Pop Corner

‘ಪಬ್ಬಾರ್’ಗಾಗಿ ಗೆಟಪ್ ಬದಲಿಸಿದ ಅಯ್ಯಪ್ಪ

‘ಪಬ್ಬಾರ್’ ಚಿತ್ರಕ್ಕಾಗಿ ಲುಕ್ ಬದಲಾಯಿಸಿದ ಅಯ್ಯಪ್ಪ

ಅಯ್ಯಪ್ಪ ಈಗ ಸೂಪರಿಟೆಂಡ್‌ ಆಫ್‌ ಪೊಲೀಸ್‌ (ಎಸ್‌.ಪಿ) ಆಗಿ ಮಿಂಚು…

14 ವರ್ಷದ ಬಳಿಕ ‘ಪಬ್ಬಾರ್‌’ ಚಿತ್ರಕ್ಕಾಗಿ ಕ್ಲೀನ್ ಶೇವ್…!

ಕನ್ನಡ ಚಿತ್ರರಂಗದಲ್ಲಿ ತಮ್ಮ ವಿಭಿನ್ನ ಮ್ಯಾನರಿಸಂ, ಖಡಕ್‌ ಧ್ವನಿ, ಉದ್ದನೆಯ ಗಡ್ಡದ ಮೂಲಕ ಖಳನಟನಾಗಿ ನೋಡುಗರ ಎದೆ ನಡುಗಿಸುವವರು ನಟ ಕಂ ನಿರ್ದೇಶಕ ಅಯ್ಯಪ್ಪ ಪಿ. ಶರ್ಮ. ಸುಮಾರು 14 ವರ್ಷಗಳಿಂದ ತಮ್ಮ ಉದ್ದನೆಯ ಗಡ್ಡದಲ್ಲೇ ಬಹುತೇಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದ ಅಯ್ಯಪ್ಪ, ಈ ಬಾರಿ ತಮ್ಮ ಗಡ್ಡಕ್ಕೆ ಕತ್ತರಿ ಪ್ರಯೋಗಿಸಿ, ಹೊಸ ಅವತಾರದಲ್ಲಿ ಪ್ರೇಕ್ಷಕರ ಮುಂದೆ ಬರಲು ತಯಾರಾಗಿದ್ದಾರೆ.

ಹೌದು, ‘ಗೀತಾ ಪಿಕ್ಚರ್ಸ್’ ಬ್ಯಾನರ್ ಅಡಿಯಲ್ಲಿ ಶ್ರೀಮತಿ ಗೀತಾ ಶಿವರಾಜ ಕುಮಾರ್ ನಿರ್ಮಿಸುತ್ತಿರುವ ‘ಪಬ್ಬಾರ್’  ಚಿತ್ರದಲ್ಲಿ ಧೀರೇನ್ ರಾಮ್ ಕುಮಾರ್ ನಾಯಕನಾಗಿ, ಅಮೃತಾ ಪ್ರೇಮ್ ನಾಯಕಿಯಾಗಿ ನಟಿಸುತ್ತಿದ್ದಾರೆ. ‘ಶಾಖಾಹಾರಿ’ ನಿರ್ದೇಶಕ ಸಂದೀಪ್ ಸುಂಕದ್ ಸಾರಥ್ಯದಲ್ಲಿ ಮೂಡಿ ಬರ್ತಿರುವ ‘ಪಬ್ಬಾರ್’ ಚಿತ್ರದ ಚಿತ್ರೀಕರಣ ಭರದಿಂದ ನಡೆಯುತ್ತಿದ್ದು, ಇದೀಗ ಈ ‘ಪಬ್ಬಾರ್‌’ ಚಿತ್ರದ ಪ್ರಮುಖ ಪಾತ್ರಕ್ಕೆ ದಕ್ಷಿಣ ಭಾರತದ ಖ್ಯಾತ ಕಲಾವಿದ ಅಯ್ಯಪ್ಪ ಪಿ. ಶರ್ಮ ಎಂಟ್ರಿ ಕೊಟ್ಟಿದ್ದಾರೆ.

ಖಡಕ್‌ ಖಾಕಿ ತೊಟ್ಟ ಅಯ್ಯಪ್ಪ

ಅಂದಹಾಗೆ, ‘ಪಬ್ಬಾರ್‌’ ಸಿನೆಮಾದಲ್ಲಿ ನಟ ಅಯ್ಯಪ್ಪ ಪಿ. ಶರ್ಮ ಉತ್ತರ ಭಾರತದ ಖಡಕ್ ಪೊಲೀಸ್ ಆಫೀಸರ್ ಆಗಿ ನಟಿಸುತ್ತಿದ್ದಾರೆ. ಭಾಸ್ಕರ್‌ ಸುಂಕದ್‌ ಎಂಬ ಹೆಸರಿನ ಪೊಲೀಸ್‌ ಅಧಿಕಾರಿಯ ಪಾತ್ರಕ್ಕಾಗಿ ಅಯ್ಯಪ್ಪ 14 ವರ್ಷದ ಬಳಿಕ ಹೇರ್ ಕಟ್ ಮತ್ತು ಕ್ಲೀನ್ ಶೇವ್ ಮಾಡಿ ಸ್ಮಾರ್ಟ್ ಲುಕ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಉದ್ದ ಗಡ್ಡ ಬಿಟ್ಟು ತಮ್ಮ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಅವರೀಗ ‘ಪಬ್ಬಾರ್’ ಸಿನೆಮಾದ ಎಸ್‌. ಪಿ (SP) ಪಾತ್ರಕ್ಕಾಗಿ ತಮ್ಮ ಗಡ್ಡಕ್ಕೆ ಕತ್ತರಿ ಹಾಕಿಸಿಕೊಂಡಿದ್ದು, ಅಯ್ಯಪ್ಪ ಅವರ ಹೊಸ ಗೆಟಪ್‌ ನೋಡುಗರ ಗಮನ ಸೆಳೆಯತ್ತಿದೆ.

ಬಹುಕಲಾವಿದರ ತಾರಾಗಣದಲ್ಲಿ ‘ಪಬ್ಬಾರ್‌’

ಇನ್ನು ‘ಪಬ್ಬಾರ್‌’ ಸಿನೆಮಾದ ಹಾಡುಗಳಿಗೆ ಮಯೂರ್ ಅಂಬೇಕಲ್ಲು ಸಂಗೀತ ಸಂಯೋಜಿಸಿದ್ದು, ಚಿತ್ರಕ್ಕೆ ವಿಶ್ವಜಿತ್ ರಾವ್ ಛಾಯಾಗ್ರಹಣ ಕಾರ್ಯ ನಿರ್ವಹಿಸುತ್ತಿದ್ದಾರೆ. ‘ಪಬ್ಬಾರ್‌’ ಚಿತ್ರದಲ್ಲಿ ಧೀರೇನ್‌ ರಾಮಕುಮಾರ್‌, ಅಮೃತಾ ಪ್ರೇಮ್‌ ಅವರೊಂದಿಗೆ ಅಚ್ಯುತ್ ಕುಮಾರ್, ಗೋಪಾಲಕೃಷ್ಣ ದೇಶಪಾಂಡೆ, ಹಿರಿಯ ನಟ ರಾಮಕೃಷ್ಣ, ‘ಸಕುಟುಂಬ ಸಮೇತ’ ಖ್ಯಾತಿಯ ಭರತ್ ಜಿ. ಬಿ, ಶ್ರೀಹರ್ಷ ಗೋಭಟ್ ಮೊದಲಾದ ಕಲಾವಿದರು ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ.

ಇನ್ನು ‘ಪಬ್ಬಾರ್’ ಕ್ರೈಂ, ಅಡ್ವೆಂಚರಸ್ ಥ್ರಿಲ್ಲರ್ ಸಿನೆಮಾವಾಗಿದೆ. ಹಿಮಾಚಲ ಪ್ರದೇಶದ ಶಿಮ್ಲಾ ಬಳಿಯ ‘ಪಬ್ಬಾರ್’ ನದಿಯ ಸುತ್ತಲಿನ ವಾತಾವರಣದಲ್ಲಿ ಈ ಚಿತ್ರದ ಕಥೆ ಸಾಗುತ್ತದೆ. ಹಾಗಾಗಿ ಚಿತ್ರಕ್ಕೆ ‘ಪಬ್ಬಾರ್’ ಎಂಬ ಟೈಟಲ್ ಇಡಲಾಗಿದೆ. ಸದ್ಯ ‘ಪಬ್ಬಾರ್‌’ ಚಿತ್ರದ ಚಿತ್ರೀಕರಣ ಭರದಿಂದ ನಡೆಯುತ್ತಿದ್ದು, ಇದೇ ವರ್ಷದ ಕೊನೆಗೆ ‘ಪಬ್ಬಾರ್‌’ ಚಿತ್ರವನ್ನು ಪ್ರೇಕ್ಷಕರ ಮುಂದೆ ತರುವ ಯೋಜನೆ ಹಾಕಿಕೊಂಡಿದೆ ಚಿತ್ರತಂಡ.

Related Posts

error: Content is protected !!