IFFI ಗಾಲಾ ಪ್ರೀಮಿಯರ್ ನಲ್ಲಿ ‘ರುಧಿರ್ವನ’ ಪ್ರದರ್ಶನ
IFFI ‘ಗಾಲಾ ಪ್ರೀಮಿಯರ್’ನಲ್ಲಿ ‘ರುಧಿರ್ವನ’ ಸಿನೆಮಾ ಹೌಸ್ ಫುಲ್
ಗೋವಾದಲ್ಲಿ ನಡೆಯುತ್ತಿರುವ IFFI ನಲ್ಲಿ ‘ರುಧಿರ್ವನ’ ಪ್ರದರ್ಶನ
ರಕ್ತಸಿಕ್ತ ಕಾಡಲ್ಲಿ ಹಾರರ್ ಕಥಾಹಂದರ 
ಕನ್ನಡದ ಯುವ ಪ್ರತಿಭೆ ಅಗ್ನಿ ನಿರ್ದೇಶನಲ್ಲಿ ಮೂಡಿ ಬಂದಿರುವ ಚೊಚ್ಚಲ ಸಿನೆಮಾ ‘ರುಧಿರ್ವನ’ ಈಗ ಗೋವಾದಲ್ಲಿ ನಡೆಯುತ್ತಿರುವ 56ನೇ ‘ಇಂಟರ್‌ನ್ಯಾಷನಲ್ ಫಿಲಂ ಫೆಸ್ಟಿವಲ್ ಆಫ್ ಇಂಡಿಯಾ’ (IFFI)ಗೆ ಅಡಿಯಿಟ್ಟಿದೆ. ಹೌದು, ಈ ಬಾರಿಯ IFFIದ ‘ಗಾಲಾ ಪ್ರೀಮಿಯರ್’ ಗೆ ‘ರುಧಿರ್ವನ’ ಸಿನೆಮಾ ಆಯ್ಕೆಯಾಗಿದೆ. ಇದೇ ನ. 24ಕ್ಕೆ ಈ ಚಿತ್ರದ ಪ್ರದರ್ಶನವಿದ್ದು, ಈಗಾಗಲೇ ಹೌಸ್ ಫುಲ್ ಆಗಿರುವುದು ಚಿತ್ರತಂಡದ ಸಂತಸಕ್ಕೆ ಕಾರಣವಾಗಿದೆ.
‘ರುಧಿರ್ವನ’ ಸಿನೆಮಾದಲ್ಲಿ ಪವನಾ ಗೌಡ, ಪ್ರಿಯಾ ಶಠಮರ್ಷಣ, ಬಲರಾಜವಾಡಿ, ಕೃಷ್ಣ ಹೆಬ್ಬಾಲೆ, ಮೇದಿನಿ ಕೆಳಮನೆ, ಅವಿನಾಶ್ ರೈ, ಅರ್ಜುನ್ ಕಜೆ, ಅಪೂರ್ವ ಮೊದಲಾದ ಕಲಾವಿದರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ”ರುಧಿರ್ವನ’ ಒಂದು ಹಾರರ್ ಕಥಾಹಂದರ ಹೊಂದಿರುವ ಚಿತ್ರವಾಗಿದ್ದು, ಪ್ರೇಕ್ಷಕರನ್ನು ಸೀಟಿನ ತುದಿಗೆ ಕೂರಿಸುವಂಥ ಸಿನೆಮಾ ಮಾಡಿದ್ದೇವೆ’ ಎಂಬುದು ಚಿತ್ರತಂಡದ ಅಭಿಪ್ರಾಯ.
‘ರುಧಿರ್ವನ’ ಅಂದ್ರೇನು..?
ಇನ್ನು ‘ರುಧಿರ್ವನ’ ಅಂದ್ರೆ ರಕ್ತಸಿಕ್ತವಾದ ಕಾಡು ಎಂಬ ಅರ್ಥವಿದೆ. ‘ರುಧಿರ್ವನ’ ಚಿತ್ರಕ್ಕೆ ಸಂದೀಪ್ ವೆಲ್ಲೂರಿ ಛಾಯಾಗ್ರಹಣ, ಶಶಾಂಕ್ ನಾರಾಯಣ್ ಸಂಕಲನ ಕಾರ್ಯ ನಿರ್ವಹಿಸಿದ್ದಾರೆ. ಚಿತ್ರದ ಹಾಡುಗಳಿಗೆ ರೋಣದ ಬಕ್ಕೇಶ್ ಸಂಗೀತ ಸಂಯೋಜಿಸಿದ್ದಾರೆ. ಚಿತ್ರಕ್ಕೆ ಉಲ್ಲಾಸ್ ಹೈದೂರ್ ಕಲಾ ನಿರ್ದೇಶನವಿದೆ. 
ಅಂದಹಾಗೇ,’ರುಧಿರ್ವನ’ ಒಂದು ಕ್ರೌಡ್ ಫಂಡೆಂಡ್ ಸಿನೆಮಾ. ಯುವ ನಿರ್ದೇಶಕ ಅಗ್ನಿ ಮತ್ತು ಅವರ ಸ್ನೇಹಿತರು ಹಾಗೂ ನಿರ್ದೇಶಕ ಅಗ್ನಿ ಅವರ ಯೂ-ಟ್ಯೂಬ್ ಚಂದಾದಾರರು ಸೇರಿ ಜಂಟಿಯಾಗಿ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ‘ಪಾಯಿಂಟ್ ಆಫ್ ವೀವ್ ಪಿಕ್ಚರ್ ಹೌಸ್’ ಬ್ಯಾನರ್ ನಡಿ ‘ರುಧಿರ್ವನ’ ಸಿನೆಮಾ ಮೂಡಿಬರಲಿದೆ. ಇನ್ನು, ‘ಸ್ಯಾಂಗ್ವಿನ್ ಹೋಲ್ಮ್ ಎಂಟರ್ಟೈನ್ಮೆಂಟ್’ ಕಾರ್ಯನಿರ್ವಾಹಕ ನಿರ್ಮಾಪಕರಾಗಿ ಚಿತ್ರಕ್ಕೆ ಸಾಥ್ ಕೊಡಲಿದೆ. ಆರಂಭದಲ್ಲಿಯೇ ‘ರುಧಿರ್ವನ’ ಚಿತ್ರ ಒಂದಷ್ಟು ಸಿನೆಮಾ ಮಂದಿಯ ಗಮನ ಸೆಳೆಯಲು ಯಶಸ್ವಿಯಾಗಿದೆ.















