Straight Talk

‘ಸೀಟ್ ಎಡ್ಜ್’ನಲ್ಲಿ ‘ಹಂಗೋ… ಹಿಂಗೋ…’ ಮತ್ತೊಂದು ಸಾಂಗ್‌..!   

‘ಸೀಟ್ ಎಡ್ಜ್’ ಚಿತ್ರದ ಮತ್ತೊಂದು ಸಾಂಗ್‌ ರಿಲೀಸ್‌

ಸಿದ್ಧು ಮೂಲಿಮನಿ – ರವೀಕ್ಷಾ ಶೆಟ್ಟಿ ಹಾಡಿಗೆ ಹೆಜ್ಜೆ

ಗಮನ ಸೆಳೆಯುತ್ತಿದೆ ‘ಸೀಟ್ ಎಡ್ಜ್’ ಚಿತ್ರದ ಎರಡನೇ ಸಾಂಗ್‌ 

ಈಗಾಗಲೇ ಕಿರುತೆರೆ ಮತ್ತು ಹಿರಿತೆರೆ ಎರಡರಲ್ಲೂ ಸಕ್ರಿಯರಾಗಿರುವ ನಟ ಸಿದ್ಧು ಮೂಲಿಮನಿ, ಈ ಬಾರಿ ಮತ್ತೊಂದು ಹೊಸ ಅವತಾರದಲ್ಲಿ ಬಿಗ್‌ ಸ್ಕ್ರೀನ್‌ನಲ್ಲಿ ಪ್ರೇಕ್ಷಕರ ಮುಂದೆ ಬರುವ ತಯಾರಿಯಲ್ಲಿದ್ದಾರೆ. ಹೌದು, ಸಿದ್ಧು ಮೂಲಿಮನಿ ನಾಯಕ ನಟನಾಗಿ ಅಭಿನಯಿಸುತ್ತಿರುವ ಹೊಸ ಸಿನೆಮಾಕ್ಕೆ ‘ಸೀಟ್‌ ಎಡ್ಜ್‌’ ಎಂದು ಹೆಸರಿಡಲಾಗಿದ್ದು, ಸದ್ಯ ಈ ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದ್ದು, ಚಿತ್ರದ ಅಂತಿಮ ಹಂತದ ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳು ಭರದಿಂದ ನಡೆಯುತ್ತಿದೆ. ಇದೇ ವೇಳೆ ನಿಧಾನವಾಗಿ ‘ಸೀಟ್‌ ಎಡ್ಜ್‌’ ಚಿತ್ರ ಪ್ರಚಾರ ಕಾರ್ಯಗಳಿಗೆ ಚಾಲನೆ ನೀಡಿರುವ ಚಿತ್ರತಂಡ, ಒಂದರ ಹಿಂದೊಂದು ಹಾಡುಗಳನ್ನು ಬಿಡುಗಡೆ ಮಾಡುತ್ತಿದೆ.

‘ಸೀಟ್‌ ಎಡ್ಜ್‌’ನ ಎರಡನೇ ಹಾಡು ಹೊರಬಂತು…

ಕೆಲ ತಿಂಗಳ ಹಿಂದಷ್ಟೇ ‘ಸೀಟ್‌ ಎಡ್ಜ್‌’ ಚಿತ್ರದ ಮೊದಲ ಹಾಡು ಬಿಡುಗಡೆಯಾಗಿತ್ತು. ‘ಸಾರಿ ಹೇಳುವೆ ಜಗಕ್ಕೆ…’ ಎಂಬ ಈ ಗೀತೆಗೆ ಸಿದ್ದು ಕೊಡಿಪುರ ಸಾಹಿತ್ಯ ಬರೆದಿದ್ದು, ಅರ್ಮನ್ ಮಲ್ಲಿಕ್ ಧ್ವನಿಯಲ್ಲಿ, ಆಕಾಶ್‌ ಪರ್ವ ಸಂಗೀತ ಸಂಯೋಜನೆಯಲ್ಲಿ ಈ ರೋಮ್ಯಾಂಟಿಕ್ ಗೀತೆ ಮೂಡಿಬಂದಿತ್ತು. ನಾಯಕ ಸಿದ್ಧು ಮೂಲಿಮನಿ ಹಾಗೂ ನಾಯಕಿ ರವೀಕ್ಷಾ ಶೆಟ್ಟಿ ಜೋಡಿಯಾಗಿ ಈ ಗೀತೆಗೆ ಹೆಜ್ಜೆ ಹಾಕಿದ್ದರು. ಸೋಶಿಯಲ್‌ ಮೀಡಿಯಾಗಳಲ್ಲಿ ಈ ಹಾಡು ಒಂದಷ್ಟು ವೈರಲ್‌ ಆಗುತ್ತಿರುವಾಗಲೇ ಈಗ ‘ಸೀಟ್‌ ಎಡ್ಜ್‌’ ಚಿತ್ರದ ಎರಡನೇ ವಿಡಿಯೋ ಸಾಂಗ್‌ ಬಿಡುಗಡೆಯಾಗಿದೆ. ‘ಹಂಗೋ… ಇಂಗೋ…’ ಎಂಬ ಸಾಲುಗಳಿಂದ ಶುರುವಾಗುವ ಈ ಹಾಡಿಗೆ ಲಕ್ಷ್ಮಿ ರಮೇಶ್ ಸಾಹಿತ್ಯ ಬರೆದಿದ್ದು, ಗಾಯಕ ಟಿಪ್ಪು ಅವರ ಧ್ವನಿಯಲ್ಲಿ ಈ ಹಾಡು ಮಾಸ್‌ ಆಗಿ ಮೂಡಿಬಂದಿದೆ. ಸಖತ್‌ ಸ್ಟೈಲಿಶ್‌ ಆಗಿ ಮೂಡಿಬಂದಿರುವ ಈ ಗೀತೆ ಕಾಲೇಜ್‌ ಹುಡುಗರನ್ನು ನಿಂತಲ್ಲೇ ಕುಣಿಸುವಂತಿದೆ.

‘ಸೀಟ್‌ ಎಡ್ಜ್‌’ ಚಿತ್ರದ ‘ಹಂಗೋ… ಹಿಂಗೋ…’ ಗೀತೆಯ ವಿಡಿಯೋ ಹಾಡನ್ನು ವೀಕ್ಷಿಸಲು ಈ ಕೆಳಗಿನ ಲಿಂಕ್‌ ಅನ್ನು ಕ್ಲಿಕ್‌ ಮಾಡಬಹುದು…

ಡಾರ್ಕ್‌ ಕಾಮಿಡಿ, ಹಾರರ್‌-ಥ್ರಿಲ್ಲರ್‌ ಕಥಾಹಂದರ

ಇನ್ನು ‘ಸೀಟ್‌ ಎಡ್ಜ್‌’ ಸಿನೆಮಾಕ್ಕೆ ಯುವ ನಿರ್ದೇಶಕ ಚೇತನ್‌ ಶೆಟ್ಟಿ ನಿರ್ದೇಶನ ಮಾಡುತ್ತಿದ್ದಾರೆ. ಕನ್ನಡದಲ್ಲಿ ಈಗಾಗಲೇ ‘ಕೆಮಿಸ್ಟ್ರೀ ಆಫ್ ಕರಿಯಪ್ಪ’ ಹಾಗೂ ‘ಕ್ರಿಟಿಕಲ್ ಕೀರ್ತನೆಗಳು’ ಚಿತ್ರಗಳಲ್ಲಿ ಸಹ ನಿರ್ದೇಶಕರಾಗಿ ಕೆಲಸ ಮಾಡಿದ ಅನುಭವವಿರುವ ಚೇತನ್ ಶೆಟ್ಟಿ, ‘ಸೀಟ್‌ ಎಡ್ಜ್‌’ ಸಿನೆಮಾಕ್ಕೆ ಆಕ್ಷನ್‌-ಕಟ್‌ ಹೇಳಿದ್ದಾರೆ. ‘ಎನ್‌. ಆರ್‌ ಸಿನೆಮಾ ಪ್ರೊಡಕ್ಷನ್ಸ್‌’ ಬ್ಯಾನರಿನಲ್ಲಿ ಗಿರಿಧರ ಟಿ. ವಸಂತಪುರ ಹಾಗೂ ಸುಜಾತ ಗಿರಿಧರ ಜಂಟಿಯಾಗಿ ನಿರ್ಮಿಸಿರುವ ‘ಸೀಟ್‌ ಎಡ್ಜ್‌’ ಸಿನೆಮಾಕ್ಕೆ ಬಂಡವಾಳ ಹೂಡಿ ನಿರ್ಮಿಸಿದ್ದಾರೆ. ಚಿತ್ರತಂಡದ ಮಾಹಿತಿಯಂತೆ, ‘ಸೀಟ್‌ ಎಡ್ಜ್‌’ ಸಂಪೂರ್ಣ ಡಾರ್ಕ್‌ ಕಾಮಿಡಿ, ಹಾರರ್‌-ಥ್ರಿಲ್ಲರ್‌ ಶೈಲಿಯ ಸಿನೆಮಾ. ‘ಸೀಟ್‌ ಎಡ್ಜ್‌’ ಸಿನೆಮಾದಲ್ಲಿ ನಾಯಕ ಸಿದ್ಧು ಮೂಲಿಮನಿ ಅವರಿಗೆ ರವೀಕ್ಷಾ ಶೆಟ್ಟಿ ಜೋಡಿಯಾಗಿ ಅಭಿನಯಿಸಿದ್ದಾರೆ ಉಳಿದಂತೆ, ⁠ರಘು ರಾಮನಕೊಪ್ಪ, ಗಿರೀಶ್ ಶಿವಣ್ಣ, ಮಿಮಿಕ್ರಿ ಗೋಪಿ , ಲಕ್ಷ್ಮಿ ಸಿದ್ದಯ್ಯ, ಕಿರಣ್ ನಾಯಕರೇ, ಪುನೀತ್ ಬಾಬು ತೇಜು ಪೊನ್ನಪ್ಪ, ಮನಮೋಹನ್ ರೈ ಮುಂತಾದವರು ಇತರ ಪ್ರಮುಖ ಪಾತ್ರ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

‘ಸೀಟ್‌ ಎಡ್ಜ್‌’ ಸಿನೆಮಾದಲ್ಲಿ ಏನಿದೆ…?

‘ಸೀಟ್‌ ಎಡ್ಜ್‌’ ಸಿನೆಮಾದ ಕಥಾಹಂದರದ ಬಗ್ಗೆ ಮಾಹಿತಿ ನೀಡುವ ನಿರ್ದೇಶಕ ಚೇತನ್‌ ಶೆಟ್ಟಿ, ‘ಇದು ಇಂದಿನ ಪ್ರೇಕ್ಷಕರ ಅಭಿರುಚಿಗೆ ತಕ್ಕಂತ ಸಿನೆಮಾ. ಚಿತ್ರದ ನಾಯಕ ಯೂ-ಟ್ಯೂಬ್ ಬ್ಲಾಗರ್ ಆಗಿದ್ದು ಏನಾದರೂ ಸಾಧನೆ ಮಾಡಬೇಕೆಂಬ ಪ್ರಯತ್ನದಲ್ಲಿರುತ್ತಾನೆ ಆದರೆ ತಾನು ಮಾಡುತ್ತಿರುವ ವಿಡಿಯೋಗಳು ಟ್ರೋಲ್ ಪೇಜ್ ಗಳಿಗೆ ಆಹಾರವಾಗಿ ನಗೆಪಾಟಲಿಗೆ ಗುರಿ ಆಗುತ್ತಾನೆ. ಈ ಮಧ್ಯೆ ಒಂದು ಹುಡುಗಿಯ ಜೊತೆ ಲವ್ ಆಗುತ್ತೆ. ನಾಯಕ ಮಾಡಿದ ಒಂದು ತಪ್ಪಿನಿಂದ ಲವ್ ಬ್ರೇಕಪ್ ಆಗುತ್ತೆ.ಒಂದು ಕಡೆ ತಾನು ಪ್ರೀತಿಸಿದ ಹುಡುಗಿಯನ್ನು ಮರಳಿ ಪಡೆಯಬೇಕು, ಮತ್ತೊಂದು ಕಡೆ ಯೂ-ಟ್ಯೂಬ್ ಅಲ್ಲಿ ತನ್ನ ವೀವರ್ಸ್‌ಗಳಿಗೆ ವಿಭಿನ್ನವಾಗಿ ಏನಾದರೂ ಮಾಡಬೇಕೆಂದು ಯೋಚಿಸುತ್ತಿರುವಾಗ ಒಂದು ಭಯಂಕರವಾದ ಘೋಸ್ಟ್ ಟೌನ್ ಗೆ ಹೋಗಿ ಘೋಸ್ಟ್ ಹಂಟಿಂಗ್ ವೀಡಿಯೋ ಮಾಡಲು ನಿರ್ಧರಿಸುತ್ತಾನೆ. ಇದಕ್ಕೆ ಸ್ನೇಹಿತರಿಂದ ವಿರೋಧ ವ್ಯಕ್ತವಾಗುತ್ತದೆ. ನಂತರ ನಾಯಕ ಘೋಸ್ಟ್ ಟೌನ್ ಗೆ ಹೋಗುವನೆ? ತಾನು ಪ್ರೀತ್ಸಿದ ಹುಡುಗಿಯನ್ನು ಮರಳಿ ಪಡೆಯುವನೆ? ಯೂ-ಟ್ಯೂಬ್ ಬ್ಲಾಗರ್ ಆಗಿ ಸಾಧನೆ ಮಾಡುವನೆ? ಎನ್ನುವುದು ಚಿತ್ರದ ಕಥೆಯ ಎಳೆ. ಅದು ಹೇಗಿದೆ ಎಂಬುದನ್ನು ತೆರೆಮೇಲೆ ನೋಡಬೇಕು’ ಎನ್ನುತ್ತಾರೆ.

‘ಸೀಟ್ ಎಡ್ಜ್’ನಲ್ಲಿ ಕೂರಿಸುವಂಥ ಚಿತ್ರ!

ನಮ್ಮ ಸಿನೆಮಾದ ಕಥೆಗೆ ತಕ್ಕಂತೆ ಈ ಸಿನೆಮಾಕ್ಕೆ ‘ಸೀಟ್ ಎಡ್ಜ್’ ಅಂಥ ಟೈಟಲ್‌ ಇಟ್ಟಿದ್ದೇವೆ. ನಿಜವಾಗಿಯೂ ಇದು ‘ಸೀಟ್ ಎಡ್ಜ್’ನಲ್ಲಿ ಕೂರಿಸುವಂಥ ಸಿನೆಮಾವಾಗಲಿದೆ. ಪ್ರೇಕ್ಷಕರನ್ನು ‘ಸೀಟ್ ಎಡ್ಜ್’ನಲ್ಲಿ ಕೂರಿಸುವಂಥ ಎಲ್ಲಾ ಥರದ ಎಂಟರ್‌ಟೈನ್ಮೆಂಟ್ ಅಂಶಗಳೂ ಈ ಸಿನೆಮಾದಲ್ಲಿದೆ. ಕನ್ನಡ ಆಡಿಯನ್ಸ್‌ಗೆ ಖಂಡಿತವಾಗಿಯೂ ‘ಸೀಟ್ ಎಡ್ಜ್’ ಹೊಸ ಅನುಭವ ಕೊಡುವಂಥ ಸಿನೆಮಾವಾಗಲಿದೆ ಎಂಬುದು ‘ಸೀಟ್ ಎಡ್ಜ್’ ಚಿತ್ರತಂಡದ ಭರವಸೆಯ ಮಾತು. ಈ ಮಾತು ಎಷ್ಟರ ಮಟ್ಟಿಗೆ ನಿಜವಾಗಲಿದೆ ಎಂಬುದು ‘ಸೀಟ್ ಎಡ್ಜ್’ ಸಿನೆಮಾ ತೆರೆಗೆ ಬಂದ ಮೇಲಷ್ಟೇ ಗೊತ್ತಾಗಲಿದೆ.

ಶೀಘ್ರದಲ್ಲಿಯೇ ‘ಸೀಟ್ ಎಡ್ಜ್’ ತೆರೆಗೆ ಬರಲು ತಯಾರಿ… 

‘ಸೀಟ್ ಎಡ್ಜ್’ ಸಿನೆಮಾವನ್ನು ⁠ಬೆಂಗಳೂರು, ಮೈಸೂರು, ಶಿವಮೊಗ್ಗ, ಚಿಕ್ಕಮಗಳೂರು ಸುತ್ತಮುತ್ತ ಸುಮಾರು 45 ದಿನಗಳ ಕಾಲ ಚಿತ್ರೀಕರಣದ ಮಾಡಲಾಗಿದೆ. ‘ಸೀಟ್ ಎಡ್ಜ್’ ಸಿನೆಮಾದ ಹಾಡುಗಳಿಗೆ ⁠ಆಕಾಶ್ ಪರ್ವ ಸಂಗೀತ ಸಂಯೋಜಿಸಿದ್ದು, ದೀಪಕ್ ಕುಮಾರ್ ಜೆ. ಕೆ ಛಾಯಾಗ್ರಹಣ ಹಾಗೂ ನಾಗೇಂದ್ರ ಉಜ್ಜನಿ ಸಂಕಲನ ಕಾರ್ಯ ನಿರ್ವಹಿಸಿದ್ದಾರೆ. ಸದ್ಯ ‘ಸೀಟ್ ಎಡ್ಜ್’ ಸಿನೆಮಾದ ಸಿ. ಜಿ (ಕಂಪ್ಯೂಟರ್‌ ಗ್ರಾಫಿಕ್ಸ್‌) ಕೆಲಸಗಳು ಭರದಿಂದ ನಡೆಯುತ್ತಿದ್ದು, ಇದೇ ಜುಲೈ ವೇಳೆಗೆ ಸಿನೆಮಾವನ್ನು ತೆರೆಗೆ ತರುವ ಯೋಚನೆಯಲ್ಲಿದೆ ಚಿತ್ರತಂಡ.

Related Posts

error: Content is protected !!