Street Beat

‘666 ಆಪರೇಷನ್ ಡ್ರೀಮ್ ಥಿಯೇಟರ್’ಗಾಗಿ ಕಂಠೀರವ ಸ್ಟುಡಿಯೋದಲ್ಲಿ ಬೃಹತ್ ಸೆಟ್

‘666 ಆಪರೇಷನ್ ಡ್ರೀಮ್ ಥಿಯೇಟರ್’ ಚಿತ್ರತಂಡದಿಂದ ಹೊಸ ಅಪ್ಡೇಟ್!

ಭರದಿಂದ ಸಾಗಿದ ಶಿವಣ್ಣ-ಧನಂಜಯ್ ಕಾಂಬಿನೇಶನ್‌ನ ಹೊಸಚಿತ್ರದ ಚಿತ್ರೀಕರಣ…

ಅದ್ಧೂರಿ ಸೆಟ್‌ನಲ್ಲಿ ‘666 ಆಪರೇಷನ್ ಡ್ರೀಮ್ ಥಿಯೇಟರ್’ ಶೂಟಿಂಗ್‌

‘ಟಗರು’ ಸಿನೆಮಾದ ಸೂಪರ್‌ ಹಿಟ್‌ ಸಕ್ಸಸ್‌ ಬಳಿಕ ನಟರಾದ ಶಿವರಾಜಕುಮಾರ್‌ ಮತ್ತು ಡಾಲಿ ಧನಂಜಯ್‌ ಮತ್ತೊಮ್ಮೆ ‘666 ಆಪರೇಷನ್ ಡ್ರೀಮ್ ಥಿಯೇಟರ್’ ಎಂಬ ಚಿತ್ರದಲ್ಲಿ ಒಟ್ಟಾಗಿ ಅಭಿನಯಿಸುತ್ತಿರುವ ವಿಷಯ ನಿಮಗೆ ಗೊತ್ತಿರಬಹುದು. ಕೆಲ ತಿಂಗಳ ಹಿಂದಷ್ಟೇ ಸೆಟ್ಟೇರಿದ್ದ ಈ ಚಿತ್ರದ ಚಿತ್ರೀಕರಣ ಇದೀಗ ಭರದಿಂದ ನಡೆಯುತ್ತಿದೆ. ‘ಗೋಧಿ ಬಣ್ಣ ಸಾಧಾರಣ ಮೈಕಟ್ಟು’ ಖ್ಯಾತಿಯ ಹೇಮಂತ್ ರಾವ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಈ ಚಿತ್ರ ರೆಟ್ರೋ ಶೈಲಿಯಲ್ಲಿ ಮೂಡಿಬರುತ್ತಿದ್ದು, ಸಹಜವಾಗಿಯೇ ಈ ಚಿತ್ರದ ಮೇಲೆ  ಒಂದಷ್ಟು  ನಿರೀಕ್ಷೆ ಗರಿಗೆದರಿದೆ.

ಮೊದಲ ಹಂತದ ಚಿತ್ರೀಕರಣ ಸಂಪೂರ್ಣ

ಈಗಾಗಲೇ ‘666 ಆಪರೇಷನ್‌ ಡ್ರೀಮ್‌ ಥಿಯೇಟರ್‌’ ಚಿತ್ರದ ಮೊದಲ ಹಂತದ ಚಿತ್ರೀಕರಣ ಸಂಪೂರ್ಣವಾಗಿದ್ದು, ಇದೀಗ ಚಿತ್ರತಂಡ ಎರಡನೇ ಹಂತದ ಚಿತ್ರೀಕರಣಕ್ಕೆ ತಯಾರಿ ಮಾಡಿಕೊಂಡಿದೆ. ಇನ್ನು ಈ ಸಿನೆಮಾದಲ್ಲಿ ನಟರಾದ ಶಿವರಾಜಕುಮಾರ್‌ ಮತ್ತು ಧನಂಜಯ್‌ ಇಬ್ಬರೂ ರೆಟ್ರೋ ಲುಕ್‌ ಇರುವಂಥ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದು, ಇಬ್ಬರೂ ನಟರ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿದೆ. ಈ ಲುಕ್ ನೋಡುತ್ತಿದ್ದರೆ ಡಾ. ರಾಜಕುಮಾರ್ ಅವರ ಸ್ಪೈ ಸಿನೆಮಾಗಳು ನೆನಪಾಗುವಂತಿದೆ ಎನ್ನುತ್ತಿದ್ದಾರೆ ಅಭಿಮಾನಿಗಳು.

ಬೃಹತ್‌ ಸೆಟ್‌ನಲ್ಲಿ ಬರೋಬ್ಬರಿ 100 ದಿನ ಶೂಟಿಂಗ್‌..!

ಸದ್ಯ ಇದೇ ಸೆಪ್ಟೆಂಬರ್‌ ತಿಂಗಳಲ್ಲಿ ‘666 ಆಪರೇಷನ್‌ ಡ್ರೀಮ್‌ ಥಿಯೇಟರ್‌’ ಚಿತ್ರದ ಎರಡನೇ ಹಂತದ ಚಿತ್ರೀಕರಣ ಆರಂಭಿಸಲು ಚಿತ್ರತಂಡ ಸಜ್ಜಾಗಿದೆ. ಅದಕ್ಕಾಗಿ ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಅದ್ಧೂರಿ ಸೆಟ್ ಹಾಕಲಾಗಿದೆ. ಕಂಠೀರವ ಸ್ಟುಡಿಯೋದಲ್ಲಿ ಹಾಕಲಾಗಿರುವ ಬೃಹತ್ ಆಕಾರದ ಸೆಟ್ ನಲ್ಲಿ‌ ಬರೋಬ್ಬರಿ 100 ದಿನಗಳ ಕಾಲ ಶೂಟಿಂಗ್ ನಡೆಸಲಾಗುವುದು ಎಂಬ ಮಾಹಿತಿ ನೀಡಿದೆ ಚಿತ್ರತಂಡ.

ಇನ್ನು ‘666 ಆಪರೇಷನ್‌ ಡ್ರೀಮ್‌ ಥಿಯೇಟರ್‌’ ಸಿನೆಮಾದ ಸೆಟ್‌ ಬಗ್ಗೆ ಮಾತನಾಡಿರುವ ಚಿತ್ರದ ನಿರ್ಮಾಪಕ ಡಾ. ವೈಶಾಕ್ ಜೆ ಗೌಡ, ‘ನಮ್ಮ ‘666 ಆಪರೇಷನ್ ಡ್ರೀಮ್ ಥಿಯೇಟರ್’ ಬಗ್ಗೆ ಎಲ್ಲವನ್ನೂ ಹೇಮಂತ್ ಎಂ. ರಾವ್ ಮತ್ತು ಅವರ ತಂಡ ಎಚ್ಚರಿಕೆಯಿಂದ ನೋಡಿಕೊಳ್ಳುತ್ತಿದೆ. ನಾವು ಇಂದಿನ ಪೀಳಿಗೆಯನ್ನು ಬೆರಗುಗೊಳಿಸುವ ಮತ್ತು ಹಿಂದಿನ ಪೀಳಿಗೆಯನ್ನು ನೆನಪಿನ ಹಾದಿಯಲ್ಲಿ ಕರೆದೊಯ್ಯುವ ಜಗತ್ತನ್ನು ರಚಿಸಲು ಪ್ರಯತ್ನಿಸುತ್ತಿದ್ದೇವೆ. ಯಾವ ಸೆಟ್‌ಗಳನ್ನು ನಿರ್ಮಿಸಲಾಗುತ್ತಿದೆ ಎಂಬುದನ್ನು ನಾನು ಬಹಿರಂಗಪಡಿಸಲು ಸಾಧ್ಯವಾಗುವುದಿಲ್ಲ. ಪ್ರೇಕ್ಷಕರು ದೊಡ್ಡ ಪರದೆಯ ಮೇಲೆ ಅನುಭವಿಸಬಹುದಾದ ವಿಷಯ ಅದು. ದೊಡ್ಡ ಪ್ರಮಾಣದಲ್ಲಿ ಚಿತ್ರವನ್ನು ಕಟ್ಟಿಕೊಡಲಾಗುತ್ತಿದೆ. ಈ ಕುರಿತ ಮತ್ತಷ್ಟು ಅಪ್ ಡೇಟ್ ಶೀಘ್ರದಲ್ಲೇ ನೀಡುತ್ತೇವೆ’ ಎಂದು ಹೇಳಿದ್ದಾರೆ.

ಮುಂದಿನ ವರ್ಷ ‘666 ಆಪರೇಷನ್ ಡ್ರೀಮ್ ಥಿಯೇಟರ್’ ಚಿತ್ರ ತೆರೆಗೆ..?

ಧನಂಜಯ್ ಹಾಗೂ ಶಿವರಾಜ್ ಕುಮಾರ್ ಅವರು ‘666 ಆಪರೇಷನ್ ಡ್ರೀಮ್ ಥಿಯೇಟರ್’ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದು, ನಿರ್ಮಾಪಕ ವೈಶಾಕ್ ಜೆ. ಗೌಡ ಅವರ ‘ವೈಶಾಕ್ ಜೆ. ಫಿಲ್ಮ್ಸ್’ ಬ್ಯಾನರ್ ಅಡಿಯಲ್ಲಿ ಈ ಸಿನೆಮಾ ನಿರ್ಮಿಸಲಾಗುತ್ತಿದೆ. ‘666 ಆಪರೇಷನ್‌ ಡ್ರೀಮ್‌ ಥಿಯೇಟರ್‌’ ಚಿತ್ರದ ಹಾಡುಗಳಿಗೆ ಚರಣ್ ರಾಜ್ ಸಂಗೀತ ಸಂಯೋಜಿಸುತ್ತಿದ್ದು, ಚಿತ್ರಕ್ಕೆ ಅದ್ವೈತ ಗುರುಮೂರ್ತಿ ಛಾಯಾಗ್ರಹಣ ಮತ್ತು ವಿಶ್ವಾಸ್ ಕಶ್ಯಪ್ ಕಲಾ ನಿರ್ದೇಶನವಿದೆ. ಚಿತ್ರತಂಡದ ಯೋಜನೆಯಂತೆ ಎಲ್ಲವೂ ನಡೆದರೆ, 2026ರ ಅಂತ್ಯಕ್ಕೆ ‘666 ಆಪರೇಷನ್ ಡ್ರೀಮ್ ಥಿಯೇಟರ್’ ಚಿತ್ರ ತೆರೆಗೆ ಬರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

Related Posts

error: Content is protected !!