ನಿರ್ದೇಶನಕ್ಕೂ ಸೈ.., ನಟನೆಗೂ ಜೈ; ಪ್ರಬಿಕ್ ಮೊಗವೀರ್ ಹೊಸ ಅವತಾರ!
ನಿರ್ದೇಶನದ ಜೊತೆಗೆ ನಟನಾಗಿಯೂ ಗುರುತಿಸಿಕೊಳ್ಳುತ್ತಿರುವ ಪ್ರತಿಭೆ
‘ನಾಯಿ ಇದೆ ಎಚ್ಚರಿಕೆ!!’ ಚಿತ್ರದ ನಟನೆಯಲ್ಲಿ ಗಮನ ಸೆಳೆಯುವ ಪ್ರಬೀಕ್ ಮೊಗವೀರ್
‘ಕಾಮ’ತ್ ಪಾತ್ರದಲ್ಲಿ ಮಿಂಚಿದ ಕರಾವಳಿ ಪ್ರತಿಭೆ
ಚಿತ್ರರಂಗದಲ್ಲೇ ಹಲವು ವರ್ಷಗಳಿಂದ ಸಕ್ರಿಯರಾಗಿರುವ ಅನೇಕ ಕಲಾವಿದರು, ತಂತ್ರಜ್ಞರು ಆಗಾಗ್ಗೆ ಚಿತ್ರರಂಗದಲ್ಲೇ ತಮ್ಮ ಹೊಸ ಪಥ ಕಂಡುಕೊಳ್ಳುವುದು, ಹೊಸ ಇನ್ನಿಂಗ್ಸ್ ಶುರು ಮಾಡುವುದು ಮಾಡುತ್ತಲೇ ಇರುತ್ತಾರೆ. ನಟರು ನಾಯಕ ನಟರಾಗುವುದು, ನಾಯಕ ನಟರು ನಿರ್ದೇಶಕರಾಗುವುದು, ನಿರ್ದೇಶಕರು ನಟರಾಗುವುದು, ನಿರ್ಮಾಪಕರು ನಿರ್ದೇಶಕರಾಗುವುದು ಇಂಥ ಪ್ರಕ್ರಿಯೆಗಳು ಚಿತ್ರರಂಗದಲ್ಲಿ ಹೊಸದೇನಲ್ಲ. ಹೀಗೆ ಪಥ ಬದಲಾಯಿಸಿ, ಹೊಸ ಇನ್ನಿಂಗ್ಸ್ ನಲ್ಲಿ ಗೆಲುವಿನ ನಗು ಬೀರಿ ಚಿತ್ರರಂಗದಲ್ಲಿ ಸ್ಟಾರ್ ಪಟ್ಟ ಗಿಟ್ಟಿಸಿಕೊಂಡ ಅನೇಕ ಉದಾಹರಣೆಗಳು ಚಿತ್ರರಂಗದಲ್ಲಿ ಸಾಕಷ್ಟು ಕಾಣ ಸಿಗುತ್ತವೆ. ಈಗ ಈ ಸಾಲಿಗೆ ಸೇರ್ಪಡೆಯಾಗುತ್ತಿರುವ ಹೊಸ ಹೆಸರು ಪ್ರಬೀಕ್ ಮೊಗವೀರ್ ಅವರದ್ದು. 
ನಿರ್ಮಾಣ.. ನಿರ್ದೇಶನ… ನಟನೆ.., ಪ್ರಬೀಕ್ ಚಿತ್ರ ಪರ್ಯಟನೆ
ಕನ್ನಡ ಚಿತ್ರರಂಗದಲ್ಲಿ ಯುವ ನಿರ್ದೇಶಕ, ನಿರ್ಮಾಪಕರ ಸಾಲಿನಲ್ಲಿ ಒಬ್ಬರಾಗಿ ಗುರುತಿಸಿಕೊಂಡವರು ಪ್ರಬೀಕ್ ಮೊಗವೀರ್. ಮೂಲತಃ ಕರ್ನಾಟಕದ ಕರಾವಳಿ ತೀರವಾದ ಕುಂದಾಪುರ ಮೂಲದ ಪ್ರತಿಭೆ ಪ್ರಬೀಕ್ ಮೊಗವೀರ್, ತಮ್ಮ ಇಂಜಿನಿಯರಿಂಗ್ ಶಿಕ್ಷಣ ಮುಗಿಯುತ್ತಲೇ ಪೂರ್ಣ ಪ್ರಮಾಣದಲ್ಲಿ ಚಿತ್ರರಂಗತ್ತ ಮುಖ ಮಾಡಿದವರು. ಕಳೆದ ಒಂದು ದಶಕದಿಂದ ಕನ್ನಡ ಚಿತ್ರರಂಗದಲ್ಲಿ ನಿರ್ದೇಶಕನಾಗಿ, ನಿರ್ಮಾಪಕನಾಗಿ ಸಕ್ರಿಯವಾಗಿರುವ ಪ್ರಬೀಕ್ ಮೊಗವೀರ್, ‘ನಾಗವಲ್ಲಿ ವರ್ಸಸ್ ಆಪ್ತಮಿತ್ರರು’, ‘ತನಿಖೆ’, ‘ಶಾಂತಿಯನ್ನು ಕಳೆದುಕೊಳ್ಳಬೇಡಿ’, ‘ಗಡಿಯಾರ’, ‘ಅಸುರನ ಕೈಯಲ್ಲಿ ಪಾರಿಜಾತ’, ‘ರಾವೆನ್’, ‘ನಾಯಿ ಇದೆ ಎಚ್ಚರಿಕೆ!!’ ಹೀಗೆ ಹಲವು ಚಿತ್ರಗಳನ್ನು ನಿರ್ಮಿಸಿದ್ದಾರೆ. ಕನ್ನಡದಲ್ಲಿ ಸುಮಾರು ಏಳೆಂಟು ಚಿತ್ರಗಳನ್ನು ಮಾಡಿರುವ ಪ್ರಬೀಕ್ ಮೊಗವೀರ್, ಈಗ ನಟನಾಗಿಯೂ ಚಿತ್ರರಂಗದಲ್ಲಿ ನಿಧಾನವಾಗಿ ಗುರುತಿಸಿಕೊಂಡು, ತಮ್ಮದೇ ಆದ ಛಾಪು ಮೂಡಿಸುತ್ತಿದ್ದಾರೆ.
‘ತನಿಖೆ’ಯ ಮೂಲಕ ಶುರುವಾದ ನಟನೆ…
ಈ ಹಿಂದೆ ಕಲಿ ಗೌಡ ನಿರ್ದೇಶನದ ‘ತನಿಖೆ’ ಚಿತ್ರದಲ್ಲಿ ಮೊದಲ ಬಾರಿಗೆ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದ ಪ್ರಬೀಕ್ ಮೊಗವೀರ್, ಇತ್ತೀಚೆಗೆ ಬಿಡುಗಡೆಯಾಗಿರುವ ‘ನಾಯಿ ಇದೆ ಎಚ್ಚರಿಕೆ!!’ ಚಿತ್ರದಲ್ಲೂ ಮುಖ್ಯ ಪಾತ್ರವೊಂದರಲ್ಲಿ ಕಾಣಿಸಿಕೊಂಡು ಗಮನ ಸೆಳೆಯುತ್ತಿದ್ದಾರೆ.
‘ನಾಯಿ ಇದೆ ಎಚ್ಚರಿಕೆ!!’ ಚಿತ್ರದಲ್ಲಿ ಕಾಮತ್ ಎಂಬ ಸಿನೆಮಾ ನಿರ್ದೇಶಕನ ಪಾತ್ರದಲ್ಲಿ ಕಾಣಿಸಿಕೊಂಡಿರುವ ಪ್ರಬೀಕ್ ಮೊಗವೀರ್, ತಮ್ಮ ಪಾತ್ರದ ಮೂಲಕ ಆರಂಭದಲ್ಲಿ ಪ್ರೇಕ್ಷಕರನ್ನು ನಗಿಸುತ್ತ ಹೋಗಿ ಕೊನೆಗೆ ಪ್ರೇಕ್ಷಕರನ್ನು ಥಿಯೇಟರಿನಲ್ಲಿ ಬೆಚ್ಚಿ ಬೀಳಿಸುತ್ತಾರೆ. ಥಿಯೇಟರಿನಲ್ಲಿ ‘ನಾಯಿ ಇದೆ ಎಚ್ಚರಿಕೆ!!’ ಚಿತ್ರಕ್ಕೆ ಪ್ರೇಕ್ಷಕರಿಂದ ಮತ್ತು ವಿಮರ್ಶಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಅದರಲ್ಲೂ ನಟನಾಗಿ ಗುರುತಿಸಿಕೊಳ್ಳುತ್ತಿರುವ ಪ್ರಬೀಕ್ ಮೊಗವೀರ್ ಅಭಿನಯಕ್ಕೆ ಎಲ್ಲೆಡೆಯಿಂದ ಪ್ರಶಂಸೆ ವ್ಯಕ್ತವಾಗುತ್ತಿದೆ. ಎರಡು ಶೇಡ್ ಇರುವಂಥ ಒಂದೇ ಪಾತ್ರವನ್ನು ಎರಡು ವಿಭಿನ್ನ ರೀತಿಯಲ್ಲಿ ನಿಭಾಯಿಸಿರುವ ಪ್ರಬೀಕ್ ಮೊಗವೀರ್, ನಟನಾಗಿಯೂ ‘ನಾಯಿ ಇದೆ ಎಚ್ಚರಿಕೆ!!’ ಸಿನೆಮಾದಲ್ಲಿ ಫುಲ್ ಮಾರ್ಕ್ಸ್ ಪಡೆದುಕೊಂಡಿದ್ದಾರೆ.
ನಟನೆಯ ಬಗ್ಗೆ ಪ್ರಬೀಕ್ ಏನಂತಾರೆ…?
ಇನ್ನು ಕನ್ನಡ ಚಿತ್ರರಂಗದಲ್ಲಿ ನಿರ್ಮಾಪಕನಾಗಿ, ನಟನಾಗಿ ಗುರುತಿಸಿಕೊಂಡಿರುವ ಪ್ರಬೀಕ್ ಮೊಗವೀರ್, ಈಗ ನಟನಾಗಿ ಗುರುತಿಸಿಕೊಳ್ಳುತ್ತಿದ್ದಾರೆ. ಇಂಥದ್ದೊಂದು ‘ಚೇಂಜ್ ಓವರ್’ ಬಗ್ಗೆ ಮಾತನಾಡುವ ಪ್ರಬೀಕ್ ಮೊಗವೀರ್, ‘ನಾನು ಬಾಲ್ಯದಿಂದಲೂ ಕಲೆಯ ಕಡೆಗೆ ಆಸಕ್ತಿಯನ್ನು ಬೆಳೆಸಿಕೊಂಡವನು. ನನ್ನ ಕಲಾ ಆಸಕ್ತಿಯಿಂದಲೇ ಚಿತ್ರರಂಗದತ್ತ ಮುಖ ಮಾಡಬೇಕಾಯಿತು. ಕನ್ನಡ ಪ್ರೇಕ್ಷಕರಿಗೆ ಒಳ್ಳೆಯ ಸಿನೆಮಾಗಳನ್ನು ಕೊಡಬೇಕು, ಒಳ್ಳೆಯ ಕಥೆಗಳನ್ನು ಸಿನೆಮಾ ಮಾಡಬೇಕು ಎಂಬುದು ನನ್ನ ಆಶಯ.
ಆದರೆ ನಟನೆ ಎಂಬುದು ಈ ಪ್ರಯಣದಲ್ಲಿ ನನನಗೆ ಅನಿರೀಕ್ಷಿತವಾಗಿ ಎದುರಾದ ಅವಕಾಶ. ಹೀಗೆ ಸಿಕ್ಕ ಅವಕಾಶವನ್ನು ಬಳಸಿಕೊಂಡಿದ್ದೇನೆ ಅಷ್ಟೇ. ನನ್ನ ಅಭಿನಯ ಪ್ರೇಕ್ಷಕರಿಗೆ ಇಷ್ಟವಾದರೆ, ಅದಕ್ಕಿಂತ ಖುಷಿ ಬೇರೊಂದಿಲ್ಲ’ ಎನ್ನುತ್ತಾರೆ.
ಇತ್ತೀಚೆಗೆ ಬಿಡುಗಡೆಯಾಗಿರುವ ‘ನಾಯಿ ಇದೆ ಎಚ್ಚರಿಕೆ!!’ ಚಿತ್ರದಲ್ಲಿ ತಮ್ಮ ಪಾತ್ರಕ್ಕೆ ಸಿಗುತ್ತಿರುವ ಪ್ರಶಂಸೆಯ ಬಗ್ಗೆ ಮಾತನಾಡುವ ಪ್ರಬೀಕ್ ಮೊಗವೀರ್, ‘ನಾನು ಈ ಸಿನೆಮಾಕ್ಕೆ ಕ್ರಿಯೇಟಿವ್ ಹೆಡ್ ಆಗಿ ಕೆಲಸ ಮಾಡಿದ್ದೇನೆ. ಆರಂಭದಲ್ಲಿ ಈ ಸಿನೆಮಾದ ಪಾತ್ರವನ್ನು ಮಾಡುವ ಯಾವ ಯೋಚನೆಯೂ ಇರಲಿಲ್ಲ. ಆದರೆ, ಆ ನಂತರ ನಿರ್ದೇಶಕರು ಈ ಪಾತ್ರವನ್ನು ನಾನೇ ಮಾಡಬೇಕು ಎಂದು ಹೇಳಿದ್ದರಿಂದ, ಈ ಪಾತ್ರವನ್ನು ಮಾಡಬೇಕಾಯಿತು. ಸಿನೆಮಾದಲ್ಲಿ ನನ್ನದು ನಿರ್ದೇಶಕನ ಪಾತ್ರ. ನಾನು ಕೂಡ ಒಬ್ಬ ಸಿನೆಮಾ ನಿರ್ದೇಶಕನಾಗಿದ್ದರಿಂದ, ಈ ಪಾತ್ರ ನನಗೂ ಹತ್ತಿರವಾಗಿತ್ತು. ಹಾಗಾಗಿ ಈ ಪಾತ್ರವನ್ನು ಮಾಡಲು ಒಪ್ಪಿಕೊಂಡೆ. ಆದರೆ ಈ ಪಾತ್ರ ನೋಡುಗರಿಗೆ ಇಷ್ಟೊಂದು ಇಷ್ಟವಾಗುತ್ತದೆ. ಪ್ರೇಕ್ಷಕರು ನನ್ನ ಪಾತ್ರವನ್ನು ಇಷ್ಟೊಂದು ದೊಡ್ಡ ಮಟ್ಟಿಗೆ ಗುರುತಿಸಿ, ಪ್ರಶಂಸಿಸುತ್ತಾರೆ ಎಂಬು ನನಗೂ ಗೊತ್ತಿರಲಿಲ್ಲ. ಅನಿರೀಕ್ಷಿತವಾಗಿ ನಟನಾದ ನನಗೆ ಈ ಪ್ರಶಂಸೆ, ಇಷ್ಟೊಂದು ದೊಡ್ಡ ಮಟ್ಟದ ಪ್ರತಿಕ್ರಿಯೆ ಸಿಗುತ್ತಿರುವುದು ಕೂಡ ಅನಿರೀಕ್ಷಿತ. ನನ್ನ ಅಭಿನಯ ನೋಡುಗರಿಗೆ ಖುಷಿ ನೀಡುತ್ತಿದ್ದರೆ, ಅದಕ್ಕಿಂತ ದೊಡ್ಡ ಖುಷಿ ನನಗೆ ಕೂಡ ಬೇರಿಲ್ಲ. ಪ್ರೇಕ್ಷಕರ ಪ್ರೀತಿ, ಬೆಂಬಲ, ಪ್ರಶಂಸೆಯೇ ನನಗೆ ದೊಡ್ಡ ಬಹುಮಾನ’ ಎನ್ನುತ್ತಾರೆ.
ನಿರ್ದೇಶನ ಪ್ಯಾಷನ್… ಅಭಿನಯ ಫ್ಯಾಷನ್..!!
ಸದ್ಯ ‘ನಾಯಿ ಇದೆ ಎಚ್ಚರಿಕೆ!!’ ಸಿನೆಮಾದಲ್ಲಿ ಪ್ರಬೀಕ್ ಮೊಗವೀರ್ ಅಭಿನಯಕ್ಕೆ ಪ್ರೇಕ್ಷಕರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ಮುಂದಿನ ದಿನಗಳಲ್ಲಿ ಪ್ರಬೀಕ್ ಚಿತ್ತ ನಟನೆಯ ಕಡೆಗೋ ಅಥವಾ ನಿರ್ದೇಶನದ ಕಡೆಗೋ..? ಎಂದರೆ, ಅವರ ಉತ್ತರ ಹೀಗಿದೆ.
‘ಮೊದಲೇ ಹೇಳಿದಂತೆ, ಕನ್ನಡದಲ್ಲಿ ಒಳ್ಳೆಯ ಕಥೆಗಳನ್ನು ಹುಡುಗಿ ಅದನ್ನು ಸಿನೆಮಾ ಮಾಡಿ ಪ್ರೇಕ್ಷಕರ ಮುಂದಿಡಬೇಕು ಎಂಬುದು ನನ್ನ ಆಶಯ. ನಟನಾಗಿದ್ದು ಈ ಚಿತ್ರರಂಗದ ನನ್ನ ಪ್ರಯಾಣದಲ್ಲಿ ಎದುರಾದ ಒಂದು ಅನಿರೀಕ್ಷಿತ ಘಟ್ಟ. ಅದನ್ನು ಖುಷಿಯಿಂದ ಸ್ವೀಕರಿಸಿದ್ದೇನೆ. ಹಾಗಂತ, ಕೇವಲ ನಟನೆಗಷ್ಟೇ ಖಂಡಿತವಾಗಿಯೂ ಅಂಟಿಕೊಳ್ಳಲಾರೆ. ನಿರ್ದೇಶಕನಾಗಿ, ಹೊಸ ಕಥೆಯ ಹುಡುಕಾಟ, ಹೊಸ ಸಿನೆಮಾಗಳನ್ನು ಕನ್ನಡ ಪ್ರೇಕ್ಷಕರ ಮುಂದಿಡುವ ನನ್ನ ಪ್ರಯತ್ನ ನಿರಂತರ’ ಎನ್ನುತ್ತಾರೆ ಪ್ರಬೀಕ್ ಮೊಗವೀರ್.
ಥಿಯೇಟರ್ ಮುಂದೆ ‘ನಾಯಿ ಇದೆ ಎಚ್ಚರಿಕೆ!!’ ಪೋಸ್ಟರ್..!
ಇದೇ 2025ರ ನವೆಂಬರ್ 28ರಂದು ‘ನಾಯಿ ಇದೆ ಎಚ್ಚರಿಕೆ!!’ ಸಿನೆಮಾ ತೆರೆಗೆ ಬಂದಿದೆ. ಚಿತ್ರದಲ್ಲಿ ಪ್ರಬೀಕ್ ಮೊಗವೀರ್ ಜೊತೆಗೆ ಲೀಲಾ ಮೋಹನ್, ಪ್ರಮೋದ್ ಶೆಟ್ಟಿ, ದಿನೇಶ್ ಮಂಗಳೂರು, ಬಲರಾಜವಾಡಿ, ಅನಿರುದ್ಧ ಮಹೇಶ್, ಜಗ್ಗಪ್ಪ, ದಿವ್ಯ, ಮಾನಸ, ಚಂದನಾ, ನಾಗೇಂದ್ರ ಅರಸ್ ಸೇರಿದಂತೆ ಅನೇಕ ಅನುಭವಿ ಕಲಾವಿದರು ಅಭಿನಯಿಸಿದ್ದಾರೆ.
ಕಲಿಗೌಡ ನಿರ್ದೇಶನದಲ್ಲಿ ಮೂಡಿಬಂದಿರುವ ‘ನಾಯಿ ಇದೆ ಎಚ್ಚರಿಕೆ!!’ ಚಿತ್ರಕ್ಕೆ ಲಾವಣ್ಯ ಗಾಧೆ ಬಂಡವಾಳ ಹೂಡಿ ನಿರ್ಮಾಣನ ಮಾಡಿದ್ದಾರೆ. ಚಿತ್ರಕ್ಕೆ ಅಜಿತ್ ಕುಮಾರ್ ಛಾಯಾಗ್ರಹಣ ಕಾರ್ಯವಿದೆ. ರಾಜ್ಯದಾದ್ಯಂತ ಬಿಡುಗಡೆಯಾಗಿರುವ ‘ನಾಯಿ ಇದೆ ಎಚ್ಚರಿಕೆ!!’ ಚಿತ್ರ ಔಟ್ ಅಂಡ್ ಔಟ್ ಹಾರರ್ ಕಂ ಸಸ್ಪೆನ್ಸ್ – ಥ್ರಿಲ್ಲರ್ ಕಥಾಹಂದರವನ್ನು ಹೊಂದಿದೆ. ಅಂದಹಾಗೆ, ಈ ಚಿತ್ರಕ್ಕೆ ಪ್ರಬೀಕ್ ಮೊಗವೀರ್ ಕ್ರಿಯೇಟಿವ್ ಹೆಡ್ ಆಗಿ ಕೆಲಸ ಮಾಡಿದ್ದಾರೆ.















