು ಇಷ್ಟ ಆಗುತ್ತಾರೆ. ಅವರು ಮಹದೇವಯ್ಯ ಪಾತ್ರದಲ್ಲಿ ನಿಜವಾಗಲೂ ಜೀವಿಸಿದ್ದಾರೆ. ಹೊಸ ಪ್ರತಿಭೆ ನಾಯಕಿ ಮನಿಶಾ ಅವರು ಭರವಸೆ ಮೂಡಿಸುತ್ತಾರೆ. ರಮೇಶ್ ಇಂದಿರಾ, ಡ್ರ್ಯಾಗನ್ ಮಂಜು, ಮಾನಸಿ ಸುಧೀರ್ ಕೊಟ್ಟ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಅರ್ಜುನ್ ಜನ್ಯ ‘ಬ್ರ್ಯಾಟ್‌’ ಸಿನೆಮಾದ ಹಾಡುಗಳಿಗೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಸಿದ್‌ ಶ್ರೀರಾಮ್‌ ಧ್ವನಿಯಲ್ಲಿ ಮೂಡಿಬಂದ ‘ನಾನೇ ನೀನಂತೆ…’, ಮತ್ತು ಜವಾರಿ ಶೈಲಿಯ  ‘ಗಂಗಿ.. ಗಂಗಿ…’ ಹಾಡುಗಳು ಗುನುಗುಡುವಂತಿವೆ. ಚಿತ್ರದ ಹಿನ್ನೆಲೆ ಸಂಗೀತ ಕೂಡ ಗಮನ ಸೆಳೆಯುತ್ತದೆ. ಚಿತ್ರದ ಛಾಯಾಗ್ರಹಣ, ಸಂಕಲನ ಕಾರ್ಯ ಮತ್ತು ತಾಂತ್ರಿಕ ಕಾರ್ಯಗಳು ‘ಬ್ರ್ಯಾಟ್‌’ನ ಅಂದವನ್ನು ತೆರೆಮೇಲೆ ಇನ್ನಷ್ಟು ಹೆಚ್ಚಿಸಿದೆ.

ಮೂಮೂಲಿ ಸಿನೆಮಾಗಳಿಗಿಂತ ವಿಭಿನ್ನವಾಗಿರಬೇಕು. ಹೊಸಥರದ ಸಿನೆಮಾಗಳನ್ನು ನೋಡಬೇಕು ಎಂದು ಬಯಸುವ ಪ್ರೇಕ್ಷಕ ಪ್ರಭುಗಳು ಒಮ್ಮೆ ‘ಬ್ರ್ಯಾಟ್‌’ ಕಡೆಗೆ ಮುಖ ಮಾಡಬಹುದು.

  • ಜಿ. ಎಸ್‌. ಕಾರ್ತಿಕ ಸುಧನ್‌,

Related Posts

error: Content is protected !!