Street Beat

ಲವ್‌ ಸ್ಟೋರಿಯ ‘ಜೊತೆಯಾಗಿ’ ನೋಡುಗರಿಗೆ ‘ಹಿತವಾಗಿ’…

ಸೆಪ್ಟೆಂಬರ್ 19ಕ್ಕೆ ‘ಜೊತೆಯಾಗಿ ಹಿತವಾಗಿ’ ತೆರೆಗೆ

ರಿಲೀಸ್‌ಗೂ ಮೊದಲು ಪ್ರೀಮಿಯರ್‌, ನವಿರಾದ ಪ್ರೇಮಕಥೆಗೆ ಪ್ರೇಕ್ಷಕರು ಫಿದಾ

‘ಜೊತೆಯಾಗಿ.. ಹಿತವಾಗಿ…’ ಗೀತೆಯೇ ಸಿನೆಮಾದ ಟೈಟಲ್‌! 

‘ಜೊತೆಯಾಗಿ.. ಹಿತವಾಗಿ…’ ಎಂಬ ಸಾಲುಗಳಿಂದ ಶುರುವಾಗುವ ಕನ್ನಡದ ಜನಪ್ರಿಯ ಚಿತ್ರಗೀತೆಯನ್ನು ಬಹುತೇಕ ಎಲ್ಲರೂ ಕೇಳಿರುತ್ತೀರಿ. ಕನ್ನಡ ಚಿತ್ರರಂಗದ ಹ್ಯಾಟ್ರಿಕ್‌ ಹೀರೋ ಶಿವರಾಜಕುಮಾರ್‌, ಮೊದಲ ಬಾರಿಗೆ ನಾಯಕ ನಟನಾಗಿ ಅಭಿನಯಿಸಿದ ‘ಆನಂದ್‌’ ಚಿತ್ರದ ಗೀತೆಯದು. ಆಗಿನ ಕಾಲದಿಂದ ಹಿಡಿದು, ಈಗಿನ ಕಾಲಕ್ಕೂ ಆಗಾಗ್ಗೆ ಚಿತ್ರರಸಿಕರ ಬಾಯಲ್ಲಿ ಗುನುಗುಡುತ್ತಿರುವ, ಆಗಾಗ್ಗೆ ಕೇಳಬೇಕೆನಿಸುವಂತಿರುವ ಈ ಗೀತೆಯ ಮೊದಲ ಸಾಲು ಇದೀಗ ಸಿನೆಮಾವೊಂದರ ಟೈಟಲ್‌ ಆಗಿ ತೆರೆಗೆ ಬರಲು ತಯಾರಾಗಿದೆ. ಹೌದು, ‘ಜೊತೆಯಾಗಿ.. ಹಿತವಾಗಿ…’ ಎಂಬ ಈ ಸಾಲು ಈಗ ಹೊಸಬರ ಸಿನೆಮಾದ ಟೈಟಲ್‌ ಆಗಿದೆ. ಈಗಾಗಲೇ ಸದ್ದಿಲ್ಲದೆ ‘ಜೊತೆಯಾಗಿ.. ಹಿತವಾಗಿ…’ ಚಿತ್ರದ ಕೆಲಸಗಳನ್ನು ಪೂರ್ಣಗೊಳಿಸಿರುವ ಚಿತ್ರತಂಡ, ಇದೇ 2025ರ ಸೆಪ್ಟೆಂಬರ್‌ 19ಕ್ಕೆ ಈ ಸಿನೆಮಾವನ್ನು ಪ್ರೇಕ್ಷಕರ ಮುಂದೆ ತರುವ ಯೋಜನೆಯಲ್ಲಿದೆ.

ಈ ಚಿತ್ರ ಹೊಸಬರ ಲವ್‌ ಸಬ್ಜೆಕ್ಟ್‌… 

ಅಂದಹಾಗೆ, ಚಿತ್ರತಂಡಕ್ಕೆ ಈ ‘ಜೊತೆಯಾಗಿ.. ಹಿತವಾಗಿ…’ ಹಾಡಿನ ಸಾಲನ್ನೇ ಸಿನೆಮಾದ ಟೈಟಲ್ ಆಗಿ ಇಡುವುದಕ್ಕೂ ಒಂದು ಬಲವಾದ ಕಾರಣವಿದೆಯಂತೆ! ಅದೇನೆಂದರೆ, ಈ ಸಿನೆಮಾದ ನಾಯಕ ಅಗಸ್ತ್ಯ ದೊಡ್ಮನೆಯ ಅಪ್ಪಟ ಅಭಿಮಾನಿ. ಈ ಸಿನೆಮಾ ಒಂದು ಲವ್ ಸಬ್ಜೆಕ್ಟ್ ಇರುವಂತ ಸಿನೆಮಾ. ಹೀಗಾಗಿಯೇ ಆ ಟೈಟಲ್ ಈ ಸಿನೆಮಾ ಸೂಕ್ತ ಎಂಬ ಕಾರಣಕ್ಕೆ ಇಡಲಾಗಿದೆ ಎಂಬುದು ಚಿತ್ರತಂಡದ ವಿವರಣೆ. ಇನ್ನು ಆರಂಭದಲ್ಲಿ ಈ ಸಿನೆಮಾದ ಕಥೆ ಮಾಡಿಕೊಂಡಾಗ ‘ ಒಂದೇ ಒಂದು ಸಲ’ ಎಂಬ ಟೈಟಲ್ ಇಡಲಾಗಿತ್ತು. ಆನಂತರ ಕಥೆಗೆ ತಕ್ಕಂತೆ ಟೈಟಲ್ ಬದಲಾವಣೆ ಮಾಡಲಾಯಿತು. ಮನೆಯಲ್ಲಿ ತುಂಬಾ ಫ್ರೀಡಂ ಕೊಟ್ಟರೆ ಏನಾಗುತ್ತೆ, ತೀರಾ ರಿಸ್ಟ್ರಿಕ್ಷನ್ ಇದ್ದಾಗ ಏನಾಗಬಹುದು ಎಂಬುದನ್ನ ತೀರಾ ಅದ್ಭುತವಾಗಿ ಮನಮುಟ್ಟುವಂತೆ ಹೆಣೆಯಲಾಗಿದೆ ಎಂಬುದು ಚಿತ್ರತಂಡದ ವಿವರಣೆ.

ನವ ಪ್ರತಿಭೆಗಳ ನವೀನ ಪ್ರಯತ್ನ!

ಈ ಮೊದಲು ‘ಜೊತೆಯಾಗಿ.. ಹಿತವಾಗಿ…’ ಕಥೆಯನ್ನು ಒಂದು ಶಾರ್ಟ್ ಮೂವಿ ಮಾಡಬೇಕು ಎಂದುಕೊಂಡು ಶುರು ಮಾಡಿದ್ದ ಹೊಸಬರ ತಂಡ, ನಂತರ ಈ ಕಥೆಯನ್ನು ಸಿನೆಮಾವನ್ನೇ ಮಾಡಿಬಿಟ್ಟದೆ. ಸಿನೆಮಾ ಚೆನ್ನಾಗಿ ಬರಬೇಕು, ಜನಕ್ಕೆ ತೋರಿಸುವಾಗ ಬಹಳ ಮುಖ್ಯವಾಗುತ್ತೆ ಎಂಬ ವಿಚಾರವನ್ನ ತಲೆಯಲ್ಲಿಟ್ಟುಕೊಂಡ ತಂಡ, ಎಷ್ಟೋ ಸೀನ್ ಗಳನ್ನ ಆನಂತರ ರೀ ಶೂಟ್ ಮಾಡಿದೆ. ಈ ಚಿತ್ರದ ಬಹುತೇಕ ಚಿತ್ರೀಕರಣ ಬೆಳಗಾವಿಯಲ್ಲಿ ನಡೆಸಲಾಗಿದ್ದು, ಸುಂದರ ಮಲೆನಾಡಿನ ರೀತಿಯಲ್ಲಿ ಚಿತ್ರವನ್ನು ತೆರೆಮೇಲೆ ತೋರಿಸಲಾಗಿದೆ ಎಂಬುದು ಚಿತ್ರತಂಡದ ಮಾತು.

ಬೆಳಗಾವಿ ಮೂಲದ ಅಗಸ್ತ್ಯನ ಕನಸು…

‘ಜೊತೆಯಾಗಿ.. ಹಿತವಾಗಿ…’ ಬೆಳಗಾವಿ ಮೂಲದ ಅಗಸ್ತ್ಯ ನಾಯಕ ನಟನಾಗಿ ಕಾಣಿಸಿಕೊಂಡಿದ್ದಾರೆ. ಬಾಲ್ಯದಿಂದಲೇ ಸಿನೆಮಾದಲ್ಲಿ ನಟನಾಗಬೇಕು ಎಂಬ ಕನಸು ಕಂಡಿದ್ದ ಅಗಸ್ತ್ಯ ಈ ಸಿನೆಮಾದ ಮೂಲಕ ತಮ್ಮ ಕನಸು ನನಸು ಮಾಡಿಕೊಂಡಿದ್ದಾರೆ. ಮನೆಯಲ್ಲಿ ತಮ್ಮ ಸಿನೆಮಾ ಕನಸಿಗೆ ಬೆಂಬಲವಿಲ್ಲದಿದ್ದರೂ, ಒಂದೇ ಒಂದು ಅವಕಾಶಕ್ಕೋಸ್ಕರ ಅಗಸ್ತ್ಯ ಸಿನೆಮಾದ ಟೆಕ್ನಿಕಲ್ ವಿಭಾಗದಲ್ಲಿ ಕಲಿಕೆ ಕಂಡುಕೊಂಡರು. ಅದೆಲ್ಲ ಶ್ರಮದ ಫಲವಾಗಿ ಈಗ ‘ಜೊತೆಯಾಗಿ.. ಹಿತವಾಗಿ…’ ಸಿನೆಮಾದ ಹೀರೋ ಆಗಿ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ.

‘ಜೊತೆಯಾಗಿ.. ಹಿತವಾಗಿ…’ ಸಿನೆಮಾದಲ್ಲಿ ಅಗಸ್ತ್ಯ ಹಾಗೂ ಸುವಾರ್ತಾ ಜೋಡಿಯಾಗಿ ಅಭಿನಯಿಸಿದ್ದಾರೆ. ‘ಶ್ರೀ ರತ್ನ ಫಿಲಂ ಕಂಪನಿ’ ನಿರ್ಮಿಸಿರುವ ಈ ಚೊಚ್ಚಲ ಚಿತ್ರವನ್ನು ಎ. ಆರ್. ಕೃಷ್ಣ ನಿರ್ದೇಶಿಸಿದ್ದಾರೆ. ಅಪ್ಪನ ಪಾತ್ರಕ್ಕೆ ಆನಂದ್ ನೀನಾಸಂ ಜೀವ ತುಂಬಿದ್ದು, ಉಳಿದಂತೆ ಚೇತನ್ ದುರ್ಗಾ, ಬಳ್ಳಾರಿ ಅರ್ಜುನ್, ಸಲೋಮಿ ಡಿಸೋಜ, ಭೂಮಿಕಾ ದೇಶಪಾಂಡೆ, ವಿನಾಯಕ್ ಮುಂತಾದವರು ‘ಜೊತೆಯಾಗಿ.. ಹಿತವಾಗಿ…’ ಚಿತ್ರದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

ಚಿತ್ರತಂಡದ ವಿಶ್ವಾಸ ಹೆಚ್ಚಿಸಿದ ‘ಜೊತೆಯಾಗಿ.. ಹಿತವಾಗಿ…’ ಪ್ರೀಮಿಯರ್‌ ಶೋ

ಕನ್ನಡ ಚಿತ್ರರಂಗದಲ್ಲಿ ನವಿರಾದ ಪ್ರೇಮಕಥೆಯ ಸಿನೆಮಾಗಳನ್ನು ಚಿತ್ರ ಪ್ರೇಮಿಗಳು ಸೋಲಿಸಿದ ಉದಾಹರಣೆಯೇ ಇಲ್ಲ. ತೆರೆಮೇಲಿನ ಪ್ರೀತಿಯನ್ನ ಪ್ರೇಕ್ಷಕರು ಮನಸ್ಸಾರೆ ಅನುಭವಿಸುವುದುಂಟು. ಅಂಥದ್ದೊಂದು ಅಪರೂಪದ ಸಿನೆಮಾ ನಮ್ಮದು. ಈ ಚಿತ್ರ ಪ್ರೇಕ್ಷಕರ ಹೃದಯವನ್ನು ಕೆಣಕುತ್ತದೆ ಎಂಬುದು ‘ಜೊತೆಯಾಗಿ.. ಹಿತವಾಗಿ…’ ಚಿತ್ರತಂಡದ ಭರವಸೆಯ ಮಾತು. ಇನ್ನು ಇದೇ 2025ರ ಸೆಪ್ಟೆಂಬರ್‌ 19ರಂದು ‘ಜೊತೆಯಾಗಿ.. ಹಿತವಾಗಿ…’ ಚಿತ್ರ ತೆರೆಗೆ ಬರುತ್ತಿದೆ. ಈ ಸಿನೆಮಾದ ಬಿಡುಗಡೆಗೂ ಮುನ್ನ ಚಿತ್ರತಂಡ ಒಂದು ಪ್ರೀಮಿಯರ್ ಶೋ ವನ್ನು ಆಯೋಜಿಸಿತ್ತು. ಈ ವೇಳೆ ‘ಜೊತೆಯಾಗಿ.. ಹಿತವಾಗಿ…’ ನೋಡಿದ ಪ್ರೇಕ್ಷಕರು ಚಿತ್ರತಂಡದ ಪ್ರಯತ್ನವನ್ನು ಮನಸ್ಪೂರ್ತಿಯಾಗಿ ಮೆಚ್ಚಿಕೊಂಡಿದ್ದಾರೆ. ಲವ್ ಸ್ಟೋರಿ, ಅಪ್ಪ-ಮಗನ ಸೆಂಟಿಮೆಂಟನ್ನ  ಹಾಡಿ ಹೊಗಳಿದ್ದಾರೆ. ಪ್ರೇಕ್ಷಕ ಪ್ರಭುಗಳು ಮೆಚ್ಚಿಕೊಂಡು ಚಿತ್ರಕ್ಕೆ ಭರಪೂರ ಪ್ರಶಂಸೆ ವ್ಯಕ್ತಪಡಿಸಿದ್ದಾರಂತೆ. ಇದೇ ಖುಷಿಯಲ್ಲಿರುವ ಚಿತ್ರತಂಡ, ‘ಜೊತೆಯಾಗಿ.. ಹಿತವಾಗಿ…’ ಸಿನೆಮಾ ಬಿಡುಗಡೆಯಾಗಿ ಥಿಯೇಟರಿಗೆ ಬಂದ ಮೇಲೂ ಇದೇ ಪ್ರತಿಕ್ರಿಯೆ ಸಿಗುತ್ತದೆ ಎಂಬ ನಿರೀಕ್ಷೆಯಲ್ಲಿದೆ. ಆ ಎಲ್ಲಾ ನಿರೀಕ್ಷೆಗಳಿಗೆ ಇದೇ ಸೆಪ್ಟೆಂಬರ್ 19ಕ್ಕೆ ‘ಜೊತೆಯಾಗಿ.. ಹಿತವಾಗಿ…’ ಬಿಡುಗಡೆಯಾದ ಮೇಲೆ ಉತ್ತರ ಸಿಗಲಿದೆ.

Related Posts

error: Content is protected !!