Video

‘ಮಾರಿಗಲ್ಲು’ ವೆಬ್‌ ಸಿರೀಸ್‌ ಟ್ರೇಲರ್‌‌ ರಿಲೀಸ್‌

‘ಪಿಆರ್‌ಕೆ’ಯ ಮೊಟ್ಟ ಮೊದಲ ವೆಬ್ ಸರಣಿಯ ಟ್ರೇಲರ್‌ ಔಟ್‌

ಸಸ್ಪೆನ್ಸ್‌-ಥ್ರಿಲ್ಲರ್‌ ಶೈಲಿಯ ‘ಮಾರಿಗಲ್ಲು’ ಟ್ರೇಲರಿನಲ್ಲಿ ಕದಂಬರ ಹಿನ್ನೆಲೆಯ ಕಥೆ

ಇದೇ ಅಕ್ಟೋಬರ್‌ ಅಂತ್ಯದಲ್ಲಿ ‘ಮಾರಿಗಲ್ಲು’ ವೆಬ್‌ ಸರಣಿ ಬಿಡುಗಡೆ

ಪವರ್‌ಸ್ಟಾರ್‌ ಪುನೀತ್‌ ರಾಜಕುಮಾರ್‌ ಅವರ ‘ಪಿಆರ್‌ಕೆ ಪ್ರೊಡಕ್ಷನ್‌’ ಬ್ಯಾನರ್‌ ಅಡಿಯಲ್ಲಿ ಶ್ರೀಮತಿ ಅಶ್ವಿನಿ ಪುನೀತ್‌ ರಾಜಕುಮಾರ್‌ ನಿರ್ಮಾಣ ಮಾಡುತ್ತಿರುವ ‘ಮಾರಿಕಲ್ಲು’ ಕನ್ನಡ ವೆಬ್‌ ಸರಣಿ ಬಿಡುಗಡೆಯಾಗಲು ತಯಾರಾಗಿದೆ. ‘ಜೀ 5’ ಓಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ‘ಮಾರಿಗಲ್ಲು’ ಕನ್ನಡ ವೆಬ್‌ ಸರಣಿ ಸ್ಟ್ರೀಮಿಂಗ್‌ ಆಗಲಿದ್ದು, ಇದೀಗ ಇದರ ಪೂರ್ವಭಾವಿಯಾಗಿ ‘ಮಾರಿಗಲ್ಲು’ ಕನ್ನಡ ವೆಬ್‌ ಸರಣಿಯ ಟ್ರೇಲರ್‌ ಯು-ಟ್ಯೂಬ್‌ನಲ್ಲಿ ಬಿಡುಗಡೆಯಾಗಿದೆ.

ಹೇಗಿದೆ ‘ಮಾರಿಗಲ್ಲು’ ವೆಬ್‌ ಸೀರಿಸ್‌ ಟ್ರೇಲರ್‌..?

ಇನ್ನು ‘ಪಿಆರ್‌ಕೆ ಪ್ರೊಡಕ್ಷನ್ಸ್‌’ನ ಅಧಿಕೃತ ಯು-ಟ್ಯೂಬ್‌ ಚಾನೆಲ್‌ನಲ್ಲಿ ‘ಮಾರಿಗಲ್ಲು’ ವೆಬ್‌ ಸರಣಿಯ ಟ್ರೇಲರ್‌ ಬಿಡುಗಡೆಯಾಗಿದೆ. ಪ್ರತಿ ಊರಿನಲ್ಲೂ ಒಂದು ರಹಸ್ಯ ಇರುತ್ತದೆ. ಅಂಥದ್ದೇ ಒಂದು ರಹಸ್ಯ ‘ಮಾರಿಗಲ್ಲು’ನಲ್ಲಿದೆ. ಊರಿನ ರಹಸ್ಯ – ಮಣ್ಣಿನೊಳಗೇ ಜೀವಂತವಾಗಿದೆ. ಸ್ನೇಹಿತರ ಗುಂಪಿಗೆ ಕದಂಬ ನಿಧಿಯ ರಹಸ್ಯ ಸುಳಿವು ಸಿಕ್ಕಿ, ಅದನ್ನು ಹುಡುಕಲು ಹೊರಟಾಗ, ಅವರ ಹುಡುಕಾಟ ನಿಧಾನವಾಗಿ ಒಂದು ದುಃಸ್ವಪ್ನವಾಗುತ್ತದೆ. ಭಯ ಮತ್ತು ನಂಬಿಕೆಗಳು ಮುಖಾಮುಖಿಯಾಗುವಾಗ, ‘ಮಾರಿಗಲ್ಲು’ ಅರಣ್ಯದ ಪ್ರತಿ ಸುಳಿವು ಅವರನ್ನು ಸತ್ಯದತ್ತ ಹತ್ತಿರ ತರುತ್ತದೆ. ಆದರೆ ಅದೇ ಸತ್ಯ — ಒಂದು ಶಾಪವನ್ನೂ ಹೊತ್ತಿದೆ. ಎಂಬ ವಿಷಯವನ್ನು ‘ಮಾರಿಗಲ್ಲು’ ವೆಬ್‌ ಸರಣಿಯ ಟ್ರೇಲರ್‌ನಲ್ಲಿ ಹೇಳಲಾಗಿದೆ.

‘ಮಾರಿಗಲ್ಲು’ ಕನ್ನಡ ವೆಬ್‌ ಸರಣಿಯ ಟ್ರೇಲರ್‌ ವಿಡಿಯೋವನ್ನು ವೀಕ್ಷಿಸಲು ಈ ಕೆಳಗಿನ ಲಿಂಕ್‌ ಅನ್ನು ಕ್ಲಿಕ್‌ ಮಾಡಬಹುದು…

ಬೃಹತ್‌ ತಾರಾಗಣ, ಅದ್ಧೂರಿ ಮೇಕಿಂಗ್‌ನಲ್ಲಿ ಅರಳಿದ ‘ಮಾರಿಗಲ್ಲು’

ಸದ್ಯ ಬಿಡುಗಡೆಯಾಗಿರುವ ‘ಮಾರಿಗಲ್ಲು’ ವೆಬ್‌ ಸರಣಿಯ ಟ್ರೇಲರ್‌ ಸೋಶಿಯಲ್‌ ಮೀಡಿಯಾದಲ್ಲಿ ನೋಡುಗರ ಗಮನ ಸೆಳೆಯುತ್ತಿದೆ. ‘ಮಾರಿಗಲ್ಲು’ ವೆಬ್‌ ಸರಣಿಯಲ್ಲಿ ಪ್ರವೀಣ್‌ ತೇಜ್‌, ರಂಗಾಯಣ ರಘು, ಗೋಪಾಲಕೃಷ್ಣ ದೇಶಪಾಂಡೆ, ಪ್ರಶಾಂತ್‌ ಸಿದ್ಧಿ ಹೀಗೆ ಬೃಹತ್‌ ಕಲಾವಿದರ ತಾರಾಗಣವನ್ನೇ ಕಾಣಬಹುದಾಗಿದೆ. ವೆಬ್‌ ಸರಣಿಯ ತಾಂತ್ರಿಕ ಕಾರ್ಯಗಳು, ಹಿನ್ನೆಲೆ ಸಂಗೀತ, ಕಲಾವಿದರ ಅಭಿನಯ, ಅದ್ಧೂರಿ ಮೇಕಿಂಗ್‌ ಎಲ್ಲವೂ ‘ಮಾರಿಗಲ್ಲು’ ವೆಬ್‌ ಸರಣಿಯ ಟ್ರೇಲರಿನಲ್ಲಿ ಗಮನ ಸೆಳೆಯುತ್ತಿದೆ. ಉತ್ತರ ಕನ್ನಡದ ಶಿರಸಿಯ ಗ್ರಾಮೀಣ ಹಿನ್ನೆಲೆಯ ಕಥೆ, ಅಲ್ಲಿನ ಪರಿಸರ, ಅಲ್ಲಿಯ ಭಾಷೆಯ ಸೊಗಡಿನಲ್ಲಿ ‘ಮಾರಿಗಲ್ಲು’ ವೆಬ್‌ ಸರಣಿಯನ್ನು ಚಿತ್ರೀಕರಿಸಲಾಗಿದೆ.

ಇದೇ ಅಕ್ಟೋಬರ್‌ 31ರಿಂದ ‘ಮಾರಿಗಲ್ಲು’ ವೆಬ್‌ ಸೀರಿಸ್‌ ಸ್ಟ್ರೀಮಿಂಗ್‌…

ಅಂದಹಾಗೆ, ಇದೇ  2025ರ ಅಕ್ಟೋಬರ್‌ 31ರಿಂದ ‘ಮಾರಿಗಲ್ಲು’ ವೆಬ್‌ ಸರಣಿ ಪ್ರಸಾರವಾಗಲಿದೆ. ಕನ್ನಡದ ‘ZEE 5’ ಓಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ‘ಮಾರಿಗಲ್ಲು’ ವೆಬ್‌ ಸೀರಿಸ್‌ ಸ್ಟ್ರೀಮಿಂಗ್‌ ಆಗಲಿದೆ. ಆರಂಭದಲ್ಲಿಯೇ ತನ್ನ ಟೈಟಲ್‌, ಕಂಟೆಂಟ್‌ ಮೂಲಕ ಒಂದಷ್ಟು ಕುತೂಹಲ ಮೂಡಿಸಲು ಯಶಸ್ವಿಯಾಗಿರುವ, ಸದ್ಯ ಟ್ರೇಲರ್‌ ಬಿಡುಗಡೆಯಾಗಿ ಒಂದಷ್ಟು ನಿರೀಕ್ಷೆ ಮೂಡಿಸಿರುವ ‘ಮಾರಿಗಲ್ಲು’ ವೆಬ್‌ ಸೀರಿಸ್‌ ಓಟಿಟಿ ಪ್ರೇಕ್ಷಕರಿಗೆ ಎಷ್ಟರ ಮಟ್ಟಿಗೆ ಇಷ್ಟವಾಗಲಿದೆ ಎಂಬುದು, ‘ಮಾರಿಗಲ್ಲು’ ವೆಬ್‌ ಸೀರಿಸ್‌ ತೆರೆಗೆ ಬಂದ ಮೇಲಷ್ಟೇ ಗೊತ್ತಾಗಲಿದೆ.

Related Posts

error: Content is protected !!