ಕಮಲ್-ಶಿವ ಕಾರ್ತಿಕೇಯನ್ ಹೊಸಚಿತ್ರ ‘ಸಿಯೋನ್’ ಟೈಟಲ್ ಅನೌನ್ಸ್
‘ಸಿಯೋನ್’ ಆಗಿ ಬಂದ ‘ಅಮರನ್’ ಹೀರೋ..!
ಕಮಲ್ -ಶಿವಕಾರ್ತಿಕೇಯನ್ ಜೋಡಿಯ ಹೊಸಚಿತ್ರಕ್ಕೆ ಟೈಟಲ್ ಫಿಕ್ಸ್
ಕಮಲ್ ಹಾಸನ್ ನಿರ್ಮಾಣದಲ್ಲಿ ಶಿವಕಾರ್ತಿಕೇಯನ್ ಹೊಸ ಸಿನೆಮಾ
ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ಕಮಲ್ ಹಾಸನ್ ಹಾಗೂ ಶಿವಕಾರ್ತಿಯೇನ್ ಜೋಡಿ ಮತ್ತೊಮ್ಮೆ ತೆರೆಮೇಲೆ ಪ್ರೇಕ್ಷಕರನ್ನು ರಂಜಿಸಲು ಸಿದ್ದವಾಗಿದೆ. ಹೌದು, ಈ ಹಿಂದೆ ಕಮಲ್ ಹಾಸನ್ ನಿರ್ಮಿಸಿದ್ದ ‘ಅಮರನ್’ ಸಿನೆಮಾ ಸೂಪರ್ ಹಿಟ್ ಆಗಿತ್ತು. ಈ ಚಿತ್ರದಲ್ಲಿ ಶಿವಕಾರ್ತಿಕೇಯನ್ ನಾಯಕ ನಟನಾಗಿ ನಟಿಸಿದ್ದರು. ಇದೀಗ ಈ ಜೋಡಿ, ಮತ್ತೆ ‘ಸಿಯೋನ್’ ಎಂಬ ಸಿನೆಮಾಗಾಗಿ ಒಂದಾಗಿದೆ.
ಕೆಲ ತಿಂಗಳ ಹಿಂದಷ್ಟೇ ಕಮಲ್ ಹಾಸನ್ ಮತ್ತು ಶಿವಕಾರ್ತಿಕೇಯನ್ ಕಾಂಬಿನೇಶನ್‌ನಲ್ಲಿ ಮೂಡಿಬರುತ್ತಿರುವ ಹೊಸ ಸಿನೆಮಾದ ಬಗ್ಗೆ ಚಿತ್ರತಂಡದ ಕಡೆಯಿಂದ ಅಧಿಕೃತ ಘೋಷಣೆ ಹೊರಬಿದ್ದಿತ್ತು. ಆದರೆ ಈ ಸಿನೆಮಾದ ಟೈಟಲ್ ಅನೌನ್ಸ್ ಆಗಿರಲಿಲ್ಲ. ಇದೀಗ ಕಮಲ್ ಹಾಸನ್ ಮತ್ತು ಶಿವಕಾರ್ತಿಕೇಯನ್ ಜೋಡಿಯ ಹೊಸಚಿತ್ರಕ್ಕೆ ಶೀರ್ಷಿಕೆ ಅಂತಿಮವಾಗಿದ್ದು, ಈ ಹೊಸಚಿತ್ರಕ್ಕೆ ‘ಸಿಯೋನ್’ ಎಂದು ಹೆಸರಿಡಲಾಗಿದೆ. ಚಿತ್ರತಂಡ ಅಧಿಕೃತವಾಗಿ ‘ಸಿಯೋನ್’ ಚಿತ್ರದ ಶೀರ್ಷಿಕೆಯನ್ನು ಘೋಷಿಸಿದ್ದು, ಚಿತ್ರದ ನಾಯಕ ನಟ ಶಿವಕಾರ್ತಿಕೇಯನ್ ಅವರ ಹುಟ್ಟುಹಬ್ಬದ ವಿಶೇಷವಾಗಿ ‘ಸಿಯೋನ್’ ಸಿನೆಮಾದ ಗ್ಲಿಂಪ್ಸ್ ಬಿಡುಗಡೆ ಮಾಡಲಾಗಿದೆ.
ಮಾಸ್ ಲುಕ್‌ನಲ್ಲಿ ‘ಸಿಯೋನ್’ ಶಿವಕಾರ್ತಿಕೇಯನ್ ಎಂಟ್ರಿ
‘ರಾಜ್ ಕಮಲ್ ಇಂಟರ್ನ್ಯಾಷನಲ್’ ಹಾಗೂ ‘ಟರ್ಮಿರಿಕ್ ಮೀಡಿಯಾ ಬ್ಯಾನರ್ ನಡಿ ಕಮಲ್ ಹಾಸನ್ ಹಾಗೂ ಆರ್. ಮಹೇಂದ್ರನ್ ನಿರ್ಮಾಣದಲ್ಲಿ ‘ಸಿಯೋನ್’ ಸಿನೆಮಾ ಮೂಡಿ ಬರ್ತಿದೆ. ಶಿವಕಾರ್ತಿಕೇಯನ್ ಹುಟ್ಟುಹಬ್ಬದ ವಿಶೇಷವಾಗಿ ಬಿಡುಗಡೆ ಮಾಡಲಾಗಿರುವ ‘ಸಿಯೋನ್’ ಗ್ಲಿಂಪ್ಸ್‌ನಲ್ಲಿ ಹಣೆಯಲ್ಲಿ ವಿಭೂತಿ ಧರಿಸಿ, ಕೈಯಲ್ಲಿ ಕತ್ತಿ ಹಿಡಿದು ನಾಯಕ ನಟ ಶಿವಕಾರ್ತಿಕೇಯನ್ ಮಾಸ್ ಅವತಾರದಲ್ಲಿ ಎಂಟ್ರಿಕೊಟ್ಟಿದ್ದಾರೆ.
‘ಸಿಯೋನ್’ ಚಿತ್ರದ ಟೈಟಲ್ ಗ್ಲಿಂಪ್ಸ್ ವಿಡಿಯೋವನ್ನು ವೀಕ್ಷಿಸಲು ಈ ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಬಹುದು…
‘ಥಾಯ್ ಕಿಝವಿ’ ಸಿನೆಮಾ ನಿರ್ದೇಶಿಸಿರುವ ಶಿವಕುಮಾರ್ ಮುರುಗೇಶನ್ ‘ಸಿಯೋನ್’ ಸಿನೆಮಾಗೆ ಆಕ್ಷನ್-ಕಟ್ ಹೇಳುತ್ತಿದ್ದಾರೆ. ಚಿತ್ರದ ಹಾಡುಗಳಿಗೆ ಸಂತೋಷ್ ನಾರಾಯಣ್ ಸಂಗೀತ ಸಂಯೋಜಿಸುತ್ತಿದ್ದಾರೆ. ‘ಸಿಯೋನ್’ ಸಿನೆಮಾಕ್ಕೆ ವಿವೇಕ್ ವಿಜಯಕುಮಾರ್ ಛಾಯಾಗ್ರಹಣ, ಸ್ಯಾನ್ ಲೋಕೇಶ್ ಸಂಕಲನ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದೇ 2026ರ ಅಕ್ಟೋಬರ್ ತಿಂಗಳಲ್ಲಿ ವಿಶ್ವಾದ್ಯಂತ ‘ಸಿಯೋನ್’ ಚಿತ್ರವನ್ನು ಬಿಡುಗಡೆ ಮಾಡಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ.















