‘ಅಶೋಕ ಬ್ಲೇಡ್’ ಅಲ್ಲ.., ಇನ್ಮುಂದೆ ‘ದಿ ರೈಸ್ ಆಫ್ ಅಶೋಕ’

ಕೈಯಲ್ಲಿ ಮಚ್ಚು ಹಿಡಿದು ನೀನಾಸಂ ಸತೀಶ್ ಮಾಸ್ ಎಂಟ್ರಿ
‘ದಿ ರೈಸ್ ಆಫ್ ಅಶೋಕ’ ಮೋಶನ್ ಪೋಸ್ಟರ್ ರಿಲೀಸ್…!
ಬದಲಾದ ಹೆಸರಿನೊಂದಿಗೆ ‘ಅಶೋಕ’ ಬರುತ್ತಿದ್ದಾನೆ
ಅಭಿನಯ ಚತುರ ನೀನಾಸಂ ಸತೀಶ್ ನಟಿಸುತ್ತಿರುವ ‘ಅಶೋಕ ಬ್ಲೇಡ್’ ಸಿನೆಮಾ ಅರ್ಧಕ್ಕೆ ನಿಂತು ಹೋಗಿದೆ ಎಂಬ ಸುದ್ದಿ ಕೆಲ ತಿಂಗಳ ಹಿಂದೆ ಗಾಂಧಿನಗರದಲ್ಲಿ ಹರಿದಾಡುತ್ತಿತ್ತು. ಇದೀಗ ಅದೇ ‘ಅಶೋಕ ಬ್ಲೇಡ್’ ಸಿನೆಮಾದ ಕಡೆಯಿಂದ ಹೊಸ ಸುದ್ದಿಯೊಂದು ಹೊರಬಿದ್ದಿದೆ. ಅದೇನೆಂದರೆ, ‘ಅಶೋಕ ಬ್ಲೇಡ್’ ಸಿನೆಮಾದ ಟೈಟಲ್ ಬದಲಿಗೆ ‘ದಿ ರೈಸ್ ಆಫ್ ಅಶೋಕ’ ಎಂಬ ಹೊಸ ಟೈಟಲ್ ಈ ಸಿನೆಮಾಕ್ಕೆ ಇಡಲಾಗಿದೆ. ಸದ್ಯ ಟೈಟಲ್ ಬದಲಾವಣೆಯೊಂದಿಗೆ ‘ದಿ ರೈಸ್ ಆಫ್ ಅಶೋಕ’ ಸಿನೆಮಾ ಮತ್ತೆ ಹೊಸ ಜೋಶ್‌ನಲ್ಲಿ ಶೂಟಿಂಗ್ ಅಖಾಡಕ್ಕೆ ಇಳಿಯುತ್ತಿದೆ. ಚಿತ್ರತಂಡದ ಮೂಲಗಳ ಪ್ರಕಾರ, ‘ಅಶೋಕ್ ಬ್ಲೇಡ್’ ಬದಲಿಗೆ ‘ದಿ ರೈಸ್ ಆಫ್ ಅಶೋಕ’ ಎಂಬ ಹೊಸ ಟೈಟಲ್ ಇಡಲಾಗಿದೆ. ನಿರ್ದೇಶಕ ವಿನೋದ್ ದೊಂಡಾಲೆ ನಿಧನದ ಬಳಿಕ ಈ ಚಿತ್ರ ನಿಂತು ಹೋಯ್ತು ಎಂಬ ಸುದ್ದಿಯಾಗಿತ್ತು. ಆದರೆ ನಟ ನೀನಾಸಂ ಸತೀಶ್ ‘ಅಶೋಕ ಬ್ಲೇಡ್’ ಸಿನಿಮಾವನ್ನು ಮತ್ತೆ ಕೈಗೆತ್ತಿಕೊಂಡಿದ್ದಾರೆ. ವಿನೋದ್ ದೊಂಡಾಲೆ ಶೇಕಡ 80ರಷ್ಟು ಚಿತ್ರೀಕರಣ ಮುಗಿಸಿದ್ದಾರೆ. ಉಳಿದಂತೆ ಶೇಕಡ 20ರಷ್ಟು ಈ ಸಿನೆಮಾದ ಒಂದಿಷ್ಟು ಟಾಕಿ ಮತ್ತು ಹಾಡುಗಳ ಚಿತ್ರೀಕರಣ ಕೆಲಸ ಬಾಕಿ ಇದೆ. ಸದ್ಯ ಬಾಕಿಯಿರುವ ಈ ಚಿತ್ರದ ದೃಶ್ಯಗಳಿಗೆ ‘ಚಮಕ್’, ‘ಕ್ಷೇತ್ರಪತಿ’, ‘ಅವತಾರ ಪುರುಷ’ ಸೇರಿದಂತೆ ಒಂದಷ್ಟು ಚಿತ್ರಗಳಿಗೆ ಸಂಕಲನಕಾರರಾಗಿ ಕೆಲಸ ಮಾಡಿರುವ ಮನು ಶೇಡ್ಗಾರ್ ನಿರ್ದೇಶನ ಮಾಡುತ್ತಿದ್ದಾರೆ.
ಹೊಸ ವರ್ಷಕ್ಕೆ ‘ದಿ ರೈಸ್ ಆಫ್ ಅಶೋಕ’ ಝಲಕ್!
ಸದ್ಯ ‘ದಿ ರೈಸ್ ಆಫ್ ಅಶೋಕ’ ಚಿತ್ರದ ಬಾಕಿ ಉಳಿದ ದೃಶ್ಯಗಳಿಗೆ ಮನು ಶೇಡ್ಗಾರ್ ಆಕ್ಷನ್-ಕಟ್ ಹೇಳುತ್ತಿದ್ದು, ಹೊಸ ವರ್ಷದ ಆರಂಭದಲ್ಲಿಯೇ ‘ದಿ ರೈಸ್ ಆಫ್ ಅಶೋಕ’ ಚಿತ್ರದ ಹೊಸ ಮೋಶನ್ ಪೋಸ್ಟರ್ ಬಿಡುಗಡೆಯಾಗಿದೆ. ಇನ್ನು ‘ದಿ ರೈಸ್ ಆಫ್ ಅಶೋಕ’ ಮೋಶನ್ ಟೀಸರ್‌ನಲ್ಲಿ ಮಚ್ಚು ಹಿಡಿದು ರಗಡ್ ಲುಕ್ ನಲ್ಲಿ ನೀನಾಸಂ ಸತೀಶ್ ಕಾಣಿಸಿಕೊಂಡಿದ್ದು, ಇದು ರೆಟ್ರೋ ಕಾಲದ ಕಥೆಯಾಗಿದ್ದು, ಬಂಡಾಯದ ಕಥೆಯನ್ನು ಹರವಿಡೋದಿಕ್ಕೆ ಸತೀಶ್ ಟೀಂ ಸಜ್ಜಾಗಿದೆ ಅನ್ನೋದು ಪೋಸ್ಟರ್ ನಲ್ಲಿ ಗೊತ್ತಾಗುತ್ತಿದೆ.
2025ರ ಫೆಬ್ರವರಿಯಿಂದ ಮತ್ತೆ ಶೂಟಿಂಗ್..!
ಇದೇ 2025ರ ಫೆಬ್ರವರಿ ತಿಂಗಳ 15ರಿಂದ ‘ದಿ ರೈಸ್ ಆಫ್ ಅಶೋಕ’ ಸಿನೆಮಾದ ಬಾಕಿ ಉಳಿದಿರುವ ಚಿತ್ರೀಕರಣ ಮತ್ತೆ ಪ್ರಾರಂಭವಾಗಲಿದೆ. ಸತೀಶ್ ವೃತ್ತಿ ಜೀವನದ ಅತಿ ವಿಭಿನ್ನ ಚಿತ್ರ ಇದಾಗಿದ್ದು, ಕನ್ನಡದ ಜೊತೆಗೆ ಈ ಸಿನೆಮಾ ತಮಿಳು ಹಾಗೂ ತೆಲುಗಿನಲ್ಲಿ ಕೂಡ ಅದ್ಧೂರಿಯಾಗಿ ತಯಾರಾಗುತ್ತಿದೆ. ‘ವೃದ್ಧಿ ಕ್ರಿಯೇಷನ್’ ಹಾಗೂ ‘ಸತೀಶ್ ಪಿಕ್ಚರ್ಸ್ ಹೌಸ್’ ಬ್ಯಾನರ್ ನಡಿ ವರ್ಧನ್ ನರಹರಿ, ಜೈಷ್ಣವಿ, ನೀನಾಸಂ ಸತೀಶ್ ಜಂಟಿಯಾಗಿ ‘ರೈಸ್ ಆಫ್ ಅಶೋಕ’ ಸಿನೆಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ‘ರೈಸ್ ಆಫ್ ಅಶೋಕ’ ಸಿನೆಮಾದಲ್ಲಿ ನೀನಾಸಂ ಸತೀಶ್ ನಾಯಕನಾಗಿ ಅಭಿನಯಿಸುತ್ತಿದ್ದು, ಉಳಿದಂತೆ ಬಿ. ಸುರೇಶ್, ಅಚ್ಯುತ್ ಕುಮಾರ್, ಗೋಪಾಲ ಕೃಷ್ಣ ದೇಶಪಾಂಡೆ, ಸಂಪತ್ ಮೈತ್ರೀಯಾ, ಯಶ್ ಶೆಟ್ಟಿ ಮೊದಲಾದ ಕಲಾವಿದರು ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ.
ವರ್ಷದ ಕೊನೆಗೆ ತೆರೆಗೆ ಬರುವ ಸಾಧ್ಯತೆ
‘ದಿ ರೈಸ್ ಆಫ್ ಅಶೋಕ’ನಿಗೆ ಲವಿತ್ ಕ್ಯಾಮೆರಾ ಹಿಡಿಯುತ್ತಿದ್ದು, ವರದರಾಜ್ ಕಾಮತ್ ಕಲಾ ನಿರ್ದೇಶನವಿದೆ. ‘ರೈಸ್ ಆಫ್ ಅಶೋಕ’ ಸಿನೆಮಾದ ಹಾಡುಗಳಿಗೆ ಪೂರ್ಣಚಂದ್ರ ತೇಜಸ್ವಿ ಎಸ್. ವಿ ಸಂಗೀತ ಸಂಯೋಜಿಸುತ್ತಿದ್ದಾರೆ. ಚಿತ್ರಕ್ಕೆ ಡಾ. ರವಿವರ್ಮಾ ಮತ್ತು ವಿಕ್ರಮ್ ಮೋರ್ ಸಾಹಸ ನಿರ್ದೇಶನ, ಸಂತೋಷ್ ಶೇಖರ್ ನೃತ್ಯ ನಿರ್ದೇಶನವಿದೆ. ‘ರೈಸ್ ಆಫ್ ಅಶೋಕ’ ಸಿನೆಮಾಕ್ಕೆ ನಿರ್ದೇಶನದ ಜೊತೆಗೆ ಮನು ಶೆಡ್ಗಾರ್ ಸಂಕಲನದ ಜವಾಬ್ದಾರಿ ಕೂಡ ಹೊತ್ತುಕೊಂಡಿದ್ದಾರೆ. ಚಿತ್ರತಂಡದ ಯೋಜನೆಯಂತೆ ನಡೆದರೆ, ಈ ವರ್ಷದ ಕೊನೆಗೆ ‘ರೈಸ್ ಆಫ್ ಅಶೋಕ’ ಸಿನೆಮಾ ತೆರೆಗೆ ಬರುವ ಸಾಧ್ಯತೆಯಿದೆ.