‘ಫೆಬ್ರವರಿ 30’; ಇದು ಹೊಸದಿನ..!, ಹೊಸಚಿತ್ರ..!
‘ಫೆಬ್ರವರಿ 30’ ಎಂಬ ಸೈಕಾಲಜಿಕಲ್-ಥ್ರಿಲ್ಲರ್ ಚಿತ್ರ
ಹೊಸ ಪ್ರತಿಭೆಗಳ ‘ಫೆಬ್ರವರಿ 30’ ಚಿತ್ರ ಬಿಡುಗಡೆಗೆ ತಯಾರಿ
ಹೊರಬಂತು ‘ಫೆಬ್ರವರಿ 30’ ಚಿತ್ರ ಟ್ರೇಲರ್
ಪ್ರತಿವರ್ಷ ಫೆಬ್ರವರಿ ತಿಂಗಳಿನಲ್ಲಿ 28ನೇ ತಾರೀಖು ಬರುವುದನ್ನ, ನಾಲ್ಕು ವರ್ಷಗಳಿಗೊಮ್ಮೆ ಫೆಬ್ರವರಿ ತಿಂಗಳಿನಲ್ಲಿ 29ನೇ ತಾರೀಖು ಬರುವುದನ್ನು ನೀವೆಲ್ಲರೂ ನೋಡಿರುತ್ತೀರಿ, ಕೇಳಿರುತ್ತೀರಿ. ಆದರೆ, ಎಂದಾದರೂ ಫೆಬ್ರವರಿ ತಿಂಗಳಿನಲ್ಲಿ 30ನೇ ತಾರೀಖು ಬರುವುದನ್ನು ನೀವು ಕೇಳಿದ್ದೀರಾ..? ಖಂಡಿತವಾಗಿಯೂ ನೀವು ‘ಫೆಬ್ರವರಿ 30’ ಎಂಬುದನ್ನು ಕೇಳಿರೋದಕ್ಕಾಗಲಿ, ನೋಡಿರೋದಕ್ಕಾಗಲಿ ಸಾಧ್ಯವೇ ಇಲ್ಲ.
ಅಂಥದ್ದರಲ್ಲಿ ಇಲ್ಲೊಂದು ಚಿತ್ರತಂಡ, ತಮ್ಮ ಚಿತ್ರಕ್ಕೆ ‘ಫೆಬ್ರವರಿ 30’ ಎಂದು ಹೆಸರಿಟ್ಟಿದ್ದು, ಅದನ್ನು ಪ್ರೇಕ್ಷಕರ ಮುಂದೆ ತರೋದಕ್ಕೆ ರೆಡಿಯಾಗಿದೆ.
ಏನಿದು ‘ಫೆಬ್ರವರಿ 30’..?
ಅಂದಹಾಗೆ, ಬಹುತೇಕ ಹೊಸ ಪ್ರತಿಭೆಗಳೇ ಸೇರಿ ನಿರ್ಮಿಸಿರುವ ‘ಫೆಬ್ರವರಿ 30’ ಒಂದು ಔಟ್ ಅಂಡ್ ಔಟ್ ಸೈಕಾಲಜಿಕಲ್-ಥ್ರಿಲ್ಲರ್ ಕಥಾಹಂದರದ ಚಿತ್ರ. ‘ಬಿಗ್ ಬಾಸ್’ ಖ್ಯಾತಿಯ ಅಭಿಷೇಕ್ ಶ್ರೀಕಾಂತ್ ಈ ಚಿತ್ರದ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಈಗಾಗಲೇ ‘ಫೆಬ್ರವರಿ 30’ ಸಿನೆಮಾದ ಬಹುತೇಕ ಕೆಲಸಗಳನ್ನು ಸದ್ದಿಲ್ಲದೆ ಪೂರ್ಣಗೊಳಿಸಿರುವ ಚಿತ್ರತಂಡ, ಇತ್ತೀಚೆಗೆ ‘ಫೆಬ್ರವರಿ 30’ ಚಿತ್ರದ ಟ್ರೇಲರ್ ಅನ್ನು ಬಿಡುಗಡೆ ಮಾಡಿದೆ. ಮೈಸೂರು ಮೂಲದ ಪ್ರಶಾಂತ್ ಎಂ. ಎಲ್. ನಿರ್ದೇಶನದಲ್ಲಿ ಮೂಡಿಬಂದಿರುವ ಈ ಚಿತ್ರಕ್ಕೆ ‘ಶಂಕರ ಮೂವೀಸ್ ಇಂಟರ್ ನ್ಯಾಷನಲ್’ ಮೂಲಕ ಜೋಸೆಫ್ ಬೇಬಿ ಬಂಡವಾಳ ಹೂಡಿ ನಿರ್ಮಾಣ ಮಾಡಿದ್ದಾರೆ.
ಇನ್ನು ‘ಫೆಬ್ರವರಿ 30’ ಚಿತ್ರದಲ್ಲಿ ಅಭಿಷೇಕ್, ಸಾಹಿತ್ಯ ಶೆಟ್ಟಿ, ಅಕ್ಷಯ್, ಮನೋಜ್, ಶಿವಕುಮಾರ್ ಮೊದಲಾದವರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ‘ಫೆಬ್ರವರಿ 30’ ಚಿತ್ರಕ್ಕೆ ಪಿ. ಎಂ. ಉನ್ನಿಕೃಷ್ಣನ್ ಛಾಯಾಗ್ರಹಣವಿದ್ದು, ಚಿತ್ರದ ಹಾಡುಗಳಿಗೆ ಲಿಜಿನ್ ಪಂಬೋ ಸಂಗೀತ ಸಂಯೋಜಿಸಿದ್ದಾರೆ.
‘ಫೆಬ್ರವರಿ 30’ರ ಬಗ್ಗೆ ಚಿತ್ರತಂಡಕ್ಕೆ ಭರವಸೆ
‘ಫೆಬ್ರವರಿ 30’ ಚಿತ್ರದ ಬಗ್ಗೆ ಮಾತನಾಡಿರುವ ನಿರ್ದೇಶಕ ಎಂ. ಎಲ್, ‘ ನಾವೆಲ್ಲರೂ ಐ. ಟಿ ಹಿನ್ನೆಲೆಯಿಂದ ಬಂದವರಾಗಿದ್ದು, ಮೊದಲು ಸಣ್ಣ ಪುಟ್ಟ ಶಾರ್ಟ್ ಮೂವಿ ಮಾಡುತ್ತಿದ್ದೆವು. ಈ ಸಿನೆಮಾವನ್ನ ಚಿಕ್ಕದಾಗಿ ಮಾಡೋಣಾ ಅಂತಾನೇ ಅಂದುಕೊಂಡು ಕಥೆ ಬರೆಯಲು ಶುರು ಮಾಡಿದೆವು. ಆದ್ರೆ, ಕಥೆ ಬರೀತಾ ಬರೀತಾ ಸಿನೆಮಾ ಚೆನ್ನಾಗಿ ಬಂದಿದ್ದು, ಆ ಬಳಿಕ ನಿರ್ಮಾಪಕರಿಗೆ ಕಥೆ ಇಷ್ಟವಾಗಿ ಸಿನೆಮಾ ಮಾಡೋಣಾ ಅಂದ್ರು. ಇದೊಂದು ಸೈಕಾಲಜಿಕಲ್-ಥ್ರಿಲ್ಲರ್ ಸಿನೆಮಾ. ಫೆಬ್ರವರಿ 30 ಅಂದ್ರೆ ಅದೊಂದು ಅನಿರೀಕ್ಷಿತ ದಿನ. ಅದು ಏನು ಅನ್ನೋದನ್ನು ತೆರೆಮೇಲೆ ನೋಡಬೇಕು. ಒಂದು ಸಿನೆಮಾಕ್ಕೆ ಇರಬೇಕಾದ ಎಲ್ಲ ಥರದ ಮನರಂಜನಾತ್ಮಕ ಅಂಶಗಳನ್ನು ಇಟ್ಟುಕೊಂಡು ಈ ಸಿನೆಮಾ ಮಾಡಿದ್ದೇವೆ. ಎಲ್ಲಾ ಥರದ ಆಡಿಯನ್ಸ್‌ಗೂ ಈ ಸಿನೆಮಾ ಇಷ್ಟವಾಗಲಿದೆ’ ಎಂದಿದ್ದಾರೆ. 
ಶೀಘ್ರದಲ್ಲಿಯೇ ‘ಫೆಬ್ರವರಿ 30’ ತೆರೆಗೆ…
ನಟ ಅಭಿಷೇಕ್ ಶ್ರೀಕಾಂತ್ ಮಾತನಾಡಿ, ‘ಇದು ನನ್ನ ಮೊದಲ ಹಾರರ್ ಸಿನೆಮಾ. ಇಲ್ಲಿಯವರೆಗೂ ಈ ಥರದ ಸಿನೆಮಾ ಮಾಡಿರಲಿಲ್ಲ. ನಿರ್ದೇಶಕರು ಕಥೆ ಹೇಳಿದಾಗ ಯೂನಿಕ್ ಅನ್ನಿಸ್ತು. ಪ್ರೇಕ್ಷಕರಿಗೂ ಹಾಗೇ ಅನಿಸಲಿದೆ’ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಚೇತನ್ ಮಾತನಾಡಿ, ‘ಎಲ್ಲರಿಗೂ ಗೊತ್ತಿರುವಂತೆ, ಫೆಬ್ರವರಿಯಲ್ಲಿ ಬರೋದೆ 28 ದಿನ. ಆದ್ರೆ ಈ ಸಿನೆಮಾಗೆ ‘ಫೆಬ್ರವರಿ 30′ ಅಂತಾನೇ ಟೈಟಲ್ ಯಾಕಿಟ್ಟೆವು ಅನ್ನೋದಕ್ಕೆ ಒಳ್ಳೆ ಕಾರಣವೂ ಇದೆ. ನಿರ್ದೇಶಕರು ಬಂದು ನಮ್ಮ ಬಳಿ ಒಂದಷ್ಟು ಮಾಹಿತಿಯನ್ನ ಹಂಚಿಕೊಂಡ್ರು. ಅದಾದ ನಂತರದಲ್ಲಿ ಸಿನೆಮಾ ಮಾಡಬೇಕು ಅನ್ನಿಸ್ತು. ಒಬ್ಬ ತಮಿಳುನಾಡು ವ್ಯಕ್ತಿ ನಮ್ಮ ಕನ್ನಡ ಸಿನಿಮಾ ಮಾಡ್ತಾ ಇದ್ದಾರೆ ಅನ್ನೋದು ಹೆಮ್ಮೆಯ ವಿಚಾರ’ ಎಂದು ತಮ್ಮ ಸಿನೆಮಾದ ಬಗ್ಗೆ ಮಾಹಿತಿ ಹಂಚಿಕೊಂಡರು.
ಅಂದಹಾಗೆ, ಸದ್ಯ ‘ಫೆಬ್ರವರಿ 30’ ಸಿನೆಮಾದ ಟ್ರೇಲರ್ ಬಿಡುಗಡೆಗೊಳಿಸಿರುವ ಚಿತ್ರತಂಡ, ಶೀಘ್ರದಲ್ಲಿಯೇ ಈ ಚಿತ್ರವನ್ನು ಪ್ರೇಕ್ಷಕರ ಮುಂದೆ ತರುವ ಯೋಜನೆ ಹಾಕಿಕೊಂಡಿದೆ.















