ತಂದೆಯಾದ ಸಿಹಿ ಸುದ್ದಿ ಹಂಚಿಕೊಂಡ ಡಾಲಿ ಧನಂಜಯ್!
ಡಾಲಿ ಧನಂಜಯ್ ಇನ್ಮುಂದೆ ಡ್ಯಾಡಿ…
ಗಂಡು ಮಗುವಿಗೆ ತಂದೆ-ತಾಯಿಯಾದ ಧನಂಜಯ್-ಡಾ. ಧನ್ಯತಾ
ಸೋಶಿಯಲ್ ಮೀಡಿಯಾದಲ್ಲಿ ಖುಷಿ ಹಂಚಿಕೊಂಡ ಡಾಲಿ
2 ಮೇ 2, 2026, ಬೆಂಗಳೂರು: ಕನ್ನಡ ಚಿತ್ರರಂಗದ ನಟ ಕಂ ನಿರ್ಮಾಪಕ ಡಾಲಿ ಧನಂಜಯ್ ಮೂರು ದಿನಗಳ ಹಿಂದಷ್ಟೇ ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ತಮ್ಮ ಪತ್ನಿ ಡಾ. ಧನ್ಯತಾ ಅವರ ಜೊತೆಗಿನ ಬೇಬಿ ಬಂಪ್ಸ್ ಪೋಟೋಶೂಟ್ ಪೋಟೋಗಳನ್ನು ಹಂಚಿಕೊಳ್ಳುವ ಮೂಲಕ ತಮ್ಮ ಅಭಿಮಾನಿಗಳಿಗೆ ತಾವು ತಂದೆಯಾಗುತ್ತಿರುವ ಸುದ್ದಿಯನ್ನು ಹಂಚಿಕೊಂಡಿದ್ದರು. ಧನಂಜಯ್ ಈ ಸುದ್ದಿಯನ್ನು ಹಂಚಿಕೊಂಡ ಮೂರೇ ದಿನದಲ್ಲಿ ಅವರು ತಂದೆಯಾಗಿದ್ದಾರೆ! 
ಹೌದು, ಧನಂಜಯ್ ಅವರ ಪತ್ನಿ ಡಾ. ಧನ್ಯತಾ ಖಾಸಗಿ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಸ್ವತಃ ಡಾಲಿ ಧನಂಜಯ್ ಅವರೇ ಈ ವಿಷಯವನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ. ಧನಂಜಯ್ ತಮ್ಮ ಅಧಿಕೃತ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಮಗುವಿನ ಪುಟ್ಟ ಕೈಗಳ ಫೋಟೋ ಜೊತೆ ಗಂಡು ಮಗು ಜನಿಸಿದ ವಿಚಾರವನ್ನು ಹಂಚಿಕೊಳ್ಳುತ್ತಿದ್ದಂತೆ, ಅವರ ಅಭಿಮಾನಿಗಳು ಹಾಗೂ ಚಿತ್ರರಂಗದ ಗಣ್ಯರು ಡಾಲಿ ದಂಪತಿಗೆ ಶುಭಾಶಯಗಳ ಸುರಿಮಳೆಯನ್ನೇ ಹರಿಸಿದ್ದಾರೆ.
ಇನ್ನು ಡಾಲಿ ಧನಂಜಯ್-ಡಾ. ಧನ್ಯತಾ ದಂಪತಿಗೆ ಮಗು ಜನಿಸಿದ್ದು, ಇಬ್ಬರ ಪೋಷಕರ ಮನೆಯಲ್ಲೂ ಸಂಭ್ರಮ ಮನೆಮಾಡಿದೆ. ಸದ್ಯ ತಾಯಿ ಡಾ. ಧನ್ಯತಾ ಹಾಗೂ ಮಗು ಇಬ್ಬರೂ ಆರೋಗ್ಯವಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಎರಡು-ಮೂರು ದಿನಗಳಲ್ಲಿ ತಾಯಿ-ಮಗು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಲಿದ್ದಾರೆ. ಅಂದಹಾಗೆ, ನಟ ಧನಂಜಯ್ ಹಾಗೂ ಡಾ. ಧನ್ಯತಾ ಜೋಡಿ ಗುರು-ಹಿರಿಯರ ಸಮ್ಮತಿಯೊಂದಿಗೆ 2025ರ ಫೆಬ್ರವರಿ 16ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಮದುವೆಯಾದ ಒಂದು ವರ್ಷದ ಸಂಭ್ರಮದ ಬೆನ್ನಲ್ಲೇ ಈ ಜೋಡಿ ಈಗ ಗಂಡು ಮಗುವನ್ನು ಸ್ವಾಗತಿಸಿದೆ. ಸದ್ಯಕ್ಕೆ ಮಗುವಿನ ಕೈಗಳ ಫೋಟೋ ಮಾತ್ರ ಹಂಚಿಕೊಂಡಿರುವ ‘ಡಾಲಿ’, ಮುಂದಿನ ದಿನಗಳಲ್ಲಿ ಮಗುವಿನ ಮುಖವನ್ನು ಪರಿಚಯಿಸುವ ಸಾಧ್ಯತೆಯಿದೆ.















