‘ಮಾರ್ಕ್’ ಸ್ಪೆಷಲ್ ನಂಬರ್ ‘ಮಸ್ತ್ ಮಲೈಕಾ…’ ರಿಲೀಸ್…
‘ಮಾರ್ಕ್’ ಸಿನೆಮಾದ ‘ಮಸ್ತ್ ಮಲೈಕಾ…’ ಹಾಡು ಬಿಡುಗಡೆ
‘ಮಾರ್ಕ್’ ಚಿತ್ರದ ಸ್ಪೆಷಲ್ ಡ್ಯಾನ್ಸ್ ನಂಬರಿಗೆ ಕಿಚ್ಚನ ಜೊತೆ ನಿಶ್ವಿಕಾ ಭರ್ಜರಿ ಸ್ಟೆಪ್ಸ್…
ಸುದೀಪ್ ಅಭಿಮಾನಿಗಳನ್ನು ಹೆಜ್ಜೆ ಹಾಕುವಂತೆ ಮಾಡಿದ ‘ಮಸ್ತ್ ಮಲೈಕಾ…’
ನಟ ಕಿಚ್ಚ ಸುದೀಪ್ ನಟನೆಯ ಬಹು ನಿರೀಕ್ಷಿತ ‘ಮಾರ್ಕ್’ ಸಿನೆಮಾ ಇದೇ 2025ರ ಡಿಸೆಂಬರ್ ತಿಂಗಳ 25ರಂದು ಅದ್ಧೂರಿಯಾಗಿ ತೆರೆಗೆ ಬರುತ್ತಿದೆ. ಸದ್ಯ ‘ಮಾರ್ಕ್’ ಸಿನೆಮಾದ ಪ್ರಚಾರ ಕಾರ್ಯಗಳು ಭರದಿಂದ ನಡೆಯುತ್ತಿದ್ದು, ಇತ್ತೀಚೆಗಷ್ಟೇ ‘ಮಾರ್ಕ್’ ಸಿನೆಮಾದ ಟ್ರೇಲರ್ ಕೂಡ ಗ್ರ್ಯಾಂಡ್ ಆಗಿ ಬಿಡುಗಡೆಯಾಗಿತ್ತು.
‘ಮಾರ್ಕ್’ ಸಿನೆಮಾದ ಟ್ರೇಲರಿಗೆ ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿರುವಂತೆಯೇ, ಇದೀಗ ‘ಮಾರ್ಕ್’ ಸಿನೆಮಾದಲ್ಲಿ ಇರುವಂಥ ಡ್ಯಾನ್ಸ್ ನಂಬರ್ ಸಾಂಗ್ ಒಂದನ್ನು ಚಿತ್ರತಂಡ ಬಿಡುಗಡೆ ಮಾಡಿದೆ.
‘ಮಾರ್ಕ್’ ಸಿನೆಮಾದ ‘ಮಸ್ತ್ ಮಲೈಕಾ…’ ಹಾಡು ಹೊರಬಂತು
‘ಮಸ್ತ್ ಮಲೈಕಾ…’ ಎಂಬ ಸಾಲಿನಿಂದ ಶುರುವಾಗುವ ‘ಮಾರ್ಕ್’ ಸಿನೆಮಾದ ಸ್ಪೆಷಲ್ ನಂಬರ್ ಹಾಡಿಗೆ ‘ರಂಗಿತರಂಗ’ ಸಿನೆಮಾ ಖ್ಯಾತಿಯ ನಿರ್ದೇಶಕ ಅನೂಪ್ ಭಂಡಾರಿ ಸಾಹಿತ್ಯ ಬರೆದಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ಸಂಯೋಜನೆಯಲ್ಲಿ ಮೂಡಿಬಂದಿರುವ ಈ ಗೀತೆಗೆ ಸುದೀಪ್ ಮಗಳು ಸಾನ್ವಿ ಸುದೀಪ್ ಮತ್ತು ಗಾಯಕ ನಕಾಶ್ ಅಜೀಜ್ ಧ್ವನಿಯಾಗಿದ್ದಾರೆ. ಇನ್ನು ಔಟ್ ಅಂಡ್ ಔಟ್ ಈ ಡ್ಯಾನ್ಸ್ ನಂಬರ್ ಸಾಂಗಿನಲ್ಲಿ ನಟಿ ನಿಶ್ವಿಕಾ ನಾಯ್ಡು ‘ಮಸ್ತ್ ಮಲೈಕಾ…’ ಆಗಿ ನಾಯಕ ನಟ ಸುದೀಪ್ ಜೊತೆ ಬೋಲ್ಡ್ ಆಗಿ ‘ಮಸ್ತ್’ ಹೆಜ್ಜೆ ಹಾಕಿದ್ದಾರೆ. ತುಂಬ ಸ್ಟೈಲಿಶ್ ಆಗಿ ಮೂಡಿಬಂದಿರುವ ಈ ಹಾಡು ಸುದೀಪ್ ಅಭಿಮಾನಿಗಳಿಗೂ ಥಿಯೇಟರಿನಲ್ಲಿ ‘ಮಸ್ತ್’ ಹೆಜ್ಜೆ ಹಾಕುವಂತೆ ಮಾಡುವಂತಿದೆ.
‘ಮಾರ್ಕ್’ ಸಿನೆಮಾದ ‘ಮಸ್ತ್ ಮಲೈಕಾ…’ ಹಾಡಿನ ಲಿರಿಕಲ್ ವಿಡಿಯೋ ಹಾಡನ್ನು ವೀಕ್ಷಿಸಲು ಈ ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಬಹುದು…
‘ಮಾರ್ಕ್’ ರಿಲೀಸ್ಗೆ ಕೌಂಟ್ ಡೌನ್…
‘ಮಾರ್ಕ್’ ಚಿತ್ರವನ್ನ ವಿಜಯ್ ಕಾರ್ತಿಕೇಯ ನಿರ್ದೇಶನ ಮಾಡಿದ್ದಾರೆ. ‘ಮ್ಯಾಕ್ಸ್’ ಚಿತ್ರದ ಬಳಿಕ ವಿಜಯ್ ಕಾರ್ತಿಕೇಯ ಮತ್ತು ಸುದೀಪ್ ಕಾಂಬಿನೇಶನ್‌ನಲ್ಲಿ ಮೂಡಿಬರುತ್ತಿರುವ ಎರಡನೇ ಸಿನೆಮಾ ಇದಾಗಿದೆ. ‘ಮಾರ್ಕ್’ ಚಿತ್ರದಲ್ಲಿ ದೀಪ್ಷಿಕಾ, ನವೀನ್ ಚಂದ್ರ, ಗುರು ಸೋಮಸುಂರಂ, ರೋಶಿನಿ ಪ್ರಕಾಶ್, ಗೋಪಾಲಕೃಷ್ಣ ದೇಶಪಾಂಡೆ, ಮಹಾಂತೇಶ್ ಹಿರೇಮಠ್, ಡ್ರ್ಯಾಗನ್ ಮಂಜು, ಆರ್ಚನಾ ಕೊಟ್ಟಿಗೆ, ಯೋಗಿ ಬಾಬು, ಶೈನ್ ಟಾಮ್ ಚಾಕೋ ಮುಂತಾದ ಅನೇಕ ಕಲಾವಿದರು ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
ತಮಿಳಿನ ಪ್ರಸಿದ್ದ ಚಿತ್ರ ನಿರ್ಮಾಣ ಸಂಸ್ಥೆ ‘ಸತ್ಯ ಜ್ಯೋತಿ ಫಿಲ್ಮ್’ ಹಾಗೂ ‘ಕಿಚ್ಚ ಕ್ರಿಯೇಷನ್’ ಬ್ಯಾನರ್ ನಡಿ ‘ಮಾರ್ಕ್’ ಸಿನೆಮಾ ತಯಾರಾಗಿದೆ.
ಸದ್ಯ ‘ಮಾರ್ಕ್’ ಸಿನೆಮಾದ ‘ಮಸ್ತ್ ಮಲೈಕಾ…’ ಹಾಡು ‘ಸರೆಗಮ’ ಮ್ಯೂಸಿಕ್ ಯು-ಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆಯಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ಈ ಹಾಡು ನಿಧಾನವಾಗಿ ಸುದೀಪ್ ಅಭಿಮಾನಿಗಳ ಗಮನ ಸೆಳೆಯುತ್ತಿದೆ. ಸದ್ಯ ‘ಮಾರ್ಕ್’ ಸಿನೆಮಾದ ಟ್ರೇಲರ್ ಮತ್ತು ಹಾಡುಗಳು ಸ್ಯಾಂಡಲ್‌ವುಡ್ ಅಂಗಳದಲ್ಲಿ ಒಂದಷ್ಟು ಸದ್ದು ಮಾಡುತ್ತಿದ್ದು, ‘ಮಾರ್ಕ್’ ತೆರೆಮೇಲೆ ಎಷ್ಟರ ಮಟ್ಟಿಗೆ ಪ್ರೇಕ್ಷಕರನ್ನು ಮನರಂಜಿಸಲಿದೆ ಎಂಬುದು, ಇದೇ ವರ್ಷಾಂತ್ಯದ ವೇಳೆಗೆ ಗೊತ್ತಾಗಲಿದೆ.















