ಮತ್ತೆ ಡೈರೆಕ್ಟರ್ ಕ್ಯಾಪ್ ತೊಟ್ಟ ಹೀರೋ ಅನೀಶ್

ಕಮರ್ಷಿಯಲ್ ಜೊತೆಗೆ ಕಂಟೆಂಟ್ ಆಟ
‘ಆರಾಮ್ ಅರವಿಂದ ಸ್ವಾಮಿ’ ನಂತರ ಮತ್ತೆ ಅಖಾಡಕ್ಕಿಳಿದ ಅನೀಶ್ ತೇಜೇಶ್ವರ್
2025ಕ್ಕೆ ಅನೀಶ್ ಕೊಡಲಿದ್ದಾರೆ ಅಚ್ಚರಿ ಉಡುಗೊರೆ
2024ರಲ್ಲಿ ತೆರೆಗೆ ಬಂದು ಒಂದಷ್ಟು ಸುದ್ದಿ ಮಾಡಿದ ಸಿನೆಮಾಗಳ ಸಾಲಿನಲ್ಲಿ ‘ಆರಾಮ್ ಅರವಿಂದ ಸ್ವಾಮಿ’ ಸಿನೆಮಾ ಕೂಡ ಒಂದು. ಸಿನಿಪ್ರಿಯರಿಂದ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡ ಈ ಚಿತ್ರದ ಬಳಿಕ ಇದರ ನಾಯಕ ನಟ ನಿರ್ದೇಶಕ ಅನೀಶ್ ತೇಜೇಶ್ವರ್ ಈ ವರ್ಷ ಮತ್ತೊಂದು ಹೊಸ ಚಿತ್ರಕ್ಕೆ ಸದ್ದಿಲ್ಲದೆ ತಯಾರಿ ನಡೆಸಿದ್ದಾರೆ. ಹೌದು, ಈ ವರ್ಷ ಅನೀಶ್ ಮತ್ತೊಮ್ಮೆ ನಿರ್ದೇಶನದ ಜೊತೆಗೆ ಮತ್ತೊಂದು ಚಿತ್ರದಲ್ಲಿ ಹೀರೋ ಆಗಿ ನಟಿಸುತ್ತಿದ್ದಾರೆ. ಈಗಿನ ಟ್ರೆಂಡಿಗೆ ತಕ್ಕಂತ ಈ ಸಿನೆಮಾದಲ್ಲಿ ಪಕ್ಕಾ ಮಾಸ್ ಕಮರ್ಷಿಯಲ್ ಪ್ರಯೋಗವನ್ನ ತೆರೆಮೇಲೆ ಮಾಡೋದಕ್ಕೆ ಮುಂದಾಗಿದ್ದಾರೆ. ‘ರಾಮಾರ್ಜುನ’ ಚಿತ್ರದ ನಂತರ ಮತ್ತೆ ಆ್ಯಕ್ಷನ್-ಕಟ್ ಹೇಳ್ತೀರೋ ಅನೀಶ್ ಗೆ ‘ಭಾವಪ್ರೀತ ಪ್ರೊಡಕ್ಷನ್ಸ್ ಪ್ರೈವೇಟ್ ಲಿಮಿಟೆಡ್’ ಸಾಥ್ ಕೊಡ್ತಿದೆ. ‘ಭಾವಪ್ರೀತ ಪ್ರೊಡಕ್ಷನ್ಸ್’ ನ ವಿಜಯ್ ಎಂ. ರೆಡ್ಡಿ ಅನೀಶ್ ವಿಷನ್ ಗೆ ಬಂಡವಾಳ ಹೂಡ್ತಿದ್ದಾರೆ. ಅನೀಶ್ ಚಿತ್ರದೊಂದಿಗೆ ಉದ್ಯಮಕ್ಕೆ ಕಾಲಿಡ್ತಿರೋ ವಿಜಯ್ ಎಂ. ರೆಡ್ಡಿ ಉದ್ಯಮದಲ್ಲಿ ದೊಡ್ಡದಾಗಿ ನೆಲೆ ನಿಲ್ಲೋದಕ್ಕೆ ಸಜ್ಜಾಗಿದ್ದಾರೆ.
ಸೋಶಿಯಲ್ ಮೀಡಿಯಾ ಪೋಸ್ಟ್‌ನಲ್ಲಿ ಸುದ್ದಿ ಹಂಚಿಕೊಂಡ ಅನೀಶ್
ಈ ಕುರಿತು ಇತ್ತೀಚೆಗೆ ಅನೀಶ್ ತಮ್ಮ ಸೋಷಿಯಲ್ ಮಿಡಿಯಾ ಪೇಜ್ ಮೂಲಕ ಪೋಸ್ಟ್ ಹಂಚಿಕೊಂಡಿದ್ದಾರೆ. ”ಆರಾಮ್ ಅರವಿಂದಸ್ವಾಮಿ’ ಅಭೂತಪೂರ್ವ ಯಶಸ್ಸಿನ ನಂತರ, ನನ್ನ ಮುಂದಿನ ಹೆಜ್ಜೆಯನ್ನು ಘೋಷಿಸಲು ನನಗೆ ತುಂಬಾ ಸಂತೋಷವಾಗಿದೆ, ಇದನ್ನು ‘ಭಾವಪ್ರೀತ ಪ್ರೊಡಕ್ಷನ್ಸ್ ಪ್ರೈವೇಟ್ ಲಿಮಿಟೆಡ್’ ಮೂಲಕ ವಿಜಯ್ ಎಂ. ರೆಡ್ಡಿ ನಿರ್ಮಿಸಲಿದ್ದಾರೆ. ‘ರಾಮಾರ್ಜುನ’ದ ನಂತರ ನಾನು ಮತ್ತೆ ನಿರ್ದೇಶಿಸುತ್ತಿದ್ದು ಮತ್ತು ಈ ಬಾರಿ ಇನ್ನೂ ದೊಡ್ಡದಾಗಿ ಮತ್ತು ಉತ್ತಮವಾಗಿರಲಿದೆ! ನಿಮ್ಮ ನಿರೀಕ್ಷೆಗಳನ್ನು ತಲುಪಲು ನಮ್ಮ ತಂಡವು ಶ್ರಮಿಸುತ್ತಿದೆ. ನೀವು ನನ್ನನ್ನು ಮತ್ತೊಂದು ಭರವಸೆಯ ಮತ್ತು ವಿಶಿಷ್ಟ ಪಾತ್ರದಲ್ಲಿ ನೋಡುತ್ತೀರಿ ಎಂದು ಭಾವಿಸುತ್ತಾ. ಹೆಚ್ಚಿನ ಪ್ರೇಕ್ಷಕರನ್ನು ತಲುಪಲು ನಾವು ಏಕಕಾಲದಲ್ಲಿ ಕನ್ನಡ ಮತ್ತು ತೆಲುಗಿನಲ್ಲಿ ಚಿತ್ರೀಕರಣ ಮಾಡುತ್ತಿದ್ದೇವೆ. ಶೀರ್ಷಿಕೆ, ತಾರಾಗಣ ಮತ್ತು ಇನ್ನಿತರೆ ವಿವರಗಳಿಗಾಗಿ ನಿರೀಕ್ಷಿಸಿ! ಚಿತ್ರೀಕರಣ ಪ್ರಾರಂಭವಾಗಿದೆ, ಮತ್ತು ಶೀಘ್ರದಲ್ಲೇ ಹೆಚ್ಚಿನ ವಿವರಗಳು ಬರಲಿವೆ’ ಎಂದು ಹೇಳಿಕೊಂಡಿದ್ದಾರೆ.