Street Beat

ನಿರ್ದೇಶಕ ಶ್ರೀಜೈ.. ಹೊಸ ಕಥೆ ಹೇಳೋಕೆ ಸೈ..!

ಯುವ ಪ್ರತಿಭೆ ಸಂದೀಪ್ ನಾಗರಾಜ್ ಜೊತೆ ಕೈ ಜೋಡಿಸಿದ ಶ್ರೀಜೈ

‘ಆರ್ ಎಕ್ಸ್ ಸೂರಿ’ ಮತ್ತು ‘ಭೈರಾದೇವಿ’ ನಿರ್ದೇಶಕರ ಹೊಸ ಚಿತ್ರ ಅನೌನ್ಸ್…

ಹೊಸ ಕಥೆಯೊಂದಿಗೆ ಬಂದ ನಿರ್ದೇಶಕ ಶ್ರೀಜೈ

ಕನ್ನಡದಲ್ಲಿ ‘ಆರ್‌ಎಕ್ಸ್ ಸೂರಿ’ ಹಾಗೂ ‘ಭೈರಾದೇವಿ’ ಸಿನೆಮಾಗಳನ್ನು ನಿರ್ದೇಶಿಸಿ ತೆರೆಮೇಲೆ ತಂದಿದ್ದ ನಿರ್ದೇಶಕ ಶ್ರೀಜೈ, ಇದೀಗ ಸದ್ದಿಲ್ಲದೆ ಹೊಸ ಚಿತ್ರವನ್ನು ಕೈಗೆತ್ತಿಕೊಂಡಿದ್ದಾರೆ. ಇನ್ನೂ ಹೆಸರಿಡದ ಸಿನೆಮಾ ‘ಪ್ರೊಡಕ್ಷನ್ ನಂ.1’ ಎಂಬ ವರ್ಕಿಂಗ್ ಟೈಟಲ್‌ನಲ್ಲಿ ಅನೌನ್ಸ್ ಆಗಿದ್ದು, ಇತ್ತೀಚಿಗೆ ಬೆಂಗಳೂರಿನ ಬಂಡೆ ಮಹಾಕಾಳಿ ದೇವಸ್ಥಾನದಲ್ಲಿ ಈ ಹೊಸಚಿತ್ರದ ಚಿತ್ರದ ಸ್ಕ್ರಿಪ್ಟ್‌ ಪೂಜೆಯನ್ನು ಸರಳವಾಗಿ ನೆರವೇರಿಸಲಾಯಿತು.

ಇನ್ನು ನಿರ್ದೇಶಕ ಶ್ರೀಜೈ ಹೊಸ ಪ್ರಯತ್ನದಲ್ಲಿ ನಾಯಕನಾಗಿ ಸಂದೀಪ್ ನಾಗರಾಜ್ ತೆರೆಮೇಲೆ ಕಾಣಿಸಿಕೊಳ್ಳಲಿದ್ದಾರೆ. ಈಗಾಗಲೇ ಸಂದೀಪ್ ಕನ್ನಡದಲ್ಲಿ ‘ಗೂಗ್ಲಿ’, ‘ಅನಂತು ವರ್ಸಸ್‌ ನುಸ್ರುತ್’, ‘ಪ್ರಭುತ್ವ’, ‘1/2 ಮೆಂಟ್ಲು’ ಮೊದಲಾದ ಸಿನೆಮಾಗಳಲ್ಲಿ ನಟಿಸಿದ್ದು, ಇದೀಗ ಶ್ರೀಜೈ ಕಥೆಯಲ್ಲಿ ಕಂಪ್ಲೀಟ್ ಮಾಸ್ ಹಾಗೂ ರಗಡ್ ಗೆಟಪ್ ನಲ್ಲಿ ತೆರೆಮೇಲೆ ಕಾಣಿಸಿಕೊಳ್ಳಲಿದ್ದಾರೆ.

ರೌಡಿಸಂ‌ ಕಥೆ ಹೇಳ್ತಾರಾ ಶ್ರೀಜೈ..?

ಸದ್ಯ ‘ಪ್ರೊಡಕ್ಷನ್ ನಂಬರ್ 1’ ಟೈಟಲ್ ನಡಿ ಚಿತ್ರತಂಡ ಈ ಹೊಸಚಿತ್ರದ ಪೋಸ್ಟರ್ ಅನ್ನು ರಿಲೀಸ್ ಮಾಡಿದೆ. ಮೇಲ್ನೋಟಕ್ಕೆ ಈ ಪೋಸ್ಟರ್ ನೋಡಿದ್ರೆ, ಇದೊಂದು ರೌಡಿಸಂ‌ ಕಥೆ ಎಂಬುದು ಗೊತ್ತಾಗುತ್ತದೆ. ಪೋಸ್ಟರ್‌ನಲ್ಲಿ ರಕ್ತ, ಮಚ್ಚು, ಹೆಣ, ಹಗ್ಗ ಎಲ್ಲವನ್ನೂ ನಿರ್ದೇಶಕ ಶ್ರೀಜೈ ತೋರಿಸಿದ್ದು, ಮತ್ತೊಂದು ರೌಡಿಸಂ‌ ಕಥೆಯನ್ನು ನಿರ್ದೇಶಕರು ಈ ಚಿತ್ರದ ಮೂಲಕ ಪ್ರೇಕ್ಷಕರಿಗೆ ತೆರೆಮೇಲೆ ಹೇಳೋದಕ್ಕೆ ಹೊರಟಂತಿದೆ.

ಇನ್ನು ಈ ಸಿನೆಮಾವನ್ನು ‘ಡ್ರೀಮ್ ವರ್ಲ್ಡ್ ಸಿನೆಮಾಸ್’ ಹಾಗೂ ‘ರಾಧಾಕೃಷ್ಣ ಆರ್ಟ್ಸ್’ ಬ್ಯಾನರ್‌ನಡಿ ಜಂಟಿಯಾಗಿ ನಿರ್ಮಾಣವಾಗಲಿದೆ. ಈ ಚಿತ್ರಕ್ಕೆ ಛಾಯಾಗ್ರಹಕ ಸೋಲೋಮನ್ ಕ್ಯಾಮೆರಾ ಹಿಡಿಯಲಿದ್ದು, ‘ಕೆಜಿಎಫ್’ ಸಿನೆಮಾ ಖ್ಯಾತಿಯ ಶ್ರೀಕಾಂತ್ ಸಂಕಲನ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ಹಿಂದೆ ‘ಭೈರಾದೇವಿ’ ಸಿನೆಮಾಗೆ ಸಂಗೀತ ನಿರ್ದೇಶನ ಮಾಡಿದ್ದ, ಸೆಂಥಿಲ್ ಪ್ರಶಾಂತ್ ಈ ಚಿತ್ರಕ್ಕೂ ಸಂಗೀತ ಒದಗಿಸಲಿದ್ದಾರೆ‌. ಉಳಿದಂತೆ ಈ ಚಿತ್ರದ ಬಗ್ಗೆ ಹೆಚ್ಚಿನ ಮಾಹಿತಿಗಳು ಇನ್ನಷ್ಟೇ ಹೊರಬರಬೇಕಿದೆ.

Related Posts

error: Content is protected !!