Street Beat

ಐತಿಹಾಸಿಕ ಕಥೆಯಲ್ಲಿ ‘ಹಲಗಲಿ’ ವೀರನಾದ ಡಾಲಿ ಧನಂಜಯ

ಕನ್ನಡ ಮಣ್ಣಿನ ಐತಿಹಾಸಿಕ ಕಥೆ ‘ಹಲಗಲಿ’ ಚಿತ್ರವಾಗಿ ತೆರೆಗೆ

ಉತ್ತರ ಕರ್ನಾಟಕದ ಐತಿಹಾಸಿಕ ಪಾತ್ರದಲ್ಲಿ ಡಾಲಿ ಧನಂಜಯ

‘ಹಲಗಲಿ’ ಚಿತ್ರದ ಮೇಲೆ ಗರಿಗೆದರಿದ ನಿರೀಕ್ಷೆ…

ಬಹುಕಾಲದ ನಂತರ ಕನ್ನಡ ಚಿತ್ರರಂಗದಲ್ಲಿ ಮತ್ತೊಂದು ಐತಿಹಾಸಿಕ ಸಿನೆಮಾ ತೆರೆಗೆ ಬರಲು ಸಿದ್ಧವಾಗುತ್ತಿದೆ. ಆ ಸಿನೆಮಾದ ಹೆಸರು ‘ಹಲಗಲಿ’. ಸ್ಯಾಂಡಲ್‌ವುಡ್‌ನ ‘ನಟ ರಾಕ್ಷಸ’ ಡಾಲಿ ಧನಂಜಯ ಈ ಸಿನೆಮಾದಲ್ಲಿ ನಾಯಕ ನಟನಾಗಿ ಅಭಿನಯಿಸುತ್ತಿದ್ದು, ‘ಕಾಂತಾರ’ ಖ್ಯಾತಿಯ ಸಪ್ತಮಿ ಗೌಡ ‘ಹಲಗಲಿ’ ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಯುವ ನಿರ್ದೇಶಕ ಸುಕೇಶ್ ನಾಯಕ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ‘ಹಲಗಲಿ’ ಚಿತ್ರವನ್ನು ಯುವ ಉದ್ಯಮಿ ಕಲ್ಯಾಣ್ ಚಕ್ರವರ್ತಿ ಧೂಳಿಪಾಳ್ಳ ಬಂಡವಾಳ ಹೂಡಿ ನಿರ್ಮಿಸುತ್ತಿದ್ದಾರೆ. ಬಹುತಾರಾಗಣದಲ್ಲಿ ಮತ್ತು ಬಹುಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ‘ಹಲಗಲಿ’ ಚಿತ್ರ ಎರಡು ಭಾಗಗಳಲ್ಲಿ ಮೂಡಿಬರುತ್ತಿದ್ದು, ಇತ್ತೀಚೆಗೆ ಈ ಸಿನೆಮಾದ ಫಸ್ಟ್‌ಲುಕ್‌ ಅದ್ಧೂರಿಯಾಗಿ ಬಿಡುಗಡೆಯಾಯಿತು. ಅಂದಹಾಗೆ, ‘ಹಲಗಲಿ’ ಚಿತ್ರ ಏಕಕಾಲಕ್ಕೆ ಐದು ಭಾಷೆಯಲ್ಲಿ ಅದ್ದೂರಿಯಾಗಿ ಚಿತ್ರೀಕರಣವಾಗುತ್ತಿದೆ.

‘ಹಲಗಲಿ’ ಮೇಲೆ ಡಾಲಿಗೆ ನಿರೀಕ್ಷೆ…!

‘ಹಲಗಲಿ’ ಚಿತ್ರದ ಫಸ್ಟ್‌ಲುಕ್‌ ಬಿಡುಗಡೆ ವೇಳೆ ಮಾತನಾಡಿದ ನಟ ಡಾಲಿ ಧನಂಜಯ್, ‘ಈ ಸಿನೆಮಾದಲ್ಲಿ ನಾನು ನಿಮಿತ್ತ ಮಾತ್ರ. ನಾನು ಈ ಚಿತ್ರದಲ್ಲಿ ಜಡಗ ಎಂಬ ಪಾತ್ರ ಮಾಡಿದ್ದೇನೆ. ನಿರ್ದೇಶಕರು ಹಾಗೂ ನಿರ್ಮಾಪಕರು ನಿಜವಾದ ಹೀರೋಗಳು. ನಾನು‌ ಮೊದಲಿನಿಂದಲೂ ಐತಿಹಾಸಿಕ ಸಿನೆಮಾ ಮಾಡಬೇಕು ಎಂದು ಹೇಳುತ್ತಿದ್ದೆ. ನನ್ನ ಕೆರಿಯರ್ ಆರಂಭದಲ್ಲಿ ಆ ರೀತಿಯ ಪ್ರಯತ್ನ ಮಾಡಿದ್ದೇವು. ನಟರಾಗಿ ನಮ್ಮ ಕಂಟ್ರೋಲ್ ನಲ್ಲಿ ಏನೂ ಇರಲ್ಲ. ಕೆಲಸ ಮಾಡುತ್ತಿರುತ್ತೇವೆ. ‘ಅಲ್ಲಮ’ ಬಯೋಪಿಕ್ ಮಾಡಿದ್ದೆ. ಈಗ ‘ಹಲಗಲಿ’. ನನಗೆ ಒಂದು ಭಯ ಕಾಡುತ್ತಾ ಇತ್ತು. ಐತಿಹಾಸಿಕ ಸಿನೆಮಾಗಳನ್ನು ಶುರು ಮಾಡುತ್ತಾರೆ. ಆಮೇಲೆ ನಿಲ್ಲಿಸುತ್ತಾರಾ? ಬಜೆಟ್ ಇರಲ್ಲ. ಅದಕ್ಕೆ ನ್ಯಾಯ ಒದಗಿಸಲು ಆಗುವುದಿಲ್ಲ ಎಂಬ ಚಿಂತೆಯಾಗಿತ್ತು. ‘ಹಲಗಲಿ’ ಸ್ಕ್ರೀಪ್ಟ್ ಓದಿದೆ. ಬಹಳ ಚೆನ್ನಾಗಿ ಬರೆದಿದ್ದರು. ಓದುತ್ತಾ ಓದುತ್ತಾ ಖುಷಿಯಾಯ್ತು. ಟೀಂ ಭೇಟಿಯಾದೆ. ಅವರು ಬ್ರಿಟೀಷ್ ಎಪಿಸೋಡ್ ಶೂಟಿಂಗ್ ಮುಗಿಸಿದ್ದರು. ಅದ್ಭುತವಾದ ವಿಷ್ಯುವಲ್ಸ್. ಅಲ್ಲಿಂದ ನಂಬಿಕೆ ಬಂತು. ಸುಕೇಶ್ ಹಾಗೂ ಕಲ್ಯಾಣ್ ಅವರು ಈ ಚಿತ್ರದ ರಿಯಲ್ ಹೀರೋಗಳು. ಬಹಳ ಷ್ಯಾಷನೇಟೆಡ್ ಆಗಿ ಕೆಲಸ ಮಾಡುತ್ತಿದ್ದಾರೆ. ಈ ಚಿತ್ರದ ಭಾಗವಾಗಿರುವುದು ಖುಷಿ ಕೊಟ್ಟಿದೆ. ಈ ರೀತಿ ಸಿನೆಮಾಗಳಿಗೆ ಯಾವ ರೀತಿ ನ್ಯಾಯ ಒದಗಿಸಬೇಕು ಆ ಕೆಲಸ ಮಾಡುತ್ತೇವೆ’ ಎಂದರು.

ನಟಿ ಸಪ್ತಮಿ ಗೌಡ ಮಾತನಾಡಿ, ‘ನನ್ನ ಪಾತ್ರದ ಹೆಸರು ಹೊನ್ನಿ. ಈ ಪಾತ್ರಕ್ಕಾಗಿ ಸಾಕಷ್ಟು ತಯಾರಿ ನಡೆಸಿದೆ. ನಾನು ಈ ಚಿತ್ರಕ್ಕಾಗಿ ಉತ್ತರ ಕರ್ನಾಟಕ ಭಾಷೆ ಕಲಿತಿದ್ದೇನೆ. ನನ್ನ‌ ಲುಕ್ ವಿಭಿನ್ನವಾಗಿದೆ. ತುಂಬಾ ರಫ್ ಹಾಗೂ ಸ್ಟ್ರೈಟ್ ಪಾತ್ರ’ ಎಂದರು.

ಆಯುಧಕ್ಕಾಗಿ ಇಡೀ ಊರೇ ಪ್ರಾಣ ಕೊಟ್ಟ ಕಥೆ..!

ನಿರ್ದೇಶಕ ಸುಕೇಶ್ ನಾಯಕ್ ಮಾತನಾಡಿ, ‘ಇದು ನನ್ನ ಎರಡನೇ ಸಿನೆಮಾ. ನನಗೆ ಐತಿಹಾಸಿಕ ಬುಕ್ಸ್ ಅಂದರೆ ಇಷ್ಟ. ಬುಕ್ ಓದುವ ಟೈಮ್ ನಲ್ಲಿ ‘ಹಲಗಲಿ’ ಎಂಬುವುದು ತಲೆಗೆ ಬಂತು. ಒಂದು ಆಯುಧಕ್ಕಾಗಿ ಇಡೀ ಊರೇ ಪ್ರಾಣ ಕೊಟ್ಟಿದ್ದರು ಎಂಬುವುದು ನನಗೆ ಆಸಕ್ತಿ ಹುಟ್ಟುಹಾಕಿತು. ಆ ಬಳಿಕ ಪುಸ್ತಕ ಓದಿದೆ. ಆ ಊರಿಗೆ ಹೋಗಿ ವಂಶಸ್ಥರನ್ನು ಭೇಟಿಯಾದೆ. ಅವರ ಮರಿ ಮೊಮ್ಮಕ್ಕಳು ಈಗಲೂ ಇದ್ದಾರೆ. ಅವರು ಹೋರಾಟ ಮಾಡಿದ ಆಯುಧಗಳನ್ನು ದೇವರಗುಡಿಯಲ್ಲಿ ಇಟ್ಟಿದ್ದಾರೆ. ಬಳಿಕ ಇದರ ಬಗ್ಗೆ ಆಸಕ್ತಿ ಬಂದು. ಕಥೆಯ ಎಳೆ ಮಾಡಿಕೊಂಡೆ. ಕಡಿಮೆ ಬಜೆಟ್ ನಲ್ಲಿ ಕಥೆ ಮಾಡಿಕೊಂಡೆ. ಆದರೆ ನಿರ್ಮಾಪಕರು ಇದನ್ನು ಅಚ್ಚುಕಟ್ಟಾಗಿ ಮಾಡಬೇಕು ಎಂದು ಮತ್ತೆ ಕಥೆ ರೀ ರೈಟ್ ಮಾಡಲು ಹೇಳಿದರು. ಪ್ರತಿ ಸೀನ್ಸ್ ತಲೆಯಲ್ಲಿ ಇಟ್ಕೊಂಡು ಕಮರ್ಷಿಯಲ್ ಆಗಿ ಮೂಲ ಕಥೆಗೆ ಡ್ಯಾಮೇಜ್ ಆಗದೆ ಈ ರೀತಿ ಸಿನೆಮಾ ಮಾಡುತ್ತಿದ್ದೇವೆ. ಈಗಾಗಲೇ 40% ಶೂಟಿಂಗ್ ಮುಗಿದಿದೆ. ಫಸ್ಟ್ ಶೆಡ್ಯುಲ್ಡ್ ಮೈಸೂರಿನಲ್ಲಿ ಮಾಡಿದ್ದೇವು. ಬಳಿಕ‌ ನೆಲಮಂಗಲದಲ್ಲಿ ಅದ್ಧೂರಿ ಸೆಟ್ ಹಾಕಿ ಸಿನಿಮಾ ಮಾಡುತ್ತಿದ್ದೇವೆ’ ಎಂದು ವಿವರಣೆ ನೀಡಿದರು.

ಡಾಲಿ ವೃತ್ತಿ ಬದುಕಿನ ಮತ್ತೊಂದು ಮೈಲುಗಲ್ಲಿನ ಚಿತ್ರ

ಕನ್ನಡ ಸೇರಿ ಐದು ಭಾಷೆಯಲ್ಲಿ ಮೂಡಿ ಬರುತ್ತಿರುವ ಕನ್ನಡ ನಾಡಿನ ಸ್ವಾತಂತ್ರ್ಯ ಪೂರ್ವದ ವೀರರ ಕಥೆ ಇದಾಗಿದ್ದು, ವಿಶೇಷ ಸ್ಥಳಗಳಲ್ಲಿ ಶೂಟಿಂಗ್ ನಡೆಯುತ್ತಿದೆ. ನಟ ಡಾಲಿ ಧನಂಜಯ ಅವರ ವೃತ್ತಿ ಪಯಣದಲ್ಲಿ ಮತ್ತೊಂದು ಮೈಲುಗಲ್ಲಿನ ಚಿತ್ರವಿದು ಅನ್ನೋದು ವಿಶೇಷ. ಇಲ್ಲಿವರೆಗೂ ಅವರನ್ನು ತೆರೆ ಮೇಲೆ ವಿಭಿನ್ನ ಪಾತ್ರಗಳಲ್ಲಿ ನೋಡಿ ಮೆಚ್ಚಿದ್ದ ಪ್ರೇಕ್ಷಕರು, ಈಗ ವಾರಿಯರ್ ಪಾತ್ರದಲ್ಲಿ ನೋಡಲಿದ್ದಾರೆ. ಇವರ ಕೈಗೆ ಬಿಲ್ಲು, ಬಾಣ, ಮದ್ದು-ಗುಂಡುಗಳನ್ನು ಕೊಟ್ಟು ಯುದ್ಧದ ಅಖಾಡಕ್ಕೆ ಇಳಿಸಿರುವುದು ಕನ್ನಡ ನಾಡಿನ ಇತಿಹಾಸ ಪುಟಗಳಲ್ಲಿ ಅಚ್ಚಳಿಯದೆ ದಾಖಲಾಗಿರುವ ಒಂದು ರೋಚಕ ಇತಿಹಾಸ. ‘ಹಲಗಲಿ’ ಬ್ರಿಟಿಷರ ವಿರುದ್ಧ ಮೊದಲ ಗೆರಿಲ್ಲಾ ವಾರ್ ಮಾಡಿದ ನಮ್ಮದೇ ರಾಜ್ಯದ ‘ಹಲಗಲಿ’ಯ ಊರಿನ ಬೇಡರ ಕುರಿತು ನಾವು ಓದಿರುವ ಮತ್ತು ಕೇಳಿರುವ ಸಂಗತಿಗಳು ಬಹು ರೋಚಕ. ಕನ್ನಡ ನಾಡಿನ ಈ ವೀರರ ಆಚಾರ- ವಿಚಾರ ಹಾಗೂ ಅವರ ಹೋರಾಟದ ಹೆಜ್ಜೆ ಗುರುತುಗಳನ್ನು ತೆರೆಮೇಲೆ ತರುವುದಕ್ಕೆ ಹೊರಟಿದ್ದಾರೆ ನಿರ್ದೇಶಕ ಸುಕೇಶ್ ನಾಯಕ್.

ಬಿಗ್‌ ಬಜೆಟ್‌, ಅದ್ಧೂರಿ ಮೇಕಿಂಗ್‌…

ಇಂಥದ್ದೊಂದು ಬಹು ದೊಡ್ಡ ಬಜೆಟ್ ಚಿತ್ರಕ್ಕೆ ಬಂಡವಾಳ ಹೂಡುವ ಮೂಲಕ ನಿರ್ಮಾಪಕರಾಗಿರುವುದು ಯುವ ಉದ್ಯಮಿ ಬಳ್ಳಾರಿಯ ಕಲ್ಯಾಣ್ ಚಕ್ರವರ್ತಿ ಧೂಳಿಪಾಳ್ಳ. ತಮ್ಮ ‘ದುಹರ ಮೂವೀಸ್’ ಬ್ಯಾನರ್ ನಲ್ಲಿ ಚಿತ್ರ ನಿರ್ಮಿಸುತ್ತಿದ್ದಾರೆ. ಇವರು ಈಗಾಗಲೇ ತೆಲಗಿನಲ್ಲಿ ‘ರಚೇತಾ’ ಚಿತ್ರವನ್ನು ನಿರ್ಮಿಸಿ, 20ಕ್ಕೂ ಹೆಚ್ಚು ಚಿತ್ರಗಳನ್ನು ಕನ್ನಡ ಹಾಗೂ ತೆಲುಗಿನಲ್ಲಿ ವಿತರಣೆ ಮಾಡಿದ್ದಾರೆ.

ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿಯಲ್ಲಿ ಮೂಡಿ ಬರಲಿರುವ ಚಿತ್ರದ ಮೇಲೆ ಸಾಕಷ್ಟು ನಿರೀಕ್ಷೆ ಹೆಚ್ಚಿದೆ. ಚಿತ್ರಕ್ಕಾಗಿ ಬಹುದೊಡ್ಡ ತಾಂತ್ರಿಕ ತಂಡ ಕೆಲಸ ಮಾಡುತ್ತಿದೆ. ಕನ್ನಡದ ವಾಸುಕಿ ವೈಭವ್ ಸಂಗೀತ ಇದೆ. ವಿಶೇಷ ಎಂದರೆ ‘ಕೆಜಿಎಫ್’ ಚಿತ್ರಕ್ಕೆ ಸಾಹಸ ಸಂಯೋಜನೆ ಮಾಡಿದ್ದ ವಿಕ್ರಮ್ ಮೋರ್ ಅವರೇ ‘ಹಲಗಲಿ’ ಚಿತ್ರಕ್ಕೆ ಸಾಹಸ ನಿರ್ದೇಶಕ. ಚಿತ್ರಕ್ಕಾಗಿ ನಾಲ್ಕೈದು ಬೃಹತ್ ಹಳ್ಳಿಯ ಸೆಟ್ ಗಳನ್ನು ಹಾಕಿರುವುದು ಮತ್ತೊಂದು ವಿಶೇಷ. ‘ಹಲಗಲಿ’ ಗ್ರಾಮವನ್ನೇ ಮರುಸೃಷ್ಟಿಯ ಸೆಟ್ ಅನ್ನೇ ವಿಶೇಷವಾಗಿ ನಿರ್ಮಿಸಲಾಗಿದೆ. ಎಲ್ಲ ಅಂದುಕೊಂಡಂತೆ ನಡೆದರೆ, ಮುಂದಿನ ವರ್ಷ ಅಂದರೆ, 2026ರ ಕೊನೆಗೆ ‘ಹಲಗಲಿ’ ಚಿತ್ರವನ್ನು ತೆರೆಗೆ ತರುವ ಯೋಚನೆಯಲ್ಲಿದೆ ಚಿತ್ರತಂಡ.

G S Karthik Sudhan

Karthik Sudhan is a name that is familiar in journalistic circles and has rendered valuable service for many significant years. Known for his vast knowledge and work in the field of cinema, crime, investigation and politics, Karthik Sudhan has worked in reputed online publications of Kannada.

Related Posts

error: Content is protected !!