Quick ಸುದ್ದಿಗೆ ಒಂದು click

ಕನ್ನಡದ ಹಿರಿಯ ಚಿತ್ರ ನಿರ್ದೇಶಕ ಜೋ ಸೈಮನ್ ನಿಧನ

ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕ ಜೋ ಸೈಮನ್ ಇನ್ನಿಲ್ಲ

ಫಿಲಂ ಚೇಂಬರ್​​ ಸಭೆಯಲ್ಲಿದ್ದಾಗಲೇ ಜೋ ಸೈಮನ್ ಗೆ ಹೃದಯಾಘಾತ

ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲೇ ಕೊನೆ ಉಸಿರೆಳೆದ ಜೋ ಸೈಮನ್

ಫೆ. 13, ಬೆಂಗಳೂರು ; ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕ ಜೋ ಸೈಮನ್ ಇಂದು (2026 ಫೆ. 13) ಮಧ್ಯಾಹ್ನ ನಿಧನ ಹೊಂದಿದ್ದಾರೆ. ಅವರಿಗೆ 80 ವರ್ಷ ವಯಸ್ಸಾಗಿತ್ತು. ಬೆಂಗಳೂರಿನ ರೇಸ್‌ಕೋರ್ಸ್‌ ರಸ್ತೆಯಲ್ಲಿರುವ ‘ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ’ (ಫಿಲಂ ಚೇಂಬರ್)​​ಯ ಕಚೇರಿಯಲ್ಲಿ ಆಯೋಜಿಸಲಾಗಿದ್ದ ಸಭೆಯೊಂದರಲ್ಲಿ ಜೋ ಸೈಮನ್‌ ಭಾಗಿಯಾಗಿದ್ದರು, ಈ ವೇಳೆ ಜೋ ಸೈಮನ್ ಅವರಿಗೆ ಹೃದಯಾಘಾತವಾಗಿದ್ದು, ಕೂಡಲೇ ಅವರನ್ನು ಸಮೀಪದ ಕ್ರೆಸೆಂಟ್‌ ರಸ್ತೆಯಲ್ಲಿದ್ದ ‘ಮಲ್ಲಿಗೆ ಆಸ್ಪತ್ರೆ’ಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಜೋ ಸೈಮನ್ ಆಸ್ಪತ್ರೆಯಲ್ಲೇ ಕೊನೆ ಉಸಿರೆಳೆದಿದ್ದಾರೆ.

ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ಜೋ ಸೈಮನ್‌ ಕೆಲಸ

ಮಂಡ್ಯ ಮೂಲದ ಜೋ ಸೈಮನ್‌ ಕನ್ನಡದಲ್ಲಿ ಸುಮಾರು 100ಕ್ಕೂ ಹೆಚ್ಚು ಸಿನೆಮಾಗಳಲ್ಲಿ ಕೆಲಸ ಮಾಡಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ನಿರ್ದೇಶಕನಾಗಿ, ನಟನಾಗಿ, ಗೀತ ರಚನೆಕಾರನಾಗಿ ಸೇವೆ ಸಲ್ಲಿಸಿದ್ದಾರೆ. 1946 ರಲ್ಲಿ ಜನಿಸಿದ್ದ ಜೋ ಸೈಮನ್ ಅವರು 1967 ಅವರು ಚಿತ್ರರಂಗಕ್ಕೆ ಬಂದಿದ್ದರು. 1977 ರಲ್ಲಿ ಸಿನೆಮಾ ನಿರ್ದೇಶನ ಆರಂಭಿಸಿದ ಜೋ ಸೈಮನ್ ಮೊದಲು ‘ಒಂದು ಪ್ರೇಮದ ಕತೆ’ ಚಿತ್ರವನ್ನು ನಿರ್ದೇಶಿಸಿದ್ದರು. ವಿಷ್ಣುವರ್ಧನ್ ಹಾಗೂ ಅಂಬರೀಶ್ ಅವರೊಟ್ಟಿಗೆ ಆಪ್ತ ಗೆಳೆತನ ಹೊಂದಿದ್ದ ಜೋ ಸೈಮನ್, ‘ಸಿಂಹ ಜೋಡಿ’, ‘ಸಾಹಸ ಸಿಂಹ’, ‘ಹಾಂಕಾಂಗ್​​ನಲ್ಲಿ ಏಜೆಂಟ್ ಅಮರ್’, ‘ಸ್ನೇಹದ ಕಡಲಲ್ಲಿ’, ‘ರವಿವರ್ಮ’, ‘ಟೈಂ ಬಾಂಬ್’ ಇನ್ನೂ ಹಲವಾರು ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಆಕ್ಷನ್‌ ಮತ್ತು ಲವ್‌ ಸ್ಟೋರಿ ಸಿನೆಮಾಗಳ ಮೂಲಕ ಜೋ ಸೈಮನ್‌ ಹೆಚ್ಚಾಗಿ ಗುರುತಿಸಿಕೊಂಡಿದ್ದರು. ಚಿತ್ರರಂಗಕ್ಕೆ ಸಂಬಂಧಿಸಿದ ಸಂಘ-ಸಂಸ್ಥೆಗಳಲ್ಲಿಯೂ ಜೋ ಸೈಮನ್‌ ಸಕ್ರಿಯರಾಗಿದ್ದರು. ‘ಕನ್ನಡ ಚಲನಚಿತ್ರ ಸಂಘ’ ಮತ್ತು ‘ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ’, ‘ಸಬ್ಸಿಡಿ ಕಮಿಡಿ’, ‘ಚಲನಚಿತ್ರ ಪ್ರಶಸ್ತಿ ಆಯ್ಕೆ ಸಮಿತಿ’ ಸೇರಿದಂತೆ ಹಲವು ಕಡೆಗಳಲ್ಲಿ  ಪ್ರಮುಖ ಹುದ್ದೆಗಳನ್ನು ಸಹ ಜೋ ಸೈಮನ್‌ ನಿಭಾಯಿಸಿದ್ದರು.

ಜೋ ಸೈಮನ್‌ ನಿಧನಕ್ಕೆ ಚಿತ್ರರಂಗದ ಗಣ್ಯರ ಕಂಬನಿ

1976 ರಲ್ಲಿ ವಿವಾಹವಾದ ಜೋ ಸೈಮನ್‌ ಅವರಿಗೆ ನಾಲ್ವರು ಗಂಡು ಮಕ್ಕಳಿದ್ದಾರೆ. ಕಳೆದ ಕೆಲ ವರ್ಷಗಳಿಂದ ಚಿತ್ರರಂಗದಿಂದ ಕೊಂಚ ಅಂತರ ಕಾಯ್ದುಕೊಂಡಿದ್ದ ಜೋ ಸೈಮನ್‌ ವಿಶ್ರಾಂತಿ ಜೀವನ ಕಳೆಯುತ್ತಿದ್ದರು. ಶನಿವಾರ (ಫೆಬ್ರವರಿ 14) ರವೀಂದ್ರ ಕಲಾಕ್ಷೇತ್ರದಲ್ಲಿ ಜೋ ಸೈಮನ್‌ ಪಾರ್ಥಿವ ಶರೀರದ ಅಂತಿಮ ದರ್ಶನ ನಡೆಯಲಿದ್ದು, ಬೆಳಿಗ್ಗೆ 10.00 ಗಂಟೆಯಿಂದ 1.00 ಗಂಟೆ ವರೆಗೂ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಬಳಿಕ ಕ್ರಿಶ್ಚಿಯನ್‌ ಸಂಪ್ರದಾಯದಂತೆ ಅಂತ್ಯ ಸಂಸ್ಕಾರ ನಡೆಯಲಿದೆ. ಜೋ ಸೈಮನ್‌ ಅವರ ನಿಧನಕ್ಕೆ ಕನ್ನಡ ಚಿತ್ರರಂಗದ ಅನೇಕ ಕಲಾವಿದರು, ತಂತ್ರಜ್ಞರು, ನಿರ್ದೇಶಕರು, ನಿರ್ಮಾಪಕರು ಕಂಬನಿ ಮಿಡಿದಿದ್ದಾರೆ.

Related Posts

error: Content is protected !!