Quick ಸುದ್ದಿಗೆ ಒಂದು click

ಜ. 30ಕ್ಕೆ ‘ಚೌಕಿದಾರ್’ ಚಿತ್ರ ತೆರೆಗೆ

‘ಚೌಕಿದಾರ್’ ಸಿನೆಮಾದ ರಿಲೀಸ್ ಡೇಟ್ ಅನೌನ್ಸ್

ಚಿತ್ರದ ಬಿಡುಗಡೆ ದಿನಾಂಕವನ್ನು ಘೋಷಿಸಿದ ‘ಆಕ್ಷನ್‌ ಪ್ರಿನ್ಸ್‌’ ಧ್ರುವ ಸರ್ಜಾ

ಜ. 30ಕ್ಕೆ ಪೃಥ್ವಿ ಅಂಬಾರ್, ಧನ್ಯಾ ರಾಮಕುಮಾರ್ ಚಿತ್ರ ತೆರೆಗೆ

ಈ ಹಿಂದೆ ಶ್ರೀಮುರಳಿ ಅಭಿನಯದ ‘ರಥಾವರ’ ಸಿನೆಮಾವನ್ನು ತೆರೆಗೆ ತಂದಿದ್ದ ನಿರ್ದೇಶಕ ಚಂದ್ರಶೇಖರ್ ಬಂಡಿಯಪ್ಪ ಈ ಬಾರಿ ‘ಚೌಕಿದಾರ್’ ಚಿತ್ರವನ್ನು ತೆರೆಗೆ ತರುವ ತಯಾರಿಯಲ್ಲಿದ್ದಾರೆ. ಈಗಾಗಲೇ ‘ಚೌಕಿದಾರ್’ ಚಿತ್ರದ ಟೀಸರ್ ಹಾಗೂ ಹಾಡುಗಳು ಬಿಡುಗಡೆಯಾಗಿದ್ದು, ಒಂದಷ್ಟು ಸಿನಿಪ್ರಿಯರ ಗಮನವನ್ನು ಸೆಳೆಯಲು ಯಶಸ್ವಿಯಾಗಿದೆ. ಸದ್ಯ ಭರದಿಂದ ‘ಚೌಕಿದಾರ್’ ಚಿತ್ರದ ಪ್ರಚಾರ ಕಾರ್ಯಗಳಲ್ಲಿ ನಿರತವಾಗಿರುವ ಚಿತ್ರತಂಡ, ಇದೀಗ ಚಿತ್ರದ ಬಿಡುಗಡೆಯ ದಿನಾಂಕವನ್ನು ಅಧಿಕೃತವಾಗಿ ಘೊಷಿಸಿದೆ.

‘ಚೌಕಿದಾರ್’ನಿಗೆ ಧ್ರುವ ಸರ್ಜಾ ಸಾಥ್‌!

ಅಂದಹಾಗೆ, ‘ಚೌಕಿದಾರ್’ ಸಿನೆಮಾಕ್ಕೆ ಕನ್ನಡದ ‘ಆಕ್ಷನ್‌ ಪ್ರಿನ್ಸ್‌’ ಧ್ರುವ ಸರ್ಜಾ ಸಾಥ್‌ ನೀಡಿದ್ದಾರೆ. ಇದೇ 2026ರ ಜನವರಿ ತಿಂಗಳ 30ರಂದು ‘ಚೌಕಿದಾರ್’ ಸಿನೆಮಾ ತೆರೆಗೆ ಬರಲಿದೆ. ಹೌದು, ‘ಚೌಕಿದಾರ್’ ಚಿತ್ರದ ಬಿಡುಗಡೆಯ ದಿನಾಂಕವನ್ನು ಅಧಿಕೃತವಾಗಿ ಘೋಷಣೆ ಮಾಡಿರುವ ನಟ ಧ್ರುವ ಸರ್ಜಾ, ಇಡೀ ‘ಚೌಕಿದಾರ್’ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.

ಬಹುತಾರಾಗಣದಲ್ಲಿ ಅರಳಿದ ‘ಚೌಕಿದಾರ್’

‘ಚೌಕಿದಾರ್’ ಚಿತ್ರದಲ್ಲಿ ಪೃಥ್ವಿ ಅಂಬಾರ್ ನಾಯಕನಾಗಿ ಹಾಗೂ ಧನ್ಯಾ ರಾಮಕುಮಾರ್ ನಾಯಕಿಯಾಗಿ ಅಭಿನಯಿಸಿದ್ದಾರೆ. ಉಳಿದಂತೆ ಚಿತ್ರರಂಗದಲ್ಲಿ 50 ವರ್ಷ ಪೂರೈಸಿರುವ ಹಿರಿಯ ನಟ ಸಾಯಿ ಕುಮಾರ್ ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ. ‘ಚೈತ್ರದ ಪ್ರೇಮಾಂಜಲಿ’ ಚಿತ್ರದ ನಾಯಕಿ ಶ್ವೇತಾ, ಸುಧಾರಾಣಿ ಚಿತ್ರದ ಇತರ ಪ್ರಮುಖ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಧರ್ಮ, ‘ಬಿಗ್ ಬಾಸ್’ ಖ್ಯಾತಿಯ ಗಿಲ್ಲಿ ನಟ ಸೇರಿದಂತೆ ಹಲವರು ‘ಚೌಕಿದಾರ್’ ಚಿತ್ರದ ತಾರಾಬಳಗದಲ್ಲಿದ್ದಾರೆ.

‘ಚೌಕಿದಾರ್’ ಸೆನ್ಸಾರ್‌ ಪಾಸ್‌…

‘ವಿ. ಎಸ್. ಎಂಟರ್ಟೈನ್ಮೆಂಟ್’ ಬ್ಯಾನರ್ ನಲ್ಲಿ ಕಲ್ಲಹಳ್ಳಿ ಚಂದ್ರಶೇಖರ್ ‘ಚೌಕಿದಾರ್‌’ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ವಿದ್ಯಾದೇವಿ ಚಿತ್ರ ನಿರ್ಮಾಣದಲ್ಲಿ ಸಾಥ್ ನೀಡಿದ್ದಾರೆ. ‘ಚೌಕಿದಾರ್‌’ ಚಿತ್ರದ ಹಾಡುಗಳಿಗೆ ವಿ. ನಾಗೇಂದ್ರ ಪ್ರಸಾದ್, ಪ್ರಮೋದ್ ಮರವಂತೆ, ಸಂತೋಷ್ ನಾಯಕ್ ಸಾಹಿತ್ಯ ಬರೆದಿದ್ದಾರೆ. ಚಿತ್ರಕ್ಕೆ ಸಿದ್ದು ಕಂಚನಹಳ್ಳಿ ಛಾಯಾಗ್ರಹಣ, ಜ್ಞಾನೇಶ್‌ ಮಠದ್‌ ಸಂಕಲನವಿದೆ. ಚಿತ್ರದ ಹಾಡುಗಳಿಗೆ ಸಚಿನ್ ಬಸ್ರೂರ್ ಸಂಗೀತ ಸಂಯೋಜಿಸಿದ್ದಾರೆ. ಅಪ್ಪ-ಮಗನ ಬಾಂಧವ್ಯದ ಕಥೆ ಹೊಂದಿರುವ ಈ ಕೌಟುಂಬಿಕ ಚಿತ್ರವನ್ನು ವೀಕ್ಷಿಸಿದ ಪ್ರಾದೇಶಿಕ ಸೆನ್ಸಾರ್‌ ಮಂಡಳಿ, ‘ಚೌಕಿದಾರ್‌’ ಚಿತ್ರಕ್ಕೆ ‘ಯು/ಎ’ ಸರ್ಟಿಫಿಕೇಟ್‌ ನೀಡಿ, ಬಿಡುಗಡೆಗೆ ಅಸ್ತು ಎಂದಿದೆ.

Related Posts

error: Content is protected !!