ನಟರಾದ ವಿಷ್ಣು, ಉಪ್ಪಿ, ಶ್ರುತಿ ಜನ್ಮದಿನ; ಅಭಿಮಾನಿಗಳು ಮತ್ತು ಗಣ್ಯರ ಶುಭ ಹಾರೈಕೆ
ಚಿತ್ರರಂಗದ ಹಿರಿಯ ಕಲಾವಿದರಿಗೆ ಅಭಿಮಾನಿಗಳ ಶುಭ ಹಾರೈಕೆ
ನೆಚ್ಚಿನ ನಟರ ಜನ್ಮದಿನ ಆಚರಿಸಿ, ಸಾಮಾಜಿಕ ಕಾರ್ಯ ಕೈಗೊಂಡ ಫ್ಯಾನ್ಸ್
ಸೋಶಿಯಲ್ ಮೀಡಿಯಾಗಳಲ್ಲಿ ಶುಭ ಹಾರೈಸಿದ ಗಣ್ಯರು
ಬೆಂಗಳೂರು, 18 ಸೆಪ್ಟೆಂಬರ್; ಕನ್ನಡ ಚಿತ್ರರಂಗದ ಮೂವರು ದಿಗ್ಗಜ ಕಲಾವಿದರಾದ ಸಾಹಸಸಿಂಹ ವಿಷ್ಣುವರ್ಧನ್, ನಟ ಕಂ ನಿರ್ದೇಶಕ ರಿಯಲ್ ಸ್ಟಾರ್ ಉಪೇಂದ್ರ ಮತ್ತು ನಟಿ ಶ್ರುತಿ ಅವರಿಗೆ ಇಂದು (18 ಸೆಪ್ಟೆಂಬರ್ 2025) ಹುಟ್ಟುಹಬ್ಬ. ಸಾಹಸಸಿಂಹ ವಿಷ್ಣುವರ್ಧನ್ ಅವರಿಗೆ ಸಿಕ್ಕ ಮರಣೋತ್ತರ ʼಕರ್ನಾಟಕ ರತ್ನʼ ಪ್ರಶಸ್ತಿ, ಉಪೇಂದ್ರ ಅವರ ಹೊಸ ಚಿತ್ರಗಳ ಘೋಷಣೆ ಈ ಹುಟ್ಟುಹಬ್ಬವನ್ನು ವಿಶೇಷವಾಗಿಸಿದೆ. ಅಭಿಮಾನಿಗಳು ತಮ್ಮ ನೆಚ್ಚಿನ ನಟರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಶುಭಾಶಯಗಳನ್ನು ಕೋರುತ್ತಿದ್ದಾರೆ.
ಬೆಳಿಗ್ಗೆಯಿಂದಲೇ ಬೆಂಗಳೂರಿನಲ್ಲಿರುವ ವಿಷ್ಣುವರ್ಧನ್ ಅವರ ಮನೆ, ಅಭಿಮಾನ್ ಸ್ಟುಡಿಯೋ ಮತ್ತು ಮೈಸೂರಿನಲ್ಲಿ ನಿರ್ಮಾಣವಾಗಿರುವ ವಿಷ್ಣುವರ್ಧನ್ ಅವರ ಸ್ಮಾರಕ್ಕೆ ಭೇಟಿ ನೀಡುತ್ತಿರುವ ವಿಷ್ಣುವರ್ಧನ್ ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಹೆಸರಿನಲ್ಲಿ ಹಲವು ಸಾಮಾಜಿಕ ಕಾರ್ಯಗಳನ್ನು ಹಮ್ಮಿಕೊಂಡಿದ್ದಾರೆ.
ಇನ್ನು ನಟ ಕಂ ನಿರ್ದೇಶಕ ಉಪೇಂದ್ರ ಅವರ ಹುಟ್ಟುಹಬ್ಬದ ಪ್ರಯುಕ್ತ ಬೆಳಿಗ್ಗೆಯಿಂದಲೇ ಅವರ ಮನೆ ಮುಂದೆ ಅಭಿಮಾನಿಗಳು ಜಮಾಯಿಸಿದ್ದರು. ತಮ್ಮ ನೆಚ್ಚಿನ ನಟನನ್ನು ಕಂಡು ಜನ್ಮದಿನದ ಶುಭಾಶಯ ಕೋರುತ್ತಿದ್ದಾರೆ. ಇನ್ನು ಹಿರಿಯ ನಟಿ ಶ್ರುತಿ ಅವರಿಗೂ ಅವರ ಅಭಿಮಾನಿಗಳು ಮತ್ತು ಚಿತ್ರರಂಗದ ಅನೇಕ ಗಣ್ಯರು ಜನ್ಮದಿನದ ಶುಭಾಶಯ ಕೋರಿದ್ದಾರೆ.















