ಹೊಸಬರ ಶಕುನ… ‘ಒಮೆನ್’ ಎಂಬ ಹೊಸ ಸಾಹಸ
ನವ ಪ್ರತಿಭೆಗಳ ‘ಒಮೆನ್’ ಟ್ರೇಲರ್ ಬಿಡುಗಡೆ
ಫೌಂಡ್ ಫೂಟೇಜ್ ನಲ್ಲಿ ಹೊರಬಂದು ‘ಓಮೆನ್’ ಚಿತ್ರದ ಟ್ರೇಲರ್
ತಣ್ಣಗೆ ಕೂತವರನ್ನು ಬೆಚ್ಚಿಬೀಳಿಸಲು ಹೊರಟ ದೆವ್ವದ ಕಥೆ!
ಕನ್ನಡ ಚಿತ್ರರಂಗದಲ್ಲಿ ಆಗಾಗ್ಗೆ ಹಾರರ್ ಸಿನೆಮಾಗಳು ತೆರೆಗೆ ಬರುತ್ತಲೇ ಇರುತ್ತವೆ. ಪ್ರತಿಯೊಂದು ಹಾರರ್ ಸಿನೆಮಾಗಳೂ ಒಂದೊಂದು ಥರದಲ್ಲಿ ಪ್ರೇಕ್ಷಕರನ್ನು ಬೆಚ್ಚಿಸುವ ಸಾಹಸ ಮಾಡುತ್ತಲೇ ಇರುತ್ತವೆ. ಸದ್ಯ ಕನ್ನಡ ಚಿತ್ರರಂಗದಲ್ಲಿ ಆಕ್ಷನ್ ಮತ್ತು ಲವ್ ಸ್ಟೋರಿ ಸಿನೆಮಾಗಳ ಅಬ್ಬರ ಜೋರಾಗಿರುವಂತೆಯೇ ಇಲ್ಲೊಂದು ಹೊಸಬರ ಹಾರರ್ ಸಿನೆಮಾ ಪ್ರೇಕ್ಷಕರನ್ನು ಥಿಯೇಟರಿನಲ್ಲಿ ಬೆಚ್ಚಿ ಬೀಳಿಸಲು ತಯಾರಿ ಮಾಡಿಕೊಳ್ಳುತ್ತಿದೆ.
ಅಂದಹಾಗೆ, ಆ ಸಿನೆಮಾದ ಹೆಸರು ‘ಒಮೆನ್’. ಈಗಾಗಲೇ ಸದ್ದಿಲ್ಲದೆ ತನ್ನ ಬಹುತೇಕ ಕೆಲಸಗಳನ್ನು ಪೂರ್ಣಗೊಳಿಸಿರುವ ‘ಒಮೆನ್’ ಚಿತ್ರತಂಡ ಇತ್ತೀಚೆಗೆ ತಮ್ಮ ಚಿತ್ರದ ಟ್ರೇಲರ್ ಅನ್ನು ಬಿಡುಗಡೆ ಮಾಡಿದೆ.
ಯುವ ನಿರ್ದೇಶಕ ವೈಭವ್ ಎಸ್. ಸಂತೋಷ್ ನಿರ್ದೇಶನದಲ್ಲಿ ಮೂಡಿಬಂದಿರುವ ‘ಒಮೆನ್’ ಸಿನೆಮಾಕ್ಕೆ ‘ಮರವಂಜಿ ಪ್ರೊಡಕ್ಷನ್ಸ್’ ಮತ್ತು ‘ಶ್ರೀ ಅಂಗಾಳ ಪರಮೇಶ್ವರಿ ಮೂವಿ ಮೇಕರ್ಸ್’ ಬ್ಯಾನರ್‌ನಡಿ ಅಜಯ್ ಕುಮಾರ್ ಮತ್ತು ವಿ. ಮಿರುನಳಿನಿ ಬಂಡವಾಳ ಹೂಡಿ ನಿರ್ಮಾಣ ಮಾಡಿದ್ದಾರೆ.
‘ಒಮೆನ್’ ಮೇಲೆ ಹೊಸಬರ ಭರವಸೆ…
‘ಒಮೆನ್’ ಸಿನೆಮಾದ ಟ್ರೇಲರ್ ಬಿಡುಗಡೆಯಾದ ಬಳಿಕ ಮಾತನಾಡಿದ ನಿರ್ದೇಶಕ ವೈಭವ್ ಸಂತೋಷ್, ‘ಈ ಸಿನೆಮಾದ ಹೆಸರು ‘ಒಮೆನ್’ ಅಂದ್ರೆ ಶಕುನಾ ಎಂದು ಅರ್ಥ ಬರುತ್ತೆ. ಭಯಾನಕವಾದ ಸಿನೆಮಾವನ್ನ ಇನ್ನು ಭಯಾನಕವಾಗಿ ಮಾಡಬೇಕೆಂಬ ಉದ್ದೇಶದಿಂದಾನೇ ‘ಒಮೆನ್’ ಎಂದು ಹೆಸರಿಟ್ಟು ಮಾಡಿದ್ದೇವೆ.
ನಮ್ಮ ಸಿನೆಮಾದಲ್ಲಿ ಫೌಂಡ್ ಫುಟೇಜ್ ಮೂಲಕ ಕಥೆ ಹೇಳುವ ಪ್ರಯತ್ನ ಮಾಡಿದ್ದೇವೆ. ಫೌಂಡ್ ಫುಟೇಜ್ ಅಂದ್ರೆ ಅನೇಕರು ಒಪ್ಪಲ್ಲ. ಹೀರೋನೆ ಕ್ಯಾಮೆರಾ ಇಟ್ಕೊಂಡು ಮಾಡೋ ರಿಸ್ಕ್ ಯಾಕೆ ಅಂತ ಸುಮ್ನಾಗ್ತಾರೆ. ಆದ್ರೆ ನಮ್ಮ ಹೀರೋ ಅಜಯ್ ಕುಮಾರ್ ತುಂಬಾ ಸಪೋರ್ಟ್ ಮಾಡಿದ್ದರಿಂದ ಈ ಸಿನೆಮಾವಾಗಿದೆ. ನಮ್ಮ ಸಿನೆಮಾದ ಮ್ಯೂಸಿಕ್ ಕೂಡ ಬಹಳ ಮುಖ್ಯ ಪಾತ್ರ ವಹಿಸಿದೆ’ ಎಂದರು.
ಹೊಸಬರಾದರೂ ಕೆಲಸ ಮಾಡಿದ ಅನುಭವವಿದೆ…
ನಟ ಅಜಯ್ ಕುಮಾರ್ ಮಾತನಾಡಿ, ‘ಈ ಸಿನೆಮಾಗೆ ನಾಯಕ ಅಂತ ಹೇಳ್ಕೊಳೋಕೆ ತುಂಬಾ ಖುಷಿ ಪಡ್ತೀನಿ. ಆದ್ರೆ ನಿರ್ಮಾಪಕ ಅಂತ ಹೇಳಿಕೊಳ್ಳೋದಕ್ಕೆ ಭಯ. ಅದು ತುಂಬಾ ದೊಡ್ಡ ಪದ. ಇಂಡಸ್ಟ್ರಿಗೆ ನಮ್ಮ ಕಡೆಯಿಂದ ಏನಾದ್ರು ಕೊಡುಗೆ ಕೊಡಬೇಕು. ಇದು ಕಂಪ್ಲೀಟ್ ಹೊಸಬರ ಸಿನೆಮಾ ಅನ್ನೋದಕ್ಕಿಂತ ಈ ತಂಡದಲ್ಲಿರುವವರು ಸಿನಿಮಾದ ಹಿರಿಯರ ಜೊತೆಗೆ ಕೆಲಸ ಮಾಡಿ ಅನುಭವವಿದೆ. ನಾನು ರೈತ ಕುಟುಂಬದಿಂದ ಬಂದವನು, ನಮ್ಮದು ಲ್ಯಾಂಡ್ ಬಿಸಿನೆಸ್ ಇದೆ. ನಾನು ಚಿತ್ರರಂಗದಲ್ಲಿ ಸಿನಿಮಾ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದ್ದೇನೆ. ನಟ , ನಿರ್ದೇಶಕ ಕಾಶಿನಾಥ್ ಅವರ ಕೊನೆಯ ಚಿತ್ರದಲ್ಲಿ ಕೆಲಸ ಮಾಡುತ್ತಾ ಒಂದಷ್ಟು ಒಡನಾಟವನ್ನು ಇಟ್ಟುಕೊಂಡಿದ್ದೆ. ಅವರೇ ಹೇಳುವಂತೆ ಕಥೆಯೇ ಮೂಲ ಒಂದು ಚಿತ್ರದ ಗೆಲುವಿಗೆ ಕಾರಣ ಎಂದಿದ್ದರು. ಹಾಗಾಗಿ ನಾನು ಚಿತ್ರ ನಿರ್ಮಾಣದ ಜೊತೆ ನಾಯಕನಾಗಿ ಅಭಿನಯಿಸಿದ್ದೇನೆ. ಇಡೀ ತಂಡ ಬಹಳ ಅಚ್ಚುಕಟ್ಟಾಗಿ ಶ್ರಮಪಟ್ಟು ಮಾಡಿದ್ದೇವೆ’ ಎಂದರು.
ಶೀಘ್ರದಲ್ಲಿಯೇ ‘ಒಮೆನ್’ ತೆರೆಗೆ
ಅಂದಹಾಗೆ, ಈ ‘ಒಮೆನ್’ ಸಿನೆಮಾವನ್ನು ವಿತರಕ ವಿಜಯ್ ಅವರು ತಮ್ಮ ‘ವಿಜಯ್ ಸಿನೆಮಾಸ್’ ಸಂಸ್ಥೆಯ ಮೂಲಕ ವಿತರಣೆ ಮಾಡುತ್ತಿದ್ದಾರೆ. ಆದಷ್ಟು ಶೀಘ್ರದಲ್ಲಿಯೇ ‘ಒಮೆನ್’ ಸಿನೆಮಾ ರಿಲೀಸ್ ಆಗ್ತಾ ಇದೆ. ವೈಭವ್ ಸಂತೋಷ್ ಸಿನಿಮಾಗೆ ಆಕ್ಷನ್ ಕಟ್ ಹೇಳುವುದರ ಜೊತೆಗೆ ಎಡಿಟಿಂಗ್ ಕೆಲಸವನ್ನು ಮಾಡಿದ್ದಾರೆ.
ಇನ್ನು ಅಜಯ್ ಕುಮಾರ್ ನಟನೆ ಜೊತೆಗೆ ನಿರ್ಮಾಣದ ಜವಾಬ್ದಾರಿಯನ್ನು ಹೊತ್ತಿದ್ದಾರೆ. ‘ಒಮೆನ್’ ಸಿನೆಮಾದಲ್ಲಿ ನಿಶ್ಮಾ ಶೆಟ್ಟಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ನಾಯಕ ಅಜಯ್ ಕುಮಾರ್ ಯೂಟ್ಯೂಬರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ನಾಯಕಿ ನೀಶ್ಮ ಶೆಟ್ಟಿ ಪ್ಯಾರಾನಾರ್ಮಲ್ ರಿಸರ್ಚರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಈ ಚಿತ್ರದಲ್ಲಿ ಮೈತ್ರಿ ಜಗ್ಗಿ, ಕೀರ್ತನ ಪುಲ್ಕಿ, ಆಕಾಶ್ ಕುಲಕರ್ಣಿ ಮೊದಲಾದವರು ಈ ಚಿತ್ರದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಭುವನ್ ಶಂಕರ್, ಸಂಸ್ಕಾರ್ ಚಿತ್ರದ ಹಾಡುಗಳಿಗೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಸುಮಾರು 38 ದಿನಗಳ ಕಾಲ ಆನೇಕಲ್ ಸಮೀಪದಲ್ಲಿರುವ ಹಳೆಯ ಬಿಲ್ಡಿಂಗ್ ನಲ್ಲಿ ಚಿತ್ರೀಕರಣ ಮಾಡಲಾಗಿದೆ. 
ಫೌಂಡ್ ಫುಟೇಜ್ ನಲ್ಲಿ ಅರಳಿದ ಚಿತ್ರ!
ಇನ್ನು ‘ಒಮೆನ್’ ಚಿತ್ರ ಫೌಂಡ್ ಫುಟೇಜ್ ನಲ್ಲಿ ಚಿತ್ರೀಕರಣಗೊಂಡಿರುವ ಸಿನೆಮಾವಾಗಿದ್ದು, ಒಂದು ಮನೆಯ ಸುತ್ತ ನಡೆಯುವಂತಹ ಘಟನೆಯ ಸುತ್ತ ಇಡೀ ಚಿತ್ರದ ಕಥಾಹಂದರ ಸಾಗುತ್ತದೆ. ಒಂದು ನಿಗೂಡ ಭೂತ ಬಂಗಲೆಗೆ ಇಬ್ಬರು ಪ್ರವೇಶ ಮಾಡುತ್ತಾರೆ. ಆದರೆ ಈ ಹಿಂದೆ ಬಂದಂತ ದೆವ್ವ , ಭೂತ , ಪ್ಯಾರಾ ನಾರ್ಮಲ್ ಆಕ್ಟಿವಿಟೀಸ್ ಚಿತ್ರಗಳಿಗಿಂತ ನಮ್ಮ ಚಿತ್ರ ವಿಭಿನ್ನವಾಗಿ ಮೂಡಿಬಂದಿದೆ ಎಂಬುದು ಚಿತ್ರತಂಡದ ಭರವಸೆ ಮಾತು. ಒಟ್ಟಾರೆ ಒಂದಷ್ಟು ಪ್ರಯತ್ನದ ಮೂಲಕ ಪ್ರೇಕ್ಷಕರ ಮುಂದೆ ಬರುತ್ತಿರುವ ‘ಒಮೆನ್’ ಚಿತ್ರ ಹೇಗಿರಲಿದೆ ಎಂಬುದು ಥುಯೇಟರಿಗೆ ಬಂದ ಮೇಲಷ್ಟೇ ಗೊತ್ತಾಗಲಿದೆ.















