‘ದೇವನೊಬ್ಬ ಜಾದೂಗಾರ’ ಟೀಸರ್ ಬಿಡುಗಡೆ
ಹೊಸಬರ ‘ದೇವನೊಬ್ಬ ಜಾದೂಗಾರ’ ಟೀಸರ್ ಬಿಡುಗಡೆ
ಹೊಸಚಿತ್ರಕ್ಕೆ ಸಿಂಪಲ್ ಸುನಿ, ಶ್ವೇತಾ ಶ್ರೀವಾಸ್ತವ್, ಹುಚ್ಚ ವೆಂಕಟ್ ಹಾರೈಕೆ…
ತೆರೆಗೆ ಬರಲು ತಯಾರಾಗುತ್ತಿದೆ ‘ದೇವನೊಬ್ಬ ಜಾದೂಗಾರ’ ಚಿತ್ರ
ನಂಬಿಕೆ ಕಳೆದುಕೊಂಡಾಗ ನಮಗೆ ದೇವರ ನೆನಪಾಗುತ್ತದೆ. ‘ದೇವರು ನನ್ನ ಜೀವನದಲ್ಲಿ ಎಷ್ಟೆಲ್ಲ ಆಟ ಆಡಿದನಲ್ಲ…’ ಎನಿಸಬಹುದು. ಆಗೆಲ್ಲ ನಾವು ‘ದೇವನೊಬ್ಬ ಜಾದೂಗಾರ’ ಎಂದುಕೊಳ್ಳುತ್ತೇವೆ. ಈಗ ‘ಖಟ್ವಾಂಗ ಸ್ಟುಡಿಯೋಸ್’ ಬ್ಯಾನರ್ ನಲ್ಲಿ ಇದೇ ಹೆಸರನ್ನಿಟ್ಟು ಸಿನೆಮಾ ಒಂದು ಬರುತ್ತಿದೆ. ಕರ್ನಾಟಕದ ಕರಾವಳಿ ಮೂಲದ, ಸದ್ಯ
ಸೌದಿ ಅರೇಬಿಯಾದಲ್ಲಿ ಉದ್ಯಮಿಯಾಗಿರುವ ಬಾಲಕೃಷ್ಣ ಶೆಟ್ಟಿ, ಈ ‘ದೇವನೊಬ್ಬ ಜಾದೂಗಾರ’ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ದೊಡ್ಡ ತಾರಾಬಳಗವಿರೋ ಈ ‘ದೇವನೊಬ್ಬ ಜಾದೂಗಾರ’ ಸಿನೆಮಾದ ಟೀಸರ್ ಇತ್ತೀಚೆಗೆ ಬಿಡುಗಡೆಯಾಗಿದೆ.
ಕನ್ನಡದ ಚಿತ್ರರಂಗದ ಜನಪ್ರಿಯ ನಟಿ ‘ಸಿಂಪಲ್ಲಾಗ್ ಒಂದ್ ಲವ್‌ಸ್ಟೋರಿ’ ಖ್ಯಾತಿಯ ಶ್ವೇತಾ ಶ್ರೀವಾಸ್ತವ್, ‘ದೇವನೊಬ್ಬ ಜಾದೂಗಾರ’ ಟೀಸರ್ ಬಿಡುಗಡೆ ಮಾಡಿದರು. ನಿರ್ದೇಶಕ ಸಿಂಪಲ್ ಸುನಿ ಮತ್ತು ಬಿಗ್ ಬಾಸ್ ಖ್ಯಾತಿಯ ಹುಚ್ಚ ವೆಂಕಟ್ ಮೊದಲಾದವರು ‘ದೇವನೊಬ್ಬ ಜಾದೂಗಾರ’ ಚಿತ್ರದ ಟೀಸರ್ ಬಿಡುಗಡೆ ಕಾರ್ಯಕ್ರಮದಲ್ಲಿ ಹಾಜರಿದ್ದು ಚಿತ್ರಕ್ಕೆ ಶುಭ ಹಾರೈಸಿದರು.
ಏನಿದು ‘ದೇವನೊಬ್ಬ ಜಾದೂಗಾರ’ ಕಹಾನಿ..?
ಕಾಶಿಪುರ ಎಂಬ ಕಾಲ್ಪನಿಕ ಊರಿನಲ್ಲಿ ನಡೆಯುವ ಕಥೆ ಇದಾಗಿದ್ದು ದೇವ ಎನ್ನುವ ಲಾರಿ ಚಾಲಕನ ಜೀವನವನ್ನು ಕೇಂದ್ರವಾಗಿ ಇಟ್ಟುಕೊಂಡು ‘ದೇವನೊಬ್ಬ ಜಾದೂಗಾರ’ ಸಿನೆಮಾ ಮಾಡಲಾಗಿದೆ. ಅಂದಹಾಗೆ, ಇದು ಕ್ರೈಂ-ಥ್ರಿಲ್ಲರ್ ಕಥಾಹಂದರದ ಚಿತ್ರ. ಅವನ ಜೀವನದಲ್ಲಿ ನಡೆಯುವ ಕಲ್ಪನಾತೀತ ಘಟನೆಗಳು ಜೊತೆಗೆ ಓರ್ವ ಮಂಗಳಮುಖಿ ಪಾತ್ರ ಸಹ ಚಿತ್ರದಲ್ಲಿದೆ. ಪ್ರತಿಯೊಬ್ಬ ಜೀವನದಲ್ಲಿ ದೇವರ ಲೆಕ್ಕಾಚಾರ ಒಂದಾಗಿರುತ್ತದೆ. ಹಾಗಾಗಿ ‘ದೇವನೊಬ್ಬ ಜಾದೂಗಾರ’ ಹೆಸರಿನಲ್ಲಿ ಚಿತ್ರ ಮಾಡಲಾಗಿದೆ ಎಂಬುದು ಚಿತ್ರತಂಡದ ಮಾತು. ಕಾಶಿಪುರದಲ್ಲಿರುವ ಇಬ್ಬರು ಪ್ರಮುಖ ವ್ಯಕ್ತಿಗಳು ದೇವನ ಮೇಲೆ ಬೀರಿದ ಪ್ರಭಾವ ಅದರಿಂದ ದೇವನ ಜೀವನ ಬದಲಾಗುವ ರೀತಿ ಅಂತಿಮವಾಗಿ ದೇವ ಏನಾಗುತ್ತಾನೆ ಎನ್ನುವುದು ಚಿತ್ರದಲ್ಲಿ ಹೇಳಲಾಗಿದೆಯಂತೆ.
‘ದೇವನೊಬ್ಬ ಜಾದೂಗಾರ’ ಚಿತ್ರದ ಟೀಸರ್ ವಿಡಿಯೋವನ್ನು ವೀಕ್ಷಿಸಲು ಈ ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಬಹುದು…
ಕಳೆದ ನಾಲ್ಕು ವರ್ಷಗಳಿಂದ ‘ದೇವನೊಬ್ಬ ಜಾದೂಗಾರ’ ಚಿತ್ರದ ಶೂಟಿಂಗ್ ನಡೆಸಲಾಗಿದೆ. ಯುವ ನಟ ಸಚಿನ್ ಶೆಟ್ಟಿ ಈ ಸಿನೆಮಾದ ಮೂಲಕ ನಾಯಕ ನಟನಾಗಿ ಕನ್ನಡ ಚಿತ್ರರಂಗಕ್ಕೆ ಪರಿಚಯವಾಗುತ್ತಿದ್ದಾರೆ. ಉಗ್ರಂ ಮಂಜು, ಸುಧಾ ಬೆಳವಾಡಿ ಸೇರಿದಂತೆ ಅನೇಕ ಕಲಾವಿದರ ತಾರಾಗಣ ಚಿತ್ರದಲ್ಲಿದೆ.
ಅಂತಿಮ ಹಂತದ ಕೆಲಸದಲ್ಲಿ ಚಿತ್ರತಂಡ
ಬೆಂಗಳೂರು, ತುಮಕೂರು ಸುತ್ತಮುತ್ತ ‘ದೇವನೊಬ್ಬ ಜಾದೂಗಾರ’ ಚಿತ್ರದ ಬಹುತೇಕ ಚಿತ್ರೀಕರಣ ನಡೆಸಲಾಗಿದೆ. ಸದ್ಯ ‘ದೇವನೊಬ್ಬ ಜಾದೂಗಾರ’ ಚಿತ್ರದ ಚಿತ್ರೀಕರಣ ಮುಗಿದಿದ್ದು, ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಅಂತಿಮ ಹಂತದಲ್ಲಿದೆ. ‘ದೇವನೊಬ್ಬ ಜಾದೂಗಾರ’ ಚಿತ್ರಕ್ಕೆ ವಿಜೇತ್ ಚಂದ್ರ ಸಂಕಲನವಿದ್ದರೆ ಋತ್ವಿಕ್ ಮುರಳೀಧರ್ ಹಿನ್ನೆಲೆ ಸಂಗೀತ ಇದೆ. ಚೇತನ್ ಎ. ಡಿ.ಐ, ಶ್ಯಾಮ್ ರಾವ್ ನಗರಗದ್ದೆ ಚಿತ್ರದ ಛಾಯಾಗ್ರಹಣ ಜವಾಬ್ದಾರಿ ನಿರ್ವಹಿಸಿದ್ದಾರೆ. ‘ಲಹರಿ’ ಸಂಸ್ಥೆಯ ಸೋದರ ಸಂಸ್ಥೆ ‘ಎಂ.ಆರ್.ಟಿ.’ ಸಂಸ್ಥೆ ಯೂ-ಟ್ಯೂಬ್ ಚಾನೆಲ್ ನಲ್ಲಿ ‘ದೇವರೊಬ್ಬ ಜಾದೂಗಾರ’ ಚಿತ್ರದ ಟೀಸರ್ ಬಿಡುಗಡೆ ಆಗಿದೆ.















