ಬಾಲಿವುಡ್‌ನ ಹಿರಿಯ ನಟ ಧರ್ಮೇಂದ್ರ ನಿಧನ
ಬಾಲಿವುಡ್‌ನ ‘ಹಿ ಮ್ಯಾನ್’ ಧರ್ಮೇಂದ್ರ ಇನ್ನಿಲ್ಲ
89ನೇ ವಯಸ್ಸಿಗೆ ಬಣ್ಣದ ಲೋಕಕ್ಕೆ ವಿದಾಯ ಹೇಳಿದ ಹಿರಿಯ ನಟ
ವಯೋಸಹಜ ಕಾಯಿಲೆ, ಅನಾರೋಗ್ಯದಿಂದ ನಟ ಧರ್ಮೇಂದ್ರ ನಿಧನ
ಮುಂಬೈ, ನ. 24; ಹಿಂದಿ ಚಿತ್ರರಂಗದ ಹಿರಿಯ ನಟ, ಬಾಲಿವುಡ್‌ನ ‘ಹಿ ಮ್ಯಾನ್’ ಖ್ಯಾತಿಯ ನಟ ಧರ್ಮೇಂದ್ರ ಇಂದು (ನವೆಂಬರ್ 24, 2025) ನಿಧನರಾದರು. ಅವರಿಗೆ 89 ವರ್ಷ ವಯಸ್ಸಾಗಿತ್ತು. ಕಳೆದ ಕೆಲ ವರ್ಷಗಳಿಂದ ವಯೋ ಸಹಜ ಅನಾರೋಗ್ಯದಿಂದ ನಟ ಧರ್ಮೇಂದ್ರ ಬಳಲುತ್ತಿದ್ದರು. ನವೆಂಬರ್ 11ರಂದು ಧರ್ಮೇಂದ್ರ ಆರೋಗ್ಯದಲ್ಲಿ ಏರುಪೇರಾಗಿದ್ದು, ತಕ್ಷಣವೇ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮುಂಬೈನಲ್ಲಿ ಆಸ್ಪತ್ರೆಗೆ ದಾಖಲಾಗಿಸಲಾಗಿತ್ತು. ಆ ಬಳಿಕ ಧರ್ಮೇಂದ್ರ ಅವರ ಆರೋಗ್ಯದಲ್ಲಿ ಕೊಂಚ ಸುಧಾರಣೆ ಕಂಡು ಬಂದಿದ್ದರಿಂದ, ಆಸ್ಪತ್ರೆಯಿಂದ ಬಿಡುಗಡೆ ಮಾಡಿ ಮನೆಗೆ ಕರೆತರಲಾಗಿತ್ತು. ಅದಾದ ಬಳಿಕ ಇಂದು ಬೆಳಿಗ್ಗೆ ಧರ್ಮೇಂದ್ರ ಅವರ ಆರೋಗ್ಯದಲ್ಲಿ ಮತ್ತೆ ಏರುಪೇರು ಉಂಟಾಗಿದ್ದು, ಆಸ್ಪತ್ರೆಗೆ ದಾಖಲಿಸುವುದರೊಳಗಾಗಿ ಧರ್ಮೇಂದ್ರ ಕೊನೆಯುಸಿರೆಳೆದರು ಎಂದು ಕುಟುಂಬದ ಮೂಲಗಳು ತಿಳಿಸಿವೆ. 
ಬಾಲಿವುಡ್‌ನ 1960ರ ದಶಕದ ಸೂಪರ್ ಸ್ಟಾರ್ ನಟ
1960ರ ದಶಕದಿಂದ ಚಿತ್ರರಂಗದಲ್ಲಿ ಮಿಂಚಿದ ಧರ್ಮೇಂದ್ರ, ‘ಶೋಲೆ’ ಸೇರಿದಂತೆ ಹಲವು ಐಕಾನಿಕ್ ಚಿತ್ರಗಳಲ್ಲಿ ನಟಿಸಿದ್ದರು. 1960 ರಿಂದ 1990ರ ವರೆಗೆ ಬಾಲಿವುಡ್‌ನಲ್ಲಿ ‘ಹೀ ಮ್ಯಾನ್’ ಎಂದೇ ಧರ್ಮೇಂದ್ರ ಖ್ಯಾತರಾಗಿದ್ದರು. ಬಾಲಿವುಡ್‌ನ ಸೂಪರ್ ಸ್ಟಾರ್ ನಟರ ಪೈಕಿ ಒಬ್ಬರಾಗಿ ಗುರುತಿಸಿಕೊಂಡಿದ್ದ ಧರ್ಮೇಂದ್ರ ತಮ್ಮದೇ ಆದ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಸಂಪಾದಿಸಿಕೊಂಡಿದ್ದರು. ಇದೇ 2025ರ ಡಿಸೆಂಬರ್ 8ರಂದು ಧರ್ಮೇಂದ್ರ 90ನೇ ವರ್ಷದ ಜನ್ಮದಿನ ಆಚರಿಸಿಕೊಳ್ಳಬೇಕಿತ್ತು. ಧರ್ಮೇಂದ್ರ ಅವರ ಕುಟುಂಬ ವರ್ಗ, ಅಭಿಮಾನಿಗಳು ಅವರ 90ನೇ ವರ್ಷದ ಜನ್ಮದಿನವನ್ನು ಸಂಭ್ರಮಿಸುವ ಮುನ್ನವೇ ಧರ್ಮೇಂದ್ರ ಬಾರದ ಲೋಕಕ್ಕೆ ಪಯಣಿಸಿದ್ದಾರೆ.
ಧರ್ಮೇಂದ್ರ ನಿಧನಕ್ಕೆ ಗಣ್ಯರ ಕಂಬನಿ
ಬಾಲಿವುಡ್‌ನ ಹಿರಿಯ ನಟ ಧರ್ಮೇಂದ್ರ ಅವರ ನಿಧನಕ್ಕೆ ಹಿರಿಯ ನಟ ಅಮಿತಾಬ್ ಬಚ್ಚನ್, ಶಾರೂಖ್ ಖಾನ್, ಆಮೀರ್ ಖಾನ್, ಅಕ್ಷಯ್ ಕುಮಾರ್, ದೀಪಿಕಾ ಪಡುಕೋಣೆ, ಸಲ್ಮಾನ್ ಖಾನ್, ರಜನಿಕಾಂತ್, ಚಿರಂಜೀವಿ ಸೇರಿದಂತೆ ಅನೇಕ ತಾರೆಯರು ಕಂಬನಿ ಮಿಡಿದಿದ್ದಾರೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಷಾ, ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಸೇರಿದಂತೆ ಅನೇಕ ಗಣ್ಯರು ಧರ್ಮೇಂದ್ರ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ನ. 24ರಂದೇ ಮುಂಬೈನಲ್ಲಿ ಧರ್ಮೇಂದ್ರ ಅವರ ಅಂತ್ಯ ಸಂಸ್ಕಾರ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ನಟ ಧರ್ಮೇಂದ್ರ ಅವರ ನಿಧನದ ಮೂಲಕ ಬಾಲಿವುಡ್ ರೆಟ್ರೋ ಸಿನೆಮಾಗಳ ಮೂಲಕ ಮನೆಮಾತಾಗಿದ್ದ ಹಿರಿಯ ಕೊಂಡಿಯೊಂದು ಕಳಚಿದಂತಾಗಿದೆ.















