47 ವರ್ಷಗಳ ಬಳಿಕ ಒಂದೇ ಚಿತ್ರದಲ್ಲಿ ಕಮಲ್-ರಜನೀಕಾಂತ್ ನಟನೆ!
ರಜನಿ-ಕಮಲ್ ಜೋಡಿಯ ಹೊಸಚಿತ್ರ ಅಧಿಕೃತವಾಗಿ ಘೋಷಣೆ
ಬರೋಬ್ಬರಿ 47 ವರ್ಷಗಳ ಬಳಿಕ ಮತ್ತೆ ಒಂದಾದ ರಜನೀಕಾಂತ್-ಕಮಲ್ ಹಾಸನ್
ಅಭಿಮಾನಿಗಳ ದಶಕಗಳ ಕನಸು ಈಡೇರುವ ಹೊತ್ತು.. ಕೊನೆಗೂ ಬಂತು..!
ಭಾರತೀಯ ಚಿತ್ರರಂಗದ ಸೂಪರ್ ಸ್ಟಾರ್ ತಾರೆಯರಾದ ರಜನೀಕಾಂತ್ ಮತ್ತು ಕಮಲ್ ಹಾಸನ್ ಆರಂಭದಿಂದಲೂ ಆತ್ಮೀಯ ಗೆಳೆಯರು ಎಂಬುದು ಬಹುತೇಕ ಎಲ್ಲರಿಗೂ ಗೊತ್ತಿರುವ ವಿಷಯ. ಭಾರತೀಯ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಈ ಇಬ್ಬರು ದಿಗ್ಗರು, ಆರಂಭದ ಕೆಲವು ವರ್ಷ ಒಟ್ಟಿಗೆ ನಟಿಸಿದ್ದರೂ, ಸೂಪರ್ ಸ್ಟಾರ್ಸ್ ನಟರು ಎನಿಸಿಕೊಂಡ ಬಳಿಕ ಒಟ್ಟಿಗೆ ಯಾವ ಸಿನೆಮಾಗಳಲ್ಲೂ ಅಭಿನಯಿಸಿದ್ದಿಲ್ಲ. ರಜನೀಕಾಂತ್ ಮತ್ತು ಕಮಲ್ ಹಾಸನ್ ಅವರನ್ನು ಒಟ್ಟಿಗೇ ಸೇರಿಸಿಕೊಂಡು ಸಿನೆಮಾ ಮಾಡುವ ಪ್ರಯತ್ನಗಳು ಕೆಲವು ನಡೆದವಾದರೂ, ಅವುಗಳು ಯಶಸ್ವಿಯಾಗಿರಲಿಲ್ಲ. ಇದೀಗ ಬರೋಬ್ಬರಿ 47 ವರ್ಷಗಳ ಬಳಿಕ ರಜನೀಕಾಂತ್ ಮತ್ತು ಕಮಲ್ ಹಾಸನ್ ಒಟ್ಟಿಗೆ ಒಂದೇ ಸಿನಿಮಾನಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿ ಅಧಿಕೃತವಾಗಿ ಹೊರಬಿದ್ದಿದೆ. 
ರಜನಿ-ಕಮಲ್ ಹೊಸಚಿತ್ರಕ್ಕೆ ನೆಲ್ಸನ್ ಸಾರಥಿ…
ಅಂದಹಾಗೆ, ರಜನೀಕಾಂತ್ ಮತ್ತು ಕಮಲ್ ಹಾಸನ್ ಒಟ್ಟಿಗೆ ನಟಿಸಲಿರುವ ಸಿನೆಮಾವನ್ನು ತಮಿಳಿನ ‘ಜೈಲರ್’ ಸಿನೆಮಾ ಖ್ಯಾತಿಯ ನಿರ್ದೇಶಕ ನೆಲ್ಸನ್ ನಿರ್ದೇಶಿಸಲಿದ್ದಾರೆ. ಈ ಸಿನೆಮಾಕ್ಕೆ ಸದ್ಯಕ್ಕೆ ‘ಕೆಎಚ್-ಆರ್ಕೆ’ ಎಂದು ತಾತ್ಕಾಲಿಕ ಹೆಸರಿಡಲಾಗಿದ್ದು, ಸಿನೆಮಾದ ಘೋಷಣೆಗೆಂದು ಒಂದು ತಮಾಷೆಯಾದ ಪ್ರೋಮೊ ಸಹ ಬಿಡುಗಡೆ ಮಾಡಲಾಗಿದೆ. ಈ ಪ್ರೊಮೊ ವಿಡಿಯೋ ಎಷ್ಟು ಮಜವಾಗಿದೆ ಎಂದರೆ, ಇಲ್ಲಿ ಸಿನೆಮಾದ ಕಥೆಗಿಂತ ಹೆಚ್ಚಾಗಿ ನಿರ್ದೇಶಕ ನೆಲ್ಸನ್ ದಿಲೀಪ್‌ಕುಮಾರ್ ಹಾಗೂ ಸಂಗೀತ ನಿರ್ದೇಶಕ ಅನಿರುದ್ಧ್ ಅವರ ಗೊಂದಲವೇ ಹೈಲೈಟ್ ಆಗಿ ಕಾಣಿಸಿಕೊಂಡಿದೆ.
ವಿಡಿಯೋದ ಆರಂಭದಲ್ಲಿ ನೆಲ್ಸನ್ ಕಾರಿಡಾರ್‌ನಲ್ಲಿ ಅತ್ತಿತ್ತ ಅಡ್ಡಾಡುತ್ತಾ, ‘ಯಾರ ರೂಮಿಗೆ ಮೊದಲು ಹೋಗಲಿ? ರಜನಿ ಸಾರ್ ರೂಮಿಗೋ ಅಥವಾ ಕಮಲ್ ಸಾರ್ ರೂಮಿಗೋ?’ ಎಂದು ತಲೆ ಕೆರೆದುಕೊಳ್ಳುತ್ತಿರುತ್ತಾರೆ. ಅಷ್ಟರಲ್ಲಿ ಮ್ಯೂಸಿಕ್ ಡೈರೆಕ್ಟರ್ ಅನಿರುದ್ಧ್ ರವಿಚಂದರ್ ಎಂಟ್ರಿ ಕೊಟ್ಟು, ‘ಗುರುಗಳೇ, ಯಾವ ರಾಗ ಸೆಲೆಕ್ಟ್ ಮಾಡಲಿ?’ ಎಂದು ಇನ್ನೊಂದು ಕನ್ಫ್ಯೂಷನ್ ಎಸೆಯುತ್ತಾರೆ. ಪಾಪ ನೆಲ್ಸನ್, ಇಬ್ಬರು ಸೂಪರ್‌ಸ್ಟಾರ್‌ಗಳನ್ನು ಮ್ಯಾನೇಜ್ ಮಾಡೋಕೆ ಪಡುತ್ತಿರುವ ಪಾಡು ನೋಡಿ ಪ್ರೇಕ್ಷಕರು ನಗುವಂತಿದೆ.
‘ಕೆಎಚ್-ಆರ್ಕೆ’ ಸಿನೆಮಾದ ಪ್ರೋಮೋ ವಿಡಿಯೋವನ್ನು ವೀಕ್ಷಿಸಲು ಈ ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಬಹುದು…
ವಿಡಿಯೋ ಮುಂದುವರೆದಂತೆ, ರಜನೀ ಮತ್ತು ಕಮಲ್ ಅವರುಗಳು ಒಬ್ಬರಿಗಿಂತಲೂ ಇನ್ನೊಬ್ಬರು ಸ್ಟೈಲ್ ಆಗಿ ಕಾಣಬೇಕು ಎಂದು ಸ್ಪರ್ಧೆಗೆ ಬಿದ್ದವರಂತೆ ತೋರಿಸಲಾಗಿದೆ. ವಿಡಿಯೋದ ಕೊನೆಯಲ್ಲಿ ಅಸಲಿ ಟ್ವಿಸ್ಟ್ ಇದೆ. ಇಬ್ಬರೂ ಲೆಜೆಂಡರಿ ನಟರು ಫುಲ್ ರೆಟ್ರೋ ಸ್ಟೈಲ್‌ನಲ್ಲಿ, ಲೆದರ್ ಜಾಕೆಟ್ ತೊಟ್ಟು ಮಸ್ತ್ ಆಗಿ ನಡೆದುಕೊಂಡು ಬರುತ್ತಾರೆ. ವಿಂಟೇಜ್ ಮರ್ಸಿಡೀಜ್ ಕಾರಿನಲ್ಲಿ ಕಮಲ್ ಹಾಸನ್ ಡ್ರೈವಿಂಗ್ ಸೀಟಿನಲ್ಲಿ ಕೂತರೆ, ರಜನಿ ಪಕ್ಕದ ಸೀಟಿನಲ್ಲಿ ಆಸೀನರಾಗುತ್ತಾರೆ.
ಇವರ ಹಿಂಬದಿಯ ಸೀಟಿನಲ್ಲಿ ನೆಲ್ಸನ್ ಮತ್ತು ಅನಿರುದ್ಧ್ ಇರುತ್ತಾರೆ. ಈ ಸಮಯದಲ್ಲಿ ಇಬ್ಬರೂ ಗಂಭೀರವಾಗಿ ನೆಲ್ಸನ್ ಕಡೆ ನೋಡಿ, ‘ಅಂದಹಾಗೆ, ನಮ್ಮಿಬ್ಬರಲ್ಲಿ ಈ ಸಿನಿಮಾಕ್ಕೆ ಹೀರೋ ಯಾರು?’ ಎಂದು ಕೇಳುತ್ತಾರೆ. ಇಬ್ಬರು ಸ್ಟಾರ್ ನಟರ ಈ ಪ್ರಶ್ನೆಗೆ ನೆಲ್ಸನ್ ಮತ್ತಷ್ಟು ಗಾಬರಿ ಆಗುತ್ತಾರೆ.
ನಾಲ್ಕುವರೆ ದಶಕಗಳ ಬಳಿಕ ಇಬ್ಬರು ದಿಗ್ಗಜರ ಜುಗಲ್‌ಬಂಧಿ!
ಆರಂಭದಿಂದ ಇಲ್ಲಿಯವೆಗೂ ರಜನೀಕಾಂತ್ ಮತ್ತು ಕಮಲ್ ಹಾಸನ್ ಒಟ್ಟಿಗೆ ಏಳು ಸಿನೆಮಾಗಳಲ್ಲಿ ಅಭಿನಯಿಸಿದ್ದಾರೆ. ರಜನೀಕಾಂತ್ ಅವರ ಮೊದಲ ಚಿತ್ರ ‘ಅಪೂರ್ವರಾಗಂಗಳ್’ನಲ್ಲಿ ಕಮಲ್ ಹಾಸನ್ ನಾಯಕನಾಗಿದ್ದರು. ಆ ಬಳಿಕ ‘ಮೂದ್ರು ಮುದಿಚ್ಚು’, ‘ಆವರ್ಗಳ್’, ‘ಪದಿನಾರು ವಯತ್ತಿನಿಲೆ’, ‘ಇಳಮಾಯ್ ಊಂಜಿಲ್ ಆಡುಕಿರಾತ್ತು’, ‘ನಿನ್ನೈತಾಲೆ ಇನಿಕ್ಕುಂ’ ಸಿನೆಮಾಗಳಲ್ಲಿ ಈ ಇಬ್ಬರೂ ನಟರೂ ಒಟ್ಟಿಗೇ ಅಭಿನಯಸಿದ್ದರು. 1979 ರಲ್ಲಿ ಬಿಡುಗಡೆ ಆದ ‘ಅಲ್ಲಾವುದ್ದೀನ್ ಅಲ್ಬುತ ವಿಲಕ್ಕುಂ’ ಕಮಲ್ ಹಾಗೂ ರಜನೀಕಾಂತ್ ಒಟ್ಟಿಗೆ ನಟಿಸಿದ ಕೊನೆಯ ಸಿನೆಮಾವಾಗಿತ್ತು. 
ಅದಾದ ಬಳಿಕ ಈ ಇಬ್ಬರು ನಟರೂ ಯಾವ ಸಿನೆಮಾಗಳಲ್ಲೂ ಒಟ್ಟಿಗೆ ಕಾಣಿಸಿಕೊಂಡಿರಲಿಲ್ಲ. ಇದೀಗ ಸುಮಾರು 47 ವರ್ಷಗಳ ಬಳಿಕ ಇಬ್ಬರೂ ನಟರು ಮತ್ತೆ ಒಟ್ಟಿಗೆ ಒಂದೇ ಸಿನೆಮಾದಲ್ಲಿ ಅಭಿನಯಿಸುತ್ತಿರುವುದು ಇಡೀ ಚಿತ್ರರಂಗದ ಗಮನವನ್ನು ಸೆಳೆಯುತ್ತಿದೆ. ಅಂದಹಾಗೆ, ಬಿಗ್ ಬಜೆಟ್‌ನಲ್ಲಿ ತಯಾರಾಗುತ್ತಿರುವ ಈ ಸಿನೆಮಾವನ್ನು ಸ್ವತಃ ಕಮಲ್ ಹಾಸನ್ ಅವರೇ ಬಂಡವಾಳ ಹೂಡಿ ನಿರ್ಮಿಸುತ್ತಿದ್ದಾರೆ.















