ಸದ್ದಿಲ್ಲದೆ ಹಸೆಮಣೆ ಏರಿದ ಸಮಂತಾ..!
ಮತ್ತೆ ಹೊಸಬಾಳಿಗೆ ಅಡಿಯಿಟ್ಟ ಸಮಂತಾ
ಬಾಲಿವುಡ್ ನಿರ್ದೇಶಕ ರಾಜ್ ನಿಡಿಮೋರು ಜೊತೆ ಸಪ್ತಪದಿ ತುಳಿದ ಸಮಂತಾ
ಸರಳವಾಗಿ ನಡೆದ ಸಮಂತಾ ಮದುವೆ
ದಕ್ಷಿಣ ಭಾರತದ ಜನಪ್ರಿಯ ನಟಿ ಸಮಂತಾ ರುತ್ ಪ್ರಭು ಇದೀಗ, ಮತ್ತೊಮ್ಮೆ ಹಸೆಮಣೆ ಏರಿದ್ದಾರೆ. ಹೌದು, ನಟಿ ಸಮಂತಾ ರುತ್ ಪ್ರಭು ಬಾಲಿವುಡ್‌ನ ನಿರ್ದೇಶಕ ರಾಜ್ ನಿಧಿಮೋರು ಅವರನ್ನು ವಿವಾಹವಾಗಿದ್ದಾರೆ. ಅಂದಹಾಗೆ, ಇಬ್ಬರಿಗೂ ಇದು ಎರಡನೇ ಮದುವೆ. ಕೊಯಮತ್ತೂರಿನ ‘ಈಶಾ ಫೌಂಡೇಶನ್’ನಲ್ಲಿ ಕುಟುಂಬದವರು ಮತ್ತು ಕೆಲವೇ ಕೆಲವು ಆಪ್ತರ ಸಮ್ಮುಖದಲ್ಲಿ ಸರಳವಾಗಿ ಈ ಮದುವೆ ನಡೆದಿದೆ. ನಟಿ ಸಮಂತಾ ಹಾಗೂ ‘ದಿ ಫ್ಯಾಮಿಲಿ ಮ್ಯಾನ್’ ನಿರ್ದೇಶಕ ರಾಜ್ ನಿಡಿಮೋರು ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಸುದ್ದಿ ಕೆಲ ಸಮಯದಿಂದ ಚಿತ್ರರಂಗದಲ್ಲಿ ಜೋರಾಗಿ ಹರಿದಾಡುತ್ತಿತ್ತು. ಇದೀಗ ಈ ಸುದ್ದಿ ನಿಜವಾಗಿದ್ದು, ರಾಜ್ ಜೊತೆ ಸಮಂತಾ ಅಧಿಕೃತವಾಗಿ ವಿವಾಹವಾಗಿ ತಮ್ಮ ಬಗ್ಗೆ ಹರಿದಾಡುತ್ತಿದ್ದ ಎಲ್ಲಾ ಗಾಸಿಪ್‌ಗಳಿಗೆ ತೆರೆ ಎಳೆದಿದ್ದಾರೆ. ಇದೇ 2025ರ ಡಿಸೆಂಬರ್ 1 ಸಮಂತಾ ಹಾಗೂ ರಾಜ್ ನಿಡಿಮೋರು ಮದುವೆ ನಡೆದಿದ್ದು, ನವ ದಂಪತಿಗಳ ಹೊಸ ಬಾಳಿಗೆ ಅಭಿಮಾನಿಗಳು ಹಾಗೂ ಚಿತ್ರರಂಗದ ಅನೇಕ ಸೆಲೆಬ್ರಿಟಿಗಳು ಶುಭಕೋರಿದ್ದಾರೆ. 
ಪ್ರೀತಿಗೆ ತಿರುಗಿದ ರಾಜ್ ಜೊತೆಗಿನ ಪರಿಚಯ
ಸಮಂತಾ ಈ ಮೊದಲು ತೆಲುಗಿನ ಖ್ಯಾತ ನಟ ನಾಗಾರ್ಜುನ ಪುತ್ರ ನಾಗ ಚೈತನ್ಯ ಅವರನ್ನು ವಿವಾಹವಾಗಿದ್ದರು. ಆದರೆ ನಾಲ್ಕೇ ವರ್ಷಗಳಲ್ಲಿ ಇವರ ದಾಂಪತ್ಯ ಕೊನೆ ಆಯಿತು. ನಾಗ ಚೈತನ್ಯರೊಂದಿಗಿನ ದಾಂಪತ್ಯ ಮುರಿದು ಬಿದ್ದ ನಂತರ ಸಮಂತಾ ಪ್ರತ್ಯೇಕವಾಗಿ ಜೀವನ ನಡೆಸುತ್ತಿದ್ದರು. ಇದರ ನಡುವೆಯೇ ಕಳೆದ ವರ್ಷಾಂತ್ಯಕ್ಕೆ ನಾಗ ಚೈತನ್ಯ ಎರಡನೇ ವಿವಾಹವಾಗಿದ್ದು, ಶೋಭಿತಾ ಅವರನ್ನು ವಿವಾಹವಾಗಿದ್ದರು. ಈ ವರ್ಷ ಸಮಂತಾ ಕೂಡ ಮದುವೆ ಆಗಿದ್ದಾರೆ.
‘ಫ್ಯಾಮಿಲಿ ಮ್ಯಾನ್’ ಕೈ ಹಿಡಿದ ಸಮಂತಾ…
ಇನ್ನು ಹಿಂದಿಯ ಜನಪ್ರಿಯ ‘ದಿ ಫ್ಯಾಮಿಲಿ ಮ್ಯಾನ್ 2’ ಸರಣಿಯಲ್ಲಿ ನಟಿ ಸಮಂತಾ ನಟಿಸಿದ್ದರು. ಈ ಸರಣಿಗೆ ರಾಜ್ ನಿಡಿಮೋರು ನಿರ್ದೇಶನ ಮಾಡಿದ್ದರು. ‘ದಿ ಫ್ಯಾಮಿಲಿ ಮ್ಯಾನ್ 2’, ‘ಸಿಟಾಡೆಲ್’ ಸರಣಿಯಲ್ಲಿ ಸಮಂತಾ ಮತ್ತು ರಾಜ್ ನಿಡಿಮೋರು ಇಬ್ಬರೂ ಒಟ್ಟಾಗಿ ಕೆಲಸ ಮಾಡಿದ್ದರು. ಕೆಲಸ ಮಾಡುವಾಗಲೇ ಸಮಂತಾ ಮತ್ತು ರಾಜ್ ನಡುವೆ ಪರಿಚಯವಾಗಿತ್ತು. ಬಳಿಕ ಆ ಪರಿಚಯ ಸ್ನೇಹವಾಗಿ, ನಂತರ ಆ ಸ್ನೇಹ ಪ್ರೀತಿಗೆ ತಿರುಗಿತ್ತು. ಇಬ್ಬರ ನಡುವೆ ಪರಿಚಯ ಆಗುವಾಗ ರಾಜ್ಗೆ ಆಗಲೇ ವಿವಾಹ ಆಗಿತ್ತು. ಶ್ಯಾಮಲಿ ಎಂಬುವವರ ಜೊತೆ ದಾಂಪತ್ಯ ಜೀವನ ನಡೆಸುತ್ತಿದ್ದ ರಾಜ್, ಸಮಂತಾ ಜೊತೆಗಿನ ಸ್ನೇಹ ಗಟ್ಟಿಯಾಗುತ್ತಿದ್ದಂತೆ ಪತ್ನಿ ಶ್ಯಾಮಲಿಗೆ ವಿಚ್ಛೇಧನ ನೀಡಿದ್ದರು.
ಸೋಶಿಯಲ್ ಮೀಡಿಯಾಗಳಲ್ಲಿ ಸಮಂತಾ ರಾಜ್ ಮದುವೆ ಪೋಟೋ ವೈರಲ್!
ಸಮಂತಾ ಅವರು ವಿವಾಹದ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅವರು ಕ್ಯಾಪ್ಶನ್ನಲ್ಲಿ ವಿವಾಹದ ಡೇಟ್ ಹಾಕಿದ್ದಾರೆ. ಪೂಜಾ ವಿಧಿ-ವಿಧಾನದ ಫೋಟೋ ಜೊತೆಗೆ ರಾಜ್ ಜೊತೆ ಇರುವ ಫೋಟೋಗಳನ್ನು ಸಮಂತಾ ಹಂಚಿಕೊಂಡಿದ್ದಾರೆ. ಕೊಯಮತ್ತೂರಿನ ‘ಈಶಾ ಫೌಂಡೇಶನ್’ನಲ್ಲಿ ಈ ಮದುವೆ ನಡೆದಿದೆ. ಸಮಂತಾ ಅವರು ಜಗ್ಗಿ ವಾಸುದೇವ್ ಅವರ ಅನುಯಾಯಿ. ಹೀಗಾಗಿ, ಇಶಾದಲ್ಲಿಯೇ ಈ ಮದುವೆ ನಡೆದಿದೆ. ಸಮಂತಾ ಹಾಗೂ ರಾಜ್ ಅವರ ಮದುವೆಯ ಪೋಟೋಗಳು ಸೋಶಿಯಲ್ ಮೀಡಿಯಾಗಳಲ್ಲಿ ಜೋರಾಗಿ ಹರಿದಾಡುತ್ತಿದ್ದು, ಜೋರಾಗಿ ಸುದ್ದಿಯಾಗುತ್ತಿದೆ.















