‘ಮಾರ್ಕ್’ ಮೇಲೆ ಕಿಚ್ಚನಿಗೆ ಹೆಚ್ಚಿನ ನಿರೀಕ್ಷೆ..!
‘ಮಾರ್ಕ್’ ಟ್ರೇಲರ್ ರಿಲೀಸ್ ನಲ್ಲಿ ಚಿತ್ರದ ಬಗ್ಗೆ ಮಾತನಾಡಿದ ಕಿಚ್ಚ ಸುದೀಪ್
ಆಕ್ಷನ್ ಪ್ಯಾಕ್ಡ್ ‘ಮಾರ್ಕ್’ ಟ್ರೇಲರ್ನಲ್ಲಿ ಖಡಕ್ ಖಾಕಿ ಖದರ್ ತೋರಿಸಿದ ಕಿಚ್ಚ
‘ಮಾರ್ಕ್’ ಮನಸೂರೆಗೊಳ್ಳಲಿರುವ ಭರವಸೆ ನೀಡಿದ ಸುದೀಪ್
ಕನ್ನಡ ಚಿತ್ರರಂಗದ ‘ಅಭಿನಯ ಚಕ್ರವರ್ತಿ’ ಖ್ಯಾತಿಯ ಕಿಚ್ಚ ಸುದೀಪ್ ಅಭಿನಯಿಸಿರುವ ಬಹು ನಿರೀಕ್ಷಿತ ‘ಮಾರ್ಕ್’ ಸಿನೆಮಾ ಟ್ರೇಲರ್ ರಿಲೀಸ್ ಆಗಿದೆ. ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ನಡೆದ ‘ಮಾರ್ಕ್’ ಸಿನೆಮಾದ ಟ್ರೇಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ನಾಯಕ ನಟ ಕಿಚ್ಚ ಸುದೀಪ್ ಸೇರಿದಂತೆ ಇಡೀ ‘ಮಾರ್ಕ್’ ಚಿತ್ರತಂಡ ಹಾಜರಾಗಿತ್ತು. 
‘ಮಾರ್ಕ್’ ಸಿನೆಮಾ ಈ ವರ್ಷದ ಕೊನೆಗೆ ಅದ್ಧೂರಿಯಾಗಿ ತೆರೆಗೆ ಬರುತ್ತಿದೆ. ‘ಮಾರ್ಕ್’ ಸಿನೆಮಾದ ಮೇಲೆ ನಟ ಕಿಚ್ಚ ಸುದೀಪ್ ಅವರಿಗೂ ಸಾಕಷ್ಟು ನಿರೀಕ್ಷೆಯಿದೆ. ‘ಮಾರ್ಕ್’ ಟ್ರೇಲರ್ ಬಿಡುಗಡೆ ಬಳಿಕ ಸಿನೆಮಾದ ಬಗ್ಗೆ ಮಾತನಾಡಿದ ನಟ ಸುದೀಪ್, ‘ನಿರ್ದೇಶಕ ವಿಜಯ್ ಹಾಗೂ ಚಂದ್ರು ಮಲಗಿಕೊಳ್ಳದೇ ಈ ಚಿತ್ರಕ್ಕೆ ಕೆಲಸ ಮಾಡಿದ್ದಾರೆ. ನನ್ನ ಮಾತಿಗೆ ಧೃಡವಾಗಿ ನಿಂತಿದ್ದು ನನ್ನ ಇಡೀ ತಂಡ. ಟೆಕ್ನಿಕಲ್ ಟೀಂ ಹಾಗೂ ಇಡೀ ಕಲಾವಿದರು. ಇಡೀ ಚಿತ್ರತಂಡದ ಅವಿರತ ಪ್ರಯತ್ನ ಮತ್ತು ಪರಿಶ್ರಮದಿಂದ ಇಂಥದ್ದೊಂದು ಸಿನೆಮಾ ಮಾಡೋದಕ್ಕೆ ಸಾಧ್ಯವಾಯಿತು’ ಎಂದರು.
ಒಳ್ಖೆಯ ಸಿನೆಮಾಗಳನ್ನು ಜನ ಖಂಡಿತಾ ನೋಡ್ತಾರೆ…
ಇನ್ನು ‘ಮಾರ್ಕ್’ ಸಿನೆಮಾ ಇದೇ ಡಿಸೆಂಬರ್ ಕೊನೆಗೆ ತೆರೆಗೆ ಬರುತ್ತಿದ್ದು, ಇದರ ಜೊತೆಗೆ ಒಂದಷ್ಟು ಬೇರೆ ಬೇರೆ ಸ್ಟಾರ್ಸ್ ಸಿನೆಮಾಗಳು ಕೂಡ ಅದೇ ಸಮಯಕ್ಕೆ ಬಿಡುಗಡೆಯಾಗುತ್ತಿವೆ. ತಮ್ಮ ಸಿನೆಮಾದ ಜೊತೆಗೆ ಡಿಸೆಂಬರ್ ನಲ್ಲಿ ಬರುತ್ತಿರುವ ಇತರ ಸೂಪರ್ ಸ್ಟಾರ್ಸ್ ಸಿನೆಮಾಗಳ ಬಿಡುಗಡೆಯ ಬಗ್ಗೆ ಉತ್ತರಿಸಿದ ಸುದೀಪ್,
‘ದೀಪಾವಳಿ ಬಂದರೆ ಕರ್ನಾಟಕದಲ್ಲಿ ಎಲ್ಲರ ಮನೆಯಲ್ಲಿಯೂ ಹಬ್ಬ. ಯಾವತ್ತು ತರಕಾರಿ, ಅಡುಗೆ ಕಮ್ಮಿಯಾಗಿಲ್ಲ. ಇನ್ನೂ ಸೀಟ್ ಗಳು ಹೇಗೆ ಕಡಿಮೆಯಾಗುತ್ತವೆ. ಜನ ಬರದೇ ಇರ್ತಾರಾ..? ಎಷ್ಟೇ ಸಿನೆಮಾಗಳು ಬಂದರೂ ಜನ ತಮಗೆ ಯಾವುದು ಇಷ್ಟವೋ ಆ ಸಿನೆಮಾಗಳನ್ನು ಖಂಡಿತಾ ನೋಡುತ್ತಾರೆ’ ಎಂದರು. ‘ಮಾರ್ಕ್’ ಚಿತ್ರದ ಶೂಟಿಂಗ್ ಜರ್ನಿ ಬಗ್ಗೆ ಮಾತನಾಡಿದ ಸುದೀಪ್, ‘ನಾಲ್ಕು ತಿಂಗಳು ಐದು ದಿನ ‘ಮಾರ್ಕ್’ ಸಿನೆಮಾದ ಶೂಟಿಂಗ್ ನಡೆಸಲಾಗಿದೆ. ಸುಮಾರು 80 ಲೋಕೇಷನ್ ಗಳಲ್ಲಿ ಈ ಸಿನೆಮಾದ ಶೂಟಿಂಗ್ ಮಾಡಿದ್ದೇವೆ. ‘ಮಾರ್ಕ್’ ಸಿನೆಮಾಕ್ಕಾಗಿ ಸುಮಾರು 15-20 ಸೆಟ್ ಹಾಕಿದ್ದೇವೆ. ಸಿನೆಮಾವನ್ನು ತೆರೆಮೇಲೆ ನೋಡಿದಾಗ ‘ಮಾರ್ಕ್’ ಸಿನೆಮಾಕ್ಕೆ ಚಿತ್ರತಂಡ ಹಾಕಿರುವ ಪರಿಶ್ರಮ ಎಂಥದ್ದು ಎಂಬುದು ಎಲ್ಲರಿಗೂ ಗೊತ್ತಾಗುತ್ತದೆ’ ಎಂದು ಮಾಹಿತಿ ನೀಡಿದರು.
ಡಿಸೆಂಬರ್ 25 ಕ್ಕೆ ಆಕ್ಷನ್ ಪ್ಯಾಕ್ಡ್ ‘ಮಾರ್ಕ್’
‘ಮಾರ್ಕ್’ ಸಿನೆಮಾಕ್ಕೆ ನಿರ್ದೇಶಕ ವಿಜಯ್ ಕಾರ್ತಿಕೇಯನ್ ಆಕ್ಷನ್-ಕಟ್ ಹೇಳಿದ್ದಾರೆ. ಮಾನವ ಕಳ್ಳ ಸಾಗಾಣಿಕೆ ಕಥೆ ಚಿತ್ರದಲ್ಲಿರೋದು ಟ್ರೇಲರ್ ನೋಡಿದರೆ ಅರ್ಥವಾಗುತ್ತಿದೆ. ಇದರ ಜೊತೆಗೆ ಪೊಲಿಟಿಕಲ್ ಅಂಶಗಳನ್ನು ಸೇರಿಸಿ ಟ್ರೇಲರ್ ಕಟ್ ಮಾಡಲಾಗಿದೆ. ಪೊಲೀಸ್ ‘ಅಜಯ್ ಮಾರ್ಕಂಡೇಯ’ ಅಲಿಯಾಸ್ ‘ಮಾರ್ಕ್’ ಆಗಿ ಕಿಚ್ಚ ಸುದೀಪ್ ಅಬ್ಬರಿಸಿದ್ದಾರೆ. ಉಳಿದಂತೆ ಯೋಗಿಬಾಬು, ನವೀನ್ ಚಂದ್ರ, ಗುರು ಸೋಮಸುಂದರಂ ಮತ್ತು ರೋಶಿನಿ ಪ್ರಕಾಶ್ ಮೊದಲಾದ ಕಲಾವಿದರ ಬೃಹತ್ ತಾರಾಗಣ ‘ಮಾರ್ಕ್’ ಚಿತ್ರದಲ್ಲಿದೆ.ಚಿತ್ರದ ಹಾಡುಗಳಿಗೆ ಅಜನೀಶ್ ಲೋಕನಾಥ್ ಸಂಗೀತ ಸಂಯೋಜಿಸಿದ್ದು, ಶೇಖರ್ ಚಂದ್ರ ಛಾಯಾಗ್ರಹಣವಿದೆ. ‘ಸತ್ಯಜ್ಯೋತಿ ಫಿಲ್ಮ್ಸ್’ ಬ್ಯಾನರ್ ಅಡಿಯಲ್ಲಿ ‘ಮಾರ್ಕ್’ ಸಿನೆಮಾ ನಿರ್ಮಾಣವಾಗಿದೆ. ಇನ್ನು ನಟ ಸುದೀಪ್ ಕೂಡ ‘ಮಾರ್ಕ್’ ಸಿನೆಮಾದ ನಿರ್ಮಾಣದಲ್ಲಿ ಕೈ ಜೋಡಿಸಿದ್ದಾರೆ. ಸದ್ಯ ಭರದಿಂದ ‘ಮಾರ್ಕ್’ ಸಿನೆಮಾದ ಪ್ರಚಾರ ಕಾರ್ಯಗಳು ನಡೆಯುತ್ತಿದ್ದು, ಇದೇ ಡಿಸೆಂಬರ್ 25 ಕ್ಕೆ ‘ಮಾರ್ಕ್’ ಸಿನೆಮಾ ಅದ್ಧೂರಿಯಾಗಿ ತೆರೆ ಕಾಣಲಿದೆ.















