ಹುಬ್ಬಳ್ಳಿಯಲ್ಲಿ ಅದ್ದೂರಿಯಾಗಿ ನಡೆದ ‘ಮಾರ್ಕ್’ ಪ್ರೀ-ರಿಲೀಸ್ ಇವೆಂಟ್
ಗಂಡುಮೆಟ್ಟಿದ ನಾಡಲ್ಲಿ ‘ಮಾರ್ಕ್’ ಪ್ರೀ-ರಿಲೀಸ್ ಅಬ್ಬರ
ಅಭಿಮಾನಿಗಳ ಮುಂದೆ ಅದ್ದೂರಿಯಾಗಿ ಜರುಗಿದ ‘ಮಾರ್ಕ್’ ಪ್ರೀ-ರಿಲೀಸ್ ಇವೆಂಟ್…
‘ನಾವು ಯುದ್ಧಕ್ಕೆ ಸಿದ್ದ…’ ಎಂದು ‘ಮಾರ್ಕ್’ ಸಂದೇಶ!
ನಟ ಕಿಚ್ಚ ಸುದೀಪ್ ಅಭಿನಯದ ‘ಮಾರ್ಕ್’ ಸಿನೆಮಾದ ಬಿಡುಗಡೆಗೆ ದಿನಗಣನೆ ಶುರುವಾಗದೆ. ಸದ್ಯ ಪ್ರೇಕ್ಷಕರನ್ನು ತನ್ನತ್ತ ಸೆಳೆಯಲು ಅಂತಿಮ ಕಸರತ್ತು ನಡೆಸುತ್ತಿರುವ ‘ಮಾರ್ಕ್’ ಚಿತ್ರತಂಡ, ಇದೇ ಡಿಸೆಂಬರ್ 20ರಂದು ಉತ್ತರ ಕರ್ನಾಟಕದ ಶಕ್ತಿಕೇಂದ್ರ, ಗಂಡು ಮೆಟ್ಟಿದ ನಾಡು ಹುಬ್ಬಳ್ಳಿಯಲ್ಲಿ ಅದ್ಧೂರಿಯಾಗಿ ‘ಮಾರ್ಕ್’ ಪ್ರೀ-ರಿಲೀಸ್ ಅನ್ನು ನಡೆಸಿದೆ.
ಹುಬ್ಬಳ್ಳಿಯ ನೆಹರು ಮೈದಾನದಲ್ಲಿ ನಡೆದ ‘ಮಾರ್ಕ್’ ಪ್ರೀ-ರಿಲೀಸ್ ಇವೆಂಟ್ ಕಾರ್ಯಕ್ರಮದಲ್ಲಿ, ನಾಯಕ ನಟ ಕಿಚ್ಚ ಸುದೀಪ್ ಜೊತೆಗೆ ಇಡೀ ‘ಮಾರ್ಕ್’ ಚಿತ್ರದ ಬಹುತೇಕ ಕಲಾವಿದರು ಮತ್ತು ತಂತ್ರಜ್ಞರು ಹಾಜರಿದ್ದು, ‘ಮಾರ್ಕ್’ ಪ್ರೀ-ರಿಲೀಸ್ ಕಾರ್ಯಕ್ರಮದ ರಂಗೇರುವಂತೆ ಮಾಡಿದರು. ‘ಮಾರ್ಕ್’ ಪ್ರೀ-ರಿಲೀಸ್ ಇವೆಂಟ್ ಕಾರ್ಯಕ್ರಮದಲ್ಲಿ ನಡೆದ ನಟ ಸುದೀಪ್ ಅವರ ಸಿನೆಮಾದ ಹಾಡುಗಳ ಗಾಯನ, ನೃತ್ಯ ಪ್ರದರ್ಶನ ನೆರೆದಿದ್ದ ಪ್ರೇಕ್ಷಕರ ಮನರಂಜಿಸಿತು.
ಇಲ್ಲಿ ಮಾತನಾಡಿದ್ರೆ, ಎಲ್ಲಿಗೆ ತಟ್ಟಬೇಕೋ ಅಲ್ಲಿಗೆ ತಟ್ಟುತ್ತದೆ…
‘ಮಾರ್ಕ್’ ಪ್ರೀ-ರಿಲೀಸ್ ಇವೆಂಟ್‌ನಲ್ಲಿ ಮಾತನಾಡಿದ ನಟ ಸುದೀಪ್, ‘2003ರಲ್ಲಿ ಇಲ್ಲಿ ಒಂದು ಪ್ರೋಗ್ರಾಂ ಮಾಡಿದ ಬಳಿಕ ಮತ್ತೆ ಹುಬ್ಬಳ್ಳಿಗೆ ಬರಲು ಇವತ್ತೇ ಅವಕಾಶ ಸಿಕ್ಕಿದ್ದು. ಬಹಳ ಚೆನ್ನಾಗಿ, ಸುಂದರವಾಗಿ ಸ್ವಾಗತಿಸಿದ್ದಕ್ಕೆ ಧನ್ಯವಾದಗಳು. ಮಾತಾಡೊದಕ್ಕೆ ತುಂಬಾ ಆಸೆ ಇದೆ. ಕೆಲವು ಕಂಟ್ರೋಲ್ ಮಾಡಿಕೊಂಡು ಮಾತಾಡುತ್ತೀನಿ.
ಹುಬ್ಬಳ್ಳಿಗೆ ಬಂದು ಈ ಕಾರ್ಯಕ್ರಮ ಮಾಡೋದಕ್ಕೆ ಒಂದು ದೊಡ್ಡ ಕಾರಣ ಇದೆ. ಕೆಲವು ಮಾತು ಈ ಹುಬ್ಬಳಿಗೆ ಬಂದು ವೇದಿಕೆ ಮೇಲೆ ಮಾತಾಡಿದರೆ ಇಡೀ ಕರ್ನಾಟಕಕ್ಕೆ ಎಲ್ಲಿ ತಟ್ಟಬೇಕೋ ತಟ್ಟುತ್ತೆ, ಹೇಗೆ ತಟ್ಟಬೇಕೋ ತಟ್ಟುತ್ತೆ. ಯಾವ ಭರ್ಜರಿಯಲ್ಲಿ ತಟ್ಟಬೇಕೋ ತಟ್ಟುತ್ತೆ. ಪ್ರತಿ ಬಾರಿ ಈ ಊರಲ್ಲಿ ನಮಗೆ ಸಿಕ್ಕ ಪ್ರೀತಿ, ವಿಶ್ವಾಸ, ಬೆಂಬಲವನ್ನು ನಾವು ಎಂದಿಗೂ ಮರೆಯಲ್ಲ. ಈ ವೇದಿಕೆಗೆ ಬಂದ ಎಲ್ಲ ಸ್ನೇಹಿತರಿಗೆ, ಜನಸಾಗರಕ್ಕೆ, ನನ್ನ ಕುಟುಂಬಕ್ಕೆ ಧನ್ಯವಾದ’ ಎಂದರು.
ಮಾತು ಮುಂದುವರಿದ ನಟ ಸುದೀಪ್ ಅವರು, ‘ಕಳೆದ ಜುಲೈ 5ರಂದು ಒಂದು ಪ್ರಾಮಿಸ್ ಮಾಡಿದ್ದೆ. ಡಿಸೆಂಬರ್ 25ನೇ ತಾರೀಕು ಬಾಗಿಲು ತಟ್ಟುತ್ತೇನೆ ಅಂತ. ಜೋರಾಗಿ ತಟ್ಟುತ್ತಾ ಇದ್ದೇವೆ ನಾವು. ಈ ಜರ್ನಿಯಲ್ಲಿ 25ಕ್ಕೆ ಥಿಯೇಟರ್ನಲ್ಲಿ ಒಂದು ಸಿನೆಮಾ ಬಿಡುಗಡೆ ಆಗುತ್ತೆ. ಆದರೆ ಹೊರಗಡೆ ಒಂದು ಪಡೆ ಯುದ್ಧಕ್ಕೆ ರೆಡಿ ಆಗುತ್ತಾ ಇದೆ. ಈ ವೇದಿಕೆ ಮೇಲಿಂದ ಹೇಳ್ತಾ ಇದ್ದೇನೆ. ಯುದ್ಧಕ್ಕೆ ಸಿದ್ಧ. ಯಾಕೆಂದರೆ ನಾವು ನಮ್ಮ ಮಾತಿಗೆ ಬದ್ಧ’ ಎಂದು ಎದುರಾಳಿಗೆ ಸವಾಲು ಹಾಕಿದರು.
‘ಮಾರ್ಕ್’ ಪ್ರೀ-ರಿಲೀಸ್ ಇವೆಂಟ್ ನಲ್ಲಿ ಚಿತ್ರತಂಡ ಭಾಗಿ
ಈ ಕಾರ್ಯಕ್ರಮದಲ್ಲಿ ಕಿಚ್ಚನ ಪಡೆ ಮಿಂದೆದ್ದಿತು. ‘ಮಾರ್ಕ್’ ಪ್ರೀ-ರಿಲೀಸ್ ಇವೆಂಟ್ ನಲ್ಲಿ ಚಿತ್ರದ ತಾರಾ ಬಳಗ ನವೀನ್ ಚಂದ್ರ, ಗೋಪಾಲಕೃಷ್ಣ ದೇಶಪಾಂಡೆ, ಪ್ರತಾಪ್ ನಾರಾಯಣ್, ಅರ್ಚನಾ ಕೊಟ್ಟಿಗೆ, ರೋಶಿನಿ ಪ್ರಕಾಶ್, ಮಾಲ್ತೇಶ್, ಅಶ್ವಿನ್ ಹಾಸನ್, ಗುರುಸೋಮ್ ಸುಂದರ್, ಮಹಂತೇಶ್ ಹಿರೇಮಠ್ ಮೊದಲಾದವರು ಭಾಗಿಯಾಗಿದ್ದರು. ‘ಸಿಸಿಎಲ್’ ಆಟಗಾರರು ಕಿಚ್ಚನಿಗೆ ಡ್ಯಾನ್ಸ್ ಪರ್ಫಾಮೆನ್ಸ್ ಮೂಲಕ ಗೌರವ ಸಲ್ಲಿಸಿದರು. 
ಅಂದಹಾಗೆ, ‘ಮಾರ್ಕ್’ ಸಿನೆಮಾ ಡಿಸೆಂಬರ್ 25 ಕ್ಕೆ ಬಿಡುಗಡೆ ಆಗುತ್ತಿದ್ದು, ಈ ಹಿಂದೆ ಸುದೀಪ್ ಅಭಿನಯದ ‘ಮ್ಯಾಕ್ಸ್’ ಸಿನೆಮಾವನ್ನು ನಿರ್ದೇಶನ ಮಾಡಿದ್ದ ವಿಜಯ್ ಕಾರ್ತಿಕೇಯ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಸಿನೆಮಾದಲ್ಲಿ ಸುದೀಪ್ ಜೊತೆಗೆ ಶೈನ್ ಟಾಮ್ ಚಾಕೊ, ಯೋಗಿ ಬಾಬು ಇನ್ನೂ ಹಲವು ಪ್ರತಿಭಾವಂತ ನಟರು ನಟಿಸಿದ್ದಾರೆ. ‘ಕಿಚ್ಚ ಕ್ರಿಯೇಷನ್’ ಹಾಗೂ ‘ಸತ್ಯ ಜ್ಯೋತಿ ಫಿಲಂಸ್’ ಬ್ಯಾನರ್‌ನಡಿ ‘ಮಾರ್ಕ್’ ಚಿತ್ರ ನಿರ್ಮಾಣವಾಗಿದೆ. ನಟ ಕಿಚ್ಚ ಸುದೀಪ್ ಅವರ ಪತ್ನಿ ಪ್ರಿಯಾ ಸುದೀಪ್ ‘ಮಾರ್ಕ್’ ಚಿತ್ರವನ್ನು ವಿತರಣೆ ಮಾಡುತ್ತಿದ್ದಾರೆ.















