Telewalk

ಕಿರುತೆರೆಯಲ್ಲಿ ‘ಭೀಮ’ನ ಬಲ ಪ್ರದರ್ಶನ..!

‘ಯುಗಾದಿ’ಗೆ ‘ಕಲರ್ಸ್ ಕನ್ನಡ’ದಲ್ಲಿ ‘ಭೀಮ’ನ ಬಿಡುಗಡೆ

‘ಕಲರ್ಸ್ ಕನ್ನಡ’ವಾಹಿನಿಯಲ್ಲಿ ‘ವರ್ಲ್ಡ್ ಟೆಲಿವಿಷನ್  ಪ್ರೀಮಿಯರ್’

ಮಾರ್ಚ್ 30, 2025 ಭಾನುವಾರ ರಾತ್ರಿ 7:30ಕ್ಕೆ ‘ಭೀಮ’ ಪ್ರೀಮಿಯರ್

2024ರಲ್ಲಿ ಬಿಡುಗಡೆಯಾಗಿ ಬಾಕ್ಸಾಫೀಸ್‌ನಲ್ಲಿ ಒಂದಷ್ಟು ಸೌಂಡ್‌ ಮಾಡಿದ್ದ ಕನ್ನಡದ ಆಕ್ಷನ್-ಥ್ರಿಲ್ಲರ್ ಚಿತ್ರ ‘ಭೀಮ’ ಮಾಸ್‌ ಆಡಿಯನ್ಸ್‌ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿತ್ತು. ಇದೀಗ ‘ಭೀಮ’ ಕಿರುತೆರೆಯಲ್ಲಿ ಪ್ರದರ್ಶನವಾಗಲು ಸಿದ್ಧವಾಗಿದೆ. ಹೌದು, ‘ಭೀಮ’ ಸಿನೆಮಾದ ಟಿವಿ ರೈಟ್ಸ್‌ ‘ಕಲರ್ಸ್ ಕನ್ನಡ’ ವಾಹಿನಿಯ ತೆಕ್ಕೆಯಲ್ಲಿದ್ದು, ಇದೀಗ ‘ಭೀಮ’ ಇದೇ 2025ರ ಮಾರ್ಚ್ 30, ಭಾನುವಾರದಂದು ‘ಯುಗಾದಿ ಹಬ್ಬ’ದ ವಿಶೇಷವಾಗಿ ರಾತ್ರಿ 7.30ಕ್ಕೆ ಪ್ರಸಾರವಾಗಲಿದೆ.

ದುನಿಯಾ ವಿಜಯ್ ನಟಿಸಿ, ನಿರ್ದೇಶಿಸಿರುವ ‘ಭೀಮ’ ಚಿತ್ರದ ‘ವರ್ಲ್ಡ್ ಟೆಲಿವಿಷನ್  ಪ್ರೀಮಿಯರ್’ ಆಗಲಿದ್ದು, ‘ಯುಗಾದಿ’ ಹಬ್ಬದ ವಿಶೇಷವಾಗಿ ‘ಭೀಮ’ ಕಿರುತೆರೆಯಲ್ಲೂ ಜನಮನ ರಂಜಿಸಲಿದ್ದಾನೆ. ‘ಭೀಮ’ ಚಿತ್ರವನ್ನು ವಿಜಯ್‌ ನಿರ್ದೇಶಿಸಿರುವುದರ ಜೊತೆಗೆ ನಾಯಕನಾಗಿಯೂ ನಟಿಸಿದ್ದಾರೆ. ಉಳಿದಂತೆ ಪ್ರಿಯಾ ಶಟಮರ್ಷನ, ಅಶ್ವಿನಿ, ಕಲ್ಯಾಣಿ ರಾಜು, ಬ್ಲ್ಯಾಕ್ ಡ್ರ್ಯಾಗನ್ ಮಂಜು, ಗಿಲಿ ಗಿಲಿ ಚಂದ್ರು, ರಂಗಾಯಣ ರಘು , ಅಚ್ಯುತ ಕುಮಾರ್ , ಗೋಪಾಲ ಕೃಷ್ಣ ದೇಶಪಾಂಡೆ, ರಮೇಶ್ ಇಂದಿರಾ ಮತ್ತಿತರರು ‘ಭೀಮ’ ಚಿತ್ರದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ‘ಭೀಮ’ ಸಿನೆಮಾದ ಹಾಡುಗಳಿಗೆ ಚರಣ್‌ ರಾಜ್‌ ಸಂಗೀತ ಸಂಯೋಜಿಸಿದ್ದು, ಚಿತ್ರಕ್ಕೆ ಶಿವಸೇನಾ ಛಾಯಾಗ್ರಹಣ ಮತ್ತು ದೀಪು ಎಸ್‌. ಕುಮಾರ್‌ ಸಂಕಲನ ಕಾರ್ಯ ನಿರ್ವಹಿಸಿದ್ದಾರೆ.

‘ಭೀಮ’ನ ಕಥೆಯೇನು..?

ತನ್ನ ಪ್ರದೇಶದಲ್ಲಿ ಮಾದಕ ದ್ರವ್ಯಗಳನ್ನು ಪೂರೈಸುವ ಮತ್ತು ಯುವಕರನ್ನು ಮಾದಕ ವ್ಯಸನಿಗಳನ್ನಾಗಿ ಮಾಡುತ್ತಿರುವ ಮಹತ್ವಾಕಾಂಕ್ಷಿ ರಾಜಕಾರಣಿ ಮತ್ತು ಮಾದಕ ದ್ರವ್ಯ ವ್ಯಾಪಾರಿ ಡ್ರ್ಯಾಗನ್ ಮಂಜು ವಿರುದ್ಧ ‘ಭೀಮ’ ಹೇಗೆ ಹೋರಾಡುತ್ತಾನೆ ಎಂಬುದು ‘ಭೀಮ’ ಸಿನೆಮಾದ ಕಥಾಹಂದರ. ಆಕ್ಷನ್‌ ಪ್ರಿಯರಿಗೆ ಇಷ್ಟವಾಗುವಂತ ಫೈಟ್ಸ್‌, ಮಾಸ್ ಡೈಲಾಗ್ಸ್‌ ಮತ್ತು ಹಾಡುಗಳು ‘ಭೀಮ’ ಸಿನೆಮಾದ ಪ್ರಮುಖ ಹೈಲೈಟ್ಸ್‌. ‘ಕಲರ್ಸ್ ಕನ್ನಡ’ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ಲಕ್ಷಣ’  ಧಾರಾವಾಹಿಯಲ್ಲಿ ಲೇಡಿ ವಿಲನ್ ಪಾತ್ರ ನಿರ್ವಹಿಸಿದ್ದ ಪ್ರಿಯಾ ಶಟಮರ್ಷನ ‘ಭೀಮ’ ಚಿತ್ರದಲ್ಲಿ ಪೊಲೀಸ್ ಅಧಿಕಾರಿಯಾಗಿ ಜನರ ಗಮನ ಸೆಳೆದಿದ್ದರು. ‘ಭೀಮ’ ಚಿತ್ರದಲ್ಲಿ ಚರಣ್ ರಾಜ್ ಸಂಗೀತ ಸಂಯೋಜನೆಯ ‘ಬ್ಯಾಡ್ ಬಾಯ್ಸ್…’, ‘ಬೂಮ್ ಬೂಮ್ ಬೆಂಗಳೂರು…’ ಮತ್ತು ‘ಡೋಂಟ್‌ವರಿ ಬೇಬಿ ಚಿನ್ನಮ್ಮ…’ ಹಾಡುಗಳು ಸೂಪರ್ ಹಿಟ್ ಆಗಿದ್ದವು. ದುನಿಯಾ ವಿಜಯ್‌ ಅಭಿಮಾನಿಗಳು ಮತ್ತು ಆಕ್ಷನ್- ಥ್ರಿಲ್ಲರ್ ಸಿನೆಮಾಗಳನ್ನು ಇಷ್ಟಪಡುವವರು ‘ಯುಗಾದಿ’ಯಂದು ‘ಭೀಮ’ ಸಿನೆಮಾವನ್ನು ‘ಕಲರ್ಸ್ ಕನ್ನಡ’ ವಾಹಿನಿಯಲ್ಲಿ ವೀಕ್ಷಿಸಬಹುದು.

Related Posts

error: Content is protected !!