‘ಮಸ್ತ್ ಮಲೈಕಾ…’ಗೆ ಸಾನ್ವಿ ಸುದೀಪ್ ಧ್ವನಿ!
‘ಮಸ್ತ್ ಮಲೈಕಾ…’ ಹಾಡಿಗೆ ಸುದೀಪ್ ಪುತ್ರಿ ಸಾನ್ವಿ ಗಾನ
‘ಮಾರ್ಕ್’ ಚಿತ್ರದಲ್ಲಿ ಮಗಳ ಧ್ವನಿಗೆ ಕಿಚ್ಚ ಸುದೀಪ್ ಜರ್ಬದಸ್ತ್ ಕುಣಿತ…
‘ಮಾರ್ಕ್’ ಮೂಲಕ ಕನ್ನಡಕ್ಕೆ ಗಾಯಕಿಯಾಗಿ ಪರಿಚಯವಾದ ಸುದೀಪ್ ಪುತ್ರಿ
ಇದೇ 2025ರ ಡಿಸೆಂಬರ್ ಕೊನೆಗೆ ಕಿಚ್ಚ ಸುದೀಪ್ ಅಭಿನಯದ ‘ಮಾರ್ಕ್’ ಚಿತ್ರ ಅದ್ಧೂರಿಯಾಗಿ ತೆರೆಗೆ ಬರುತ್ತಿದೆ. ಸದ್ಯ ಭರದಿಂದ ‘ಮಾರ್ಕ್’ ಚಿತ್ರದ ಪ್ರಚಾರ ಕಾರ್ಯಗಳಲ್ಲಿ ನಿರತವಾಗಿರುವ ಚಿತ್ರತಂಡ, ಇತ್ತೀಚೆಗಷ್ಟೇ ‘ಮಾರ್ಕ್’ ಸಿನೆಮಾದ ‘ಮಸ್ತ್ ಮಲೈಕಾ…’ ಎಂಬ ಡ್ಯಾನ್ಸ್ ನಂಬರ್ ಸಾಂಗ್ ಅನ್ನು ಬಿಡುಗಡೆ ಮಾಡಿದೆ. ಸದ್ಯ ಈ ಹಾಡು ಸುದೀಪ್ ಅಭಿಮಾನಿಗಳಿಗೆ ಕೂತಲ್ಲೇ ಹೆಜ್ಜೆ ಹಾಕುವಂತೆ ಮಾಡಲು ಯಶಸ್ವಿಯಾಗಿದೆ.
ಈ ಹಾಡು ಸದ್ಯ ಸೋಶಿಯಲ್ ಮೀಡಿಯಾದಲ್ಲೂ ವೈರಲ್ ಆಗುತ್ತಿದೆ. ಇನ್ನು ‘ಮಾರ್ಕ್’ ಚಿತ್ರದ ‘ಮಸ್ತ್ ಮಲೈಕಾ…’ ಹಾಡಿನ ಮೂಲಕ ನಾಯಕ ನಟ ಕಿಚ್ಚ ಸುದೀಪ್ ಪುತ್ರಿ ಸಾನ್ವಿ ಸುದೀಪ್ ಗಾಯಕಿಯಾಗಿ ಕನ್ನಡ ಚಿತ್ರರಂಗಕ್ಕೆ ಪರಿಚಯವಾಗಿದ್ದಾರೆ. ತೆರೆಹಿಂದೆ ‘ಮಸ್ತ್ ಮಲೈಕಾ…’ ಹಾಡಿಗೆ ಕಿಚ್ಚನ ಪುತ್ರಿ ಕಂಠ ಕುಣಿಸಿದರೆ, ತೆರೆಮೇಲೆ ಮಗಳ ಹಾಡಿಗೆ ಕಿಚ್ಚ ಸುದೀಪ್ ಬೊಂಬಾಟ್ ಸ್ಟೆಪ್ಸ್ ಹಾಕಿದ್ದಾರೆ. ಬಿ. ಅಜನೀಶ್ ಲೋಕನಾಥ್ ಸಂಗೀತ ಸಂಯೋಜನೆಯಲ್ಲಿ ಮೂಡಿಬಂದಿರುವ ‘ಮಸ್ತ್ ಮಲೈಕಾ…’ ಗೀತೆಗೆ ನಿರ್ದೇಶಕ ಅನೂಪ್ ಭಂಡಾರಿ ಸಾಹಿತ್ಯ ರಚಿಸಿದ್ದಾರೆ. ಈ ವರ್ಷದ ಕನ್ನಡದ ಮಸ್ತ್ ಪಾರ್ಟಿ ಹಾಡಾಗಿ ‘ಮಸ್ತ್ ಮಲೈಕಾ…’ ವರ್ಷಾಂತ್ಯದಲ್ಲಿ ಎಲ್ಲರ ಗಮನ ಸೆಳೆಯುತ್ತಿದೆ.
ಅಭಿಮಾನಿಗಳ ಮನಗೆದ್ದ ‘ಮಸ್ತ್ ಮಲೈಕಾ…’
ಸದ್ಯ ಬಿಡುಗಡೆಯಾಗಿರುವ ‘ಮಾರ್ಕ್’ ಸಿನೆಮಾದ ‘ಮಸ್ತ್ ಮಲೈಕಾ…’ ಸಾಂಗ್ ಗೆ ಸಖತ್ ರೆಸ್ಪಾನ್ಸ್ ಸಿಗುತ್ತಿದೆ. ಅದರಲ್ಲಿಯೂ ಸಾನ್ವಿ ಸುದೀಪ್ ಕಂಠಕ್ಕೆ ಸಂಗೀತ ಪ್ರಿಯರು ಅದರಲ್ಲೂ ಸುದೀಪ್ ಅಭಿಮಾನಿಗಳಂತೂ ಫುಲ್ ಮಾರ್ಕ್ಸ್ ಕೊಟ್ಟು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
‘ಮಸ್ತ್ ಮಲೈಕಾ…’ ಸಾನ್ವಿ ಅವರ ಕನ್ನಡದ ಮೊದಲ ಚಿತ್ರಗೀತೆ ಅನ್ನೋದು ವಿಶೇಷ. ಸಿನೆಮಾ ರಂಗದಲ್ಲಿ ಅಥವಾ ಸಂಗೀತ ಕ್ಷೇತ್ರದಲ್ಲಿ ಏನಾದರೂ ಮಾಡಬೇಕು ಎಂಬುವುದು ಸಾನ್ವಿ ಕನಸಂತೆ. ಆ ಕನಸಿನಂತೆ ಅವರು ಸಾಗುತ್ತಿದ್ದಾರೆ. ಅದು ಅಪ್ಪನ ಚಿತ್ರದ ಮೂಲಕ ಪೂರ್ಣ ಪ್ರಮಾಣದ ಗಾಯಕಿಯಾಗಿ ಸಾನ್ವಿ ಹೊರ ಹೊಮ್ಮಿದ್ದಾರೆ.
ತೆಲುಗಿನ ನಾನಿ ಚಿತ್ರಕ್ಕೂ ಸಾನ್ವಿ ಗಾಯನ
ಈ ಹಿಂದೆ ತೆಲುಗು ನಟ ನಾನಿ ಅಭಿನಯದ ‘ಹಿಟ್ 3’ ಚಿತ್ರದ ಮೂಲಕ ಸಾನ್ವಿ ಸುದೀಪ್ ತೆಲುಗು ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದಾರೆ. ‘ಹಿಟ್ 3’ ರ ಥೀಮ್ ಸಾಂಗ್ ‘ಪೊರಟಮೆ 3.0’ ಗೆ ಸಾನ್ವಿ ಸುದೀಪ್ ಧ್ವನಿ ನೀಡಿದ್ದಾರೆ. ಇದೀಗ ತನ್ನ ತಂದೆ ನಟಿಸಿರುವ ‘ಮಾರ್ಕ್’ ಚಿತ್ರದ ಮೂಲಕವೇ ಸಾನ್ವಿ ಕನ್ನಡ ಚಿತ್ರರಂಗಕ್ಕೆ ಗಾಯಕಿಯಾಗಿ ಎಂಟ್ರಿ ನೀಡಿದ್ದಾರೆ.
ಈ ಹಾಡು ಬಿಡುಗಡೆ ಕುರಿತು ನಟ ಕಿಚ್ಚ ಸುದೀಪ್, ‘ನನ್ನ ಎಲ್ಲಾ ಬಾದ್‌ಶಾಗಳಿಗೆ… ನಿಮ್ಮ ಕುಟುಂಬದ ಸದಸ್ಯರಾದ ಸಾನ್ವಿ ಅವರ ಮೊದಲ ಹಾಡನ್ನು ಪ್ರಸ್ತುತಪಸುತ್ತಿದ್ದೇವೆ. ‘ಮಾರ್ಕ್’ ಚಿತ್ರತಂಡದಿದ ಈ ಹಾಡನ್ನು ಕ್ರಿಸ್‌ಮಸ್ ಮತ್ತು ಹೊಸ ವರ್ಷದ ಉಡುಗೊರೆಯಾಗಿ ನೀಡುತ್ತಿದ್ದೇವೆ’ ಎಂದು ಸಾಮಾಜಿಕ ಮಾಧ್ಯಮ ‘ಎಕ್ಸ್’ನಲ್ಲಿ ಬರೆದುಕೊಂಡಿದ್ದಾರೆ.















