Quick ಸುದ್ದಿಗೆ ಒಂದು click

‘ತಿಥಿ’ ಸಿನೆಮಾ ಖ್ಯಾತಿಯ ನಟ ಸೆಂಚುರಿ ಗೌಡ ನಿಧನ

‘ತಿಥಿ’ ಸಿನೆಮಾ ಖ್ಯಾತಿಯ ನಟ ಸೆಂಚುರಿ ಗೌಡ ಇನ್ನಿಲ್ಲ

ವಯೋಸಹಜ ಅನಾಗೋಗ್ಯದಿಂದ ಬಳಲುತ್ತಿದ್ದ ಸೆಂಚುರಿ ಗೌಡ ಉರೂಫ್‌ ಸಿಂಗ್ರಿ ಗೌಡ…

ಮಂಡ್ಯ ಮೂಲದ ನಟನ ನಿಧನಕ್ಕೆ ಹಲವರು ಕಂಬನಿ

ಜ. 05, ಮಂಡ್ಯ: ಅಂತರರಾಷ್ಟ್ರೀಯ ಪ್ರಶಸ್ತಿ ವಿಜೇತ ಕನ್ನಡದ ‘ತಿಥಿ’ ಸಿನೆಮಾದ ‘ಸೆಂಚುರಿ ಗೌಡ’ ಪಾತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಖ್ಯಾತಿ ಮತ್ತು ಜನಪ್ರಿಯತೆ ಪಡೆದಿದ್ದ ಹಿರಿಯ ನಟ ಸೆಂಚುರಿ ಗೌಡ ಉರೂಫ್‌ ಸಿಂಗ್ರೀಗೌಡ (04 ಜನವರಿ 2026) ನಿಧನರಾಗಿದ್ದಾರೆ.

ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕಿನ ಸಿಂಗ್ರೇಗೌಡನಕೊಪ್ಪಲು ಗ್ರಾಮದ ನಿವಾಸಿಯಾಗಿದ್ದ ಸೆಂಚುರಿ ಗೌಡ ಉರೂಫ್‌ ಸಿಂಗ್ರೀಗೌಡ ಕಳೆದ ಒಂದೂವರೆ ತಿಂಗಳಿನಿಂದ ಅಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದು, ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ (04 ಜನವರಿ 2026) ತಡರಾತ್ರಿ ನಿಧನರಾದರು ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಮಂಡ್ಯ ಶೈಲಿಯ ಭಾಷೆ ಮತ್ತು ನಟನೆ ಮೂಲಕ ಚಿತ್ರರಸಿಕರನ್ನು ರಂಜಿಸಿದ್ದ ಸಿಂಗ್ರೀಗೌಡರನ್ನು ‘ತಿಥಿ’ ಸಿನೆಮಾದ ನಂತರ ಎಲ್ಲರೂ ‘ಸೆಂಚುರಿ ಗೌಡ’ ಎಂದೇ ಕರೆಯುತ್ತಿದ್ದರು. ಕೆಲವು ತಿಂಗಳ ಹಿಂದೆ ಕಾಲು ಜಾರಿ ಬಿದ್ದ ಪರಿಣಾಮ  ಸಿಂಗ್ರೀಗೌಡರ ಸೊಂಟದ ಮೂಳೆ ಮುರಿದಿತ್ತು. ಜೊತೆಗೆ ವಯೋಸಹಜ ಕಾಯಿಲೆಗಳೂ ಅವರನ್ನು ಬಾಧಿಸುತ್ತಿದ್ದವು. ನೂರಕ್ಕೂ ಹೆಚ್ಚು ವರ್ಷ ವಯಸ್ಸಾಗಿದ್ದ ಸಿಂಗ್ರೀಗೌಡ ಕನ್ನಡದಲ್ಲಿ ‘ತಿಥಿ’, ‘ತರ್ಲೆ ವಿಲೇಜ್‌’, ‘ಕಂತ್ರಿಬಾಯ್ಸ್‌’ ಸೇರಿದಂತೆ ಹಲವು ಸಿನೆಮಾಗಳಲ್ಲಿ ನಟಿಸಿದ್ದಾರೆ. 05 ಜನವರಿ 2026ರ ಸೋಮವಾರ ಮಧ್ಯಾಹ್ನ ಅವರ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.

‘ಗಡ್ಡಪ್ಪ’ ಬಳಿಕ ಇಹಲೋಕ ತ್ಯಜಿಸಿದ ‘ಸೆಂಚುರಿ ಗೌಡ’…

‘ತಿಥಿ’ ಸಿನಿಮಾ ಖ್ಯಾತಿ ಗಡ್ಡಪ್ಪ ಪಾತ್ರಧಾರಿ ಚನ್ನೇಗೌಡ ಅವರು 2025ರ ನವೆಂಬರ್ 12ರಂದು ನಿಧನ ಹೊಂದಿದ್ದರು. ಗಡ್ಡಪ್ಪ ಅವರ ಸಾವಿನ ಕೇವಲ ಒಂದೂವರೆ ತಿಂಗಳ ನಂತರ ಸೆಂಚುರಿ ಗೌಡ ಅಗಲಿದ್ದಾರೆ. ಅಂದಹಾಗೆ, ‘ತಿಥಿ’ ಸಿನೆಮಾಕ್ಕೆ ಅದರ ನಿರ್ದೇಶಕರು ಸಿಂಗ್ರಿಗೌಡ ಅವರನ್ನು ಆಯ್ಕೆ ಮಾಡಿದ್ದೇ ಒಂದು ಅಚ್ಚರಿಯ ಘಟನೆ. ಸಿಂಗ್ರಿಗೌಡ ಅಣ್ಣ ಸತ್ತು ಹೋಗಿದ್ದರಂತೆ. ಅವರ ತಿಥಿಗೆ ‘ತಿಥಿ’ ಸಿನೆಮಾ ನಿರ್ದೇಶಕರು ಬಂದಿದ್ದರು. ಈ ವೇಳೆ ಸಿನೆಮಾ ನಿರ್ದೇಶಕರಿಗೆ ಸೆಂಚುರಿ ಗೌಡ ಇಷ್ಟ ಆಗಿ ‘ತಿಥಿ’ ಸಿನೆಮಾದಲ್ಲಿ ಅಭಿನಯಿಸುವ ಆಫರ್ ಕೊಟ್ಟರು. ಬಳಿಕ ‘ತಿಥಿ’ ಸಿನೆಮಾದಲ್ಲಿ ಸೆಂಚುರಿ ಗೌಡ ಪಾತ್ರ ಮಾಡಿದ್ದರು. ಈ ಚಿತ್ರಕ್ಕಾಗಿ ಅವರಿಗೆ 20 ಸಾವಿರ ಸಂಭಾವನೆ ಸಿಕ್ಕಿತ್ತು ಎನ್ನಾಗಿದೆ. ಆ ಬಳಿಕ ಅನೇಕ ಚಿತ್ರಗಳಲ್ಲಿ ಸಿಂಗ್ರೀಗೌಡ ನಟಿಸಿದ್ದಾರೆ. ಕೆಲವು ಸಿನೆಮಾ ತಂಡದವರು ಸಿಂಗ್ರೀಗೌಡ ಅವರಿಗೆ ಹಣ ಕೊಡದೆ ಅವರಿಗೆ ಮೋಸ ಮಾಡಿದ್ದಾರೆ ಎಂಬ ಮಾತುಗಳು ಕೆಲ ವರ್ಷಗಳ ಹಿಂದೆ ಕೇಳಿಬಂದಿದ್ದವು.

Related Posts

error: Content is protected !!