‘ಲವ್ ಯು ಮುದ್ದು’ ಚಿತ್ರದ ಮತ್ತೊಂದು ಗೀತೆ ಹೊರಕ್ಕೆ…
‘ಲವ್ ಯು ಮುದ್ದು’ ಮತ್ತೊಂದು ಮೆಲೋಡಿ ಸಾಂಗ್ ರಿಲೀಸ್
ಅನಿರುದ್ಧ್ ಶಾಸ್ತ್ರೀ ಸಂಗೀತ ಸಂಯೋಜನೆಯಲ್ಲಿ ಮೂಡಿದ ಲವ್ ಟ್ರ್ಯಾಕ್…
ಕುಮಾರ್ ನಿರ್ದೇಶನದಲ್ಲಿ, ಸಿದ್ಧು ಮೂಲಿಮನಿ – ರೇಷ್ಮಾ ಜೋಡಿಯ ಹೊಸಚಿತ್ರ
ನಟ ಸಿದ್ಧು ಮೂಲಿಮನಿ ನಾಯಕ ನಟನಾಗಿ ಅಭಿನಯಿಸುತ್ತಿರುವ ಹೊಸಚಿತ್ರ ‘ಲವ್ ಯು ಮುದ್ದು’ ತೆರೆಗೆ ಬರಲು ಸಿದ್ಧವಾಗಿದೆ. ಸದ್ಯ ‘ಲವ್ ಯು ಮುದ್ದು’ ಚಿತ್ರದ ಅಂತಿಮ ಹಂತದ ಪ್ರಚಾರ ಕಾರ್ಯಗಳಲ್ಲಿ ನಿರತವಾಗಿರುವ ಚಿತ್ರತಂಡ, ಇದೀಗ ಆ ಚಿತ್ರದ ಮೆಲೋಡಿ ಲವ್ ಟ್ರ್ಯಾಕ್ ಒಂದನ್ನು ಬಿಡುಗಡೆ ಮಾಡಿದೆ.
‘ಈಗೀಗ ನನಗಂತೂ…ʼ ಎಂಬ ಸಾಲುಗಳಿಂದ ಶುರುವಾಗುವ ‘ಲವ್ ಯು ಮುದ್ದು’ ಚಿತ್ರದ ಈ ಮೆಲೋಡಿ ಗೀತೆಗೆ ಅನಿರುದ್ಧ ಶಾಸ್ತ್ರೀ ಸಂಗೀತ ಸಂಯೋಜಿಸಿದ್ದಾರೆ. ಸಿದ್ದು ಕೋಡಿಪುರ ಸಾಹಿತ್ಯವಿರುವ ಈ ಗೀತೆಗೆ ಅನಿರುದ್ಧ ಶಾಸ್ತ್ರೀ ಮತ್ತು ಕೆ. ಎಸ್. ಚಿತ್ರ ಧ್ವನಿಯಾಗಿದ್ದಾರೆ. ‘ಎಂ.ಆರ್.ಟಿ ಮ್ಯೂಸಿಕ್’ ಯು-ಟ್ಯೂಬ್ ಚಾನೆಲ್‌ನಲ್ಲಿ ಈ ಗೀತೆ ಬಿಡುಗಡೆಯಾಗಿದೆ.
‘ಲವ್ ಯು ಮುದ್ದು’ ಚಿತ್ರದ ‘ಈಗೀಗ ನನಗಂತೂ…’ ಗೀತೆಯ ಲಿರಿಕಲ್ ವಿಡಿಯೋವನ್ನು ವೀಕ್ಷಿಸಲು ಈ ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಬಹುದು…
ಕುಮಾರ್ ನಿರ್ದೇಶನದಲ್ಲಿ ಅರಳಿದ ನೈಜ ಕಥೆ…
ಇನ್ನು ‘ಲವ್ ಯು ಮುದ್ದು’ ನೈಜ ಘಟನೆಯನ್ನು ಆಧರಿಸಿ ತೆರೆಗೆ ಬರುತ್ತಿರುವ ಚಿತ್ರ. ಚಿತ್ರದಲ್ಲಿ ನಾಯಕ ನಟ ಸಿದ್ಧು ಮೂಲಿಮನಿ ಅವರಿಗೆ ಯುವ ನಟಿ ರೇಷ್ಮಾ ನಾಯಕಿಯಾಗಿ ಅಭಿನಯಿಸಿದ್ದಾರೆ. ಉಳಿದಂತೆ ರಾಜೇಶ್ ನಟರಂಗ, ತಬಲ ನಾಣಿ, ಗಿರೀಶ್ ಶಿವಣ್ಣ, ಶ್ರೀವತ್ಸ, ಸ್ವಾತಿ ಮೊದಲಾದ ಕಲಾವಿದರು ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಕನ್ನಡದಲ್ಲಿ ಈ ಹಿಂದೆ ‘ಕೆಮಿಸ್ಟ್ರಿ ಆಫ್ ಕರಿಯಪ್ಪ’, ‘ನ್ಯಾನೋ ನಾರಾಯಣಪ್ಪ’, ‘ಕ್ರಿಟಿಕಲ್ ಕೀರ್ತನೆಗಳು’ ಮೊದಲಾದ ಸಿನೆಮಾಗಳನ್ನು ನಿರ್ದೇಶಿಸಿದ್ದ ಕುಮಾರ್ ಈ ಸಿನೆಮಾಕ್ಕೆ ಆಕ್ಷನ್-ಕಟ್ ಹೇಳಿದ್ದಾರೆ.
ಇದೇ ನವೆಂಬರ್ 7ಕ್ಕೆ ‘ಲವ್ ಯು ಮುದ್ದು’ ತೆರೆಗೆ
ಸದ್ಯ ಭರದಿಂದ ಚಿತ್ರದ ಪ್ರಚಾರ ಕಾರ್ಯಗಳಲ್ಲಿ ನಿರತವಾಗಿರುವ ‘ಲವ್ ಯು ಮುದ್ದು’ ಸಿನೆಮಾ ಇದೇ 2025ರ ನವೆಂಬರ್ 7ರಂದು ಬಿಡುಗಡೆಯಾಗುತ್ತಿದೆ. ‘ಕಿಶನ್ ಎಂಟರ್‌ಟೈನ್ಮೆಂಟ್’ ಬ್ಯಾನರ್‌ನಡಿ ಕಿಶನ್ ಟಿ. ಎನ್. ‘ಲವ್ ಯು ಮುದ್ದು’ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಕಾರ್ಯಕಾರಿ ನಿರ್ಮಾಪಕರಾಗಿ ಲಕ್ಷ್ಮಿಕಾಂತ್ ಟಿ. ಎಸ್. ತಂಡದ ಭಾಗವಾಗಿದ್ದಾರೆ. ಚಿತ್ರಕ್ಕೆ ಕೃಷ್ಣ ದೀಪಕ್ ಛಾಯಾಗ್ರಹಣ, ಅನಿರುದ್ಧ್ ಶಾಸ್ತ್ರೀ ಸಂಗೀತ ನಿರ್ದೇಶನ ಹಾಗೂ ಸಿ. ಎಸ್. ದೀಪು ಸಂಕಲನ ನಿರ್ವಹಿಸಿದ್ದಾರೆ.















