ಸೆಟ್ಟೇರಿತು ಧೀರೆನ್ ರಾಮಕುಮಾರ್ ಹೊಸಚಿತ್ರ ‘ಪಬ್ಬಾರ್’

‘ಗೀತಾ ಪಿಕ್ಚರ್ಸ್’ ನಿರ್ಮಾಣದ 4ನೇ ಚಿತ್ರಕ್ಕೆ ಮುಹೂರ್ತ
ಧೀರೆನ್ – ಸಂದೀಪ್ ಸುಂಕದ್ ಚಿತ್ರಕ್ಕೆ ‘ಪಬ್ಬಾರ್’ ಟೈಟಲ್ ಫಿಕ್ಸ್
‘ಪಬ್ಬಾರ್’ ಚಿತ್ರೀಕರಣಕ್ಕೆ ಅದ್ಧೂರಿ ಚಾಲನೆ
ವರನಟ ಡಾ. ರಾಜಕುಮಾರ್ ಅವರ ಮೊಮ್ಮಗ, ಹಿರಿಯ ನಟ ರಾಮಕುಮಾರ್ ಅವರ ಪುತ್ರ ಧೀರೆನ್ ರಾಮಕುಮಾರ್ ಅಭಿನಯದ ಹೊಸ ಸಿನೆಮಾವನ್ನು ಶ್ರೀಮತಿ ಗೀತಾ ಶಿವರಾಜಕುಮಾರ್ ಒಡೆತನದ ‘ಗೀತಾ ಪಿಕ್ಚರ್ಸ್’ ಬ್ಯಾನರ್ ನಿರ್ಮಿಸುತ್ತಿರುವ ಸುದ್ದಿ ಕೆಲ ದಿನಗಳ ಹಿಂದಷ್ಟೇ ಹೊರಬಿದ್ದಿತ್ತು. ಇದೀಗ ಈ ಹೊಸ ಸಿನೆಮಾಕ್ಕೆ ಟೈಟಲ್ ಕೂಡ ಫಿಕ್ಸ್ ಆಗಿದ್ದು, ಈ ಸಿನೆಮಾದ ಮುಹೂರ್ತ ಕೂಡ ನೆರವೇರಿದೆ. ಹೌದು, ಧೀರೆನ್ ರಾಮಕುಮಾರ್ ಅಭಿನಯಿಸುತ್ತಿರುವ ಹೊಸ ಸಿನೆಮಾಕ್ಕೆ ‘ಪಬ್ಬಾರ್’ ಎಂದು ಹೆಸರಿಡಲಾಗಿದ್ದು, ಇತ್ತೀಚೆಗೆ ಈ ಸಿನೆಮಾದ ಮುಹೂರ್ತ ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್ ನಲ್ಲಿರುವ ವೀರಾಂಜನೇಯ ಸ್ವಾಮಿ ದೇವಸ್ಥಾನದಲ್ಲಿ ನೆರವೇರಿತು. ‘ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ’ಯ ಮಾಜಿ ಅಧ್ಯಕ್ಷ ಕೆ. ವಿ. ಚಂದ್ರಶೇಖರ್ ‘ಪಬ್ಬಾರ್’ ಚಿತ್ರದ ಮೊದಲ ದೃಶ್ಯಕ್ಕೆ ಕ್ಲ್ಯಾಪ್ ಮಾಡಿದ್ದು, ನಟ ‘ನೆನಪಿರಲಿ’ ಪ್ರೇಮ್ ಕ್ಯಾಮೆರಾ ಸ್ವಿಚ್ ಆನ್ ಮಾಡುವ ಮೂಲಕ ಚಿತ್ರೀಕರಣಕ್ಕೆ ಚಾಲನೆ ನೀಡಿದರು.
ಇನ್ನು ಧೀರೆನ್ ರಾಮಕುಮಾರ್ ನಾಯಕನಾಗಿ ನಟಿಸುತ್ತಿರುವ ಹೊಸಚಿತ್ರಕ್ಕೆ ‘ಪಬ್ಬಾರ್’ ಎಂದು ಹೆಸರಿಡಲಾಗಿದ್ದು, ಈ ಹಿಂದೆ ‘ಶಾಖಾಹಾರಿ’ ಸಿನೆಮಾವನ್ನು ನಿರ್ದೇಶಿಸಿದ್ದ, ಭರವಸೆಯ ಯುವ ನಿರ್ದೇಶಕ ಸಂದೀಪ್ ಸುಂಕದ್, ಈ ಸಿನೆಮಾಕ್ಕೆ ಆಕ್ಷನ್-ಕಟ್ ಹೇಳುತ್ತಿದ್ದಾರೆ. ‘ಪಬ್ಬಾರ್’ ಸಿನೆಮಾದಲ್ಲಿ ನಟ ‘ನೆನಪಿರಲಿ’ ಪ್ರೇಮ್ ಪುತ್ರಿ ಅಮೃತಾ ಪ್ರೇಮ್ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ಉಳಿದಂತೆ ಅಚ್ಯುತಕುಮಾರ್, ಗೋಪಾಲಕೃಷ್ಣ ದೇಶಪಾಂಡೆ, ಡ್ಯಾನಿ ಕುಟ್ಟಪ್ಪ ಹೀಗೆ ಅನೇಕ ಪ್ರಮುಖ ಕಲಾವಿದರ ತಾರಾಗಣ ಈ ಚಿತ್ರದಲ್ಲಿದೆ.
‘ಪಬ್ಬಾರ್’ ಚಿತ್ರದ ಮೇಲೆ ಶಿವಣ್ಣ ನಿರೀಕ್ಷೆ…
‘ಪಬ್ಬಾರ್’ ಸಿನೆಮಾದ ಮುಹೂರ್ತದ ವೇಳೆ ಹಾಜರಿದ್ದ ನಟ ಶಿವರಾಜಕುಮಾರ್, ಈ ಹೊಸಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆಯ ಮಾತುಗಳನ್ನಾಡಿದರು. ‘ಇದೊಂದು ಒಂದೊಳ್ಳೆ ಪ್ರಯತ್ನ. ಬೇರೆ ಭಾಷೆ ಜೊತೆ ಸ್ಪರ್ಧೆ ಮಾಡಬೇಕು ಎಂದರೆ ಈ ಥರದ ಹೊಸ ಸಿನೆಮಾ ಬರಬೇಕು. ಏನ್ ಆಗುತ್ತದೆ. ಏನ್ ಆಗೋಲ್ಲ ಎಂಬುವುದು ಆ ಮೇಲಿನ ಪ್ರಶ್ನೆ. ನಾವು ಪ್ರಯತ್ನವನ್ನೇ ಪಡದೇ ಇದ್ದರೆ ಹೇಗೆ ಅಗುತ್ತದೆ. ನಾವು ಇಂಡಸ್ಟ್ರೀಗೆ ಬಂದು ನಲ್ವತ್ತು ವರ್ಷ ಆಯ್ತು. ಇನ್ನೂ ಎಷ್ಟು ವರ್ಷ ಸಿನೆಮಾ ಮಾಡುತ್ತೇವೋ ಗೊತ್ತಿಲ್ಲ. ಹೊಸ ಪೀಳಿಗೆ ಬರಬೇಕು. ಹೊಸ ರೀತಿ ಸಿನೆಮಾ ಬರಬೇಕು. ಈ ರೀತಿ ವಿಭಿನ್ನ ಸಿನೆಮಾ ಮಾಡಬೇಕು ಎಂಬುದನ್ನು ನಾವೇ ಆಸೆಪಡುತ್ತೇವೆ. ಸಂದೀಪ್ ಬಂದು ಹೇಳಿದ ಕಥೆ ಇಷ್ಟವಾಗಿದೆ. ‘ಪಬ್ಬಾರ್’ ನಾನ್ ವೆಜ್ ಕಥೆ ಎನಿಸುತ್ತದೆ. ಇದು ಒಳ್ಳೆ ಸಿನೆಮಾ ಆಗುವ ಕಥೆಯಾಗುತ್ತದೆ ಎಂಬ ಭರವಸೆ ಇದೆ. ಅಮ್ಮನ ಹುಟ್ಟಿದಹಬ್ಬ ದಿನ ಚಿತ್ರ ಅನೌನ್ಸ್ ಮಾಡಿದ್ದೇವೆ. ಈ ಸಿನೆಮಾ ಖಂಡಿತವಾಗಿಯೂ ಆಡಿಯನ್ಸ್‌ಗೆ ಇಷ್ಟವಾಗಲಿದೆ’ ಎಂದರು.
‘ಪಬ್ಬಾರ್’ ಪುನರ್ಜನ್ಮ ಕೊಡುವಂಥ ಸಿನೆಮಾವಾಗಲಿದೆ…
‘ಪಬ್ಬಾರ್’ ಸಿನೆಮಾದ ಮುಹೂರ್ತದ ವೇಳೆ ಮಾತನಾಡಿದ ನಾಯಕ ನಟ ಧೀರೆನ್ ರಾಮಕುಮಾರ್, ‘ನಿಜವಾಗಿಯೂ ‘ಪಬ್ಬಾರ್’ ಸಿನೆಮಾದಿಂದ ನನಗೆ ನನಗೆ ಪುನರ್ಜನ್ಮ ಬಂದಂತಾಗಿದೆ. ಆಂಟಿ-ಮಾಮನಿಗೆ ಎಷ್ಟೇ ಧನ್ಯವಾದ ಹೇಳಿದರು ಕಡಿಮೆನೇ. ನಾನು ಅವರಿಗೆ ಕಥೆ ಮತ್ತು ಡೈರೆಕ್ಟರ್ ಬಗ್ಗೆ ಹೇಳಿದಾಗ ಒಂದೇ ಮಾತಿಗೆ ಈ ಸಿನೆಮಾ ಮಾಡುತ್ತೇನೆ ಎಂದರು. ಇದೆಲ್ಲಾ ಕನಸು ಎನಿಸುತ್ತಿದೆ. ನನಗ ಆಂಟಿ-ಮಾಮ. ಶಿವ-ಪಾರ್ವತಿ ಇದ್ದಂತೆ. ಅವರ ಪ್ರೊಡಕ್ಷನ್‌ನಡಿ ನಾನು ಕೆಲಸ ಮಾಡುತ್ತಿರರುವುದು ಖುಷಿಕೊಟ್ಟಿದೆ’ ಎಂದು ತಿಳಿಸಿದರು.
‘ಪಬ್ಬಾರ್’ ಅಂದ್ರೇನು..?
ನಿರ್ದೇಶಕ ಸಂದೀಪ್ ಸುಂಕದ್ ಮಾತನಾಡಿ, ‘ಹಂತ ಹಂತವಾಗಿ ಈ ಸಿನೆಮಾದ ಬಗ್ಗೆ ಮಾಹಿತಿ ನೀಡಲಿದ್ದೇವೆ. ‘ಪಬ್ಬಾರ್’ ಅನ್ನೋದು ಉತ್ತರ ಭಾರತದ ಹಿಮಾಚಲ ಪ್ರದೇಶದಲ್ಲಿರುವ ನದಿ ಕಣಿವೆಯೊಂದರ ಹೆಸರು. ಇದೊಂದು ಅಡ್ವೆಂಚರ್ ಕಂ ಕ್ರೈಂ-ಥ್ರಿಲ್ಲರ್ ಶೈಲಿಯ ಸಿನೆಮಾ. ಒಂದು ಕೇಸ್ ಜರ್ನಿ ಇನ್ನೊಂದು ಪರ್ಸನಲ್ ಇದೆ. ಹೀಗೆ ಎರಡು ಜರ್ನಿ ಈ ಸಿನೆಮಾದಲ್ಲಿದೆ. ‘ಪಬ್ಬಾರ್’ ಎಂಬ ಜಾಗ ಈ ಸಿನೆಮಾದ ಮೇನ್ ಕ್ಯಾರೆಕ್ಟರ್. ಅದಕ್ಕಾಗಿ ಅದೇ ಟೈಟಲ್ ಅನ್ನು ಈ ಸಿನೆಮಾಕ್ಕೆ ಇಟ್ಟಿದ್ದೇವೆ’ ಎಂದು ಮಾಹಿತಿ ನೀಡಿದರು.
ಇನ್ನು ಕಳೆದ ಬಾರಿ ‘ಶಾಖಾಹಾರಿ’ ಸಿನೆಮಾದಲ್ಲಿ ಕೆಲಸ ಮಾಡಿದ್ದ ಬಹುತೇಕ ತಾಂತ್ರಿಕ ತಂಡ, ಈ ಸಿನೆಮಾದಲ್ಲೂ ಕೆಲಸ ಮಾಡಲಿದೆ. ‘ಪಬ್ಬಾರ್’ ಸಿನೆಮಾಗೆ ವಿಶ್ವಜಿತ್ ರಾವ್ ಕ್ಯಾಮೆರಾ ವರ್ಕ್, ಮಯೂರ್ ಅಂಬೇಕಲ್ಲು ಸಂಗೀತ ನಿರ್ದೇಶನವಿದೆ. ನಿರ್ದೇಶಕ ಸಂದೀಪ್ ಸುಂದರ್ ಅವರೇ ಈ ಚಿತ್ರದ ಸಂಕಲನದ ಜವಾಬ್ದಾರಿ ಕೂಡ ಹೊತ್ತುಕೊಂಡಿದ್ದಾರೆ. ಚಿಕ್ಕಮಗಳೂರು, ಮೈಸೂರು, ಮಡಿಕೇರಿ ಹಾಗೂ ಹಿಮಾಚಲ ಪ್ರದೇಶದಲ್ಲಿ ‘ಪಬ್ಬಾರ್’ ಚಿತ್ರದ ಚಿತ್ರೀಕರಣ ನಡೆಯಲಿದೆ. ‘ಪಬ್ಬಾರ್’ ಚಿತ್ರದ ಮುಹೂರ್ತ ಸಮಾರಂಭದಲ್ಲಿ ನಿರ್ಮಾಪಕಿ ಗೀತಾ ಶಿವರಾಜಕುಮಾರ್, ನಟರಾದ ರಾಮಕುಮಾರ್, ಪೂರ್ಣಿಮಾ ರಾಮಕುಮಾರ್, ನಟಿ ಧನ್ಯಾ ರಾಮಕುಮಾರ್, ನಿವೇದಿತಾ ಶಿವರಾಜ್ ಕುಮಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.