ತಮಿಳು ಚಿತ್ರರಂಗಕ್ಕೆ ಎಂಟ್ರಿಯಾದ ಮಂಡ್ಯ ಹೈದ
ಕಾಲಿವುಡ್ ಗೆ ಕಾಲಿಟ್ಟ ಮಂಡ್ಯ ಹುಡ್ಗ ಪ್ರಭಾಕರ್
‘ಅಕ್ಯೂಸ್ಡ್’ ಚಿತ್ರದ ಮೂಲಕ ತಮಿಳಿನಲ್ಲಿ ಅದೃಷ್ಟ ಪರೀಕ್ಷೆ
ಕನ್ನಡದ ಯುವ ನಟನ ತಮಿಳು ಚಿತ್ರಯಾನ
ಕನ್ನಡದ ಅನೇಕ ಪ್ರತಿಭಾವಂತ ಕಲಾವಿದರು, ತಂತ್ರಜ್ಞರು ಕನ್ನಡದ ಜೊತೆಗೆ ಪರಭಾಷೆಯಲ್ಲೂ ತಮ್ಮದೇ ಆದ ಛಾಪು ಮೂಡಿಸಿರುವುದು ಬಹುತೇಕ ಎಲ್ಲರಿಗೂ ಗೊತ್ತಿರುವ ವಿಷಯ. ಪ್ರತಿವರ್ಷ ಕನ್ನಡದಿಂದ ಪರಭಾಷೆಗಳಿಗೆ, ಪರಭಾಷೆಗಳಿಂದ ಕನ್ನಡಕ್ಕೆ ಅನೇಕ ಹೊಸ ಪ್ರತಿಭೆಗಳ ವಿನಿಮಯ ಆಗುತ್ತಲೇ ಇರುತ್ತದೆ.
ಈಗ ಆ ಸಾಲಿಗೆ ಸೇರುತ್ತಿರುವ ಮತ್ತೊಂದು ಹೆಸರು ಯುವ ನಟ ಪ್ರಭಾಕರ್ ಬೋರೇಗೌಡ ಅವರದ್ದು. ಹೌದು, ಈಗಾಗಲೇ ಕನ್ನಡದ ಕಿರುತೆರೆ ಮತ್ತು ಹಿರಿತೆರೆಯಲ್ಲಿ ಕಲಾವಿದನಾಗಿ ಗುರುತಿಸಿಕೊಂಡಿರುವ ಪ್ರಭಾಕರ್ ಈಗ ‘ಅಕ್ಯೂಸ್ಡ್’ (Accused) ಸಿನೆಮಾ ಎಂಬ ತಮಿಳು ಚಿತ್ರದ ಮೂಲಕ ತಮಿಳು ಚಿತ್ರರಂಗಕ್ಕೂ ಪದಾರ್ಪಣೆ ಮಾಡುತ್ತಿದೆ.
ಕಿರುತೆರೆಗೂ ಸೈ… ಹಿರಿತೆರೆಗೂ ಜೈ…
ಅಂದಹಾಗೆ, ಪ್ರಭಾಕರ್ ಕಳೆದ ಎರಡು ದಶಕಗಳಿಂದ ಅಭಿನಯದಲ್ಲಿ ತೊಡಗಿಸಿಕೊಂಡಿರುವ ನಟ. ಮೂಲತಃ ಮಂಡ್ಯದವರಾದ ಪ್ರಭಾಕರ್ ಚಿಕ್ಕಂದಿನಲ್ಲೇ ಕಲೆಯ ಮೇಲೆ ಪ್ರೀತಿ, ಆಸಕ್ತಿ ಬೆಳೆಸಿಕೊಂಡವರು. ತಮ್ಮ ಎಂಜಿನಿಯರಿಂಗ್ ಮುಗಿಸಿ, ಬೆಂಗಳೂರಿಗೆ ಬಂದ ಪ್ರಭಾಕರ್ ಅಭಿನಯ ತರಂಗದಲ್ಲಿ ರಂಗಭೂಮಿಯ ತಾಲೀಮು ನಡೆಸಿ, ಹಲವಾರು ನಾಟಕ ಮಾಡಿ ಸೈ ಎನಿಸಿಕೊಂಡವರು. ನಂತರ ಕಿರುತೆರೆಗೆ ಕಾಲಿಟ್ಟ ಪ್ರಭಾಕರ್, ಸುಮಾರು ಐದು ಸಾವಿರಕ್ಕೂ ಹೆಚ್ಚು ಎಪಿಸೋಡ್ ಗಳಲ್ಲಿ ಕಾಣಿಸಿಕೊಂಡು ಮನೆಮಾತಾದವರು.
ಕಳೆದ ಎರಡು ದಶಕಗಳಿಂದಲೂ ಪ್ರಭಾಕರ್ ಕನ್ನಡದ ಸಾಕಷ್ಟು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಹಲವು ಸಿನೆಮಾಗಳಲ್ಲೂ ಅವರು ನೆಗೆಟಿವ್ ರೋಲ್ ಮೂಲಕ ಗಮನಸೆಳೆದಿದ್ದಾರೆ. ಈಗ ತಮಿಳಿನ ‘ಅಕ್ಯೂಸ್ಡ್’ ಸಿನೆಮಾ ಮೂಲಕ ತಮ್ಮ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ.
ಸೀರಿಯಲ್ಸ್‌ನಿಂದ ಸಿನೆಮಾದತ್ತ ಪ್ರಭಾಕರ್ ಚಿತ್ತ…
ತಮ್ಮ ಬಣ್ಣದ ಬದುಕಿನ ಜರ್ನಿಯ ಬಗ್ಗೆ ಮಾತನಾಡುವ ಪ್ರಭಾಕರ್, ‘ಕನ್ನಡದಲ್ಲಿ ‘ಕಪಿಚೇಷ್ಟೇ’, ‘ಕುಂಕುಮ ಭಾಗ್ಯ’, ‘ಸೌಂದರ್ಯ ಲಹರಿ’, ‘ಮಾಂಗಲ್ಯ’, ‘ಪುಣ್ಯಕೋಟಿ’ ಹೀಗೆ ಹಲವಾರು ಸೀರಿಯಲ್ಸ್ ಮಾಡಿದ್ದೇನೆ. ‘ಪುಣ್ಯಕೋಟಿ’ ಧಾರಾವಾಹಿ ಬರೋಬ್ಬರಿ ಎರಡು ಸಾವಿರ ಎಪಿಸೋಡು ಮೂಡಿಬಂತು. ‘ಬದುಕು’ ಸೀರಿಯಲ್ ಕೂಡ ಹೊಸ ಬದುಕು ಕಟ್ಟಿಕೊಟ್ಟಿತು. ಇದು ೬ ವರ್ಷಗಳ ಕಾಲ ಪ್ರಸಾರವಾಯ್ತು. ‘ಮನೆಯೊಂದು ಮೂರು ಬಾಗಿಲು’ ಧಾರಾವಾಹಿಯಲ್ಲಿ ನೆಗೆಟಿವ್ ರೋಲ್ ಮಾಡಿದ್ದೇನೆ. ‘ಪುಣ್ಯಕೋಟಿ ಸೀರಿಯಲ್’ ಗೆ ಎ. ಜಿ. ಶೇಷಾದ್ರಿ ನನ್ನನ್ನು ಹೀರೋ ಮಾಡಿದ್ರು. ಅಲ್ಲಿಂದ ಬಹುತೇಕ ಹೀರೋ ಪಾತ್ರಗಳಲ್ಲೇ ಕಾಣಿಸಿಕೊಳ್ಳುವಂತಾಯಿತು. ಸದ್ಯ ನನ್ನ ಕೈಯಲ್ಲಿ ಸಾಕಷ್ಟು ಸೀರಿಯಲ್ ಗಳಿದ್ದವು. ಒಂದು ಕಡೆ ಸೀರಿಯಲ್ಸ್ ನಲ್ಲಿ ಬಿಝಿ. ಇನ್ನೊಂದು ಕಡೆ ನನ್ನದೇ ಆದ ಬಿಝಿನೆಸ್ ರನ್ ಮಾಡುತ್ತಿದ್ದೆ. ಕೊನೆಗೆ ಸೀರಿಯಲ್ಸ್ ಸಾಕು ಅನಿಸಿ ಸಿನೆಮಾ ಕಡೆ ಮುಖ ಮಾಡಿದೆ’ ಎನ್ನುತ್ತಾರೆ.
ನೆಗೆಟೀವ್ ರೋಲ್ಸ್ ಅಂದ್ರೆ ಅಚ್ಚುಮೆಚ್ಚು…!
ಸೀರಿಯಲ್ಸ್‌ನಿಂದ ಸಿನೆಮಾದತ್ತ ಮುಖ ಮಾಡಿದ ಪ್ರಭಾಕರ್ ಅವರಿಗೆ ನಿದಾನವಾಗಿ ಒಂದೊಂದೆ ಸಿನೆಮಾ ಅವಕಾಶಗಳು ಹುಡುಕಿ ಬಂದವು. ‘ಕರಿಯ 2’ ಸಿನೆಮಾದಲ್ಲಿ ವಿಲನ್ ಆಗಿ ನಟಿಸುವ ಮೂಲಕ ಸಿನೆಮಾಗೆ ಪ್ರಭಾಕರ್ ಎಂಟ್ರಿಕೊಟ್ಟರು. ಸಂಚಾರಿ ವಿಜಯ್ ಅವರ ಜೊತೆ ‘ಅಹಂ ಬ್ರಹ್ಮಾಸಿ’ ಸೇರಿದಂತೆ ಒಂದಷ್ಟು ಸಿನೆಮಾಗಳಲ್ಲಿ ನಟಿಸಿದರು.
ಅವರಿಗೆ ಬಹುತೇಕ ನೆಗೆಟಿವ್ ರೋಲ್ ಗಳೇ ಹೆಚ್ಚು ಹುಡುಕಿ ಬಂದವು. ಅವರಿಗೆ ಈಗಲೂ ನೆಗೆಟಿವ್ ರೋಲ್ ಮಾಡುವುದೆಂದರೆ ಪ್ರೀತಿ. ಇತ್ತೀಚೆಗೆ ತೆರೆಕಂಡ ‘ರುದ್ರ ಗರುಡ ಪುರಾಣ’ ಸಿನೆಮಾದಲ್ಲೂ ನೆಗೆಟಿವ್ ರೋಲ್ ಮಾಡಿ ಸೈ ಎನಿಸಿಕೊಂಡರು. ಸದ್ಯ ಬಿಡುಗಡೆ ಆಗಬೇಕಿರುವ ಕೆಲ ಸಿನೆಮಾಗಳಿವೆ. ಅಲ್ಲೂ ನೆಗೆಟಿವ್ ರೋಲ್ ಗಳಲ್ಲೇ ಕಾಣಿಸಿಕೊಂಡಿದ್ದಾರೆ. ಪ್ರಭಾಕರ್ ಅವರಿಗೆ ನೆಗೆಟಿವ್ ರೋಲ್ ಅಂದರೆ ಅಚ್ಚುಮೆಚ್ಚು.
‘ಅಕ್ಯೂಸ್ಡ್’ ಮೂಲಕ ತಮಿಳಿಗೆ ಎಂಟ್ರಿ…
ಪ್ರಭಾಕರ್ ಅಭಿನಯದ ‘ಅಕ್ಯೂಸ್ಡ್’ (Accused) ಸಿನೆಮಾವನ್ನು ಪ್ರಭು ಶ್ರೀನಿವಾಸ್ ನಿರ್ದೇಶಿಸಿದ್ದು, ಚಿತ್ರದಲ್ಲಿ ಉದಯ, ಯೋಗಿಬಾಬು, ಅಜ್ಮಲ್, ಜಾನ್ವಿಕ ಇತರರು ನಟಿಸಿದ್ದಾರೆ. ಈ ಚಿತ್ರದಲ್ಲಿ ಪ್ರಭಾಕರ್ ಅವರದು ಖಳನಟನ ಪಾತ್ರ. ಇಡೀ ಸಿನೆಮಾದ ಮೇನ್ ವಿಲನ್ ಆಗಿ ನಟಿಸಿರುವ ಪ್ರಭಾಕರ್ ಅವರಿಗೆ ಈ ಸಿನೆಮಾದ ಮೇಲೆ ನಂಬಿಕೆ ಇದೆ. ಆಗಸ್ಟ್ 1ಕ್ಕೆ ಈ ಸಿನೆಮಾ ವರ್ಲ್ಡ್ ವೈಡ್ ರಿಲೀಸ್ ಆಗುತ್ತಿದೆ. ಈಗಾಗಲೇ ಸಿನೆಮಾದ ಟ್ರೇಲರ್ ಗೆ ಸಾಕಷ್ಟು ಮೆಚ್ಚುಗೆ ಸಿಕ್ಕಿದ್ದು, ಪ್ರಭಾಕರ್ ಅವರಿಗೂ ಚಿತ್ರ ಹೆಸರು ತಂದುಕೊಡುತ್ತೆ ಎಂಬ ವಿಶ್ವಾಸವಿದೆ.
ಸದ್ಯ ಅವರ ಕೆರಿಯರ್ ನ ಮತ್ತೊಂದು ಹೊಸ ಮಜಲು ಅಂದರೆ ಅದು ತಮಿಳಿನ ‘ಅಕ್ಯೂಸ್ಡ್’ ಸಿನೆಮಾ. ಇದರಲ್ಲಿ ಅವರೇ ಮೇನ್ ವಿಲನ್.
ಚಿತ್ರದ ಕಂಟೆಂಟ್ ಹೊಸದಾಗಿದೆ. ಹಾಗಾಗಿ ಅವರಿಗೆ ಆ ಚಿತ್ರದ ಮೇಲೆ ನಂಬಿಕೆ ಮತ್ತು ಭರವಸೆ ಇದೆಯಂತೆ. ಆಗಸ್ಟ್ 1ಕ್ಕೆ ವರ್ಲ್ಡ್ ವೈಡ್ ರಿಲೀಸ್ ಆಗುತ್ತಿರುವ ಸಿನೆಮಾದಲ್ಲಿ ಫುಲ್ ಆಕ್ಷನ್ ಇದೆ. ಅವರಿಗೆ ಹಿರಿಯ ಕಲಾವಿದರು, ತಾಂತ್ರಿಕ ವರ್ಗದವರ ಕೆಲಸ ಮಾಡಿದ ತೃಪ್ತಿ ಇದೆ. 
ಈಗಾಗಲೇ ಸಿನೆಮಾದ ಟ್ರೇಲರ್ ನೋಡಿದವರು ಮೆಚ್ಚಿದ್ದಾರೆ. ಸದ್ಯ ತಮಿಳಿನಲ್ಲಿ ಸೌಂಡ್ ಮಾಡುತ್ತಿರುವ ಈ ಸಿನೆಮಾ ನೋಡಿರುವ ಒಂದಷ್ಟು ನಿರ್ದೇಶಕರು, ಪ್ರಭಾಕರ್ ಅವರ ನಟನೆ ನೋಡಿ ಒಳ್ಳೆಯ ಮಾತುಗಳನ್ನಾಡಿದ್ದಾರೆ. ಅಲ್ಲಿನ ನಿರ್ದೇಶಕರು ಒಂದಷ್ಟು ಕಥೆಗಳನ್ನು ಹೇಳುತ್ತಿದ್ದಾರೆ. ಕಾಲಿವುಡ್ ನಲ್ಲಿ ನೆಲೆಯೂರುವ ನಂಬಿಕೆ ಅವರಿಗಿದೆ. ಅದೇನೆ ಇರಲಿ, ಕನ್ನಡದ ಬಹುತೇಕ ನಟರು ಪರಭಾಷೆಯತ್ತ ಮುಖ ಮಾಡಿ ಗೆಲುವು ಕಂಡಿದ್ದಾರೆ. ಪ್ರಭಾಕರ್ ಕೂಡ ಆ ನಿರೀಕ್ಷೆಯಲ್ಲಿದ್ದಾರೆ.















