ಸದ್ದಿಲ್ಲದೆ ಶುರುವಾಯ್ತು ‘666 ಆಪರೇಷನ್ ಡ್ರೀಮ್ ಥಿಯೇಟರ್’
ಹೇಮಂತ್ ಎಂ. ರಾವ್ ನಿರ್ದೇಶನದ ಹೊಸಚಿತ್ರ ‘666 ಆಪರೇಷನ್ ಡ್ರೀಮ್ ಥಿಯೇಟರ್’
ಡಾ. ವೈಶಾಖ್ ಜೆ. ಗೌಡ ಅವರ ‘ವೈಶಾಖ್ ಜೆ ಫಿಲ್ಮ್ಸ್’ ಬ್ಯಾನರ್ ಅಡಿಯಲ್ಲಿ ನಿರ್ಮಾಣ 
ಧನಂಜಯ ಅಭಿನಯದ ಚಿತ್ರದಲ್ಲಿ ಶಿವರಾಜಕುಮಾರ್ ವಿಶೇಷ ಪಾತ್ರ!
ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ಯುವ ನಿರ್ದೇಶರಲ್ಲಿ ಒಬ್ಬರಾಗಿರುವ ಹೇಮಂತ್ ಎಂ. ರಾವ್ ಈಗ ಮತ್ತೊಂದು ಹೊಸ ಚಿತ್ರವನ್ನು ಪ್ರೇಕ್ಷಕರ ಮುಂದೆ ತರುವ ತಯಾರಿಯಲ್ಲಿದ್ದಾರೆ. ಹೌದು, ‘ಗೋಧಿ ಬಣ್ಣ ಸಾಧಾರಣ ಮೈಕಟ್ಟು’, ‘ಕವಲುದಾರಿ’ ಹಾಗೂ ‘ಸಪ್ತ ಸಾಗರದಾಚೆ ಎಲ್ಲೋ’ ಚಿತ್ರಗಳ ಮೂಲಕ ವಿಶಿಷ್ಟ ಕಥಾನಕಗಳ ಮೂಲಕ ಪ್ರೇಕ್ಷಕರ ಮೆಚ್ಚುಗೆ ಗಳಿಸಿದ ನಿರ್ದೇಶಕ ಹೇಮಂತ್ ಎಂ. ರಾವ್, ಈಗ ತಮ್ಮ ಮುಂದಿನ ಚಿತ್ರಕ್ಕೆ ‘666 ಆಪರೇಷನ್ ಡ್ರೀಮ್ ಥಿಯೇಟರ್’ ಎಂದು ಹೆಸರಿಟ್ಟಿದ್ದು, ಇದೀಗ ಸದ್ದಿಲ್ಲದೆ ಈ ಹೊಸಚಿತ್ರದ ಮುಹೂರ್ತವನ್ನೂ ನೆರವೇರಿಸಿದ್ದಾರೆ.
ರೆಟ್ರೋ ಶೈಲಿಯಲ್ಲಿ ಮೂಡಿಬರಲಿದೆ ‘666 ಆಪರೇಷನ್ ಡ್ರೀಮ್ ಥಿಯೇಟರ್’
ಅಂದಹಾಗೆ, ಹೇಮಂತ್ ಎಂ. ರಾವ್ ನಿರ್ದೇಶನದ ‘666 ಆಪರೇಷನ್ ಡ್ರೀಮ್ ಥಿಯೇಟರ್’ ಚಿತ್ರ ರೆಟ್ರೋ ಶೈಲಿಯಲ್ಲಿ ಮೂಡಿಬರಲಿದೆಯಂತೆ. 1970ರ ದಶಕದ ಕಥೆಯನ್ನು ನಿರ್ದೇಶಕ ಹೇಮಂತ ಎಂ. ರಾವ್ ಈ ಸಿನೆಮಾದಲ್ಲಿ ಹೇಳಲಿದ್ದು, ಧನಂಜಯ ಚಿತ್ರದ ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ.
ಉಳಿದಂತೆ ನಟ ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ್ ಅವರೂ ಕೂಡ ಈ ಸಿನೆಮಾದಲ್ಲಿ ಮತ್ತೊಂದು ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದಿದೆ ಚಿತ್ರತಂಡ.
ಮುಂದಿನ ವರ್ಷ ‘666 ಆಪರೇಷನ್ ಡ್ರೀಮ್ ಥಿಯೇಟರ್’ ತೆರೆಗೆ…
ಸದ್ಯ ‘666 ಆಪರೇಷನ್ ಡ್ರೀಮ್ ಥಿಯೇಟರ್’ ಚಿತ್ರದ ಚಿತ್ರೀಕರಣ ಕಾರ್ಯಗಳಿಗೆ ಚಿತ್ರತಂಡ ಚಾಲನೆ ನೀಡಿದ್ದು, ಇದೇ ವರ್ಷ ಅಕ್ಟೋಬರ್ ಅಥವಾ ನವೆಂಬರ್ ವೇಳೆಗೆ ಚಿತ್ರೀಕರಣ ಪೂರ್ಣಗೊಳ್ಳುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಎಲ್ಲ ಅಂದುಕೊಂಡಂತೆ ನಡೆದರೆ, ಮುಂದಿನ ವರ್ಷದ ಮಧ್ಯ ಭಾಗದಲ್ಲಿ ‘666 ಆಪರೇಷನ್ ಡ್ರೀಮ್ ಥಿಯೇಟರ್’ ಚಿತ್ರ ತೆರೆಗೆ ಬರುವ ಸಾಧ್ಯತೆಯಿದೆ. ‘666 ಆಪರೇಷನ್ ಡ್ರೀಮ್ ಥಿಯೇಟರ್’ ಚಿತ್ರವನ್ನು ಡಾ. ವೈಶಾಖ್ ಜೆ. ಗೌಡ ಅವರು ‘ವೈಶಾಖ್ ಜೆ ಫಿಲ್ಮ್ಸ್’ ಬ್ಯಾನರ್ ಅಡಿಯಲ್ಲಿ ನಿರ್ಮಾಣ ಮಾಡುತ್ತಿದ್ದಾರೆ.
‘666 ಆಪರೇಷನ್ ಡ್ರೀಮ್ ಥಿಯೇಟರ್’ ಚಿತ್ರದ ಹಾಡುಗಳಿಗೆ ಚರಣ್ ರಾಜ್ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಉಳಿದಂತೆ ‘666 ಆಪರೇಷನ್ ಡ್ರೀಮ್ ಥಿಯೇಟರ್’ ಚಿತ್ರಕ್ಕೆ ಅದ್ವೈತ ಗುರುಮೂರ್ತಿ ಛಾಯಾಗ್ರಹಣ ಮತ್ತು ವಿಶ್ವಾಸ್ ಕಶ್ಯಪ್ ಕಲಾ ನಿರ್ದೇಶನ ಮಾಡುತ್ತಿದ್ದಾರೆ. ಸಸ್ಪೆನ್ಸ್-ಥ್ರಿಲ್ಲರ್ ಶೈಲಿಯಲ್ಲಿ ‘666 ಆಪರೇಷನ್ ಡ್ರೀಮ್ ಥಿಯೇಟರ್’ ಸಿನೆಮಾ ಮೂಡಿಬರುತ್ತಿದೆ ಎನ್ನಲಾಗುತ್ತಿದ್ದು, ಇತರ ಕಲಾವಿದರು ಮತ್ತು ಕಥಾಹಂದರದ ಬಗ್ಗೆ ಇನ್ನಷ್ಟೇ ಹೆಚ್ಚಿನ ಮಾಹಿತಿ ಹೊರಬರಬೇಕಿದೆ.















