ಹೊರಬಂತು ‘ವಿಕಲ್ಪ’ ಚಿತ್ರದ ಟೀಸರ್
ಸೈಕಾಲಜಿಕಲ್-ಥ್ರಿಲ್ಲರ್ ‘ವಿಕಲ್ಪ’ ಟೀಸರ್ ರಿಲೀಸ್
ವಾಸ್ತವ ಮತ್ತು ಭ್ರಮೆಯ ನಡುವಿನ ಹೊಸಬರ ‘ಚಿತ್ರ’ಣ
ಹೊಸ ಪ್ರತಿಭೆಗಳ ‘ವಿಕಲ್ಪ’ ತೆರೆಗೆ ಬರಲು ಸಿದ್ಧ
ಬಹುತೇಕ ಹೊಸ ಪ್ರತಿಭೆಗಳೇ ಸೇರಿ ನಿರ್ಮಿಸಿರುವ, ತನ್ನ ಟೈಟಲ್ ಮತ್ತು ಕಂಟೆಂಟ್ ಮೂಲಕವೇ ಸ್ಯಾಂಡಲ್‌ವುಡ್ ಸಿನಿಪ್ರಿಯರನ್ನು ಸೆಳೆಯುತ್ತಿರುವ ‘ವಿಕಲ್ಪ’ ಚಿತ್ರ ತೆರೆಗೆ ಬರಲು ತಯಾರಾಗಿದೆ. ಸದ್ಯ ‘ವಿಕಲ್ಪ’ ಚಿತ್ರದ ಬಹುತೇಕ ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ಪೂರ್ಣಗೊಳಿಸಿ, ಸೆನ್ಸಾರ್ ಮುಂದಿರುವ ಚಿತ್ರತಂಡ, ಇದೀಗ ‘ವಿಕಲ್ಪ’ ಚಿತ್ರದ ಮೊದಲ ಟೀಸರ್ ಅನ್ನು ಬಿಡುಗಡೆ ಮಾಡಿದೆ.
ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ‘ವಿಕಲ್ಪ’ ಚಿತ್ರದ ಟೀಸರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ಹಿರಿಯ ಪತ್ರಕರ್ತ ಮತ್ತು ಲೇಖಕ ಜೋಗಿ ‘ವಿಕಲ್ಪ’ ಟೀಸರ್ ಬಿಡುಗಡೆ ಸಮಾರಂಭದಲ್ಲಿ ಹಾಜರಿದ್ದು, ಚಿತ್ರತಂಡದ ಬೆನ್ನುತಟ್ಟಿದರು.
ಅಂದಹಾಗೆ, ‘ವಿಕಲ್ಪ’ ಒಂದು ಸೈಕಾಲಜಿಕಲ್-ಥ್ರಿಲ್ಲರ್ ಕಥಾಹಂದರದ ಚಿತ್ರವಾಗಿದ್ದು, ಮನುಷ್ಯನ ಮನಸ್ಸಿನ ಸುಪ್ತ ಭಾವನೆಗಳು, ತುಮುಲ-ತಲ್ಲಣಗಳನ್ನು ಈ ಚಿತ್ರದ ಮೂಲಕ ತೆರೆಮೇಲೆ ತರುತ್ತಿದ್ದಾರೆ ಯುವ ನಟ ಕಂ ನಿರ್ದೇಶಕ ಪೃಥ್ವಿರಾಜ್ ಪಾಟೀಲ್. ಆದಷ್ಟು ನೈಜ ವಿಷಯಗಳನ್ನು ಮನರಂಜನೆಯ ಜೊತೆ ಜೊತೆಗೇ ತೆರೆಮೇಲೆ ‘ವಿಕಲ್ಪ’ ಚಿತ್ರದಲ್ಲಿ ಹೇಳಲಾಗಿದೆಯಂತೆ.
ಹೊಸತರದ ಸೈಕಾಲಜಿಕಲ್ -ಥ್ರಿಲ್ಲರ್ ಕಹಾನಿ…
ಕನ್ನಡ ಚಿತ್ರರಂಗದಲ್ಲಿ ಪ್ರತಿವರ್ಷ ನೂರಾರು ಸಿನೆಮಾಗಳು ಬಿಡುಗಡೆಯಾಗಿ ತೆರೆಗೆ ಬರುತ್ತಿವೆ. ಆದರೆ ಇಷ್ಟೊಂದು ಸಿನೆಮಾಗಳ ಪೈಕಿ ಸೈಕಾಲಜಿಕಲ್-ಥ್ರಿಲ್ಲರ್ ಸಿನೆಮಾಗಳ ಸಂಖ್ಯೆ ಮಾತ್ರ ಕೇವಲ ಬೆರಳೆಣಿಕೆಯಷ್ಟು ಮಾತ್ರ ಎಂದೇ ಹೇಳಬಹುದು.
ಅಂಥ ಬೆರಳೆಣಿಕೆಯ ವಿರಳ ಸಿನೆಮಾಗಳ ಸಾಲಿಗೆ ಸೇರುವ ಚಿತ್ರ ‘ವಿಕಲ್ಪ’. ಬಹುತೇಕ ಯುವ ಮನಸ್ಸುಗಳೇ ಸೇರಿ ಮಾಡಲು ಹೊರಟಿರುವ ‘ವಿಕಲ್ಪ’ ಕನ್ನಡ ಚಿತ್ರರಂಗದ ಮಟ್ಟಿಗೆ ಒಂದು ಅಪರೂಪದ ಚಿತ್ರವಾಗಿ ನಿಲ್ಲದೆ ಎಂಬುದು ಚಿತ್ರತಂಡದ ನಿರೀಕ್ಷೆ.
‘ವಿಕಲ್ಪ’ ಅಂದರೇನು…?
”ವಿಕಲ್ಪ’ ಎಂದರೆ ವಾಸ್ತವ ಮತ್ತು ಕಲ್ಪನೆಗಳ ನಡುವಿನ ಒಂದು ಸ್ಥಿತಿ ಎಂದರ್ಥ. ನಮ್ಮ ಚಿತ್ರದ ಶೀರ್ಷಿಕೆಯ ಪ್ರಕಾರ, ಇದೊಂದು ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದ ಕಥೆ ಎಂದೆನಿಸಿದರೂ, ಇದು ಒಂದು ಸಂಪೂರ್ಣ ಥ್ರಿಲ್ಲರ್ ಚಿತ್ರ ಎನ್ನುವುದು ವಿಶೇಷ. ಸೈಕಾಲಜಿಕಲ್-ಥ್ರಿಲ್ಲರ್ ಅಂಶಗಳ ಜೊತೆಗೆ ನವಿರಾದ ಹಾಸ್ಯ ಮತ್ತು ಮನೋರಂಜನೆಗೆ ಹೆಚ್ಚಿನ ಒತ್ತನ್ನು ಕೊಟ್ಟು ಇಡೀ ಚಿತ್ರದ ಕಥೆಯನ್ನು ಹೆಣೆಯಲಾಗಿದೆ. ಈ ಚಿತ್ರಕ್ಕೆ ಚಿತ್ರದ ಕಥೆಯೆ ಹೀರೋ. ಇಲ್ಲಿ ಪ್ರತಿ ಪಾತ್ರಗಳೂ ಮಾತನಾಡುತ್ತವೆ. ಪ್ರತಿ ಪಾತ್ರಗಳೂ ನೋಡುಗರ ಮನಮುಟ್ಟುತ್ತವೆ’ ಎಂದು ಹೇಳುತ್ತಾರೆ ‘ವಿಕಲ್ಪ’ ನಿರ್ದೇಶಕ ಪೃಥ್ವಿರಾಜ್ ಪಾಟೀಲ್.
ಪೃಥ್ವಿರಾಜ್ ಪಾಟೀಲ್ ಪರಿಕಲ್ಪನೆಯಲ್ಲಿ ಅರಳಿದ ‘ವಿಕಲ್ಪ’
ಸುಮಾರು ಎರಡು ದಶಕಗಳಿಗೂ ಹೆಚ್ಚಿನ ಕಾಲ ಹವ್ಯಾಸಿ ರಂಗಭೂಮಿಯಲ್ಲಿ ಅನುಭವಪಡೆದಿರುವ, ಪ್ರತಿಷ್ಠಿತ ಬಹುರಾಷ್ಟ್ರೀಯ ಐಟಿ ಕಂಪನಿಯ ವ್ಯವಸ್ಥಾಪಕ ನಿರ್ದೇಶಕರಾಗಿರುವ ಪೃಥ್ವಿರಾಜ್ ಪಾಟೀಲ್, ತಮ್ಮ ಪರಿಕಲ್ಪನೆಯನ್ನು ‘ವಿಕಲ್ಪ’ ಚಿತ್ರದ ಮೂಲಕ ತೆರೆಮೇಲೆ ತರುತ್ತಿದ್ದಾರೆ. ‘ಸುರೂಸ್ ಟಾಕೀಸ್’ ಸಂಸ್ಥೆಯ ಅಡಿಯಲ್ಲಿ ಶ್ರೀಮತಿ ಇಂದಿರಾ ಶಿವಸ್ವಾಮಿ ನಿರ್ಮಾಣದಲ್ಲಿ
ಮೂಡಿಬರುತ್ತಿರುವ ಚೊಚ್ಚಲ ಚಿತ್ರ ಇದಾಗಿದ್ದು, ಈ ಚಿತ್ರದಲ್ಲಿ ನಿರ್ದೇಶಕ ಪೃಥ್ವಿರಾಜ್ ಪಾಟೀಲ್ ಅವರೇ ತೆರೆಮೇಲೂ ಮುಖ್ಯಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
‘ವಿಕಲ್ಪ’ ಚಿತ್ರದಲ್ಲಿ ಪೃಥ್ವಿರಾಜ್ ಪಾಟೀಲ್ ಅವರಿಗೆ ನಾಗಶ್ರೀ ಹೆಬ್ಬಾರ್ ಜೋಡಿಯಾಗಿ ಅಭಿನಯಿಸಿದ್ದಾರೆ. ಉಳಿದಂತೆ ಸಂಧ್ಯಾ ವಿನಾಯಕ್, ಗಣಪತಿ ವಡ್ಡಿನಗದ್ದೆ, ಸ್ಯರೂಪ್ ಬಚ್ಚ್, ಪೂಜಾ ಬಚ್ಚ್, ಜಯಂತ್ ಡೇವಿಡ್, ಡಾ. ಪ್ರಕೃತಿ, ಮಾಸ್ಟರ್ ಆಯುಷ್ ಸಂತೋಷ್ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಕನ್ನಡ ಚಿತ್ರರಂಗದ ಪ್ರಸಿದ್ದ ನಟಿಯರಲ್ಲೊಬ್ಬರಾದ ಹರಿಣಿ ಶ್ರೀಕಾಂತ್ ಈ ಚಿತ್ರದ ವಿಭಿನ್ನ ಮತ್ತು ವಿಶೇಷವಾದ ಪಾತ್ರವೊಂದಕ್ಕೆ ಬಣ್ಣ ಹಚ್ಚಿದ್ದಾರೆ. ಜೊತೆಗೆ ಮಲೆನಾಡಿನ ಪ್ರಸಿದ್ದ ರಂಗಭೂಮಿ ಕಲಾವಿದ ಗಣಪತಿ ಹಿತ್ತಲಕೈ, ಪ್ರಜ್ಞಾ ಗಣಪತಿ, ಮಾಧವ ಶರ್ಮಾ, ಗಿರೀಶ್ ಹೆಗಡೆ, ಗಣಪತಿ ಎ. ಆರ್, ‘ರಾಜ್ಯ ಪ್ರಶಸ್ತಿ’ ವಿಜೇತ ಯಕ್ಷಗಾನ ಕಲಾವಿದ ಗೋಡೆ ನಾರಾಯಣ ಹೆಗಡೆ ಮುಂತಾದ ದೊಡ್ಡ ಕಲಾವಿದರ ತಾರಾಗಣವೇ ‘ವಿಕಲ್ಪ’ದಲ್ಲಿರುವುದು ಮತ್ತೊಂದು ವಿಶೇಷ.
‘ವಿಕಲ್ಪ’ ಚಿತ್ರದ ಟೀಸರ್ ವಿಡಿಯೋವನ್ನು ವೀಕ್ಷಿಸಲು ಈ ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಬಹುದು…
ದೇಶ-ವಿದೇಶಗಳಲ್ಲೂ ‘ವಿಕಲ್ಪ’ ಚಿತ್ರೀಕರಣ
‘ವಿಕಲ್ಪ’ ಚಿತ್ರದ ಮತ್ತೊಂದು ವಿಶೇಷತೆಯೆಂದರೆ, ಅನೇಕ ನುರಿತ ಮಾನಸಿಕ ವೈದ್ಯರ ಸಲಹೆಯ ಮೇರೆಗೆ ಈ ಚಿತ್ರದ ಹಲವು ಸನ್ನಿವೇಶಗಳನ್ನು ಚಿತ್ರಿಸಲಾಗಿರುವುದು. ಚಿತ್ರದ ದೃಶ್ಯಗಳು ಸಹಜತೆಗೆ ಅತ್ಯಂತ ಹತ್ತಿರವಾಗಿರಬೇಕು ಎಂಬ ಆಶಯದಿಂದ ಚಿತ್ರತಂಡ ಇಂಥದ್ದೊಂದು ಕೆಲಸ ಮಾಡಿದೆ. ಬೆಂಗಳೂರು, ತೀರ್ಥಹಳ್ಳಿ, ಸಾಗರ, ಶಿರಸಿ, ಕುಂದಾಪುರ, ಯಲ್ಲಾಪುರ ಸುತ್ತಮುತ್ತ ‘ವಿಕಲ್ಪ’ ಚಿತ್ರದ ಬಹುತೇಕ ಚಿತ್ರೀಕರಣ ನಡಸಲಾಗಿದ್ದು, ಸಿಂಗಪುರ, ನೆದರ್ಲ್ಯಾಂಡ್ ಸೇರಿದಂತೆ ವಿದೇಶಗಳಲ್ಲೂ ‘ವಿಕಲ್ಪ’ದ ಚಿತ್ರೀಕರಣ ಮಾಡಲಾಗಿದೆ. 
ಇನ್ನು ‘ವಿಕಲ್ಪ’ ಚಿತ್ರಕ್ಕೆ ಮಿಥುನ್ ತೀರ್ಥಹಳ್ಳಿ ಸಹ ನಿರ್ದೇಶನ ಮಾಡಿದ್ದಾರೆ. ‘ವಿಕಲ್ಪ’ ಸುಂದರ ದೃಶ್ಯಗಳನ್ನು ಅಭಿರಾಮ್ ಗೌಡ ತಮ್ಮ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದರೆ, ದಕ್ಷಿಣ ಭಾರತದ ಖ್ಯಾತ ಸಂಕಲನಕಾರ ಸುರೇಶ್ ಆರುಮುಗಮ್ ಚಿತ್ರಕ್ಕೆ ಸಂಕಲನ ಕಾರ್ಯ ನಿರ್ವಹಿಸಿದ್ದಾರೆ. ‘ವಿಕಲ್ಪ’ದ ವಿಭಿನ್ನ ಹಾಡುಗಳಿಗೆ ಸಂವತ್ಸರ ಸಂಗೀತ ಸಂಯೋಜಿಸಿದ್ದು, ಪೃಥ್ವಿರಾಜ್ ಪಾಟಿಲ್ ಮತ್ತು ಕೌಂಡಿನ್ಯ ಕುಡ್ಲುತೋಟ ಹಾಡುಗಳಿಗೆ ಸಾಹಿತ್ಯ ರಚಿಸಿದ್ದಾರೆ. ಸಿದ್ದಾರ್ಥ್ ಬೆಳ್ಮಣ್ಣು, ಸಂವತ್ಸರ, ಶ್ರೀರಂಜಿನಿ, ಇಂಚರ ಮೊದಲಾದ ಗಾಯಕರ ಧ್ವನಿಯಲ್ಲಿ ‘ವಿಕಲ್ಪ’ದ ಹಾಡುಗಳು ಮೂಡಿಬಂದಿವೆ. ಸದ್ಯ ‘ವಿಕಲ್ಪ’ ಚಿತ್ರದ ಅಂತಿಮ ಹಂತದ ಕೆಲಸಗಳು ಮುಗಿದಿದ್ದು, ಇದೇ 2026ರ ಜನವರಿ 30ಕ್ಕೆ ‘ವಿಕಲ್ಪ’ ಚಿತ್ರವನ್ನು ತೆರೆಗೆ ತರಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ.















