ನವ ‘ವೆಂಕಟೇಶ’ನ ನವಿರಾದ ಪ್ರೇಮಕಥೆ

ಹೊಸ ಪ್ರತಿಭೆಗಳ ‘ನಮೋ ವೆಂಕಟೇಶ’ ಚಿತ್ರ
ರೊಮ್ಯಾಂಟಿಕ್-ಕಾಮಿಡಿ ಶೈಲಿಯಲ್ಲಿ ಬರುತ್ತಿದೆ ‘ನಮೋ ವೆಂಕಟೇಶ’
ತೆರೆಗೆ ಬರಲು ತೆರೆಮರೆಯಲ್ಲಿ ಚಿತ್ರತಂಡದ ತಯಾರಿ
ಕನ್ನಡ ಚಿತ್ರರಂಗದಲ್ಲಿ ‘ಗೋವಿಂದಾಯ ನಮಃ’, ‘ವೆಂಕಟೇಶಾಯ ನಮಃ’, ‘ಶ್ರೀಸತ್ಯ ನಾರಾಯಣ’, ‘ಮುಕುಂದ ಮುರಾರಿ’ ಹೀಗೆ ದೇವರ ಹೆಸರುಗಳನ್ನು ಇಟ್ಟುಕೊಂಡು ಒಂದಷ್ಟು ಸಿನೆಮಾಗಳು ತೆರೆಗೆ ಬಂದಿದ್ದು ನಿಮಗೆ ಗೊತ್ತಿರಬಹುದು. ಈಗ ಅಂಥದ್ದೇ ದೇವರ ಹೆಸರನ್ನು ಇಟ್ಟುಕೊಂಡು ‘ನಮೋ ವೆಂಕಟೇಶ’ ಎಂಬ ಸಿನೆಮಾ ತೆರೆಗೆ ಬರಲು ತಯಾರಾಗುತ್ತಿದೆ. ಅಂದಹಾಗೆ, ‘ನಮೋ ವೆಂಕಟೇಶ’ ಎಂಬ ಹೆಸರಿನಲ್ಲಿ ಈ ಸಿನೆಮಾ ತೆರೆಗೆ ಬರುತ್ತಿದ್ದರೂ, ಇದು ಯಾವುದೇ ದೇವರಿಗೆ ಸಂಬಂಧಿಸಿದ ‘ದೇವರ ಸಿನೆಮಾ’ ಅಲ್ಲವೇ ಅಲ್ಲ! ಅರ್ಥಾತ್, ಇದು ಯಾವುದೋ ಪೌರಾಣಿಕ ಅಥವಾ ಭಕ್ತಿ ಪ್ರಧಾನ ಸಿನೆಮಾವಲ್ಲ. ಚಿತ್ರದ ಕಥೆಗೆ ಹೊಂದಾಣಿಕೆಯಾಗುತ್ತದೆ ಎಂಬ ಕಾರಣಕ್ಕೆ ಮಾತ್ರ ಚಿತ್ರತಂಡ ತಮ್ಮ ಈ ಚಿತ್ರಕ್ಕೆ ‘ನಮೋ ವೆಂಕಟೇಶ’ ಎಂದು ಹೆಸರಿಟ್ಟುಕೊಂಡಿದೆ.
ನವ ಪ್ರತಿಭೆಗಳ ನೂತನ ಚಿತ್ರ
‘ನಮೋ ವೆಂಕಟೇಶ’ ಬಹುತೇಕ ಹೊಸ ಪ್ರತಿಭೆಗಳೇ ಸೇರಿ ನಿರ್ಮಿಸುತ್ತಿರುವ ಹೊಸಚಿತ್ರ. ಚಿತ್ರರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ ಬೆಳೆಸಿಕೊಂಡಿರುವ, ಮಾಹಿತಿ ತಂತ್ರಜ್ಞಾನ (ಐ. ಟಿ) ಕ್ಷೇತ್ರದ ಹಿನ್ನೆಲೆಯ, ಮಂಡ್ಯ ಮೂಲದ ಶ್ರೀನಿವಾಸ ಗೆಜ್ಜಲಗೆರೆ (Srinivasa Gejjalagere) ‘ನಮೋ ವೆಂಕಟೇಶ’ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಈಗಾಗಲೇ ಕಿರುಚಿತ್ರವೊಂದನ್ನು ನಿರ್ಮಿಸಿರುವ, ಜೊತೆಗೆ ಚಿತ್ರ ಸಾಹಿತ್ಯದಲ್ಲಿಯೂ ತೊಡಗಿಸಿಕೊಂಡಿರುವ ಶ್ರೀನಿವಾಸ ಗೆಜ್ಜಲಗೆರೆ ಅವರಿಗೆ ಪೂರ್ಣ ಪ್ರಮಾಣದ ನಿರ್ಮಾಪಕರಾಗಿ ಇದು ಮೊದಲ ಸಿನೆಮಾ. ಕನ್ನಡ ಚಿತ್ರರಂಗದಲ್ಲಿ ಸದಭಿರುಚಿ ಚಿತ್ರಗಳನ್ನು ನಿರ್ಮಿಸಬೇಕೆಂಬ ಕನಸನ್ನು ಹೊತ್ತುಕೊಂಡು ಚಿತ್ರರಂಗಕ್ಕೆ ಅಡಿಯಿಡುತ್ತಿರುವ ಶ್ರೀನಿವಾಸ ಗೆಜ್ಜಲಗೆರೆ, ಸದ್ಯ ‘ಆರುಶ್ ಪಿಕ್ಚರ್ಸ್’ (AARUSH PICTURES) ಎಂಬ ಹೆಸರಿನಲ್ಲಿ ತಮ್ಮದೇ ಆದ ಚಿತ್ರ ನಿರ್ಮಾಣ ಸಂಸ್ಥೆಯನ್ನು ಆರಂಭಿಸಿದ್ದಾರೆ. ಈ ಸಂಸ್ಥೆಯ ಅಡಿಯಲ್ಲಿ ‘ನಮೋ ವೆಂಕಟೇಶ’ ಚೊಚ್ಚಲ ಚಿತ್ರವಾಗಿ ನಿರ್ಮಾಣವಾಗಿ ತೆರೆಗೆ ಬರುತ್ತಿದೆ.
ವಿಜಯ್ ಭಾರದ್ವಾಜ್ ಸಾರಥ್ಯಕ್ಕೆ ಅನ್ವಿತಾ ಜೋಡಿ…
ಇನ್ನು ‘ನಮೋ ವೆಂಕಟೇಶ’ ಚಿತ್ರಕ್ಕೆ ಮೈಸೂರು ಮೂಲದ ಯುವ ಪ್ರತಿಭೆ ವಿಜಯ್ ಭಾರದ್ವಾಜ್ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಕನ್ನಡ ಕಿರುತೆರೆ ಮಾಂತ್ರಿಕ ಟಿ. ಎನ್. ಸೀತಾರಾಮ್ ಅವರ ಗರಡಿಯಲ್ಲಿ ಪಳಗಿ, ನಿರ್ದೇಶನದ ಪಟ್ಟುಗಳನ್ನು ಕರಗತ ಮಾಡಿಕೊಂಡಿರುವ ನವ ಪ್ರತಿಭೆ ವಿಜಯ್ ಭಾರದ್ವಾಜ್ ಮೊದಲ ಬಾರಿಗೆ ‘ನಮೋ ವೆಂಕಟೇಶ’ ಚಿತ್ರದ ಮೂಲಕ ಪೂರ್ಣ ಪ್ರಮಾಣದ ಸ್ವತಂತ್ರ ನಿರ್ದೇಶಕರಾಗಿ ಚಿತ್ರರಂಗಕ್ಕೆ ಪರಿಚಯವಾಗುತ್ತಿದ್ದಾರೆ. ಜೊತೆಗೆ ‘ನಮೋ ವೆಂಕಟೇಶ’ ಚಿತ್ರದಲ್ಲಿ ತೆರೆಮೇಲೆ ನಾಯಕ ನಟನಾಗಿಯೂ ಕಾಣಿಸಿಕೊಂಡಿದ್ದಾರೆ.
‘ನಮೋ ವೆಂಕಟೇಶ’ ಚಿತ್ರದಲ್ಲಿ ಅನ್ವಿತಾ ಸಾಗರ್ (ಪಾರ್ವತಿ) ನಾಯಕಿಯಾಗಿ ಅಭಿನಯಿಸಿದ್ದಾರೆ. ಈಗಾಗಲೇ ಕಿರುತೆರೆಯಲ್ಲಿ ‘ಅಮೃತಧಾರೆ’ ಹಾಗು ‘ಅಣ್ಣತಂಗಿ’ ಧಾರಾವಾಹಿಗಳಲ್ಲಿ ಮುಖ್ಯಭೂಮಿಕೆಯಲ್ಲಿ ಅಭಿನಯಿಸಿರುವ, ‘ಗಟ್ಟಿಮೇಳ’ ಧಾರಾವಾಹಿಯ ಆಧ್ಯ ಪಾತ್ರದ ಮೂಲಕ ಜನಪ್ರಿಯವಾಗಿರುವ ಅನ್ವಿತಾ ಸಾಗರ್ ‘ನಮೋ ವೆಂಕಟೇಶ’ ಚಿತ್ರದಲ್ಲಿ ನಾಯಕಿಯ ಪಾತ್ರದಲ್ಲಿ ಸಿನಿಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ಉಳಿದಂತೆ ಶ್ಯಾಮ್ ಸುಂದರ್, ನಾಗರಾಜ ರಾವ್, ರವಿಕುಮಾರ್, ದೀಪಾ, ಮಂಜುನಾಥ್ ಹೆಗ್ಡೆ, ಸುಧಾ ಪ್ರಸನ್ನ ಮೊದಲಾದ ಕಲಾವಿದರು ‘ನಮೋ ವೆಂಕಟೇಶ’ ಸಿನೆಮಾದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
ವಿಶೇಷತೆಗಳನ್ನು ಹೊತ್ತ ‘ವೆಂಕಟೇಶ’
‘ನಮೋ ವೆಂಕಟೇಶ’ ಚಿತ್ರದ ವಿಶೇಷತೆಗಳ ಬಗ್ಗೆ ಮಾತನಾಡುವ ಚಿತ್ರತಂಡ, ‘ಇದೊಂದು ಕಂಪ್ಲೀಟ್ ರೊಮ್ಯಾಂಟಿಕ್ ಕಾಮಿಡಿ ಕಥಾಹಂದರದ ಸಿನೆಮಾ. ಕನ್ನಡದ ಇಂದಿನ ಪ್ರೇಕ್ಷಕರ ಅಭಿರುಚಿಕೆ ತಕ್ಕಂತೆ ನವಿರಾದ ಹಾಸ್ಯದ ಮೂಲಕ ಕಥೆಯೊಂದನ್ನು ‘ನಮೋ ವೆಂಕಟೇಶ’ ಚಿತ್ರದಲ್ಲಿ ಹೇಳಿದ್ದೇವೆ’ ಎನ್ನುತ್ತದೆ. ‘ಎರಡು ಬೇರೆ, ಬೇರೆ ಪೀಳಿಗೆಗೆ ಸೇರಿದ ಇಬ್ಬರು ವ್ಯಕ್ತಿಗಳ ಸುತ್ತ ಸುತ್ತವ ಕಥೆ. ಒಂದು ಪೀಳಿಗೆಯ ವ್ಯಕ್ತಿಗಳ ಭಿನ್ನ-ವಿಭಿನ್ನ ಆಲೋಚನೆಗಳಿಂದ ಮತ್ತೊಂದು ಪೀಳಿಗೆಗೆ ಸೇರಿದ ವ್ಯಕ್ತಿಗಳ ಜೀವನದ ಮೇಲೆ ಬೀರುವ ಸೂಕ್ಷ್ಮ ಪ್ರಭಾವಗಳು ಅದರಿಂದ ಅವರವವರ ಬದುಕು ಪಡೆದುಕೊಳ್ಳುವ ಕೈಮೀರಿದ ತಿರುವುಗಳು, ಆ ತಿರುವುಗಳಿಂದ ಕೆಲವೊಮ್ಮೆ ಸೃಷ್ಠಿಯಾಗುವ ಹೊಸ ದಾರಿಗಳು, ಆ ದಾರಿಗಳು ಆಗಾಗ್ಗೆ ಮುಚ್ಚಿಹೋದಂತಹ ಅನುಭವಗಳು, ಈ ಎಲ್ಲ ಏರಿಳಿತಗಳ ದಾಟಿ ಎಲ್ಲವು , ಎಲ್ಲರು ಬಂದು ಸೇರುವ ಗಮ್ಯಸ್ಥಾನ ಯಾವುದು…? ಎಂಬುದನ್ನು ಹಾಸ್ಯಭರಿತವಾಗಿ ಹೇಳಲಾಗಿದೆ. ಒಂದು ಗಟ್ಟಿ ಕಥೆಯನ್ನು ಮನರಂಜನಾತ್ಮಕವಾಗಿ ಹೇಳಿದ್ದೇವೆ’ ಎಂಬ ವಿವರಣೆ ನೀಡುತ್ತದೆ.
ಪೋಸ್ಟ್ ಪ್ರೊಡಕ್ಷನ್‌ನಲ್ಲಿ ನಿರತ ‘ನಮೋ ವೆಂಕಟೇಶ’
ಈಗಾಗಲೇ ‘ನಮೋ ವೆಂಕಟೇಶ’ ಸಿನೆಮಾದ ಬಹುತೇಕ ಕೆಲಸಗಳು ಈಗಾಗಲೇ ಪೂರ್ಣಗೊಂಡಿದ್ದು, ಸದ್ಯ ಚಿತ್ರತಂಡ ‘ನಮೋ ವೆಂಕಟೇಶ’ನ ಅಂತಿಮ ಹಂತದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ನಿರತವಾಗಿದೆ. ‘ನಮೋ ವೆಂಕಟೇಶ’ ಚಿತ್ರದಲ್ಲಿ ಒಟ್ಟು ಐದು ಹಾಡುಗಳಿದ್ದು, ಶರತ್ ಆರೋಹಣ ಸಂಗೀತ ಸಂಯೋಜಿಸಿದ್ದಾರೆ. ಹಿರಿಯ ಸಂಗೀತ ನಿರ್ದೇಶಕ ವಿ. ಮನೋಹರ್ ‘ನಮೋ ವೆಂಕಟೇಶ’ ಚಿತ್ರದ ಶೀರ್ಷಿಕೆ ವಿನ್ಯಾಸದ ಜೊತೆಗೆ, ಚಿತ್ರದ ಶೀರ್ಷಿಕೆ ಹಾಡನ್ನು ಬರೆದಿದ್ದಾರೆ. ಇನ್ನುಳಿದ ಮೂರು ಹಾಡುಗಳಿಗೆ ನಿರ್ಮಾಪಕ ಶ್ರೀನಿವಾಸ ಗೆಜ್ಜಲಗೆರೆಯವರು ಸಾಹಿತ್ಯ ರಚಿಸಿದ್ದು, ಮತ್ತೊಂದು ಗೀತೆಗೆ ಗಣೇಶ್ ಪ್ರಸಾದ್ ಸಾಲುಗಳನ್ನು ಬರೆದು ಹಾಡಿರುವುದು ವಿಶೇಷ. ನಿರಂಜನ್ ದಾಸ್ ಮತ್ತು ವಿನೋದ್ ಲೋಕಣ್ಣನವರ್ ಛಾಯಾಗ್ರಹಣವಿದ್ದು, ಸಮೀರ್ ನಗರದ್ ಸಂಕಲನ ಕಾರ್ಯ ನಿರ್ವಹಿಸಿದ್ದಾರೆ. ಮೈಸೂರು, ಚಿಕ್ಕಮಗಳೂರಿನ ಬಾಳೂರು, ಕೊಟ್ಟಿಗೆಹಾರ, ದೇವರಮನೆ, ಬಣಕಲ್ ಮುಂತಾದ ಸುಂದರ ತಾಣಗಳಲ್ಲಿ ‘ನಮೋ ವೆಂಕಟೇಶ’ ಚಿತ್ರದ ಬಹುತೇಕ ಚಿತ್ರೀಕರಣ ನಡೆಸಲಾಗಿದೆ. ಶೀಘ್ರದಲ್ಲಿಯೇ ‘ನಮೋ ವೆಂಕಟೇಶ’ ಚಿತ್ರದ ಟ್ರೇಲರ್ ಬಿಡುಗಡೆ ಮಾಡಲು ಯೋಚಿಸಿರುವ ಚಿತ್ರತಂಡ, ಇದೇ ಜೂನ್ ವೇಳೆಗೆ ತೆರೆಮೇಲೆ ‘ನಮೋ ವೆಂಕಟೇಶ’ ನ ದರ್ಶವನ್ನು ಮಾಡಿಸಲು ತಯಾರಿ ಮಾಡಿಕೊಂಡಿದೆ.