Eye Plex

‘ಕಾಳಿದಾಸ’ ಚರಿತೆಯ ರಕ್ತಸಿಕ್ತ ಅಧ್ಯಾಯ!

‌ನೆತ್ತರದ ಅಂಗಳದಲ್ಲಿ ಅರಳಿದ ‘ಕೆಡಿ’ ಜಗತ್ತು

ರೆಟ್ರೋ ಮಾದರಿಯಲ್ಲಿ ಕಾಳಿದಾಸನ ಭೂಗತಲೋಕ ತೆರದಿಟ್ಟ ಪ್ರೇಮ್‌

‌ಕಮರ್ಷಿಯಲ್‌ ಎಲಿಮೆಂಟ್.. ಮಾಸ್‌ ಎಂಟರ್‌ಟೈನ್ಮೆಂಟ್…

ಚಿತ್ರ: ಕೆಡಿ
ನಿರ್ಮಾಣ: ‘ಕೆವಿಎನ್ ಪ್ರೊಡಕ್ಷನ್ಸ್’
ನಿರ್ದೇಶನ: ಪ್ರೇಮ್
ತಾರಾಗಣ: ಧ್ರುವ ಸರ್ಜಾ, ರೀಷ್ಮಾ ನಾಣಯ್ಯ, ಸಂಜಯ್ ದತ್, ಶಿಲ್ಪಾ ಶೆಟ್ಟಿ, ರವಿಚಂದ್ರನ್, ರಮೇಶ್ ಅರವಿಂದ್, ಸುದೀಪ್, ಶೋಭರಾಜ್, ಸುಚೇಂದ್ರ ಪ್ರಸಾದ್, ರವಿಶಂಕರ್ ಮತ್ತಿತರರು.
ಬಿಡುಗಡೆ: 30 ಏಪ್ರಿಲ್ 2026
ರೇಟಿಂಗ್: 3.5/5

——————-

ನಿರ್ದೇಶಕ ಜೋಗಿ ಪ್ರೇಮ್‌ ನಿರ್ದೇಶನದ ಸಿನೆಮಾಗಳೆಂದರೆ ಅಲ್ಲಿ ಲಾಂಗು-ಮಚ್ಚು ಝಳಪಿಸಬೇಕು, ನೆತ್ತರು ಹರಿಯಬೇಕು ನಡುವೆ ಹೃದಯ ಮಿಡಿಯುವಂಥ ಸೆಂಟಿಮೆಂಟ್‌ ಸನ್ನಿವೇಶಗಳಿರಬೇಕು. ಅಲ್ಲಲ್ಲಿ ಸ್ಥಿತಿ-ಗತಿಗೆ ತಕ್ಕಂತೆ ಹಾಡು, ಡ್ಯಾನ್ಸ್‌, ಖಡಕ್‌ ಡೈಲಾಗ್ಸ್‌… ಒಟ್ಟಿನಲ್ಲಿ ಮಾಸ್‌ ಸಿನೆಮಾ ಆಡಿಯನ್ಸ್‌ಗೆ ತಾವು ನೋಡುವ ಸಿನೆಮಾದಲ್ಲಿ ಏನೇನು ಎಂಟರ್‌ಟೈನ್ಮೆಂಟ್‌ ಎಲಿಮೆಂಟ್ಸ್‌ ಇರಬೇಕು ಅಂದುಕೊಳ್ಳುತ್ತಾರೋ, ಅದೆಲ್ಲವನ್ನೂ ತಮ್ಮ ‘ಫ್ರೇಮ್ಸ್‌’ನಲ್ಲಿ ರುಬ್ಬಿ ಅಷ್ಟೇ ಆತ್ಮವಿಶ್ವಾಸದಿಂದ ಪ್ರೇಕ್ಷಕರ ಮುಂದಿಡುವುದರಲ್ಲಿ ನಿರ್ದೇಶಕ ಜೋಗಿ ಪ್ರೇಮ್‌ ಸಿದ್ಧಹಸ್ತರು ಎಂಬುದರಲ್ಲಿ ಎರಡು ಮಾತಿಲ್ಲ!

2026ರ ಏಪ್ರಿಲ್‌ ಕೊನೆಯ ದಿನ (ಏ. 30)ದಂದು ಬಿಡುಗಡೆಯಾಗಿ ತೆರೆಗೆ ಬಂದಿರುವ ‘ಕೆಡಿ’ ಕೂಡ ನಿರ್ದೇಶಕ ಪ್ರೇಮ್‌ ಅವರ ‘ಫ್ರೇಮ್ಸ್‌’ನಲ್ಲಿ ಅರಳಿದ ಅಂಥದ್ದೇ ಒಂದು ಚಿತ್ರ ಎನ್ನಲು ಹಿಂದೆ-ಮುಂದೇ ನೋಡುವುದು ಬೇಡ. ಅಷ್ಟರ ಮಟ್ಟಿಗೆ ನಿರ್ದೇಶಕ ಪ್ರೇಮ್‌ ತಮ್ಮತನವನ್ನು ಕಾಪಾಡಿಟ್ಟುಕೊಂಡು ‘ಕೆಡಿ’ಯನ್ನು ಪ್ರೇಕ್ಷಕರ ಮುಂದೆ ತಂದು ಕೂರಿಸಿದ್ದಾರೆ.

ಏನಿದು ‘ಕೆಡಿ’ ಅಲಿಯಾಸ್‌ ‘ಕಾಳಿದಾಸ’ನ ಚರಿತ್ರೆ?

ಮೊದಲೇ ಹೇಳಿದಂತೆ, ನಿರ್ದೇಶಕ ಪ್ರೇಮ್‌ ಸಿನೆಮಾಗಳೆಂದರೆ ಅಲ್ಲೊಂದು ರಕ್ತ ಸಿಕ್ತ ಕಥೆ ಇರಲೇಬೇಕು. ಅದರೊಳಗೆ ಒಂದಷ್ಟು ಪ್ರೀತಿ, ಪ್ರೇಮ, ಸ್ನೇಹ, ಫ್ಯಾಮಿಲಿಯ ಅಧ್ಯಾಯಗಳೂ ಇರಬೇಕು. ಅದೆಲ್ಲವೂ ‘ಕೆಡಿ’ಯಲ್ಲಿದೆ. 1970ರ ದಶಕದ ರೆಟ್ರೋ ಹಿನ್ನೆಲೆಯಲ್ಲಿ ಮಹಾನಗರವೊಂದರಲ್ಲಿ ಅನಾವರಣವಾಗುವ ‘ಕೆಡಿ’ ಉರೂಫ್ ಕಾಳಿದಾಸನ ದೃಶ್ಯಕಾವ್ಯ ನಿಮಿಷಗಳು ಉರುಳಿದಂತೆ ಕೆಂಪಾಗುತ್ತ ಸಾಗುತ್ತದೆ. ಸೀಮೆ ಎಣ್ಣೆ ವ್ಯಾಪಾರ ಮಾಡುತ್ತ ಎಲ್ಲರಿಗೂ ಮನನರಂಜನೆ ನೀಡುತ್ತಿರುವ ಕಾಳಿದಾಸ ಉರೂಫ್‌ ‘ಕೆಡಿ’ ಚಿತ್ರದ ಕಥಾನಾಯಕ. ಆದರೆ ಈ ಕಥಾನಾಯಕ ಅದೇ ಕಥೆಯ ಖಳನಾಯಕ ಧಕ್‌ ದೇವನ ದೊಡ್ಡ ಆರಾಧಕ! ಇಂಥ ವಿ’ಚಿತ್ರ’ ಸನ್ನಿವೇಶವಿರುವಾಗ ನಾಯಕ ಮತ್ತು ಖಳನಾಯಕ ಯಾಕಾಗಿ ಮುಖಾಮುಖಿಯಾಗುತ್ತಾರೆ? ಅನ್ನೋದೆ ‘ಕೆಡಿ’ ಚಿತ್ರದ ತಿರುಳು. ಅದು ಹೇಗಿರುತ್ತದೆ ಎಂಬುದನ್ನು ಕಣ್ಣು ಕೆಂಪಾಗುವಂತೆ ನೋಡುವಂಥ ಆಸೆಯಿದ್ದರೆ, ಖಂಡಿತವಾಗಿಯೂ ನೀವು ‘ಕೆಡಿ’ಯ ಕಡೆಗೆ ಮುಖಮಾಡಬಹುದು.

ಎಲ್ಲಾ ಪ್ರಶ್ನೆಗಳಿಗೂ ಎರಡನೇ ಭಾಗದಲ್ಲಿ ಉತ್ತರ! 

ಇನ್ನು ‘ಕೆಡಿ’ ಚಿತ್ರದ ಆರಂಭದಿಂದ ಅಂತ್ಯದವರೆಗೂ ಹತ್ತಾರು ಪ್ರಶ್ನೆಗಳು ಪ್ರೇಕ್ಷಕರ ಮನಸ್ಸಿನಲ್ಲಿ ಇಳಿಯುತ್ತಲೇ  ಹೋಗುತ್ತವೆ. ಕ್ಲೈಮ್ಯಾಕ್ಸ್‌ ನಲ್ಲಾದರೂ ‘ಕೆಡಿ’ ತಾರ್ಕಿಕ ಅಂತ್ಯ ಕೊಟ್ಟು ನೋಡುಗರ ಮನಸ್ಸಿನಲ್ಲಿ ಉಳಿದಿರುವ ಪ್ರಶ್ನೆಗಳಿಗೆ ಉತ್ತರ ಕೊಡುತ್ತಾನೆ ಅಂದುಕೊಂಡರೆ ಆ ನಿರೀಕ್ಷೆಯೂ ಹುಸಿಯಾಗೋದು ಗ್ಯಾರೆಂಟಿ! ಯಾಕೆಂದರೆ, ನಿರ್ದೇಶಕ ಪ್ರೇಮ್‌ ‘ಕೆಡಿ’ ಸಿನೆಮಾದ ಬಿಡುಗಡೆಗೂ ಮುನ್ನವೇ ಹೇಳಿಕೊಂಡಿರುವಂತೆ, ಈಗ ಬಿಡುಗಡೆಯಾಗಿರುವ ‘ಕೆಡಿ’ ಏನಿದ್ದರೂ ಎರಡೂವರೆ ಗಂಟೆ ಅವಧಿಯ ಟ್ರೇಲರ್‌ ಅಷ್ಟೇ! ಸಂಪೂರ್ಣ ಸಿನೆಮಾದ ಕಥೆ, ಪಾತ್ರಗಳು, ಹಿನ್ನೆಲೆ ಎಲ್ಲದಕ್ಕೂ ತಾರ್ಕಿಕ ಅಂತ್ಯ ಸಿಕ್ಕು ಪ್ರೇಕ್ಷಕರಿಗೆ ಅರ್ಥವಾಗೋದು ‘ಕೆಡಿ’ ಎರಡನೇ ಭಾಗ ಬಂದ ಮೇಲಷ್ಟೇ! ಹಾಗಾಗಿ, ‘ಕೆಡಿ’ಯಲ್ಲಿ ಧರ್ಮ ಆಗಿರುವ ರಮೇಶ್‌ ಅರವಿಂದ್‌, ಸತ್ಯವತಿ ಆಗಿರುವ ಶಿಲ್ಪಾ ಶೆಟ್ಟಿ, ಅಣ್ಣಯಪ್ಪ ಆಗಿರುವ ಕ್ರೇಜಿಸ್ಟಾರ್ ರವಿಚಂದ್ರನ್, ಕಾಲಭೈರವನ ಅವತಾರವೆತ್ತಿರುವ ಕಿಚ್ಚ ಸುದೀಪ್‌… ಇವರೆಲ್ಲರೂ ನಿಜಕ್ಕೂ ಯಾರು? ಏನು? ಎಂಬುದರ ಬಗ್ಗೆ ಪ್ರೇಕ್ಷಕರು ತುಂಬ ತಲೆಕೆಡಿಸಿಕೊಳ್ಳಬೇಕಾಗಿಲ್ಲ. ಮುಂದಿನ ಭಾಗದವರೆಗೂ ಕಾದರೆ ಈ ಎಲ್ಲಾ ಕುತೂಹಲಕ್ಕೂ ಉತ್ತರ ಸಿಕ್ಕರೂ ಸಿಗಬಹುದು… ಅಲ್ಲಿಯವರೆಗೆ ಪ್ರೇಕ್ಷಕರು ತಾಳ್ಮೆಯಿಂದ ಕಾಯಬೇಕಷ್ಟೇ!

ದೃಶ್ಯರೂಪದಲ್ಲಿ ‘ಕೆಡಿ’ಯ ಅದ್ಧೂರಿ ಅನಾವರಣ!

‘ಕೆಡಿ’ ಸಿನೆಮಾದ ದೊಡ್ಡ ಹೈಲೈಟ್ಸ್‌ ಎಂದರೆ, ಸಿನೆಮಾಕ್ಕಾಗಿ ಹಾಕಲಾಗಿರುವ ಬೃಹತ್‌ ರೆಟ್ರೋ ಮಾದರಿಯ ಸೆಟ್ ಗಳು. ‘ಕೆಡಿ’ ಸೆಟ್‌ಗಳು ನಿಜಕ್ಕೂ ಸಿನೆಮಾವನ್ನು ಅದ್ಧೂರಿಯಾಗಿ ಕಣ್ಮನ ಸೆಳೆಯುವಂತೆ ತೆರೆಮೇಲೆ ಕಟ್ಟಿಕೊಟ್ಟಿದೆ. ಬೃಹತ್‌ ತಾರಾಬಳಗ, ಪ್ರತಿ ಫ್ರೇಮ್‌ನಲ್ಲೂ ಕಾಣುವ ನೂರಾರು ಸಹಕಲಾವಿದರು, ತಾಂತ್ರಿಕ ಕಾರ್ಯಗಳು ‘ಕೆಡಿ’ಯನ್ನು ಅದ್ಧೂರಿಯಾಗಿ ಕಾಣುವಂತೆ ಮಾಡಿದೆ. ಛಾಯಾಗ್ರಹಣ, ಸಂಕಲನ, ಕಲರಿಂಗ್‌, ಸೌಂಡ್‌ ಎಫೆಕ್ಟ್ಸ್‌, ವಿಎಫ್‌ಎಕ್ಸ್‌ ಕೆಲಸಗಳು ಚಿತ್ರದ ತಾಂತ್ರಿಕ ಗುಣಮಟ್ಟವನ್ನು ಹೆಚ್ಚಿಸಿದೆ.  ‘ಗುರುವೆ ನಿನ್ನಾಟ ಬಲ್ಲೋರ್ ಯಾರ್ಯೋರೋ…’ ಮತ್ತು ‘ಸೆಟ್ಟಾಗೊಲ್ಲಾ ನಂಗು ನಿಂಗು..’ ರೆಟ್ರೋ ಮಾದರಿಯ ಹಾಡುಗಳು ಥಿಯೇಟರ್‌ ಒಳಗೂ, ಹೊರಗೂ ಕೆಲಕಾಲ ಗುನುಗುವಂತಿದೆ.

ಕಲಾವಿದರ ಅಭಿನಯ ಹೇಗಿದೆ..?

‘ಕೆಡಿ’ ಚಿತ್ರದಲ್ಲಿ ನಾಯಕ ನಟ ಧ್ರುವ ಸರ್ಜಾ ಎಂದಿನಂತೆ ಲೀಲಾಜಾಲವಾಗಿ ಮಾತನಾಡುವ ವರಸೆ ಮತ್ತು ಸಾಹಸ ದೃಶ್ಯಗಳಲ್ಲಿ ಹಾಗೆಯೇ ಹಾಡುಗಳಲ್ಲಿ ಕಾಣುವ ವಿಶೇಷ ನೃತ್ಯಗಳಲ್ಲಿ ಮಿಂಚಿದ್ದಾರೆ. ನಾಯಕಿ ರೀಷ್ಮಾ ನಾಣಯ್ಯ ಪಾತ್ರದ ಬಜಾರಿತನ ಕೊಂಚ ಅತಿಯಾಯಿತು ಎನಿಸುತ್ತದೆ. ರಮೇಶ್ ಅರವಿಂದ್ ಅವರ ವಿಶೇಷ ಕೇಶ ವಿನ್ಯಾಸ ಗಮನ ಸೆಳೆಯುತ್ತದೆ. ರವಿಚಂದ್ರನ್ ಪಾತ್ರದ ಸ್ಪಷ್ಟತೆಯೇ ಸಿಗದಿರುವುದರಿಂದ ಹೆಚ್ಚೇನೂ ಹೇಳುವಂತಿಲ್ಲ. ಶಿಲ್ಪಾ ಶೆಟ್ಟಿ ಯಾಕೋ ಮಂಕಾಗಿ ಕಾಣುತ್ತಾರೆ!  ಕವಿ ಹೆಸರಿನ ಮರಿ ರೌಡಿಯಾಗಿ ಯಶ್ ಶೆಟ್ಟಿ, ಉತ್ತರ ಕರ್ನಾಟಕದ ಖಡಕ್‌ ಭಾಷೆಯನ್ನು ಉಚ್ಚರಿಸುವ ಪಾತ್ರದಲ್ಲಿ ಸುಚೇಂದ್ರ ಪ್ರಸಾದ್ ಅಭಿನಯ ಗಮನ ಸೆಳೆಯುತ್ತದೆ. ಉಳಿದಂತೆ ಇತರ ಕಲಾವಿದರ ಅಭಿನಯದ ಬಗ್ಗೆ ಹೆಚ್ಚೇನೂ ಹೇಳುವಂತಿಲ್ಲ.

ಕೊನೆಯ ಮಾತು…

ಮೊದಲೇ ಹೇಳಿರುವಂತೆ, ‘ಕೆಡಿ’ ಸ್ಟಾರ್‌ ನಟರ ಅಭಿಮಾನಿಗಳನ್ನು ಸೆಳೆಯಲು ಮತ್ತು ಅಪ್ಪಟ ಮಾಸ್‌ ಆಡಿಯನ್ಸ್‌ಗಾಗಿಯೇ ಮಾಡಿರುವ ಔಟ್‌ ಅಂಡ್‌ ಔಟ್‌ ಕಮರ್ಷಿಯಲ್‌ ಎಂಟರ್ಟೈನ್ಮೆಂಟ್‌ ಸಿನೆಮಾ. ಹೀಗಾಗಿಯೇ ‘ಕೆಡಿ’ಯಲ್ಲಿ ಬೃಹತ್‌ ಸ್ಟಾರ್ ಗಳ ದಂಡೇ ಇದೆ. ಭರ್ಜರಿ ಆಕ್ಷನ್‌, ಮಸ್ತ್‌ ಡ್ಯಾನ್ಸ್‌, ಖಡಕ್‌ ಡೈಲಾಗ್ಸ್‌, ಲವ್‌, ಸೆಂಟಿಮೆಂಟ್‌, ರಿವೇಂಜ್‌, ಥ್ರಿಲ್‌, ಗ್ಲಾಮರ್‌, ರಿಚ್‌ ಮೇಕಿಂಗ್‌… ಹೀಗೆ ಏನೇನು ಇರಬೇಕೋ ಎಲ್ಲವೂ ಇದೆ. ಪ್ರೇಮ್‌ ‘ಕೆಡಿ’ ಸಿನೆಮಾದ ಮೂಲಕ ಮತ್ತೊಮ್ಮೆ ತಾವೊಬ್ಬ ‘ಶೋ ಮ್ಯಾನ್‌’ ಅನ್ನೋದನ್ನು ನಿರೂಪಿಸುವ ಪ್ರಯತ್ನ ಮಾಡಿದ್ದಾರೆ. ಒಟ್ಟಾರೆ ಅತಿಯಾದ ನಿರೀಕ್ಷೆಗಳಿಲ್ಲದೆ, ಥಿಯೇಟರಿನತ್ತ ಮುಖ ಮಾಡಿದರೆ ‘ಕೆಡಿ’ ಕೆಲಕಾಲ ನೋಡುಗರನ್ನು ಮನರಂಜಿಸುತ್ತಾನೆ ಎಂಬುದರಲ್ಲಿ ಎರಡು ಮಾತಿಲ್ಲ.

  • ಜಿ. ಎಸ್‌. ಕಾರ್ತಿಕ ಸುಧನ್‌

G S Karthik Sudhan

Karthik Sudhan is a name that is familiar in journalistic circles and has rendered valuable service for many significant years. Known for his vast knowledge and work in the field of cinema, crime, investigation and politics, Karthik Sudhan has worked in reputed online publications of Kannada.

Related Posts

error: Content is protected !!