ಚಿತ್ರೀಕರಣ ಮುಗಿಸಿದ ‘ಸಮುದ್ರ ಮಂಥನ’
‘ಸಮುದ್ರ ಮಂಥನ’ ಚಿತ್ರದ ಚಿತ್ರೀಕರಣ ಮುಕ್ತಾಯ
ಸಸ್ಪೆನ್ಸ್-ಥ್ರಿಲ್ಲರ್ ಕಥಾಹಂದರದ ‘ಸಮುದ್ರ ಮಂಥನ’ ಶೂಟಿಂಗ್ ಕಂಪ್ಲೀಟ್!
ಸಚಿನ್ ಶೆಟ್ಟಿ ನಿರ್ದೇಶನದಲ್ಲಿ ‘ಸಮುದ್ರ ಮಂಥನ’ ಚಿತ್ರ
ಈ ಹಿಂದೆ ಕನ್ನಡದಲ್ಲಿ ‘ಒಂದು ಶಿಕಾರಿಯ ಕಥೆ’ ಎಂಬ ಚಿತ್ರವನ್ನು ತೆರೆಗೆ ತಂದಿದ್ದ ಯುವ ನಿರ್ದೇಶಕ ಸಚಿನ್ ಶೆಟ್ಟಿ,
ಈ ಬಾರಿ ‘ಸಮುದ್ರ ಮಂಥನ’ ಎಂಬ ಹೊಸ ಕಥೆಯನ್ನು ಪ್ರೇಕ್ಷಕರ ಮುಂದೆ ತರುವ ತಯಾರಿಯಲ್ಲಿದ್ದಾರೆ. ಕಳೆದ ಕೆಲ ತಿಂಗಳಿನಿಂದ ‘ಸಮುದ್ರ ಮಂಥನ’ ಚಿತ್ರದ ಚಿತ್ರೀಕರಣ ನಡೆಸುತ್ತಿದ್ದ ಚಿತ್ರತಂಡ, ಇತ್ತೀಚೆಗೆ ಚಿತ್ರ ಚಿತ್ರೀಕರಣವನ್ನು ಮುಕ್ತಾಯಗೊಳಿಸಿದೆ. ಚಿತ್ರದ ಕಥಾಹಂದರ ಕರಾವಳಿ-ಮಲೆನಾಡು ಹಿನ್ನೆಲೆಯಲ್ಲಿ ಸಾಗುವುದರಿಂದ ಇಡೀ ಚಿತ್ರವನ್ನು ಕರಾವಳಿ – ಮಲೆನಾಡು ಭಾಗದಲ್ಲೇ ಚಿತ್ರೀಕರಿಸಲಾಗಿದೆ. ಕುಂದಾಪುರ, ಶಿವಮೊಗ್ಗದ ಸುತ್ತಮುತ್ತಲಿನ ತಾಣಗಳಲ್ಲಿ ‘ಸಮುದ್ರ ಮಂಥನ’ ಚಿತ್ರದ ಬಹುತೇಕ ಚಿತ್ರೀಕರಣ ನಡೆಸಿರುವ ಚಿತ್ರತಂಡ, ಇದೀಗ ಕುಂಬಳಕಾಯಿ ಒಡೆಯುವ ಮೂಲಕ ಯಶಸ್ವಿಯಾಗಿ ಚಿತ್ರೀಕರಣವನ್ನು ಪೂರ್ಣಗೊಳಿಸಿದೆ.
ಸಸ್ಪೆನ್ಸ್-ಥ್ರಿಲ್ಲರ್ ಶೈಲಿಯಲ್ಲಿ ಬರುತ್ತಿರುವ ‘ಸಮುದ್ರ ಮಂಥನ’
‘ಸಮುದ್ರ ಮಂಥನ’ ಚಿತ್ರದಲ್ಲಿ ಯಶವಂತ್ ಕುಮಾರ್ ಮತ್ತು ಮಂದಾರ ಬಟ್ಟಲಹಳ್ಳಿ ಮುಖ್ಯಭೂಮಿಕೆಯಲ್ಲಿ ನಟಿಸುತ್ತಿದ್ದಾರೆ.
ಉಳಿದಂತೆ ಸ್ಕಂದ ಅಶೋಕ್, ನವೀನ್ ಶೆಟ್ಟಿ, ಶಿವಪ್ರಕಾಶ್ ಪೂಂಜಾ, ರಮೇಶ್ ರೈ, ಗುರುರಾಜ್ ಶೆಟ್ಟಿ, ಶ್ರೀಕಾಂತ್, ರೂಪಾ ಶೆಟ್ಟಿ ಮುಂತಾದವರು ಚಿತ್ರದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ಇನ್ನು ಔಟ್ ಅಂಡ್ ಔಟ್ ಸಸ್ಪೆನ್ಸ್-ಥ್ರಿಲ್ಲರ್ ಶೈಲಿಯಲ್ಲಿ ‘ಸಮುದ್ರ ಮಂಥನ’ ಚಿತ್ರ ಮೂಡಿಬರುತ್ತಿದೆ. ಚಿತ್ರದಲ್ಲಿ ಗಟ್ಟಿಕಥಾವಸ್ತುವಿನ ಜೊತೆಗೆ ಮನರಂಜನೆಗೂ ಒತ್ತುಕೊಡಲಾಗಿದೆಯಂತೆ. ಚಿತ್ರದಲ್ಲಿ ಒಟ್ಟು 6 ಆಕ್ಷನ್ ಸೀಕ್ವೆನ್ಸ್ ಮತ್ತು 3 ಹಾಡುಗಳಿವೆ. ಒಟ್ಟಾರೆ ನೋಡುಗರಿಗೆ ‘ಸಮುದ್ರ ಮಂಥನ’ ಸಂಪೂರ್ಣ ಮನರಂಜನೆ ನೀಡುವಂಥ ಸಿನೆಮಾವಾಗಲಿದೆ ಎಂಬುದು ಚಿತ್ರತಂಡದ ಭರವಸೆಯ ಮಾತುಗಳು. ಅದು ಎಷ್ಟರ ಮಟ್ಟಿಗೆ ನಿಜವಾಗುತ್ತದೆ ಎಂಬುದು ‘ಸಮುದ್ರ ಮಂಥನ’ ಸಿನೆಮಾ ಬಿಡುಗಡೆಯಾದ ಮೇಲಷ್ಟೇ ಗೊತ್ತಾಗಲಿದೆ.
ಮುಂದಿನ ವರ್ಷ ‘ಸಮುದ್ರ ಮಂಥನ’ ಪ್ರೇಕ್ಷಕರ ಮುಂದೆ…

ಕರಾವಳಿ-ಮಲೆನಾಡಿನ ಹಸಿರು ಗದ್ದೆ, ಸಮುದ್ರ ತೀರದಂತಹ ಸುಂದರ ಸ್ಥಳಗಳಲ್ಲದೆ, ದಟ್ಟ ಕಾಡು, ಬೆಟ್ಟ-ಗುಡ್ಡಗಳ ದುರ್ಗಮ ತಾಣಗಳಲ್ಲಿ ಸುಮಾರು 34 ದಿನಗಳ ಕಾಲ ‘ಸಮುದ್ರ ಮಂಥನ’ ಚಿತ್ರದ ಚಿತ್ರೀಕರಣ ನಡೆಸಲಾಗಿದೆ. ‘ಸಮುದ್ರ ಮಂಥನ’ ಚಿತ್ರಕ್ಕೆ ಯೋಗೇಶ್ ಗೌಡ ಛಾಯಾಗ್ರಹಣ, ಬಿ. ಎಸ್. ಕೆಂಪರಾಜು ಸಂಕಲನ ಕಾರ್ಯ ನಿರ್ವಹಿಸಿದ್ದಾರೆ. ಚಿತ್ರಕ್ಕೆ ತ್ರಿಲೋಕ್ ತ್ರಿವಿಕ್ರಮ ಸಾಹಿತ್ಯ ಮತ್ತು ಮನೋಜ್ ಚಂದ್ರಕಾಂತ್ – ನಿಶಾಂತ್ ಮಧುಗಿರಿ ಜೋಡಿ ಸಂಗೀತ ಒದಗಿಸುತ್ತಿದ್ದಾರೆ. ‘ರಫ್ ಕಟ್ ಪ್ರೊಡಕ್ಷನ್’ ನಿರ್ಮಾಣ ಜವಾಬ್ದಾರಿ ಹೊತ್ತಿದ್ದು, ‘ಎ ಸ್ಕ್ವೇರ್ ಪಿಕ್ಚರ್ಸ್’ ಮತ್ತು ‘ಆರುಷ್ ಪಿಕ್ಚರ್ಸ್’ ಸಹಭಾಗಿತ್ವವಿದೆ. ಇದೀಗ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಿಗೆ ಚಾಲನೆ ನೀಡಿರುವ ಚಿತ್ರತಂಡ, ಮುಂದಿನ ವರ್ಷದ ಮೊದಲಾರ್ಧದಲ್ಲಿ ‘ಸಮುದ್ರ ಮಂಥನ’ ಚಿತ್ರವನ್ನು ಬಿಡುಗಡೆ ಮಾಡುವ ಯೋಜನೆಯಲ್ಲಿದೆ.















