Video

‘ಲವ್ ಯು ಮುದ್ದು’ ಸಿನೆಮಾದ ಟೈಟಲ್ ಟ್ರ್ಯಾಕ್ ರಿಲೀಸ್

‘ಲವ್ ಯು ಮುದ್ದು’ ಚಿತ್ರದ ಮೊದಲ ಪ್ರೇಮಗೀತೆ ಬಿಡುಗಡೆ

‘ಕೆಮಿಸ್ಟ್ರಿ ಆಫ್‌ ಕರಿಯಪ್ಪ’ ನಿರ್ದೇಶಕರ ಹೊಸ ಪ್ರೇಮಕಥೆ ‘ಲವ್ ಯು ಮುದ್ದು’ ಚಿತ್ರದಲ್ಲಿ ಅನಾವರಣ

‘ಲವ್ ಯು ಮುದ್ದು’ ಹಾಡಿನಲ್ಲಿ ಸಿದ್ದು-ರೇಷ್ಮಾ ಬಿಂದಾಸ್‌ ಸ್ಟೆಪ್ಸ್‌

ಕನ್ನಡ ಚಿತ್ರರಂಗದಲ್ಲಿ ‘ಕ್ರಿಟಿಕಲ್‌ ಕೀರ್ತನೆಗಳು’, ‘ನ್ಯಾನೋ ನಾರಾಯಣಪ್ಪ’, ‘ಕೆಮಿಸ್ಟ್ರಿ ಆಫ್ ಕರಿಯಪ್ಪ’ ಮೊದಲಾದ ಚಿತ್ರಗಳನ್ನು ನಿರ್ದೇಶಿಸಿ ಗಮನ ಸೆಳೆದಿರುವ ನಿರ್ದೇಶಕ ಕುಮಾರ್ ಈ ಬಾರಿ ‘ಲವ್ ಯು ಮುದ್ದು’ ಎಂಬ ಹೊಸ ಪ್ರೇಮಕಥೆಯನ್ನು ಪ್ರೇಕ್ಷಕರ ಮುಂದೆ ತರುವ ತಯಾರಿಯಲ್ಲಿದ್ದಾರೆ. ಕೆಲ ತಿಂಗಳ ಹಿಂದಷ್ಟೇ ‘ಲವ್ ಯು ಮುದ್ದು’ ಸಿನೆಮಾದ ಟೈಟಲ್ ಪೋಸ್ಟರ್‌ ಬಿಡುಗಡೆ ಮಾಡಿ ಸಿನಿಪ್ರಿಯರ ಗಮನ ಸೆಳೆದಿದ್ದ ಚಿತ್ರತಂಡ, ಇದೀಗ ‘ಲವ್ ಯು ಮುದ್ದು’ ಚಿತ್ರದ ಮೊದಲ ಟೈಟಲ್ ಟ್ರ್ಯಾಕ್ ಲಿರಿಕಲ್‌ ವಿಡಿಯೋವನ್ನು ಬಿಡುಗಡೆ ಮಾಡಿದೆ.

ಹೇಗಿದೆ ‘ಲವ್ ಯು ಮುದ್ದು’ ಟೈಟಲ್‌ ಸಾಂಗ್‌..? 

‘ಎಂ.ಟಿ.ಆರ್ ಮ್ಯೂಸಿಕ್’ ಯೂ-ಟ್ಯೂಬ್ ಚಾನೆಲ್‌ನಲ್ಲಿ ‘ಲವ್ ಯು ಮುದ್ದು’ ಚಿತ್ರದ ಮೊದಲ ಮೆಲೋಡಿ ಲವ್‌ ಟ್ರ್ಯಾಕ್‌ ಬಿಡುಗಡೆಯಾಗಿದ್ದು, ಅನಿರುದ್ಧ್ ಶಾಸ್ತ್ರೀ ಸಾಹಿತ್ಯ ಬರೆದು ಸಂಗೀತ ನೀಡಿರುವ ಈ ಹಾಡಿಗೆ ಸೋನು ನಿಗಮ್, ಐಶ್ವರ್ಯ ರಂಗರಾಜನ್ ಹಾಗೂ ಸುರಭಿ ಭಾರದ್ವಾಜ್ ಜಂಟಿಯಾಗಿ ಧ್ವನಿಯಾಗಿದ್ದಾರೆ. ಇನ್ನು ಈ ಹಾಡಿನಲ್ಲಿ ‘ಲವ್ ಯು ಮುದ್ದು’ ಅಂತಾ ನಾಯಕ ಸಿದ್ದು ಮೂಲಿಮನಿ ಮತ್ತು ನಾಯಕಿ ರೇಷ್ಮಾ ಬಿಂದಾಸ್‌ ಆಗಿ ಹೆಜ್ಜೆ ಹಾಕಿ ಮಿಂಚಿದ್ದಾರೆ.

‘ಲವ್ ಯು ಮುದ್ದು’ ಸಿನೆಮಾದ ಟೈಟಲ್‌ ಟ್ರ್ಯಾಕ್‌ ಲಿರಿಕಲ್‌ ವಿಡಿಯೋವನ್ನು ವೀಕ್ಷಿಸಲು ಈ ಕೆಳಗಿನ ಲಿಂಕ್‌ ಅನ್ನು ಕ್ಲಿಕ್‌ ಮಾಡಬಹುದು…

ನೈಜ ಘಟನೆಗೆ ಸಿನೆಮಾ ಟಚ್‌..!

ಇನ್ನು ‘ಲವ್ ಯು ಮುದ್ದು’ ಸಿನೆಮಾದಲ್ಲಿ ಕೆಲ ವರ್ಷಗಳ ಹಿಂದೆ ಮಹಾರಾಷ್ಟ್ರದಲ್ಲಿ ನಡೆದ ನೈಜ ಪ್ರೇಮಕಥೆಯೊಂದನ್ನು ತೆರೆಮೇಲೆ ತರಲಾಗುತ್ತಿದೆಯಂತೆ. ಈಗಾಗಲೇ ಕಿರುತೆರೆ ಮತ್ತು ಹಿರಿತೆರೆ ಎರಡರಲ್ಲೂ ಗುರುತಿಸಿಕೊಂಡಿರುವ ನಟ ಸಿದ್ದು ಮೂಲಿಮನಿ ಈ ಸಿನೆಮಾದಲ್ಲಿ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಯುವನಟ ಸಿದ್ದು ಮೂಲಿಮನಿ ಅವರಿಗೆ ಯುವನಟಿ ರೇಷ್ಮಾ ನಾಯಕಿಯಾಗಿ ಜೋಡಿಯಾಗಿದ್ದಾರೆ. ಇನ್ನುಳಿದಂತೆ ರಾಜೇಶ್ ನಟರಂಗ, ತಬಲಾ ನಾಣಿ, ಗಿರೀಶ್ ಶಿವಣ್ಣ, ಶ್ರೀವತ್ಸ, ಉಷಾ ಮೊದಲಾದ ಕಲಾವಿದರು ‘ಲವ್ ಯು ಮುದ್ದು’ ಚಿತ್ರದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ‘ಕಿಶನ್ ಎಂಟರ್‌ಟೈನ್ಮೆಂಟ್’ ಬ್ಯಾನರ್‌ನಡಿ ಕಿಶನ್ ಟಿ. ಎನ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಕಾರ್ಯಕಾರಿ ನಿರ್ಮಾಪಕರಾಗಿ ಲಕ್ಷ್ಮಿಕಾಂತ್ ಟಿ. ಎಸ್ ಜೊತೆಯಾಗಿ ನಿಂತಿದ್ದಾರೆ. ‘ಲವ್ ಯು ಮುದ್ದು’ ಸಿನೆಮಾಕ್ಕೆ ಕೃಷ್ಣ ದೀಪಕ್ ಛಾಯಾಗ್ರಹಣ, ಸಿ. ಎಸ್‌. ದೀಪು ಸಂಕಲನ ಕಾರ್ಯ ನಿರ್ವಹಿಸಿದ್ದಾರೆ. ಚಿತ್ರದ ಹಾಡುಗಳಿಗೆ ಅನಿರುದ್ಧ್ ಶಾಸ್ತ್ರೀ ಸಂಗೀತ ಸಂಯೋಜಿಸಿದ್ದಾರೆ.

ಶೀಘ್ರದಲ್ಲಿಯೇ ‘ಲವ್ ಯು ಮುದ್ದು’ ತೆರೆಗೆ 

ಸದ್ಯ ‘ಲವ್ ಯು ಮುದ್ದು’ ಸಿನೆಮಾದ ಚಿತ್ರೀಕರಣ ಮುಕ್ತಾಯಗೊಂಡಿದ್ದು, ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಭರದಿಂದ ನಡೆಯುತ್ತಿವೆ. ಕಾರ್ಕಳ, ಕುಮಟಾ, ಬೆಂಗಳೂರು ಸುತ್ತಮುತ್ತ ಸುಮಾರು 45 ದಿನಗಳ ಕಾಲ ‘ಲವ್ ಯು ಮುದ್ದು’ ಸಿನೆಮಾದ ಶೂಟಿಂಗ್ ನಡೆಸಲಾಗಿದೆ. ಇದೀಗ ನಿಧಾನವಾಗಿ ‘ಲವ್ ಯು ಮುದ್ದು’ ಸಿನೆಮಾದ ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಿರುವ ಚಿತ್ರತಂಡ, ಇದೇ ನವೆಂಬರ್‌ ವೇಳೆಗೆ ಚಿತ್ರವನ್ನು ಪ್ರೇಕ್ಷಕರ ಮುಂದೆ ತರುವ ಯೋಚನೆಯಲ್ಲಿದೆ. ಇಲ್ಲಿಯವರೆಗೆ ಕಮರ್ಷಿಯಲ್ ಜೊತೆಗೆ ಕಾಮಿಡಿ ಕಥೆಯನ್ನು ಪ್ರೇಕ್ಷಕರ ಮುಂದೆ ಹೇಳಿ ಗೆದ್ದಿದ್ದ ನಿರ್ದೇಶಕ ಕುಮಾರ್, ಇದೇ ಮೊದಲ ಬಾರಿಗೆ ಪ್ರೇಕ್ಷಕರ ಮುಂದೆ ಪ್ರೇಮಕಥೆಯೊಂದನ್ನು ಹೇಳೋದಿಕ್ಕೆ ಹೊರಟಿದ್ದು, ನಿರ್ದೇಶಕ ಕುಮಾರ್‌ ಹೊಸ ಲವ್‌ ಸ್ಟೋರಿ ಪ್ರೇಕ್ಷಕರಿಗೆ ಎಷ್ಟರ ಮಟ್ಟಿಗೆ ಇಷ್ಟವಾಗಲಿದೆ ಎಂಬುದು ‘ಲವ್ ಯು ಮುದ್ದು’ ಸಿನೆಮಾ ತೆರೆಗೆ ಬಂದ ಮೇಲಷ್ಟೇ ಗೊತ್ತಾಗಲಿದೆ.

Related Posts

error: Content is protected !!